ಬೆಂಗಳೂರು: 2022 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಕಂಡಿದ್ದ ಕಾಂತಾರ ಸಿನಿಮಾ(Kantara Movie), ಆ ವರ್ಷ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ವಾಣಿಜ್ಯ ಯಶಸ್ಸು ಕಂಡಿದ್ದ ಚಿತ್ರವಾಗಿತ್ತು. ಒಂದು ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಭಾರಿ ಬಾಕ್ಸ್ ಆಫೀಸ್ ಹಿಟ್ ಧೂಳೆಬ್ಬಿಸಿದ್ದು ಮಾತ್ರವಲ್ಲದೇ ಭಾಷಾ ಅಡೆತಡೆಗಳನ್ನು ಮೀರಿ ಜನಪ್ರಿಯತೆಯನ್ನು ಗಳಿಸಿತು. ಕರಾವಳಿ ಭಾಗದ ಆಚರಣೆ, ಪದ್ಧತಿ, ಸಂಸ್ಕೃತಿಯ ಸುತ್ತಲೂ ಹೆಣೆದಿರುವ ಈ ಕಾಂತಾರ ಬಹಳ ಬೇಗವಾಗಿ ಜನ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಇಷ್ಟು ದೊಡ್ಡ ಯಶಸ್ಸು ಕಂಡ ನಂತರ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್‌ಗೆ ಮುಂದಾದರು. ಕಾಂತಾರ: ಅಧ್ಯಾಯ 1 ಎಂಬ ಶೀರ್ಷಿಕೆಯೊಂದಿಗೆ, ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿದ್ದಾರೆ ಮತ್ತು ಚಿತ್ರದ ಶೂಟಿಂಗ್ ಇತ್ತೀಗಷ್ಟೇ ಪೂರ್ಣಗೊಂಡಿತ್ತು. ಇನ್ನು ಸುಮಾರು ಮೂರು ವರ್ಷಗಳ ಸುದೀರ್ಘ ಚಿತ್ರೀಕರಣದ ನಂತರ ಈ ವರ್ಷ ಅಕ್ಟೋಬರ್ 2 ರಂದು ತೆರೆ ಮೇಲೆ ಅಬ್ಬರಿಸಲು ಕಾಂತಾರ 1ರೆಡಿಯಾಗಿದೆ.
ಇದೆಲ್ಲದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯೊಂದು ಅಭಿಮಾನಿಗಳ ಗಮನ ಸೆಳೆದಿದೆ. ತೆಲುಗು ನಟ ಜೂ. ಎನ್‌ಟಿಆರ್ ಅಧ್ಯಾಯ 1 ರ ನಂತರ ಬಿಡುಗಡೆಯ ನಿರೀಕ್ಷೆಯಲ್ಲಿರುವ ಕಾಂತಾರ ಭಾಗ 3ಕ್ಕೆ ಎಂಟ್ರಿ ಕೊಡುತ್ತಾರೆಂಬ ಮಾತು ಕೇಳಿ ಬರುತ್ತಿದೆ. ನಿರ್ಮಾಪಕರು ಅಥವಾ ನಟರಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
NTR ಮತ್ತು ರಿಷಭ್ ಶೆಟ್ಟಿ ನಡುವಿನ ಸ್ನೇಹ ಸಂಬಂಧ ಹೊಸದೇನಲ್ಲ. ಇಬ್ಬರಿಗೂ ಕರ್ನಾಟಕದ ಕುಂದಾಪುರದ ಜೊತೆ ನಂಟಿದೆ. ಕುಂದಾಪುರ ರಿಷಬ್ ಶೆಟ್ಟಿಯವರ ಹುಟ್ಟಿ ಬೆಳೆದ ಊರಾದರೆ, ಅತ್ತ ಎನ್‌ಟಿಆರ್ ಅವರ ತಾಯಿ ಕೂಡ ಇದೇ ಊರಿನವರು. ಈ ಹಿಂದೆ ತಮ್ಮ ತಾಯಿಯೊಂದಿಗೆ ಕುಂದಾಪುರಕ್ಕೆ ಭೇಟಿ ನೀಡಿದಾಗ, NTR ಅವರಿಗೆ ರಿಷಭ್ ಶೆಟ್ಟಿಯವರಿಂದಲೇ ಆತಿಥ್ಯ ಮತ್ತು ವ್ಯವಸ್ಥೆ ದೊರೆತಿತ್ತು. ಆ ಪ್ರವಾಸದ ಸಮಯದಲ್ಲಿ, ಕಾಂತಾರ ಚಿತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾಧ್ಯಮಗಳು ಕೇಳಿದಾಗ, NTR ಈ ನಿರ್ಧಾರವು ರಿಷಭ್‌ಗೆ ಬಿಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದರು. ಆ ಮೂಲಕ ಕಾಂತಾರ ಪ್ರಪಂಚಕ್ಕೆ ಕಾಲಿಡಲು ತಮಗೇನೂ ಸಮಸ್ಯೆ ಇಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಚಾರ ನಿಜವಾದರೆ NTR ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಎಂದೆನಿಸಿಕೊಳ್ಳುತ್ತದೆ. ಇದಕ್ಕಿಂತ ಹೆಚ್ಚಾಗಿ ಇದು ಕನ್ನಡ ಮತ್ತು ತೆಲುಗು ಉದ್ಯಮಗಳ ನಡುವೆ ಆಳವಾದ ಸಹಯೋಗಗಳಿಗೆ ಪ್ರವೃತ್ತಿಯನ್ನು ಸ್ಥಾಪಿಸಬಹುದು. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್ ಅಥವಾ ಎನ್‌ಟಿಆರ್ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟಿರುವ ಜೂ. ಎನ್‌ಟಿಆರ್ ಹೃತಿಕ್ ರೋಷನ್ ಅವರೊಂದಿಗೆ ವಾರ್ 2 ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಈ ಸಿನಿಮಾ ಆಗಸ್ಟ್ 14 ರಂದು ಬಿಡುಗಡೆಯಾಗಲು ಸಜ್ಜಾಗುತ್ತಿದೆ.