ಒಟ್ಟಾವಾ: ಕಾಂತಾರ ಚಾಪ್ಟರ್ 1 (Kantara Chapter 1), ದೆ ಕಾಲ್ ಹಿಮ್ ಒಜಿ (They Call Him OG) ಚಿತ್ರಗಳು ಸೇರಿದಂತೆ ಹಲವಾರು ಭಾರತೀಯ ಚಲನಚಿತ್ರಗಳ (Indian film) ಪ್ರದರ್ಶನವನ್ನು ಕೆನಡಾದಲ್ಲಿ(Canada Theatre) ರದ್ದುಗೊಳಿಸಲಾಗಿದೆ. ಕಳೆದ ವಾರ ಕೆನಡಾದ ಒಂಟಾರಿಯೊ (Ontario) ಪ್ರಾಂತ್ಯದ ಚಲನಚಿತ್ರ ಥಿಯೇಟರ್ ವೊಂದರಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬೆಂಕಿ ಹಚ್ಚುವ ಮತ್ತು ಗುಂಡಿನ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನಗಳನ್ನು ರದ್ದುಗೊಳಿಸಿರುವುದಾಗಿ ಚಿತ್ರ ಮಂದಿರಗಳು ತಿಳಿಸಿವೆ.
ಓಕ್ವಿಲ್ಲೆಯಲ್ಲಿರುವ ಫಿಲ್ಮ್.ಕಾ ಸಿನಿಮಾಸ್ ನ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು ದಕ್ಷಿಣ ಏಷ್ಯಾದ ಚಲನಚಿತ್ರಗಳ ಥಿಯೇಟರ್ ಪ್ರದರ್ಶನಗಳಿಗೆ ಸಂಬಂಧಿಸಿ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಮತ್ತು ಪವನ್ ಕಲ್ಯಾಣ್ ಅವರ ದೆ ಕಾಲ್ ಹಿಮ್ ಒಜಿ ಪ್ರದರ್ಶನಗಳನ್ನು ಥಿಯೇಟರ್ ನಿಂದ ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 25 ರಂದು ಬೆಳಗ್ಗೆ 5.20ರ ಸುಮಾರಿಗೆ ಥಿಯೇಟರ್ ಮೇಲೆ ದಾಳಿಯಾಗಿತ್ತು. ಕೆಂಪು ದ್ರಾವಣವನ್ನು ಕ್ಯಾನ್ ಗಳಲ್ಲಿ ತುಂಬಿಸಿ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಶಂಕಿತರು ಥಿಯೇಟರ್ ನ ಹೊರಭಾಗದ ಪ್ರವೇಶ ದ್ವಾರಗಳಲ್ಲಿ ಬೆಂಕಿ ಹಚ್ಚಿದ್ದರು. ಥಿಯೇಟರ್ ಹೊರಗೆ ಬೆಂಕಿ ಹಚ್ಚಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ ಎಂದು ಹಾಲ್ಟನ್ ಪೊಲೀಸರ ತಿಳಿಸಿದ್ದಾರೆ.
ಈ ಕುರಿತು ವಿಡಿಯೊವನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಇದರಲ್ಲಿ ಬೂದು ಬಣ್ಣದ ಎಸ್ ಯುವಿ ವಾಹನವು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬರುತ್ತಿರುವುದನ್ನು ತೋರಿಸಲಾಗಿದೆ. ಈ ಕಾರು ಥಿಯೇಟರ್ ಪ್ರವೇಶದ್ವಾರದ ಸಮೀಪ ಬಂದು ಎರಡು ಬಾರಿ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಹಿಂದಿರುಗಿದೆ. ಬೆಳಗ್ಗೆ 5.15ರ ಸುಮಾರಿಗೆ ಬಿಳಿ ಎಸ್ ಯುವಿ ಬಂದಿದ್ದು, ಅದರಿಂದ ಇಳಿದ ಇಬ್ಬರು ವ್ಯಕ್ತಿಗಳು ಥಿಯೇಟರ್ ಬಾಗಿಲುನಲ್ಲಿ ಕೆಂಪು ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಕಪ್ಪು ಪ್ಯಾಂಟ್, ಗಾಢ ಬಣ್ಣದ ಹೈ-ಟಾಪ್ ಶೂ, ಕೈಗವಸು ಅನ್ನು ಧರಿಸಿದ್ದರು. ಇನ್ನೊಬ್ಬ ಕಪ್ಪು ಪ್ಯಾಂಟ್, ಬಿಳಿ ಸ್ಲಿಪ್ ಆನ್ ಸ್ಯಾಂಡಲ್ ಗಳು, ಬಿಳಿ ಸಾಕ್ಸ್, ಕೈಗವಸು ಧರಿಸಿದ್ದನು.
ಈ ಘಟನೆಯ ಬಳಿಕ ಎರಡನೇ ಬಾರಿ ದಾಳಿಯಾಗಿದ್ದು, ಅಕ್ಟೋಬರ್ 2ರಂದು ಬೆಳಗಿನ ಜಾವ 1.50ರ ಸುಮಾರಿಗೆ ಕಟ್ಟಡದ ಪ್ರವೇಶ ದ್ವಾರಗಳ ಮೂಲಕ ಒಬ್ಬ ಶಂಕಿತ ಅನೇಕ ಸುತ್ತು ಗುಂಡು ಹಾರಿಸಿದ್ದಾನೆ. ಶಂಕಿತನು ಕಪ್ಪು ಬಣ್ಣದವನಾಗಿದ್ದು, ಸಂಪೂರ್ಣ ಕಪ್ಪು ಬಟ್ಟೆ ಮತ್ತು ಕಪ್ಪು ಮುಖವಾಡ ಧರಿಸಿದ್ದನು. ದಪ್ಪ ಮೈಕಟ್ಟು ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಮಾಹಿತಿ ಇದ್ದರೆ ಜಿಲ್ಲಾ ಅಪರಾಧ ತನಿಖಾ ಬ್ಯೂರೋಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಈ ದಾಳಿಗಳು ಖಲಿಸ್ತಾನಿ ಉಗ್ರರಿಂದ ಉಂಟಾಗಿರಬಹುದು ಎನ್ನಲಾಗುತ್ತಿದೆ. ಆದರೆ ಇದನ್ನು ಹಾಲ್ಟನ್ ಪೊಲೀಸರು ದೃಢಪಡಿಸಿಲ್ಲ. ಈ ಹಿಂದೆ, ಓಕ್ವಿಲ್ಲೆಯಲ್ಲಿರುವ ಒಂದು ದೇವಾಲಯಕ್ಕೆ ಖಲಿಸ್ತಾನಿಗಳಿಂದ ಬೆದರಿಕೆ ಬಂದಿತ್ತು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಫಿಲಂ ಕಾ ನ ಸಿಇಒ ಜೆಫ್ ನೋಲ್, ಈ ದಾಳಿಗಳು ದಕ್ಷಿಣ ಏಷ್ಯಾದ ಚಲನಚಿತ್ರಗಳ ಥಿಯೇಟರ್ ಪ್ರದರ್ಶನಗಳಿಗೆ ಸಂಬಂಧಿಸಿವೆ. ಸದ್ಯಕ್ಕೆ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಮುಂದೆ ಅದನ್ನು ಮುಂದುವರಿಸುವುದಾಗಿ ಹೇಳಿದರು. ಇದು ದಕ್ಷಿಣ ಏಷ್ಯಾದ ಚಲನಚಿತ್ರೋದ್ಯಮದೊಳಗಿನ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿರಬಹುದು. ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ. ನಮ್ಮ ಸಮುದಾಯವನ್ನು ರಕ್ಷಿಸಲು ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾದ ಹಂತಕ್ಕೆ ಪರಿಸ್ಥಿತಿ ಬೆಳೆದಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Kannada Serial TRP: ಅಮೃತಧಾರೆ ಟ್ವಿಸ್ಟ್ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ
ಸದ್ಯಕ್ಕೆ ಇತರ ಚಿತ್ರಮಂದಿರಗಳಲ್ಲೂ ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಉದ್ಯೋಗಿಗಳು ಮತ್ತು ಅತಿಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಗಡ ಟಿಕೆಟ್ ಖರೀದಿಗಳನ್ನು ಮರುಪಾವತಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.