ದೆಹಲಿ, ಡಿ. 31: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ 8ನೇ ವೇತನ ಆಯೋಗಕ್ಕೆ (8th Pay Commission) ಅನುಮೋದನೆ ನೀಡಿದ್ದು, ಹೊಸ ವರ್ಷದ ಮೊದಲ ದಿನವೇ (ಜನವರಿ 1) ಜಾರಿಗೆ ಬರಲಿದೆ. ಆ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ವೇತನ ಆಯೋಗದ ಜಾರಿಯಿಂದ ಕೇಂದ್ರ ಸರ್ಕಾರಿ ನೌಕಕರ ಸಂಬಳ, ಪಿಂಚಣಿ ಮತ್ತು ಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಇದರೊಂದಿಗೆ 8ನೇ ವೇತನ ಆಯೋಗವು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ತುಟ್ಟಿ ಭತ್ಯೆಯನ್ನು (Dearness Allowance)ಯನ್ನೂ ಅಧಿಕ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರ ಲೆವಲ್1ನಿಂದ ಲೆವೆಲ್ 18ರ ವರೆಗಿನ ಎಲ್ಲ ಉದ್ಯೋಗಿಗಳ ವೇತನ ದುಪ್ಪಟ್ಟಾಗಲಿದೆ.
8ನೇ ವೇತನ ಆಯೋಗದ ಅಡಿಯಲ್ಲಿ ವೇತನ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನುವ ಬಗ್ಗೆ ಸರ್ಕಾರ ಇನ್ನೂ ವಿವರಗಳನ್ನು ನೀಡಿಲ್ಲ. ಅದಾಗ್ಯೂ ಕೆಲವು ಮಾಧ್ಯಮ ವರದಿಗಳು ಫಿಟ್‌ಮೆಂಟ್ ಅಂಶವನ್ನು ಆಧರಿಸಿ ಹೆಚ್ಚಳವನ್ನು ಅಂದಾಜಿಸಿವೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವು 18,000 ರುಪಾಯಿಯಿಂದ 51,480 ರುಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.
ಮಿಂಟ್ ಸುದ್ದಿಸಂಸ್ಥೆ ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ ರಕ್ಷಣಾ ಸಿಬ್ಬಂದಿ ಸೇರಿದಂತೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಇದರ ಜತೆಗೆ ರಕ್ಷಣಾ ಸೇವೆಗಳಿಂದ ನಿವೃತ್ತರಾದವರು ಸೇರಿದಂತೆ 65 ಲಕ್ಷ ನಿವೃತ್ತ ಕೇಂದ್ರ ಸರ್ಕಾರಿ ಪಿಂಚಣಿದಾರರಿದ್ದಾರೆ.
8ನೇ ವೇತನ ಆಯೋಗ ಜಾರಿಗೆ ಗ್ರೀನ್ ಸಿಗ್ನಲ್! ಸಂಬಳದೊಂದಿಗೆ ಹೆಚ್ಚಾಗಲಿದೆ ಇನ್ನು ಹಲವು ಸವಲತ್ತು
ವದಂತಿ ನಿರಾಕರಿಸಿದ ಕೇಂದ್ರ
ಹೊಸ ಹಣಕಾಸು ಕಾಯ್ದೆ 2025ರ ಪ್ರಕಾರ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಡಿಎ ಹೆಚ್ಚಳ ಅನ್ವಯವಾಗುವುದಿಲ್ಲ ಎನ್ನುವ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಸರ್ಕಾರ ತನ್ನ ಸ್ಪಷ್ಟೀಕರಣದಲ್ಲಿ, ದುಷ್ಕೃತ್ಯಕ್ಕಾಗಿ ಉದ್ಯೋಗಿಯನ್ನು ತೆಗೆದುಹಾಕಿದರೆ ಮಾತ್ರ ಡಿಎ ಹೆಚ್ಚಳ ಮತ್ತು ವೇತನ ಆಯೋಗದ ಪರಿಷ್ಕರಣೆಯನ್ನು ನಿಲ್ಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
2016ರಲ್ಲಿ ಸ್ಥಾಪಿಸಲಾದ 7ನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಕೊನೆಗೊಂಡಿದೆ. 8ನೇ ವೇತನ ಆಯೋಗದಲ್ಲಿ ನ್ಯಾಯಮೂರ್ತಿ ದೇಸಾಯಿ ಅಧ್ಯಕ್ಷರಾಗಿದ್ದು, ಪ್ರೊ. ಪುಲಕ್ ಘೋಷ್ ಅರೆಕಾಲಿಕ ಸದಸ್ಯರು ಮತ್ತು ಪಂಕಜ್ ಜೈನ್ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಮಾಡುವಾಗ ದೇಶ ಮತ್ತು ರಾಜ್ಯಗಳ ಆರ್ಥಿಕ ಪರಿಸ್ಥಿತಿಗಳನ್ನು ಕೂಡ ಪರಿಗಣಿಸಿತ್ತು. ಕೇಂದ್ರ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ನೀಡಲಾಗುವ ಸಂಬಳ ಮತ್ತು ಸವಲತ್ತುಗಳ ಶಿಫಾರಸುಗಳನ್ನು ಒದಗಿಸಲು ಈ ಪರಿಶೀಲನೆ ಅಗತ್ಯವಾಗಿರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ! 8ನೇ ವೇತನ ಆಯೋಗ ರಚನೆಗೆ ಅಸ್ತು
ಕೇಂದ್ರ ಸಚಿವ ಸಂಪುಟವು ಈ ಬಗ್ಗೆ 2025ರ ಅಕ್ಟೋಬರ್‌ನಲ್ಲಿ ಅಧಿಸೂಚನೆ ಹೊರಡಿಸಿ, "ಸಾಮಾನ್ಯವಾಗಿ ವೇತನ ಆಯೋಗಗಳ ಶಿಫಾರಸುಗಳನ್ನು ಪ್ರತಿ 10 ವರ್ಷಗಳ ಅಂತರದಲ್ಲಿ ಜಾರಿಗೆ ತರಲಾಗುತ್ತದೆ. ಅದರಂತೆ 2026ರ ಜನವರಿ 1ರಿಂದ 8ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಜಾರಿಯಾಗಲಿದೆʼʼ ಎಂದು ಹೇಳಿತ್ತು.