Puneeth Rajkumar: 10ನೇ ವಯಸ್ಸಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ʼಯುವರತ್ನʼ ಪುನೀತ್ ಹುಟ್ಟುಹಬ್ಬ ಇಂದು
Puneeth Rajkumar: 10ನೇ ವಯಸ್ಸಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಇಂದು. ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಅವರು ಇನ್ನಿಲ್ಲವಾಗಿ ನಾಲ್ಕು ವರ್ಷಾನೇ ಆಗಿರಬಹುದು. ಆದರೆ ಕನ್ನಡಿಗರು ಅವರನ್ನು ನೆನೆಯದೆ ಇರೋ ದಿನಾನೇ ಇಲ್ಲ. ಕನ್ನಡಿಗರ ಮನೆ ಮಗನಾಗಿದ್ದ ಅವರ ದಿಢೀರ್ ಅಗಲಿಕೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ.

ಪುನೀತ್ ರಾಜ್‌ಕುಮಾರ್.

ಬೆಂಗಳೂರು: ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಇನ್ನಿಲ್ಲವಾಗಿ ನಾಲ್ಕು ವರ್ಷಾನೇ ಆಗಿರಬಹುದು. ಆದರೆ ಕನ್ನಡಿಗರು ಅವರನ್ನು ನೆನೆಯದೆ ಇರೋ ದಿನಾನೇ ಇಲ್ಲ. ಪವರ್‌ಸ್ಟಾರ್ (Power star) ಅಂದ್ರೆ ನೆನಪಾಗೋದು ಅಪ್ಪು (Appu). ಯುವರತ್ನ ಅಂದ್ರೆ ನೆನಪಾಗೋದು ಅಪ್ಪು. ರಾಜಕುಮಾರ ಅಂದ್ರೆ ನೆನಪಾಗೋದು ಅಪ್ಪು. ನಟಸಾರ್ವಭೌಮ ಅಂದ್ರೆ ನೆನಪಾಗೋದು ಅಪ್ಪು. ದೊಡ್ಮನೆ ಹುಡುಗ ಅಂದ್ರೆ, ರಣವಿಕ್ರಮ ಅಂದ್ರೆ, ಪರಮಾತ್ಮ ಅಂದ್ರೆ, ವೀರ ಕನ್ನಡಿಗ ಅಂದ್ರೆ ನೆನಪಾಗೋದು ಅಪ್ಪು. ಅಪ್ಪು ಅಂದ್ರೆ ಪುನೀತ್, ಅಪ್ಪು ಅಂದ್ರೆ ಕನ್ನಡಿಗರ ಎದೆಬಡಿತ, ಅಪ್ಪು ಅಂದ್ರೆ ಕಣ್ಣಂಚಿನ ನೀರಹನಿ, ಅಪ್ಪು ಅಂದ್ರೆ ಕನ್ನಡದ ಮಕ್ಕಳಿಗೆ ಪ್ರಿಯವಾದ ಡ್ಯಾನ್ಸಿಂಗ್ ಹೀರೋ, ಅಪ್ಪು ಅಂದ್ರೆ ಕನ್ನಡದ ಹೆಣ್ಣುಮಕ್ಕಳಿಗೆ ಇಷ್ಟವಾದ ಪಕ್ಕದ್ಮನೆ ಹುಡುಗ, ಅಪ್ಪು ಅಂದ್ರೆ ಗಂಧದ ಗುಡಿ, ನಗುಮೊಗದ ಒಡೆಯ, ಚಂದನವನದ ರಾಜಕುಮಾರ...ಅವರ ನೆನಪು ಮಾತ್ರ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ.
ಕೆಲವೇ ಸಿನಿಮಾಗಳ ಮೂಲಕವೇ ಇಡೀ ಭಾರತೀಯ ಚಿತ್ರರಂಗದ ಮನಗೆದ್ದಿದ್ದ 'ಬೆಟ್ಟದ ಹೂ' ನಾಲ್ಕು ವರ್ಷಗಳ ಹಿಂದೆ ಹಠಾತ್ ಹೃದಯಾಘಾತದಿಂದ ಮುದುಡಿತು. ಭವಿಷ್ಯದಲ್ಲಿ ಪ್ರಜ್ವಲಿಸಬೇಕಿದ್ದ ನಟ ಸಾರ್ವಭೌಮ ವಿಧಿಯಾಟದ ಮುಂದೆ ಮಿಂಚಿ ಮರೆಯಾಯಿತು. ಕಂಠೀರವ ಸ್ಟೇಡಿಯಂನಲ್ಲಿರಿಸಿದ ಅಪ್ಪು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಪಡೆಯೋಕೆ ಸಮುದ್ರದ ಥರ ಹರಿದು ಬಂದ ಕನ್ನಡಿಗರ ಪ್ರಮಾಣ ಲಕ್ಷಗಳ ಸಂಖ್ಯೆಯಲ್ಲಿತ್ತು. ಪುನೀತ್ ಎಂಥ ಸೂಪರ್ ಸ್ಟಾರ್ ಆಗಿದ್ರು ಅನ್ನೋದನ್ನು ಹೇಳೋಕೆ ಇಷ್ಟು ಸಾಕಲ್ವಾ?
ಅಮೋಘ ಅಭಿನಯ ಮಾತ್ರವಲ್ಲದೇ ತಮ್ಮ ಸರಳತೆ, ನಗು ಮತ್ತು ಮಾನವೀಯ ಸೇವಾಕಾರ್ಯಗಳಿಂದಲೂ ಹೆಚ್ಚು ಜನಪ್ರಿಯರಾದ ನಟ ಕನ್ನಡದಲ್ಲಿ ಪುನೀತ್. ದೊಡ್ಮನೆಯ ಹೆಸರನ್ನು ಉಳಿಸಿ ಬೆಳೆಸಿ ಬೆಳಗಿಸಿದ ಅಪ್ಪು ವಿನಯ ಸದಾಕಾಲ ಜನರಿಗೆ ನೆನಪಿನಲ್ಲಿ ಇರೋವಂಥದ್ದು. ಸ್ವತಃ ಪುನೀತ್ ರಾಜ್‌ಕುಮಾರ್ ಅವರು ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ಗೊತ್ತಾಗಬಾರದು ಅನ್ನುವ ಹಾಗೆ ಇದ್ದವರು. ಹೀಗಾಗಿ ಅವರು ಇಂಡಸ್ಟ್ರಿಯಲ್ಲೂ ಅದರಿಂದ ಆಚೆಗೂ ಎಷ್ಟೋ ಜನರಿಗೆ ಸಹಾಯ ಮಾಡಿದ್ದರೂ ಪುನೀತ್ ತೀರಿಕೊಂಡ ನಂತರವೇ ಅದೆಲ್ಲ ಬೇರೆಯವರಿಗೂ ಗೊತ್ತಾಯ್ತು.
1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಕನ್ನಡ ಚಿತ್ರರಂಗದ ನಟಸಾರ್ವಭೌಮ ರಾಜ್‌ಕುಮಾರ್ ಅವರ ಕಿರಿಯ ಪುತ್ರನಾಗಿ ಜನಿಸಿದ ಪುನೀತ್ ರಾಜ್‌ಕುಮಾರ್ ಮುದ್ದಿನ ಬಾಲನಟನಾಗಿಯೇ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 'ಬೆಟ್ಟದ ಹೂವು' ಚಿತ್ರದಲ್ಲಿ ಅವರ ಅಭಿನಯ ಯಾರಿಗಾದರೂ ಮರೆಯೋದುಂಟೆ?

ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ
'ಬೆಟ್ಟದ ಹೂವು' ಚಿತ್ರದ 'ರಾಮು' ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದವರು ಪುನೀತ್. 'ಚಲಿಸುವ ಮೋಡಗಳು' ಮತ್ತು 'ಎರಡು ನಕ್ಷತ್ರಗಳು' ಚಿತ್ರಗಳಲ್ಲಿನ ನಟನೆಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಇನ್ನು 'ಭಕ್ತ ಪ್ರಹ್ಲಾದ' ಸಿನೆಮಾದಲ್ಲಿ ಅವರ ಪ್ರಹ್ಲಾದನ ಪಾತ್ರವನ್ನು ಯಾರೂ ಮರೆಯೋ ಹಾಗೇ ಇಲ್ಲ. ಗರ್ಜಿಸುವ ಹಿರಣ್ಯಕಶ್ಯಪನಾಗಿ ಕಾಣಿಸಿಕೊಂಡ ತನ್ನ ತಂದೆ ರಾಜ್‌ಕುಮಾರ್ ಅವರ ಮುಂದೆ ಮುದ್ದುಮುದ್ದಾಗಿ ಮಾತನಾಡುತ್ತ "ಎಲ್ಲೆಲ್ಲಿಯೂ ಆ ಹರಿಯೇ ಇರುವನು" ಎಂದು ಹೇಳುವ ಅವರ ಸೀನ್‌ಗಳನ್ನು ನೋಡ್ತಾ ನೋಡ್ತಾ ಕನ್ನಡಿಗರು, ಕನ್ನಡಕ್ಕೆ ಇನ್ನೊಬ್ಬ ನಟಸಾರ್ವಭೌಮ ಬಂದೇ ಬಿಟ್ಟ ಅಂತ ಖುಷಿಯಾದರು.
ಆದರೆ ಇದಾದ ಮೇಲೆ ಪುನೀತ್ ಅವರು ತುಂಬ ವರ್ಷ ಸೈಲೆಂಟ್ ಆಗಿದ್ರು. ಸುಮಾರು ವರ್ಷ ಸಿನಿಮಾಗೆ ಬರಲೇ ಇಲ್ಲ, ಬದಲಾಗಿ ತಾವಾಯ್ತು ತಮ್ಮ ಬ್ಯುಸಿನೆಸ್ ಆಯ್ತು ಅಂತ ಸುಮ್ಮನಾಗಿದ್ರು. 1989ರಲ್ಲಿ ʼಪರಶುರಾಮ್ʼ ಸಿನಿಮಾದಲ್ಲಿ ತಂದೆಯ ಜತೆಗೆ ಬಾಲನಟನಾಗಿ ಕಾಣಿಸಿಕೊಂಡ ಹುಡುಗ ಮುಂದೆ 2002ವರೆಗೆ ಕನ್ನಡಿಗರ ಮುಂದೆ ಬರಲೇ ಇಲ್ಲ. 2002ರಲ್ಲಿ ಲೋಹಿತ್ ಎಂಬ ಹೆಸರಿನ ರಾಜ್‌ಕುಮಾರ್ ಫ್ಯಾಮಿಲಿಯ ಹುಡುಗ, ಪುನೀತ್ ರಾಜ್‌ಕುಮಾರ್ ಎಂಬ ಹೆಸರಿನಲ್ಲಿ ಹೀರೋ ಆಗಿ ಬಂದುಬಿಟ್ಟರು.
ʼಅಪ್ಪುʼ ಮೂಲಕ ಹೀರೋ
ಪುನೀತ್ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡಿರೋದು ʼಅಪ್ಪುʼ ಚಲನಚಿತ್ರದಲ್ಲಿ. ಹಾಗಾಗೀನೇ ಪುನೀತ್ ಇಂದಿಗೂ ಕನ್ನಡಿಗರ ಪ್ರೀತಿಯ ಅಪ್ಪು. 2002ರ ಏಪ್ರಿಲ್‌ನಲ್ಲಿ ಈ ಸಿನಿಮಾ ಪುರಿ ಜಗನ್ನಾಥ್ ನಿರ್ದೇಶನ, ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ, ಗುರುಕಿರಣ್ ಸಂಗೀತದೊಂದಿಗೆ ತೆರೆಗೆ ಬಂತು. ಇದು ನಟಿ ರಕ್ಷಿತಾ ಅವರ ಮೊದಲ ಚಲನಚಿತ್ರ ಕೂಡ ಆಗಿತ್ತು. ಇದರಲ್ಲಿ ಪುನೀತ್ ಕಾಲೇಜು ಹುಡುಗನ ಪಾತ್ರ ಮಾಡಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಯ್ತು. ಪುನೀತ್ ಅವರ ಡ್ಯಾನ್ಸಿಂಗ್ ಸ್ಕಿಲ್ ಚಂದನವನದಲ್ಲಿ ಮನೆಮಾತಾಯ್ತು. ಮುಂದಿನ ವರ್ಷ ಹೊರಬಂದ ಅವರ ʼಅಭಿʼ ಫಿಲಂ ರಮ್ಯಾ ಅವರ ಮೊದಲ ಚಿತ್ರ ಕೂಡ ಆಗಿತ್ತು. ಹೀಗೆ ಕನ್ನಡದ ಹಲವು ದೊಡ್ಡ ನಾಯಕಿಯರಿಗೆ ಮೊದಲ ಫಿಲಂ ಕೊಟ್ಟವರು ಅಪ್ಪು.

ʼಮಿಲನʼ ಚಿತ್ರದ ಮೂಲಕ ಫ್ಯಾಮಿಲಿ ಸ್ಟಾರ್ ಆದ್ರು
2007ರಲ್ಲಿ ಪುನೀತ್ ನಟಿಸಿದ ʼಅರಸುʼ ಫಿಲಂ ಅವರಿಗೆ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಾಗೂ ಅದೇ ವರ್ಷ ಬಂದ ʼಮಿಲನʼ ಸಿನಿಮಾ ಅವರಿಗೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟವು. ʼಪೃಥ್ವಿʼಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡೋ ಅಧಿಕಾರಿಯಾಗಿ, ʼಪರಮಾತ್ಮʼದಲ್ಲಿ ಪ್ರೀತಿಗಾಗಿ ಹುಡುಕಾಡೋ ಯುವಕನ ಪಾತ್ರದಲ್ಲಿ, ʼಅಣ್ಣಾಬಾಂಡ್ʼ, ʼನಿನ್ನಿಂದಲೇʼ ಫಿಲಂಗಳಲ್ಲಿ ಅಭಿನಯ ಹಾಗೂ ಡ್ಯಾನ್ಸಿಂಗ್ ಸಾಮರ್ಥ್ಯಗಳನ್ನು ಹೊರತೆಗೆಯುವ ಪಾತ್ರಗಳಲ್ಲಿ ಕಾಣಿಸಿಕೊಂಡರು ಅಪ್ಪು. ʼಚಕ್ರವ್ಯೂಹʼ, ʼದೊಡ್ಮನೆ ಹುಡ್ಗʼ, ʼರಾಜಕುಮಾರʼ, ʼಅಂಜನಿ ಪುತ್ರʼ, ʼನಟಸಾರ್ವಭೌಮʼ, ʼಯುವರತ್ನʼ, ʼಜೇಮ್ಸ್ʼ ಸಿನಿಮಾಗಳು ಕೂಡ ಕನ್ನಡಿಗರ ಹೃದಯ ಗೆದ್ದಿದ್ದಲ್ಲದೆ, ಚಿತ್ರರಸಿಕರ ಮನದಲ್ಲಿ ಶಾಶ್ವತವಾದ ಸ್ಥಾನಮಾನವನ್ನು ಪುನೀತ್‌ಗೆ ನೀಡಿದವು.
ಸಮಾಜ ಸೇವೆಯಲ್ಲೂ ಮುಂದೆ
ನಟನೆಯಲ್ಲದೆ ಸಮಾಜಸೇವೆಯಲ್ಲೂ ಪುನೀತ್ ಮುಂದಿದ್ದರು. ಕೋವಿಡ್ ಸಂದರ್ಭದಲ್ಲಿ ಸಿಎಂ ನಿಧಿಗೆ 50 ಲಕ್ಷ ರೂ. ನೀಡಿದ್ದ ಅಪ್ಪು, ಕನ್ನಡದ ರೈತರ ಅಭಿಮಾನದ ಸಂಸ್ಥೆಯಾದ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿಗೆ ಹಲವು ವರ್ಷಗಳ ಕಾಲ ಗೌರವಧನ ಪಡೆಯದೇ ರಾಯಭಾರಿಯಾಗಿ ಕೆಲಸ ಮಾಡಿದ್ದನ್ನು ನೆನಪಿಸಿಕೊಳ್ಳಲೇ ಬೇಕು. ತಮ್ಮ ಸಮಾಜಮುಖಿ ಕಾರ್ಯಗಳ ಬಗ್ಗೆ ಪುನೀತ್ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. 2019ರಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ 5 ಲಕ್ಷ ರೂ. ದೇಣಿಗೆ ನೀಡಿದ್ದರು.
ಪುನೀತ್ ತಮ್ಮ ತಂದೆಯಂತೆಯೇ ಸಿನಿಮಾ ಹಾಡುಗಳ ಗಾಯನದಲ್ಲಿ ಕೂಡ ಪ್ರಯತ್ನ ಮಾಡಿ ಸೈ ಅನ್ನಿಸಿಕೊಂಡರು. ತಮ್ಮ ಮೊದಲ ಫಿಲಂ ʼಅಪ್ಪುʼವಿನಲ್ಲಿ ಅವರೇ ಒಂದು ಸಾಂಗ್ ಹಾಡಿದರು. ಮುಂದೆ ತಮ್ಮ ಎಲ್ಲ ಫಿಲಂಗಳಲ್ಲೂ ಒಂದೋ ಎರಡೋ ಹಾಡು ಹಾಡ್ತಾ ಇದ್ರು. ಜತೆಗೆ ತಮ್ಮ ಸೋದರ ಶಿವರಾಜ್‍ಕುಮಾರ್ ಅವರ ಫಿಲಂಗಳಿಗೂ ಹಾಡಿದರು. ಹೀಗೆ ಹಾಡಿದ ಹಾಡುಗಳಿಗೆ ಅವರು ಪಡೆಯುತ್ತಿದ್ದ ಸಂಭಾವನೆಯೆಲ್ಲಾ ಅವರ ಸೇವಾ ಕಾರ್ಯಗಳಿಗೆ ಹೋಗುತ್ತಿತ್ತಂತೆ.
ಕನ್ನಡದ ಕೋಟ್ಯಾಧಿಪತಿಯ ಅದ್ಭುತ ಕ್ಷಣಗಳು.. ❤️🙏🏼❤️
— Raghavendra Rajkumar (@iRaghanna) January 12, 2022
Miss you Appu.#KannadadaKotyadhipati pic.twitter.com/t27Sz82Yhi
ಕೋಟ್ಯಧಿಪತಿ ಶೋ ಮೂಲಕವೂ ಪಾಪ್ಯುಲರ್
ಹೀಗಿದ್ದ ಪುನೀತ್ ಅವರನ್ನು ಕನ್ನಡದ ಮನೆಮನೆಗಳ ಪಡಸಾಲೆಗಳಿಗೆ, ಮನಮನಗಳಿಗೆ ತಂದು ನಿಲ್ಲಿಸಿದ್ದು ʼಕನ್ನಡದ ಕೋಟ್ಯಧಿಪತಿʼ ರಿಯಾಲಿಟಿ ಶೋ. 2012ರಲ್ಲಿ ಆರಂಭವಾದ ಈ ಶೋ ಹಿಂದಿಯ ʼಕೌನ್ ಬನೇಗಾ ಕರೋಡ್‌ಪತಿʼ ಹಾಗೆಯೇ ಕನ್ನಡಲ್ಲೂ ಜನಪ್ರಿಯವಾಗಿದ್ದಲ್ಲದೆ, ಹಿಂದಿ ಶೋನ ಹೋಸ್ಟ್ ಅಮಿತಾಭ್ ಬಚ್ಚನ್ ಅವರಂತೆ ಪುನೀತ್ ಅವರನ್ನೂ ಫ್ಯಾಮಿಲಿ ಸ್ಟಾರ್ ಮಾಡಿಬಿಟ್ಟಿತು.
ಪುನೀತ್ ಅವರು ಎಲ್ಲ ಹೆಣ್ಣುಮಕ್ಕಳು ಬಯಸೋವಂಥ ಫ್ಯಾಮಿಲಿ ಮ್ಯಾನ್ ಆಗಿದ್ರು ಅನ್ನೋದನ್ನು ಕೂಡ ಸಾಬೀತುಪಡಿಸಿದ್ರು. 1999ರಲ್ಲಿ ಅಶ್ವಿನಿ ಅವರ ಜತೆಗೆ ಪುನೀತ್ ಮದುವೆ ಆಯ್ತು. ಅಶ್ವಿನಿ ಅವರು ಪುನೀತ್ ಅವರ ಯಶಸ್ಸಿನಲ್ಲಿ ಸದಾ ಬೆಂಗಾವಲಾಗಿ ನಿಲ್ಲುವಂಥ ಮಹಿಳೆ ಮಾತ್ರ ಆಗಿರ್ಲಿಲ್ಲ. ಸ್ವತಃ ತಾವೇ ಒಂದು ಪ್ರೊಡಕ್ಷನ್ ಹೌಸ್ ಸ್ಥಾಪಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವಂಥ ಛಾತಿ ಕೂಡ ಹೊಂದಿದ್ರು. ಅವರಿಬ್ಬರಿಗೂ ಇಬ್ಬರು ಮುದ್ದಾದ ಹೆಣ್ಣುಮಕ್ಕಳು- ವಂದಿತಾ ಮತ್ತು ಧೃತಿ. ದೊಡ್ಮನೆಯ ಸಂಸ್ಕಾರ, ಅಲ್ಲಿನ ಖ್ಯಾತಿ ಎಲ್ಲದಕ್ಕೂ ಸಮರ್ಥ ಉತ್ತರಾಧಿಕಾರಿಯಾಗಿದ್ದವರು ಪುನೀತ್.
ಕನ್ನಡಿಗರ ಪಾಲಿಗೆ ಅದು ಕರಾಳ ದಿನ
ಆದ್ರೆ 2021ನೇ ಇಸವಿಯ ಅಕ್ಟೋಬರ್ 29 ಮಾತ್ರ ಕನ್ನಡಿಗರಿಗೆ ಕರಾಳ ದಿನ. ಎರಡು ವರ್ಷಗಳು ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ವೈರಸ್, ಹಲವರನ್ನು ಆಗ್ಲೇ ಬಲಿ ತೆಗೆದುಕೊಂಡಿತ್ತು. ಕೊರೊನಾದ ಆಫ್ಟರ್ ಎಫೆಕ್ಟ್‌ನಿಂದಾಗಿ ಆರೋಗ್ಯವಂತ ಯುವ ಹೃದಯಗಳು ಸಾಯ್ತಾನೇ ಇದ್ದವು. ಈ ಸಾವಿನ ಸರಣಿ ಕನ್ನಡಿಗರ ಪ್ರೀತಿಯ ಯುವರತ್ನನನ್ನೂ ಬಲಿ ತೆಗೆದುಕೊಂಡದ್ದು ಮಾತ್ರ ವಿಪರ್ಯಾಸ. ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತ ಪುನೀತ್ ಅವರನ್ನು ಇನ್ನಿಲ್ಲವಾಗಿಸಿತು. ಇಡೀ ಕನ್ನಡನಾಡು ಪುನೀತ್ ಸಾವಿಗೆ ಕಂಬನಿ ಮಿಡಿಯಿತು. ಆದ್ರೆ ಪುನೀತ್ ಸಾವಿನಲ್ಲೂ ಆದರ್ಶ ಮೆರೆದಿದ್ದರು. ಸಾಯೋಕೆ ಮೊದಲು ತಮ್ಮ ನೇತ್ರದಾನ ಮಾಡಿದ್ದರು. ಆ ಮೂಲಕ ನಾಲ್ವರ ಬಾಳಿಗೆ ಬೆಳಕಾದರು. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟಾಗ, ಲಕ್ಷಾಂತರ ಸಂಖ್ಯೆಯಲ್ಲಿ ಜನ ಅವರನ್ನು ನೋಡೋದಕ್ಕೆ ಧಾವಿಸಿ ಬಂದರು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ 25ರಿಂದ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು. ಡಾಕ್ಟರ್ ರಾಜ್‌ಕುಮಾರ್ ಅವರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಕನ್ನಡಿಗರು ಕಣ್ಣೀರಿಟ್ಟ ನಟ ಅಂದ್ರೆ ಪುನೀತ್.
ಪುನೀತ್ ರಾಜ್‌ಕುಮಾರ್ ಅಳಿದಿರಬಹುದು; ಅದ್ರೆ ಅವರು ನಟಿಸಿದ ಸಿನಿಮಾಗಳು, ಅವರು ಹಾಡಿದ ಹಾಡುಗಳು, ಅವರು ಮಾಡಿದ ಸೇವಾ ಕಾರ್ಯಗಳು ಸದಾ ನಮಗೆ ಅವರ ನೆನಪಾಗ್ತಾನೇ ಇರುತ್ತವೆ. ಕನ್ನಡ ನಾಡು ಇರುವವರೆಗೂ ಅಪ್ಪು ಅಜರಾಮರ. ನಮ್ಮ ನೆನಪಿನಲ್ಲಿ ಅವರು ಚಿರಸ್ಥಾಯಿ.