Big Jumka Fashion: ಮಾನಿನಿಯರನ್ನು ಸೆಳೆಯುತ್ತಿವೆ ಕಿವಿಗಿಂತ ಅಗಲವಾದ ಬಿಗ್ ಜುಮುಕಿಗಳು
Big Jumka Fashion: ನಾನಾ ಬಗೆಯ ವೈವಿಧ್ಯಮಯ ಕಲಾತ್ಮಕ ವಿನ್ಯಾಸದ ಬಿಗ್ ಜುಮುಕಿಗಳು ಜ್ಯುವೆಲ್ ಪ್ರಿಯರನ್ನು ಸೆಳೆಯುತ್ತಿದ್ದು, ಈಗಾಗಲೇ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಡಿಸೈನ್‌ನವು ಪಾಪುಲರ್ ಆಗಿವೆ? ಆಯ್ಕೆ ಹೇಗೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಮಿಂಚು

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈವಿಧ್ಯಮಯ ಡಿಸೈನ್‌ನ ಕಲಾತ್ಮಕವಾಗಿ ಡಿಸೈನ್ ಮಾಡಿರುವ ಬಿಗ್ ಸೈಜ್‌ನ ಜುಮುಕಿಗಳು (Big Jumka Fashion) ಮಾರುಕಟ್ಟೆಗೆ ಕಾಲಿಟ್ಟಿದ್ದು, ಜ್ಯುವೆಲ್ ಪ್ರಿಯರನ್ನು ಸವಾರಿ ಮಾಡುತ್ತಿವೆ. ಕಲಾತ್ಮಕವಾಗಿ ಕಾಣಿಸುವ ಮೀನಾಕಾರಿ, ಬೆಲ್, ಹೂಪ್, ಕುಂದನ್, ಆ್ಯಂಟಿಕ್ ವಿನ್ಯಾಸ, ಡ್ಯಾಂಜ್ಲರ್, ಪೊಲ್ಕಿ, ಪಂಜಾಬಿ ಶೈಲಿಯ ದೊಡ್ಡ ಗಾತ್ರದ ಬಿಗ್ ಜುಮುಕಿಗಳು ಹೊಸ ರೂಪದಲ್ಲಿ ಮೂಡಿ ಬಂದಿವೆ. ಮಾನಿನಿಯರನ್ನು ಆಕರ್ಷಿಸುತ್ತಿವೆ. ಸದ್ಯ ಹೆಚ್ಚು ಟ್ರೆಂಡಿಯಾಗಿರುವ ಕೃತಕ ಆಭರಣಗಳ ಪಟ್ಟಿಯಲ್ಲಿ ಇವು ಸೇರಿಕೊಂಡಿವೆ. ಈ ಬಿಗ್ ಜುಮುಕಿಗಳ ಈ ಹೊಸ ರೂಪ ವಿಶೇಷವಾಗಿ ಯುವತಿಯರಿಗೆ ಪ್ರಿಯವಾಗಿದ್ದು, ಮಾರುಕಟ್ಟೆಯ ಜ್ಯುವೆಲ್ ಶಾಪ್‌ಗಳಲ್ಲಿ ಎಲ್ಲಿ ನೋಡಿದರೂ ಈ ಜುಮುಕಿಗಳದ್ದೇ ಕಾರುಬಾರು ಎನ್ನುತ್ತಾರೆ ಜುಮಕಿ ಪ್ರೇಮಿಗಳು. ಅದರಲ್ಲೂ ಎಲ್ಲಾ ಉಡುಗೆಗಳಿಗೆ ಮ್ಯಾಚ್ ಆಗುವಂತಹ ಬ್ಲ್ಯಾಕ್ ಹಾಗೂ ವೈಟ್ ಮೆಟಲ್ ಜುಮುಕಿಗಳು ಹೆಚ್ಚು ಆಕರ್ಷಿಸುತ್ತಿವೆಯಂತೆ.

ಕಲಾತ್ಮಕ ಜುಮುಕಿಗಳ ಮಾರಾಟ
ಸ್ತ್ರೀ ಸೌಂದರ್ಯ ಹೆಚ್ಚಿಸುವ ಸಾಂಪ್ರದಾಯಿಕ ಶೈಲಿಯ ಜುಮುಕಿಗಳೊಂದಿಗೆ, ಇದೀಗ ಉತ್ತರ ಭಾರತದಲ್ಲಿ ಧರಿಸುವಂತಹ ಕಲಾತ್ಮಕ ಮೀನಾಕಾರಿ ಬಿಗ್ ಜುಮುಕಿಗಳು ಟ್ರೆಂಡಿಯಾಗಿವೆ. ಅವುಗಳಲ್ಲಿ ಮಿರರ್ ವರ್ಕ್‌ನವು ಅತ್ಯದ್ಭುತ ವಿನ್ಯಾಸಗಳೊಂದಿಗೆ ಕಡಿಮೆ ದರದಲ್ಲಿ ದೊರಕಲಾರಂಭಿಸಿವೆ ಎನ್ನುತ್ತಾರೆ ಜುಮುಕಿ ಪ್ರೇಮಿ ರಾಧಿಕಾ ಹಾಗೂ ನೀರಜಾ. ಇನ್ನು, ಹಿಂದಿನ ಕಾಲದಲ್ಲಿ ರಾಣಿಯರು ಧರಿಸುತ್ತಿದ್ದ, ಭಾರಿ ಗಾತ್ರದ ಕಲಾಂಕಾರಿ ಜುಮುಕಿಗಳು ಕೂಡ ಹುಡುಗಿಯರ ಕಿವಿಯನ್ನು ಅಲಂಕರಿಸುತ್ತಿವೆ ಎನ್ನುತ್ತಾರೆ.

ಟ್ರೆಡಿಷನಲ್ ಲುಕ್‌ಗಾಗಿ ಬಿಗ್ ಜುಮುಕಿ ಆಯ್ಕೆ
ಅಂದಹಾಗೆ, ಜ್ಯುವೆಲ್ ಡಿಸೈನರ್ ರೀಟಾ ಪ್ರಕಾರ, ಕಡಿಮೆ ಬೆಲೆಯಲ್ಲಿ ಆಕರ್ಷಕವಾಗಿ ಕಾಣಿಸಲು ಬಯಸುವ ಹುಡುಗಿಯರಿಗೆ ಇವು ಹೇಳಿ ಮಾಡಿಸಿದಂತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕೈಗೆಟಕುವ ದರದಲ್ಲಿ ಇವು ದೊರಕುತ್ತಿವೆ. ಕನಿಷ್ಠ 75 ರೂ.ಗಳಿಂದ ಆರಂಭವಾಗಿ 250 ರೂ.ಗಳವರೆಗೂ ಇವುಗಳ ಬೆಲೆ ಇದೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ಟ್ರೆಡಿಷನಲ್ ಲುಕ್ ನೀಡುವಂತಹ ಜುಮಕಿಗಳು ಬೇಕೆನ್ನುವವರು ಈ ಬಿಗ್ ಜುಮುಕಿಗಳನ್ನು ಖರೀದಿಸಿ, ಧರಿಸಬಹುದು ಎನ್ನುತ್ತಾರೆ ಅವರು.

ಬಿಗ್ ಜುಮುಕಿಗಳ ಪ್ರಿಯರ ಗಮನಕ್ಕೆ
- ಖರೀದಿಸುವ ಮುನ್ನ ಫಿನಿಶಿಂಗ್ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ.
- ಲೈಟ್‌ವೈಟ್ ಬಿಗ್ ಜುಮಕಿ ಖರೀದಿಸಿ.
- ಇವು ಒರಟಾಗಿದ್ದಲ್ಲಿ, ಚರ್ಮಕ್ಕೆ ಹಾನಿಯುಂಟಾಗಬಹುದು.
- ಕೆಲವು ಜುಮಕಿಗಳು ಬಹಳ ಭಾರವಾಗಿರುತ್ತವೆ. ಅವುಗಳನ್ನು ಧರಿಸದಿದ್ದರೆ ಉತ್ತಮ. ಕಿವಿ ಹರಿದು ಹೋಗುವ ಸಾಧ್ಯತೆಗಳಿರುತ್ತದೆ.
- ರಾತ್ರಿ ವೇಳೆ ಜುಮುಕಿಗಳನ್ನು ಧರಿಸಿ ಮಲಗಕೂಡದು. ಹಾಳಾಗಬಹುದು, ಇಲ್ಲವೇ ಗಾಯವಾಗಬಹುದು.
- ನೀರಲ್ಲಿ ನೆನೆದಲ್ಲಿ ಬಣ್ಣ ಹೋಗುವ ಸಾಧ್ಯತೆ ಹೆಚ್ಚು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Summer Kids Travel Fashion: ಮಕ್ಕಳ ಸಮ್ಮರ್ ಟ್ರಾವೆಲ್ ಫ್ಯಾಷನ್‌ಗೆ ಇಲ್ಲಿವೆ ಸಿಂಪಲ್ ಟಿಪ್ಸ್