Vishnuvardhan Memorial: ವಿಷ್ಣು ಸ್ಮಾರಕಕ್ಕೆ 15 ಗುಂಟೆ ಜಾಗ ನೀಡಿ; ಸಚಿವ ಈಶ್ವರ್ ಖಂಡ್ರೆಗೆ ನಿರ್ಮಾಪಕರ ಮನವಿ
Sandalwood News: ಕನ್ನಡ ಚಲನಚಿತ್ರ ನಿರ್ಮಾಪಕರಾದ ಕೆ. ಮಂಜು, ಉಮೇಶ್ ಬಣಕಾರ್ ಮತ್ತಿತರರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ, ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಅಭಿಮಾನ್ ಸ್ಟುಡಿಯೋ ಪ್ರದೇಶದಲ್ಲಿ 15 ಗುಂಟೆ ಜಮೀನು ನೀಡುವಂತೆ ಮನವಿ ಮಾಡಿದ್ದಾರೆ.

-

ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ (Vishnuvardhan Memorial) ನಿರ್ಮಾಣಕ್ಕೆ 15 ಗುಂಟೆ ಜಮೀನು ನೀಡುವಂತೆ ಸ್ಯಾಂಡಲ್‌ವುಡ್ ನಿರ್ಮಾಪಕರು, ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರಾದ ಕೆ. ಮಂಜು, ಉಮೇಶ್ ಬಣಕಾರ್ ಮತ್ತಿತರರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ, ದಿವಂಗತ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ಅಭಿಮಾನ್ ಸ್ಟುಡಿಯೋ ಪ್ರದೇಶದಲ್ಲಿ 15 ಗುಂಟೆ ಜಮೀನು ನೀಡುವಂತೆ ಮನವಿ ಮಾಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ತೆರವು ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ಸ್ಥಳವು ಅಭಿಮಾನಿಗಳಿಗೆ ಅತ್ಯಂತ ಭಾವನಾತ್ಮಕ ನೆನಪಿನ ಸ್ಥಳವೂ ಆಗಿದೆ. ಹೀಗಾಗಿ ಆ ಜಾಗದಲ್ಲಿ ಮತ್ತೆ ವಿಷ್ಣು ಸ್ಮಾರಕ ನಿರ್ಮಿಸಲು ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ವಿಷ್ಣು ಸ್ಮಾರಕಕ್ಕೆ ಜಾಗ, ಕರ್ನಾಟಕ ರತ್ನಕ್ಕೆ ಮನವಿ ಮಾಡಿದ್ದ ಭಾರತಿ ವಿಷ್ಣುವರ್ಧನ್
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ವಿಷ್ಣು ಸ್ಮಾರಕ (Vishnuvardhan Memorial) ನಿರ್ಮಾಣಕ್ಕೆ 10 ಗುಂಟೆ ಜಾಗ ಒದಗಿಸಬೇಕು ಹಾಗೂ ವಿಷ್ಣುವರ್ಧನ್ ಅವರಿಗೆ 'ಕರ್ನಾಟಕ ರತ್ನʼ ಪ್ರಶಸ್ತಿ ನೀಡಬೇಕೆಂದು ಇತ್ತೀಚೆಗೆ ಮನವಿ ಮಾಡಿದ್ದರು.
ಮೈಸೂರು ನಗರದಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸಿ ಕನ್ನಡದ ಹೃದಯದಲ್ಲಿ ವಿಷ್ಣುವರ್ಧನ್ ಅವರ ನೆನಪನ್ನು ಶಾಶ್ವತವಾಗಿ ಉಳಿಸಿರುವ ಕರ್ನಾಟಕ ಸರ್ಕಾರಕ್ಕೆ, ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಇದು ಲಕ್ಷಾಂತರ ಅಭಿಮಾನಿಗಳ ಹೆಮ್ಮೆಯ ವಿಷಯವಾಗಿದೆ. ಆದರೆ, ಬೆಂಗಳೂರು ನಗರದಲ್ಲಿಯೂ ಸ್ಮಾರಕದ ಅಗತ್ಯವಿದೆ ಎಂಬ ಅಭಿಮಾನಿಗಳ ದೀರ್ಘಕಾಲದ ಬೇಡಿಕೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಡಾ.ವಿಷ್ಣುವರ್ಧನ್ ಅವರು ಬದುಕನ್ನು ರೂಪಿಸಿಕೊಂಡಿದ್ದೇ ಬೆಂಗಳೂರಿನಲ್ಲಿ. ಈ ಸ್ಥಳವು ಅಭಿಮಾನಿಗಳಿಗೆ ಅತ್ಯಂತ ಭಾವನಾತ್ಮಕ ನೆನಪಿನ ಸ್ಥಳವೂ ಆಗಿದೆ. ಏಕೆಂದರೆ, ಇಲ್ಲಿಯೇ ಡಾ.ವಿಷ್ಣುವರ್ಧನ್ ಅವರ ಅಗ್ನಿಸ್ಪರ್ಶ (ಅಂತ್ಯಕ್ರಿಯೆ) ನೇರವೇರಿದ್ದು. ಲಕ್ಷಾಂತರ ಅಭಿಮಾನಿಗಳು ಆಗಮಿಸಿ ತಮ್ಮ ಪ್ರೀತಿಯ ಕಲಾವಿದನಿಗೆ ಕಂಬನಿ ಮಿಡಿದಿದ್ದರು.
ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಾವು ಮನವಿ ಮಾಡಿಕೊಳ್ಳುವುದು ಏನೆಂದರೆ, ಅಭಿಮಾನ್ ಸ್ಟುಡಿಯೋ ವ್ಯಾಪ್ತಿಯಲ್ಲಿ ಕನಿಷ್ಠ 10 ಗುಂಟೆ ಜಾಗವನ್ನು ಮೀಸಲಿಟ್ಟು- ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ನೀಡಬೇಕೆಂದು ಕೋರುತ್ತೇವೆ. ಇದರಿಂದ ಅಭಿಮಾನಿಗಳ ಭಾವನೆಗಳಿಗೆ ನ್ಯಾಯವನ್ನು ದೊರಕಿಸುವ ಜತೆಗೆ- ಒಂದು ಶಾಶ್ವತ ಸಾಂಸ್ಕೃತಿಕ ಸ್ಮಾರಕವಾಗಿ ಉಳಿದು ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಅವರಿಗೆ ಭಾರತಿ ವಿಷ್ಣುವರ್ಧನ್ ಮನವಿ ಮಾಡಿದ್ದರು.