ಬೆಂಗಳೂರು, ನ.15: ಖ್ಯಾತ ನಿರ್ದೇಶಕ ಡಾ.ಎಸ್. ನಾರಾಯಣ್ (Dr S Narayan) ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ʼಮಾರುತʼ (Marutha Movie) ಪ್ರೀ ರಿಲೀಸ್ ಇವೆಂಟ್ ನಗರದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿದ್ದಿ, ನವೆಂಬರ್ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಚಿತ್ರದ ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಶುರುವಾದ ಚಿತ್ರವಿದು. ಕಥೆ ಕೇಳಿ ಕೆ. ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣಕ್ಕೆ ಮುಂದಾದರು. ಶ್ರೇಯಸ್ ಮಂಜು ಹಾಗೂ ಬೃಂದಾ ಆಚಾರ್ಯ ನಾಯಕ - ನಾಯಕಿ ಅಂತ ನಿಗದಿಯಾದರು. ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುವ ಪ್ರಮುಖಪಾತ್ರಕ್ಕೆ ಉತ್ತಮ ನಟರೊಬ್ಬರು ಬೇಕಿತ್ತು. ಆಗ ನಮಗೆ ನೆನಪಾಗಿದ್ದೆ ದುನಿಯಾ ವಿಜಯ್ ಅವರು. ಅಭಿನಯಿಸಲು ವಿಜಯ್ ಅವರು ಒಪ್ಪಿದ್ದು ಬಹಳ ಖುಷಿಯಾಯಿತು. ಇನ್ನೂ, ಇದು ನನ್ನ ನಿರ್ದೇಶನದ 51ನೇ ಚಿತ್ರ. ಇಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು, ಶರತ್ ಲೋಹಿತಾಶ್ವ ಅವರ ಜತೆಗೆ ನಾನು ಕೆಲಸ ಮಾಡಿರುವ ಮೊದಲ ಚಿತ್ರವಿದು. ರಂಗಾಯಣ ರಘು, ಸಾಧುಕೋಕಿಲ, ತಾರಾ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ, ವಿನಯ್ ಬಿದ್ದಪ್ಪ, ರಣವ್ ಹೀಗೆ ದೊಡ್ಡ ತಾರಾಬಳಗವೇ ಇದೆ. ವಿಶೇಷಪಾತ್ರದಲ್ಲಿ ರವಿಚಂದ್ರನ್ ಅವರು ನಟಿಸಿದ್ದಾರೆ. ತಂತ್ರಜ್ಞರ ಸಹಕಾರವಂತೂ ಅಪಾರ.
ಈಗಿನ ಮೊಬೈಲ್ ಯುಗದಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಎಷ್ಟು ಗಮನ ಕೊಟ್ಟರೂ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳ ಮೇಲಂತೂ ವಿಶೇಷ ಗಮನ ಕೊಡಬೇಕು. ತಂದೆ - ತಾಯಿ ಮಕ್ಕಳ ಜತೆಗೆ ಸ್ವಲ್ಪ ಸಮಯ ಕೊಡಬೇಕು. ಇಲ್ಲದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಚಿತ್ರವಿದು. ಈ ಚಿತ್ರವನ್ನು ಸದ್ಯದಲ್ಲೇ ಪೊಲೀಸ್ ಅಧಿಕಾರಿಗಳು ಹಾಗೂ ಮಹಿಳಾ ಆಯೋಗದವರು ವೀಕ್ಷಿಸಲಿದ್ದಾರೆ. ಈಗ ಬರುತ್ತಿರುವ ʼಮಾರುತʼ ಚಿತ್ರ ಬರೀ ಟ್ರೇಲರ್ ಇದ್ದ ಹಾಗೆ. ʼಮಾರುತ 2ʼ ಕೂಡ ಬರಲಿದೆ. ಆ ಚಿತ್ರದಲ್ಲಿ ದುನಿಯಾ ವಿಜಯ್ ಅವರು ಅಭಿನಯಿಸಲಿದ್ದಾರೆ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎಂದು ನಿರ್ದೇಶಕ ಎಸ್. ನಾರಾಯಣ್ ತಿಳಿಸಿದರು.
ಮನುಷ್ಯನಿಗೆ ಎಲ್ಲದಕ್ಕಿಂತ ಶಿಸ್ತು ಹಾಗೂ ಸಮಯ ಪರಿಪಾಲನೆ ಮುಖ್ಯ. ನಾನು ಅದನ್ನು ಕಲಿತದ್ದು ಎಸ್. ನಾರಾಯಣ್ ಅವರಿಂದ. ಇನ್ನೂ, ಕೆ. ಮಂಜು ಅವರ ಜತೆಗೆ ಈಗಾಗಲೇ ಸಿನಿಮಾ ಮಾಡಿದ್ದೀನಿ. ರಮೇಶ್ ಯಾದವ್ ಅವರು ಮಂಜು ಅವರಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಶ್ರೇಯಸ್, ಬೃಂದಾ ಆಚಾರ್ಯ ಸೇರಿದಂತೆ ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ದುನಿಯಾ ವಿಜಯ್.
ಎಸ್. ನಾರಾಯಣ್ ಅವರು ಒಂದೊಳ್ಳೆ ಸಂದೇಶವಿರುವ ಚಿತ್ರ ಮಾಡಿದ್ದಾರೆ. ಇದೇ ನವೆಂಬರ್ 21ರಂದು ಈ ಚಿತ್ರ 225ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಇದು, ನಾರಾಯಣ್ ಅವರ ನಿರ್ದೇಶನದ 51ನೇ ಸಿನಿಮಾ. ಹಾಗೆ ನನ್ನ ನಿರ್ಮಾಣದ 51ನೇ ಚಿತ್ರ ಹಾಗೂ ರಮೇಶ್ ಯಾದವ್ ನಿರ್ಮಾಣದ 21ನೇ ಸಿನಿಮಾ. ನವೆಂಬರ್ ತಿಂಗಳು ನಮಗೆ ಲಕ್ಕಿ. ಏಕೆಂದರೆ, ನನ್ನ ನಿರ್ಮಾಣದ ʼರಾಜಾಹುಲಿʼ ಹಾಗೂ ರಮೇಶ್ ಯಾದವ್ ನಿರ್ಮಾಣದ ʼದಾಸʼ ಚಿತ್ರಗಳು ನವೆಂಬರ್‌ನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದವು. ಈಗ ʼಮಾರುತʼ ಸಹ ಅದೇ ರೀತಿ ಯಶಸ್ವಿಯಾಗುವ ಭರವಸೆ ಇದೆ. ನಮ್ಮ ಚಿತ್ರದ ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನಮ್ಮ ಸಂಸ್ಥೆಯ ಚಿತ್ರದಲ್ಲಿ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ನನಗೆ ಫೋನ್ ಮಾಡಿ ನನ್ನಿಂದ ನಿಮ್ಮ ಚಿತ್ರಕ್ಕೆ ಏನಾಗಬೇಕು ಅಂತ ಕೇಳಿದರು. ಕೇಳಿದ ಹಾಗೆ ಈಗ ನಮ್ಮ ಚಿತ್ರದ ಟ್ರೇಲರ್ ಅನ್ನು ವಿಶೇಷವಾಗಿ ಪ್ರಸಾರ ಮಾಡಿಸುತ್ತಿದ್ದಾರೆ. ಅವರು ತಮ್ಮ ಹೆಸರನ್ನು ಹೇಳಬಾರದೆಂದು ಹೇಳಿದ್ದಾರೆ. ಹಾಗಾಗಿ ಹೇಳುತ್ತಿಲ್ಲ ಎಂದರು.
ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಕೆ. ಮಂಜು ಅವರ ಜತೆಗೆ ಸೇರಿ ನಿರ್ಮಾಣ ಮಾಡಿರುವುದು ಖುಷಿಯಾಗಿದೆ. ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ಯಾದವ್.
ಎಸ್. ನಾರಾಯಣ್ ಅವರಂತಹ ಅನುಭವಿ ನಿರ್ದೇಶಕರ ಬಳಿ ಕೆಲಸ ಮಾಡಿ ಸಾಕಷ್ಟು ಕಲಿತಿದ್ದೇನೆ. ಇನ್ನೂ, ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದ್ದು, ಅವರೊಟ್ಟಿಗೆ ಅಭಿನಯಿಸಿದ್ದು, ಬಹಳ ಸಂತೋಷವಾಗಿದೆ. ನಮ್ಮ ಅಪ್ಪ ಹಾಗೂ ರಮೇಶ್ ಯಾದವ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನು ಕೇಳಿದನ್ನೆಲ್ಲಾ ಒಂದು ದಿನ ಇಲ್ಲ ಎನ್ನದೆ ನೀಡಿರುವ ನಮ್ಮಪ್ಪನ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎಂದು ನಾಯಕ ಶ್ರೇಯಸ್ ಕೆ. ಮಂಜು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Eye Makeup Tips 2025: ಸಂದರ್ಭಕ್ಕೆ ತಕ್ಕಂತಿರಲಿ ನಿಮ್ಮ ಐ ಮೇಕಪ್
ಎಸ್. ನಾರಾಯಣ್ ಅವರ ಜತೆಗೆ ಕೆಲಸ ಮಾಡಿ ಶಿಸ್ತನ್ನು ಕಲಿತಿದ್ದೇನೆ. ಒಂದೊಳ್ಳೆ ಪಾತ್ರ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕಿ ಬೃಂದಾ ಆಚಾರ್ಯ. ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಶರತ್ ಲೋಹಿತಾಶ್ವ, ವಿನಯ್ ಬಿದ್ದಪ್ಪ, ರಣವ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.