ನವದೆಹಲಿ, ಸೆ. 15: ಯುಪಿಐ (UPI) ಮೂಲಕ ಹಣ ಪಾವತಿಸುವವರಿಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ. ₹2,000ಕ್ಕಿಂತ ಹೆಚ್ಚಿನ ಮೊತ್ತದ ಕೆಲವು ವ್ಯಾಪಾರಿ ಪಾವತಿಗಳಿಗೆ ಹೊಸದಾಗಿ 0.4% ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹೊಸ ನಿಯಮ 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಆದರೆ ಇದರ ನೇರ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ. ಹೊಸ ನಿಯಮದ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ (P2P) ಮಾಡುವ ಯುಪಿಐ ಹಣ ವರ್ಗಾವಣೆಗೆ ಯಾವುದೇ MDR ಇರುವುದಿಲ್ಲ. ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಅಥವಾ ಸ್ವಂತ ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾಯಿಸುವುದೂ ಎಂದಿನಂತೆ ಉಚಿತವಾಗಿರಲಿದೆ.
ಅದೇ ರೀತಿ, ವ್ಯಾಪಾರಿಗಳಿಗೆ ಮಾಡುವ ₹ 2,000ರವರೆಗಿನ ಪಾವತಿಗಳೂ ಉಚಿತವಾಗಿರುತ್ತವೆ. ಸರ್ಕಾರದ ಅಂದಾಜಿನ ಪ್ರಕಾರ, ಸುಮಾರು 96% P2M (Person-to-Merchant) ಯುಪಿಐ ವಹಿವಾಟುಗಳು ಹೊಸ ನಿಯಮದಿಂದ ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ.
MDR ನಿಯಮದ ಬಗ್ಗೆ ಮಾಹಿತಿ:
₹ 2,000ಕ್ಕಿಂತ ಹೆಚ್ಚು ಪಾವತಿಸಿದರೆ ಎಷ್ಟು ಶುಲ್ಕ?
ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಲ್ಲಿ ₹ 2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ 0.4% MDR ವಿಧಿಸಲಾಗುತ್ತದೆ. ಉದಾಹರಣೆಗೆ, ₹ 3,000 ಪಾವತಿಗೆ ವ್ಯಾಪಾರಿಗೆ ₹ 12 MDR ಅನ್ವಯಿಸಬಹುದು. ₹ 50,000 ಪಾವತಿಗೆ ₹ 200 ಶುಲ್ಕವಾಗುತ್ತದೆ. ಆದರೆ ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ MDR ಗರಿಷ್ಠ ₹ 300ಕ್ಕೆ ಮಿತಿಗೊಳಿಸಲಾಗಿದೆ. ಹೀಗಾಗಿ ₹ 1 ಲಕ್ಷದ ಪಾವತಿಗೆ 0.4% ಪ್ರಕಾರ ₹ 400 ಆಗಬೇಕಿದ್ದರೂ, ಗರಿಷ್ಠ ಮಿತಿಯ ಕಾರಣ ₹ 300 ಮಾತ್ರ ಅನ್ವಯಿಸುತ್ತದೆ.
ಇನ್ಮುಂದೆ ವಾಟ್ಸ್‌ಆ್ಯಪ್‌ನಲ್ಲೇ ಮಾಹಿತಿ: ಅಧಿಕೃತ ಚಾನೆಲ್ ಆರಂಭಿಸಿದ ಇಪಿಎಫ್‌ಒ
ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕೇ?
ಇಲ್ಲ. MDR ಎಂಬುದು ವ್ಯಾಪಾರಿಯ ಮೇಲಿನ ಶುಲ್ಕವಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಅವಕಾಶವಿಲ್ಲ. ಯುಪಿಐ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಪ್ರತ್ಯೇಕ ವಹಿವಾಟು ಶುಲ್ಕ ವಿಧಿಸಲಾಗುವುದಿಲ್ಲ. ಯುಪಿಐ ಆ್ಯಪ್‌ಗಳೂ ಈ ಪಾವತಿಗಳ ಮೇಲೆ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕ ವಿಧಿಸಲು ಅವಕಾಶವಿಲ್ಲ.
ಕೆಲವು ಕ್ಷೇತ್ರಗಳಿಗೆ ಪ್ರತ್ಯೇಕ ಶುಲ್ಕ
ರೈಲ್ವೆ, ಇಂಧನ, ವಿಮೆ, ಟೆಲಿಕಾಂ ಸೇರಿದಂತೆ ಕೆಲವು ನಿರ್ದಿಷ್ಟ ಕ್ಷೇತ್ರಗಳ ₹2,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ 0.4% ಬದಲಿಗೆ ಪ್ರತಿ ವಹಿವಾಟಿಗೆ ₹ 5ರಷ್ಟು MDR ಅನ್ವಯಿಸುವ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಇನ್ನು ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು, ಸೆಕ್ಯುರಿಟೀಸ್ ಮತ್ತು ಹೂಡಿಕೆ ವೇದಿಕೆಗಳಿಗೆ ಸಂಬಂಧಿಸಿದ ಯುಪಿಐ ಪಾವತಿಗಳಿಗೆ 0.02% MDR, ಗರಿಷ್ಠ ₹ 300 ಮಿತಿ ಅನ್ವಯಿಸುತ್ತದೆ.
ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ
ತಿಂಗಳಿಗೆ ಯುಪಿಐ ಕ್ಯುಆರ್ ಕೋಡ್ ಮೂಲಕ ₹ 1 ಲಕ್ಷದವರೆಗೆ ಪಾವತಿಗಳನ್ನು ಸ್ವೀಕರಿಸುವ ಸಣ್ಣ ವ್ಯಾಪಾರಿಗಳನ್ನು P2PM ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಇಂತಹ ವ್ಯಾಪಾರಿಗಳಿಗೆ ಹೊಸ MDR ನಿಯಮ ಅನ್ವಯಿಸುವುದಿಲ್ಲ. ಒಬ್ಬ ಗ್ರಾಹಕರಿಂದ ₹ 2,000ಕ್ಕಿಂತ ಹೆಚ್ಚಿನ ಮೊತ್ತ ಸ್ವೀಕರಿಸಿದ ಮಾತ್ರಕ್ಕೆ ಅವರಿಗೆ MDR ವಿಧಿಸಲಾಗುವುದಿಲ್ಲ.
ಒಟ್ಟಿನಲ್ಲಿ, ಹೊಸ ನಿಯಮವು ಯುಪಿಐ ಬಳಕೆದಾರರ ಮೇಲೆ ನೇರವಾಗಿ ಹೆಚ್ಚುವರಿ ವೆಚ್ಚ ಹೇರುವುದಿಲ್ಲ. ಬದಲಾಗಿ, ಹೆಚ್ಚಿನ ಮೊತ್ತದ ಕೆಲವು ವ್ಯಾಪಾರಿ ವಹಿವಾಟುಗಳಿಗೆ ಶುಲ್ಕ ವಿಧಿಸುವ ಮೂಲಕ ಯುಪಿಐ ವ್ಯವಸ್ಥೆಯ ಮೂಲಸೌಕರ್ಯ, ಸೈಬರ್ ಸುರಕ್ಷತೆ, ನವೀನತೆ ಮತ್ತು ಸೇವೆಗಳ ನಿರ್ವಹಣೆಗೆ ಆದಾಯದ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದೆ.