ಬೆಂಗಳೂರು, ನ.7: ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ (Yogaraj Bhat) ಅವರು ನಿರ್ಮಿಸಿರುವ, ಅಮೋಲ್ ಪಾಟೀಲ್ ನಿರ್ದೇಶನದ ಹಾಗೂ ʼಪದವಿಪೂರ್ವʼ ಖ್ಯಾತಿಯ ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ʼಉಡಾಳʼ ಚಿತ್ರದ (Udaala Movie) ಟ್ರೇಲರ್ ಬಿಡುಗಡೆಯಾಗಿದೆ. ಖ್ಯಾತ ಕಲಾವಿದರಾದ ನವೀನ್ ಶಂಕರ್ ಹಾಗೂ ನಿಶ್ವಿಕಾ ನಾಯ್ಡು ಟ್ರೇಲರ್ (Udaala Movie Trailer) ಅನಾವರಣ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಮಾಜಿ ಸಚಿವ ಆಂಜನೇಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ತಮ್ಮ ʼಉಡಾಳʼ ಗೆಳೆಯನ್ನನ್ನು ನೆನಪಿಸಿಕೊಂಡು ಮಾತನಾಡಿದ ನಿರ್ಮಾಪಕ ಯೋಗರಾಜ್ ಭಟ್, ನಗಿಸುವುದು ಅಷ್ಟು ಸುಲಭವಲ್ಲ. ನಗು ಬರುವುದು ಅಷ್ಟು ಸುಲಭವಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್, ನಾಯಕ ಪೃಥ್ವಿ ಶಾಮನೂರು ಸೇರಿದಂತೆ 20 ಜನ ಕಲಾವಿದರ ತಂಡವನ್ನಿಟ್ಟುಕೊಂಡು ʼಉಡಾಳʼ ಚಿತ್ರದ ಮೂಲಕ ನಗುವಿನ ರಸದೌತಣವನ್ನೇ ಬಡಿಸಿದ್ದಾನೆ. ವೃತ್ತಿಯಲ್ಲಿ ಆಧ್ಯಾಪಕರಾಗಿದ್ದ ರವಿ ಶಾಮನೂರು ಸಿನಿಮಾಗೆ ಬಂಡಾವಾಳ ಹೂಡಿದ್ದಾರೆ. ಇದೇ ರೀತಿ ಕಲಿತು ನಟನೆ ಮಾಡಿದರೆ, ಪೃಥ್ವಿ ಸ್ವಲ್ಪ ದಿನಗಳಲ್ಲಿ ಸ್ಟಾರ್ ನಟ ಆಗುತ್ತಾನೆ. ನವೆಂಬರ್ 14 ಚಿತ್ರ ತೆರೆಗೆ ಬರಲಿದೆ ಎಲ್ಲರೂ ನೋಡಿ ಎಂದು ತಿಳಿಸಿದರು.
ಇದು ನಾನು, ಯೋಗರಾಜ್ ಭಟ್ ಅವರ ಜತೆಗೆ ಸೇರಿ ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ. ನಿರ್ಮಾಪಕನಿಗೆ ಒಂದೊಳ್ಳೆ ತಂಡ ಸಿಗುವುಕ್ಕಿಂತ ಮತ್ತೇನು ಬೇಕು. ನನಗೆ ಅಂತಹ ಒಳ್ಳೆಯ ತಂಡ ಸಿಕ್ಕಿದೆ. ಚಿತ್ರ ಕೂಡ ಅಂದು ಕೊಂಡ ಹಾಗೆ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರವಿ ಶಾಮನೂರು.
ಉತ್ತರ ಕರ್ನಾಟಕದ ಸೊಗಡನ್ನು ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ ಮಾತ್ರ ಕೆಲವು ಚಿತ್ರಗಳಲ್ಲಿ ಬಳಸಿಕೊಳ್ಳಲಾಗಿತ್ತು. ಆದರೆ ನಮ್ಮ ಚಿತ್ರ ಫುಲ್ ಮೀಲ್ಸ್ ತರಹ ಉತ್ತರ ಕರ್ನಾಟಕದೇ ಸಿನಿಮಾ. ಇಡೀ ಕಥೆ ವಿಜಾಪುರದಲ್ಲೇ ನಡೆಯುತ್ತದೆ. ಉತ್ತರ ಕರ್ನಾಟಕದ ಸುಂದರತೆ ಈ ಚಿತ್ರದಲ್ಲಿದೆ. ನಿರ್ಮಾಪಕರು ಹೇಳಿದ ಹಾಗೆ ಒಂದೊಳ್ಳೆ ತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ನವೆಂಬರ್ 14ರಂದು ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ಅಮೋಲ್ ಪಾಟೀಲ್.
ಟೀಸರ್ ಹಾಗೂ ಹಾಡುಗಳನ್ನು ಮೆಚ್ಚಿಕೊಂಡಿರುವ ಜನರು ಟ್ರೇಲರ್‌ಗೂ ಪ್ರಶಂಸೆ ನೀಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಹೇರಳವಾಗಿ ರೀಲ್ಸ್ ಮಾಡುತ್ತಿದ್ದಾರೆ. ಹೋದ ಕಡೆ ಎಲ್ಲಾ ನನ್ನನ್ನು ʼಉಡಾಳʼ ನೆಂದೇ ಗುರುತ್ತಿಸುತ್ತಿದ್ದಾರೆ. ಇದನ್ನು ಸಾಧ್ಯವಾಗಿಸಿ ಕೊಟ್ಟ ನನ್ನ ತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ಅನಂತ ಧನ್ಯವಾದ ಎಂದರು ನಾಯಕ ಪೃಥ್ವಿ ಶಾಮನೂರು.
ಈ ಸುದ್ದಿಯನ್ನೂ ಓದಿ | Winter Fashion 2025: ಯುವಕ-ಯುವತಿಯರನ್ನು ಆವರಿಸಿಕೊಂಡ ಯೂನಿಸೆಕ್ಸ್ ಪಫರ್ ಜಾಕೆಟ್ಸ್
ಚಿತ್ರದ ಸಂಗೀತ ನಿರ್ದೇಶಕ ಚೇತನ್ ಡ್ಯಾವಿ, ಗಾಯಕಿ ಸೃಷ್ಟಿ ಶಾಮನೂರು, ಸಂಕಲನಕಾರ ಮಧು ತುಂಬಕೆರೆ ಹಾಗೂ ಚಿತ್ರದಲ್ಲಿ ನಟಿಸಿರುವ ಬಲ ರಾಜ್ ವಾಡಿ, ಬಿರಾದಾರ್ ಸೇರಿದಂತೆ ಅನೇಕ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.