ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Landlord Movie: ಲ್ಯಾಂಡ್ ಲಾರ್ಡ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ; ಇಂದಿನಿಂದಲೇ ಜಾರಿ

ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ಲ್ಯಾಂಡ್‌ ಲಾರ್ಡ್‌ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.

ಲ್ಯಾಂಡ್‌ ಲಾರ್ಡ್‌ ಚಿತ್ರ.

ಬೆಂಗಳೂರು: ನಟ ದುನಿಯಾ ವಿಜಯ್‌ (Duniya Vijay) ಅಭಿನಯದ 'ಲ್ಯಾಂಡ್ ಲಾರ್ಡ್' (Landlord Movie) ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಚಿತ್ರಕ್ಕೆ ತೆರಿಗೆ ವಿನಾಯಿತಿ (tax exemption) ನೀಡಲು ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಈ ಸಂಬಂಧ ಇದೀಗ ರಾಜ್ಯ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ʼಲ್ಯಾಂಡ್ ಲಾರ್ಡ್ʼ ಶೀರ್ಷಿಕೆಯ ಕನ್ನಡ ಚಲನಚಿತ್ರ ಮೇಲಿನ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಮೊತ್ತವನ್ನು ಪ್ರದರ್ಶಕರಿಗೆ ಹಿಂಪಾವತಿ ಮಾಡುವ ಮೂಲಕ ಸದರಿ ಚಲನಚಿತ್ರ ವೀಕ್ಷಕರಿಗೆ ವಿನಾಯಿತಿ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಫೆ.2ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಗೊಳ್ಳುತ್ತಿರುವ ʼಲ್ಯಾಂಡ್ ಲಾರ್ಡ್ʼ ಕನ್ನಡ ಚಲನಚಿತ್ರಕ್ಕೆ ಶೇಕಡ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದ್ದರು.

ಮನವಿ ಪತ್ರದಲ್ಲಿ, ಜಮೀನ್ದಾರಿ ವ್ಯವಸ್ಥೆಯ ಅವಶೇಷಗಳು, ಭೂಮಿಯಿಲ್ಲದ ಕಾರ್ಮಿಕರ ದೀರ್ಘಕಾಲದ ಹೋರಾಟ, ದಲಿತ-ಅಂಚಿನ ಸಮುದಾಯಗಳ ಬದುಕಿನ ಸಂಕಷ್ಟಗಳು ಮತ್ತು ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಪ್ರಯತ್ನ ಈ ಚಿತ್ರದ ಕಥಾ ಹಂದರದಲ್ಲಿ ಒಳಗೊಂಡಿದೆ. ಜತೆಗೆ ಈ ಚಿತ್ರವು ಸಮಾಜದಲ್ಲಿ ಸಂವಿಧಾನಾತ್ಮಕ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಅತ್ಯಂತ ಅಗತ್ಯವಾಗಿವೆ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಯುವಜನತೆಗೆ ಸಂದೇಶ ತಲುಪಲು ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ಚಲನಚಿತ್ರ ಮಂದಿರಗಳೂ / ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗೊಳ್ಳುವ "ಲ್ಯಾಂಡ್ ಲಾರ್ಡ್" ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ಫೆ. 5ರಿಂದ ಆರು ತಿಂಗಳ ಅವಧಿಗೆ ಸರ್ಕಾರವು ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಿಂಪಾವತಿ ಸೌಲಭ್ಯವನ್ನು ಹಲವು ಷರತ್ತುಗಳಿಗೆ ಒಳಪಟ್ಟು ನೀಡಿದೆ.

Jai Movie OTT: ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ ಈ ಒಟಿಟಿಗೆ ಎಂಟ್ರಿ!

ಷರತ್ತುಗಳೇನು?

  • ಪ್ರದರ್ಶಕರು ಸಿನಿಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸಬಾರದು ಹಾಗೂ ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡಬೇಕು.
  • ಟಿಕೆಟ್‌ಗಳ ಮೇಲೆ ʼಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್‌ಟಿಯನ್ನು ಸಂಗ್ರಹಿಸಿರುವುದಿಲ್ಲʼ ಎಂಬ ಪದಗಳು ಪ್ರಮುಖವಾಗಿ ಎದ್ದು ಕಾಣುವಂತೆ ಇರಬೇಕು.
  • ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ)ನ್ನು ಪ್ರವೇಶ ಶುಲ್ಕದ ಮೇಲೆ ವಿಧಿಸದೆ ಮತ್ತು ಗ್ರಾಹಕರಿಂದ ಸಂಗ್ರಹಿಸದಿದ್ದರೂ, ಸಿನಿಮಾ ಮಂದಿರ / ಮಲ್ಟಿಪ್ಲೆಕ್ಸ್ ಪ್ರದರ್ಶಕರು ತೆರಿಗೆ ನಮೂನೆಯನ್ನು ಸಲ್ಲಿಸಿ ಇತರೆ ಸಿನೆಮಾಗಳಿಗೆ ಜಮೆ ಮಾಡುವ ರೀತಿಯಲ್ಲೇ ತಮ್ಮ ಸಂಪನ್ಮೂಲದಿಂದಲೇ ರಾಜ್ಯ ಜಿಎಸ್‌ಟಿ ಮೊತ್ತವನ್ನು ಜಮೆ ಮಾಡಬೇಕು ಎಂಬುವುದು ಸೇರಿ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.