Puneeth Rajkumar birthday: ಇಂದು ಪುನೀತ್ 50ನೇ ಜನ್ಮದಿನ, ಧ್ರುವ 369 ಸಿನಿಮಾ ಟೀಸರ್ ರಿಲೀಸ್
ಇಂದು ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದು, ಮರಳಿ ಬಿಡುಗಡೆಯಾಗಿರುವ ಅವರ ʼಅಪ್ಪುʼ ಸಿನಿಮಾವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ರಾಜ್- ಪುನೀತ್ ಪ್ರತಿಸೃಷ್ಟಿಯ 369 ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.

ಧ್ರುವ 369

ಬೆಂಗಳೂರು: ಇಂದು ರಾಜ್ಯಾದ್ಯಂತ ಅಭಿಮಾನಿಗಳು ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜನ್ಮದಿನವನ್ನು (Power Star Puneeth Rajkumar birthday) ಆಚರಿಸುತ್ತಿದ್ದಾರೆ. 50ನೇ ವರ್ಷದ ಬರ್ತ್ಡೇ ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿದ್ದು, ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬದವರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡಲಿದ್ದಾರೆ. ಜೊತೆಗೆ ಎಐ ಮೂಲಕ ಪ್ರತಿಸೃಷ್ಟಿ ಮಾಡಲಾಗುತ್ತಿರುವ ವರನಟ ರಾಜ್‌ಕುಮಾರ್ ಹಾಗೂ ಪುನೀತ್ ಅಭಿನಯದ ಧ್ರುವ 369 ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.
ಪ್ರತಿ ವರ್ಷ ಮಾರ್ಚ್ 17 ಬಂತೆಂದರೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಬರ್ತ್ಡೇ ಪ್ರಯುಕ್ತ ಹಲವಾರು ಬಗೆಯ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ. ಅಪ್ಪು ಅಭಿಮಾನಿಗಳು ಅನ್ನದಾನ, ರಕ್ತದಾನ, ನೇತ್ರದಾನ ನೋಂದಣಿ ಸೇರಿದಂತೆ ಅನೇಕ ಬಗೆಯ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ.
50ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಪುನೀತ್ ರಾಜ್‌ಕುಮಾರ್ ಅವರ ಮೊದಲ ಸಿನಿಮಾ ‘ಅಪ್ಪು’ ಮರು ಬಿಡುಗಡೆ ಆಗಿದೆ. ಕಳೆದ ಶುಕ್ರವಾರ (ಮಾರ್ಚ್ 14) ರೀ-ರಿಲೀಸ್ ಆದ ‘ಅಪ್ಪು’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ ಎಂಬುದನ್ನು ಫ್ಯಾನ್ಸ್ ಸಾಬೀತು ಮಾಡಿದ್ದಾರೆ. ಹಲವು ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇಂದು ಜನ್ಮದಿನದ ಪ್ರಯುಕ್ತ ಅನೇಕರು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಡಾ. ರಾಜ್‌ಕುಮಾರ್ ಕುಟುಂಬದವರು ಕೂಡ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಧ್ರುವ 369 ಸಿನಿಮಾ ಟೀಸರ್ ರಿಲೀಸ್
ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ತೋರಿಸುವ ಸಾಹಸಕ್ಕೆ ಸಿನಿಮಾ ತಂಡವೊಂದು ಕೈ ಹಾಕಿದ್ದು 'ಧ್ರುವ 369' ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಒಟ್ಟಿಗೆ ತೋರಿಸಲು ಸಜ್ಜಾಗಿದೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ಇದೊಂದು ಪೌರಾಣಿಕ ಸಿನಿಮಾ ಎನ್ನುವ ಸೂಚನೆಯನ್ನು ಟೀಸರ್ ನಲ್ಲಿ ನೀಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಧ್ರುವ 369 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕರು ಇಬ್ಬರು ದಿಗ್ಗಜರನ್ನು ತೆರೆ ಮೇಲೆ ತರಲು ಶ್ರಮ ಪಟ್ಟಿದ್ದಾರೆ. ಇಂತಹ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ ಎಂದು ಹೊಗಳಿದ್ದಾರೆ. 1.40 ನಿಮಿಷದ ಟೀಸರ್ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಮಂಗಳೂರಿನ ಉದ್ಯಮಿ ಶ್ರೀಕೃಷ್ಣ ಕಾಂತಿಲ 'ಅಚಿಂತ್ಯ ಸ್ಟುಡಿಯೋಸ್' ಮೂಲಕ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೆ.ಕೆ. ಶಂಕರ್‌ನಾಗ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಮೇಶ್ ಭಟ್, ಸಂದೀಪ್ ಮಲಾನಿ, ಅತೀಶ್ ಶೆಟ್ಟಿ, ಚಂದನಾ, ನಮಿತಾ ಮುಂತಾದವರು ಇದ್ದಾರೆ. ಸತೀಶ್ ಬಾಬು ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಜೆ.ಕೆ. ಶಂಕರ್‌ನಾಗ್, ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಪೂರ್ತಿಯಾಗಿಸಿಕೊಂಡು ಇಂದಿನ ಯುವಕರು ಏನು ಮಾಡುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾದ 45% ಗ್ರಾಫಿಕ್ಸ್ ಇರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Puneeth Rajkumar: 10ನೇ ವಯಸ್ಸಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ʼಯುವರತ್ನʼ ಪುನೀತ್ ಹುಟ್ಟುಹಬ್ಬ ಇಂದು