ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pathashala Movie: ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ದಿನ ತೆರೆಗೆ ಬರಲಿದೆ ʼಪಾಠಶಾಲಾʼ

Sandalwood News: ಹೆದ್ದೂರು ಮಂಜುನಾಥ ಶೆಟ್ಟಿ ನಿರ್ದೇಶನದ ʼಪಾಠಶಾಲಾʼ ಚಿತ್ರ ನವೆಂಬರ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯ ಸೇರಿದಂತೆ ಸೂಕ್ಷ್ಮ‌ ವಿಚಾರಗಳ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ ಇದಾಗಿದೆ.

ಮಕ್ಕಳ ದಿನಾಚರಣೆಯಂದು ತೆರೆಗೆ ಬರಲಿದೆ ʼಪಾಠಶಾಲಾʼ ಚಿತ್ರ

-

Profile Siddalinga Swamy Oct 15, 2025 3:47 PM

ಬೆಂಗಳೂರು: ಅರಣ್ಯ ನಾಶ, ಅದರ ಉಳಿವು ಮತ್ತು ಮಕ್ಕಳ‌ ಬಾಲ್ಯ ಸೇರಿದಂತೆ ಸೂಕ್ಷ್ಮ‌ ವಿಚಾರಗಳ ಕುರಿತಾದ ಕಥಾಹಂದರ ಹೊಂದಿರುವ ʼಪಾಠಶಾಲಾʼ ಚಿತ್ರ (Pathashala Movie) ನವೆಂಬರ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಚಿತ್ರತಂಡದವರು ʼಪಾಠಶಾಲಾʼ ಕುರಿತು ಮಾತನಾಡಿದರು.

ʼಪಾಠಶಾಲಾʼ ಎನ್ನುವ ಹೆಸರು ಇದೆ ಎಂದ ಮಾತ್ರಕ್ಕೆ ಇದು ಮಕ್ಕಳ ಚಿತ್ರ ಅಲ್ಲ‌ ಎಂದು ಮಾತನಾಡಿದ ನಿರ್ದೇಶಕ ಹೆದ್ದೂರು ಮಂಜುನಾಥ ಶೆಟ್ಟಿ, ಈಗಿನ ಶಿಕ್ಷಣ 80ರ ದಶಕದಲ್ಲಿ ಇದ್ದ ಹಾಗೆ ಇಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ದೊಡ್ಡ ಅಂತರ ಇದೆ. ಈ ವಿಷಯದ ಜತೆಗೆ ನನ್ನ ಪತ್ನಿಯ ಚಿಕ್ಕಪ್ಪ ಹೇಳಿದ ಅರಣ್ಯ ಭೂಮಿ ಒತ್ತುವರಿ ಮತ್ತು ತೆರವು ಮಾಡುವ ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಚಿತ್ರಕ್ಕೆ 20 ದಿನಗಳ ಚಿತ್ರೀಕರಣ ನಡೆದಿದೆ. ನಿರ್ಮಾಪಕರು ಕೂಡ ಅಲ್ಲೇ ಸಿಕ್ಕರು. ಚಿತ್ರಕ್ಕೆ ʼಓದು ಇಲ್ಲ ಓಡೋಗುʼ ಎನ್ನುವ ಅಡಿ ಬರಹವಿದೆ. ಅದು ಏಕೆ? ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು. ನಮ್ಮ ಚಿತ್ರ ನವೆಂಬರ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದರು.

ಹಿರಿಯ ಕಲಾವಿದ ಕಿರಣ್ ನಾಯಕ್ ಮಾತನಾಡಿ, ಚಿತ್ರದಲ್ಲಿ ಸಂಜೀವಣ್ಣ ಎನ್ನುವ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದ ಅವರು, ಅರಣ್ಯ ನಾಶ ಆಗುತ್ತಿರುವುದು ಬುಡುಕಟ್ಟು ಜನರಿಂದ‌ ಅಲ್ಲ ಬದಲಾಗಿ ಅರಣ್ಯ ಇಲಾಖೆಯಿಂದ. ಈ ಸತ್ಯ ಗೊತ್ತಿದ್ದರೂ ಅನಗತ್ಯವಾಗಿ ಬುಡಕಟ್ಟು ಜನರ ಮೇಲೆ ಆರೋಪ ಹೊರಿಸುವ ಕೆಲಸ‌ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಮತ್ತೊಬ್ಬ ನಟ ಅಕ್ಷಯ್ ಮಾತನಾಡಿ, ನವೀನ್ ಎನ್ನುವ ಪಾತ್ರ, ಸೈಕಲ್ ಶಾಪ್ ಇಟ್ಟುಕೊಂಡಿರುತ್ತೇನೆ. ಚಿತ್ರೀಕರಣದ ಸಮಯದಲ್ಲಿ ಚಿತ್ರೀಕರಣ ಮಾಡಿದ ಅನುಭವ ಮರೆಯಲಾಗದ್ದು ಎಂದು ತಿಳಿಸಿದರು.

ಹಿರಿಯ ಕಲಾವಿದ ಸುಧಾಕರ್ ಬನ್ನಂಜೆ ಮಾತನಾಡಿ, ನನ್ನದು ಈ ಚಿತ್ರದಲ್ಲಿ ಹೆಡ್ ಮಾಸ್ಟರ್ ಪಾತ್ರ. ಚೆನ್ನಾಗಿ ಮೂಡಿಬಂದಿದೆ. 80ರ ದಶದಕಲ್ಲಿ ಶಿಕ್ಷಕರು, ಊರಿನ‌ ಬಗ್ಗೆ ಇದ್ದ ಬಾಂಧವ್ಯ, ಮಕ್ಕಳ ಬಗ್ಗೆ ಇದ್ದ ಕಾಳಜಿ ಚಿತ್ರದಲ್ಲಿದೆ‌. ಇದು ಶೈಕ್ಷಣಿಕ ಪಾಠಶಾಲೆ ಅಲ್ಲ. ಬದುಕಿನ ಪಾಠಶಾಲೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Deepavali Shopping 2025: ಶುರುವಾಯ್ತು ದೀಪಾವಳಿಯ ಭರ್ಜರಿ ಶಾಪಿಂಗ್

ಬಾಲ‌ ಕಲಾವಿದರಾದ ದಿಗಂತ್, ಮಿಥುನ್, ಆಯುಷ್, ಶ್ರೀಯಾನ್, ಅಹನ, ಗೌತಮಿ, ನಿರ್ಮಾಪಕರಾದ ಪ್ರದೀಪ್ ಗುಡ್ಡೇಮನೆ, ಅರುಣ್ ಮಲ್ಲೇಸರ, ಭಾಸ್ಕರ್ ಕಮ್ಮರಡಿ, ರವಿ ಶೆಟ್ಟಿ ಹಾಗೂ ನೃತ್ಯ ನಿರ್ದೇಶಕ ಅರುಣ್, ಅಂಬಿಕಾ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.