ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

700 ಅಂಕ ನಷ್ಟ 1 ಗಂಟೆಯಲ್ಲೇ ಭರ್ತಿ! ಸೆನ್ಸೆಕ್ಸ್‌ 340 ಅಂಕ ಜಿಗಿತ

Sensex And Nifty: ಸೆನ್ಸೆಕ್ಸ್‌ ಮತ್ತು ನಿಫ್ಟಿ ಇವತ್ತು ಆರಂಭಿಕ ಹಂತದ ಭಾರಿ ನಷ್ಟದಿಂದ ಲಾಭಕ್ಕೆ ಭಾರಿ ಜಿಗಿತ ದಾಖಲಿಸಿತು. ಬೆಳಗ್ಗೆ 700 ಅಂಕ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್‌ ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಅಂಕ ಚೇತರಿಸಿ ಲಾಭದ ಹಳಿಗೆ ಮರಳಿತು. ಇದಕ್ಕೆ ಕಾರಣವೂ ಇತ್ತು. ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಮಾತುಕತೆ ಮುಂದುವರಿಯಲಿದೆ.

ಸಾಂದರ್ಭಿಕ ಚಿತ್ರ

ಸೆನ್ಸೆಕ್ಸ್‌ ಮತ್ತು ನಿಫ್ಟಿ ಇವತ್ತು ಆರಂಭಿಕ ಹಂತದ ಭಾರಿ ನಷ್ಟದಿಂದ ಲಾಭಕ್ಕೆ ಭಾರಿ ಜಿಗಿತ ದಾಖಲಿಸಿತು. ಬೆಳಗ್ಗೆ 700 ಅಂಕ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್‌ ಒಂದೇ (Sensex And Nifty) ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಅಂಕ ಚೇತರಿಸಿ ಲಾಭದ ಹಳಿಗೆ ಮರಳಿತು. ಇದಕ್ಕೆ ಕಾರಣವೂ ಇತ್ತು. ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಮಾತುಕತೆ ಮುಂದುವರಿಯಲಿದೆ, ಉಭಯ ದೇಶಗಳು ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲಿವೆ ಎಂದು ಭಾರತಕ್ಕೆ ಅಮೆರಿಕದ ಹೊಸ ರಾಯಭಾರಿಯಾಗಿರುವ ಸರ್ಜಿಯೊ ಗೋರ್‌ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ ಬೆನ್ನಲ್ಲೇ ಸೆನ್ಸೆಕ್ಸ್‌ ಮತ್ತು ನಿಫ್ಟಿ ಜಿಗಿಯಿತು.

ಸೆನ್ಸೆಕ್ಸ್‌ 301 ಅಂಕ ಏರಿಕೆಯಾಗಿ 83,878 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 107 ಅಂಕ ಏರಿಕೆಯಾಗಿ 25,790ಕ್ಕೆ ಸ್ಥಿರವಾಯಿತು. ಇದರೊಂದಿಗೆ ಕಳೆದ 5 ದಿನಗಳಿಂದ ಕುಸಿಯುತ್ತಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಚೇತರಿಸಿದಂತಾಗಿದೆ. ಇವತ್ತು ಒಟ್ಟಾರೆಯಾಗಿ ಮಾರುಕಟ್ಟೆ ಬಂಡವಾಳ ಮೌಲ್ಯವು 468 ಲಕ್ಷ ಕೋಟಿ ರುಪಾಯಿಗಳಿಂದ 469 ಲಕ್ಷ ಕೋಟಿ ರುಪಾಯಿಗೆ ಏರಿಕೆ ಆಯಿತು.

ಅಮೆರಿಕಕ್ಕೆ ಬೇರೆ ಯಾವುದೇ ದೇಶಕ್ಕಿಂತಲೂ ಹೆಚ್ಚು ಅವಶ್ಯಕವಿರುವ ರಾಷ್ಟ್ರ ಭಾರತ ಆಗಿದೆ. ಉಭಯ ದೇಶಗಳೂ ಟ್ರೇಡ್‌ ಡೀಲ್‌ ಅಂತಿಮಗೊಳಿಸಲು ಮಾತುಕತೆ ನಡೆಸುತ್ತಿವೆ. ನಿಜವಾದ ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದರೆ ಭಿನ್ನಮತವನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯವೂ ನಿಜವಾದ ಸ್ನೇಹಿತರಲ್ಲಿ ಇರುತ್ತದೆ ಎಂದು ಗೋರ್‌ ವಿವರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಸರ್ಜಿಯೊ ಗೋರ್‌ ಅವರನ್ನು ನೇಮಿಸುವ ಮೂಲಕ, ಉಭಯ ದೇಶಗಳಲ್ಲಿ ವ್ಯಾಪಾರ ಮಾತುಕತೆ ಮುಂದುವರಿಯುವ ವಿಶ್ವಾಸ ಉಂಟಾಗಿದೆ. ಭಾರತದ ರಾಯಭಾರಿ ಆಗಿರುವುದರ ಜತೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಒಳಗೊಂಡಿರುವ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ವಿಶೇಷ ಪ್ರತಿನಿಧಿಯಾಗಿಯೂ ಗೋರ್‌ ನೇಮಕವಾಗಿದ್ದಾರೆ. ಅವರ ಈ ದ್ವಿಪಾತ್ರ ಕೆಲ ಕಳವಳ ಹುಟ್ಟಿಸಿದ್ದರೂ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಸುಸೂತ್ರವಾಗಲಿದೆ ಎಂಬ ಅವರ ವಿಶ್ವಾಸದಾಯಕ ಮಾತುಗಳು ಸಕಾರಾತ್ಮಕ ಪ್ರಭಾವವನ್ನು ಸ್ಟಾಕ್‌ ಮಾರ್ಕೆಟ್‌ ಮೇಲೆ ಬೀರಿದೆ. ಗೋರ್‌ ವೈಯಕ್ತಿಕವಾಗಿ ಟ್ರಂಪ್‌ ಅವರಿಗೆ ಆಪ್ತರು.

ಮುಂದಿನ ಹಂತದ ಮಾತುಕತೆಗೆ ಮುನ್ನ ಅಮೆರಿಕದ ರಾಯಭಾರಿ ಸರ್ಜಿಯೊ ಗೋರ್‌ ಅವರಿಂದ ಸಕಾರಾತ್ಮಕ ಹೇಳಿಕೆ ಬಂದಿರುವುದು ಹೂಡಿಕೆದಾರರ ವಿಶ್ವಾಸವನ್ನು ವೃದ್ಧಿಸಿತು.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಹೆಚ್ಚು ಲಾಭಗಳಿಸಿದ ಷೇರುಗಳು

  • ಕೋಲ್‌ ಇಂಡಿಯಾ: 3.39%
  • ಟಾಟಾ ಸ್ಟೀಲ್:‌ 2.75%
  • ಏಷ್ಯನ್‌ ಪೇಂಟ್ಸ್:‌ 2.50%

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು

  • ಇನ್ಫೋಸಿಸ್‌ : 1.02%
  • ಟಾಟಾ ಮೋಟಾರ್ಸ್ ಪ್ಯಾಸೆಂಜರ್‌ ವೆಹಿಕಲ್ಸ್ :1%‌
  • ಬಜಾಜ್‌ ಫೈನಾನ್ಸ್‌ : 1%

ಐಟಿ ದಿಗ್ಗಜ ಟಿಸಿಎಸ್‌ ಇಂದು ಪ್ರತಿ ಷೇರಿಗೆ 57 ರುಪಾಯಿಗಳ ಡಿವಿಡೆಂಡ್‌ ಘೋಷಿಸಿದೆ. ಟಿಸಿಎಸ್‌ ತನ್ನ ಮೂರನೇ ತ್ರೈಮಾಸಿಕದ, ಅಂದರೆ ಅಕ್ಟೋಬರ್-ಡಿಸೆಂಬರ್‌ ಅವಧಿಯ ರಿಸಲ್ಟ್‌ ಪ್ರಕಟಿಸಿದ್ದು, 10,657 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 12,075 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. ಆದ್ದರಿಂದ 14% ಇಳಿಕೆಯಾದಂತಾಗಿದೆ.

ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ ರೈಲ್ವೇ ಷೇರುಗಳು

ಟಿಸಿಎಸ್‌ನ ಆದಾಯವು ಮೂರನೇ ತ್ರೈಮಾಸಿಕದಲ್ಲಿ 5% ಏರಿಕೆಯಾಗಿದ್ದು, 67,087 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಭಾರತದ ರಿಟೇಲ್‌ ಹಣದುಬ್ಬರವು ಡಿಸೆಂಬರ್‌ನಲ್ಲಿ 1.33% ಕ್ಕೆ ಏರಿಕೆ ಆಗಿದೆ. 2025ರ ನವೆಂಬರ್‌ನಲ್ಲಿ 0.71% ಇತ್ತು. ಪರ್ಸನಲ್‌ ಕೇರ್‌ ಉತ್ಪನ್ನಗಳು, ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಸಂಬಾರ ಪದಾರ್ಥಗಳು, ಬೇಲೆಕಾಳು ಮತ್ತು ಉತ್ಪನ್ನಗಳ ದರ ಏರಿಕೆ ಇದಕ್ಕೆ ಕಾರಣ. ಆದರೂ ಆರ್‌ ಬಿಐನ 4% ಮೀಡಿಯಂ ಟರ್ಮ್‌ ಟಾರ್ಗೆಟ್‌ಗಿಂತ ಕೆಳಮಟ್ಟದಲ್ಲಿಯೇ ಇದೆ.

ಕೇಶವ ಪ್ರಸಾದ್​ ಬಿ

View all posts by this author