Dad Movie: ಚಾಮುಂಡಿ ಬೆಟ್ಟದ ನಂದಿ ದೇವಸ್ಥಾನದಲ್ಲಿ ಶಿವರಾಜ್‍ಕುಮಾರ್ ನಟನೆಯ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ
Dad Movie: ಶಿವರಾಜ್‍ಕುಮಾರ್ ಅಭಿನಯದ ʼಡ್ಯಾಡ್ʼ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.


ಬೆಂಗಳೂರು: ಶಿವರಾಜ್‍ಕುಮಾರ್ ಅಭಿನಯದ ʼಡ್ಯಾಡ್ʼ ಚಿತ್ರದ (Dad Movie) ಮುಹೂರ್ತ ಸಮಾರಂಭ ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ನೆರವೇರಿತು. ಗೀತಾ ಶಿವರಾಜಕುಮಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿ, ಚಿತ್ರತಂಡಕ್ಕೆ ಶುಭ ಕೋರಿದರು. ಸುಮಾರು 32 ವರ್ಷಗಳ ಹಿಂದೆ ಶಿವರಾಜ್‍ಕುಮಾರ್ ಅಭಿನಯದ ʼಜಗ ಮೆಚ್ಚಿದ ಹುಡುಗʼ ಚಿತ್ರ ಸಹ ಮೈಸೂರಿನ ಚಾಮುಂಡಿ ಬೆಟ್ಟದ ಬೃಹತ್ ನಂದಿ ವಿಗ್ರಹದ ಎದುರು ಶುರುವಾಗಿತ್ತು. ಈಗ ಅದೇ ನಂದಿ ದೇವಸ್ಥಾನದಲ್ಲಿ ಶಿವಣ್ಣ ಅಭಿನಯದ ಹೊಸ ಚಿತ್ರ ʼಡ್ಯಾಡ್ʼ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಶೇಷ.

ಈ ಹಿಂದೆ ʼಭಗವಂತ್ ಕೇಸರಿʼ, ʼಉಗ್ರಂʼ, ʼಟಕ್ ಜಗದೀಶ್ʼ ಮುಂತಾದ ತೆಲುಗು ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಪೆದ್ದಿ, ಈ ಚಿತ್ರವನ್ನು ಮೈರಾ ಕ್ರಿಯೇಷನ್ಸ್ ಲಾಂಛನದಡಿ ನಿರ್ಮಿಸುತ್ತಿದ್ದಾರೆ. ಇನ್ನು, ತೆಲುಗಿನಲ್ಲಿ ʼಅಸಾಧ್ಯುಡುʼ, ʼಮಿಸ್ಟರ್ ನೂಕಯ್ಯʼ ಮತ್ತು ʼಹಿಡಿಂಬʼ ಚಿತ್ರಗಳನ್ನು ನಿರ್ದೇಶಿಸಿರುವ ಅನಿಲ್ ಕನ್ನೆಗಂಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕರಿಗೆ ಹಾಗೂ, ನಿರ್ದೇಶಕರಿಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ʼಶಿವಣ್ಣ 131ʼ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಬಿ.ಎಸ್. ಸುಧೀಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೊಂದು ತಂದೆ ಸೆಂಟಿಮೆಂಟ್ ಚಿತ್ರವಾಗಿದ್ದು, ಸಾಕಷ್ಟು ಥ್ರಿಲ್ಲಿಂಗ್ ಅಂಶಗಳು ಇರಲಿವೆ. ಶಿವರಾಜ್‍ಕುಮಾರ್ ಈ ಚಿತ್ರದಲ್ಲಿ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ʼಗಡಿಬಿಡಿ ಕೃಷ್ಣʼ ಚಿತ್ರದಲ್ಲಿ ವೈದ್ಯರಾಗಿ ಕಾಣಿಸಿಕೊಂಡಿದ್ದ ಶಿವರಾಜ್‍ಕುಮಾರ್, ಸುಮಾರು 27 ವರ್ಷಗಳ ನಂತರ ಪುನಃ ಈ ಚಿತ್ರದಲ್ಲಿ ವೈದ್ಯರಾಗಿ ಅಭಿನಯಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಈ ಸುದ್ದಿಯನ್ನೂ ಓದಿ | Festive Season Shopping 2025: ಶುರುವಾಯ್ತು ಗೌರಿ-ಗಣೇಶ ಹಬ್ಬದ ವೀಕೆಂಡ್ ಭರ್ಜರಿ ಶಾಪಿಂಗ್
ʼಡ್ಯಾಡ್ʼ ಚಿತ್ರದಲ್ಲಿ ಶಿವರಾಜ್‍ಕುಮಾರ್ ಜತೆಗೆ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ಮುಂತಾದವರು ನಟಿಸುತ್ತಿದ್ದಾರೆ. ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ತೆಲುಗಿನ ʼಆರೆಂಜ್ʼ, ʼಆರ್ಯ 2ʼ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಬಿ. ರಾಜಶೇಖರ್ ಈ ಚಿತ್ರದ ಛಾಯಗ್ರಾಹಕರು.