ದೆಹಲಿ, ನ. 24: ಭಾರತದೊಂದಿಗಿನ ಸಂಬಂಧವನ್ನು ಅಫ್ಘಾನಿಸ್ತಾನ ಇನ್ನಷ್ಟು ಗಟ್ಟಿಗೊಳಿಸುತ್ತಿದ್ದು, ಅದರ ಭಾಗವಾಗಿ ಹಲವು ಕ್ರಮಗಳ ಜಾರಿಗೆ ಮುಂದಾಗಿದೆ (Afghanistan-India). ಈಗಾಗಲೇ ಅಫ್ಘಾನಿಸ್ತಾನ ಭಾರತೀಯ ಉದ್ಯಮಗಳಿಗೆ 5 ವರ್ಷಗಳ ತೆರಿಗೆ ವಿನಾಯಿತಿ ನೀಡಿದೆ. ಇದೀಗ ಅಫ್ಘಾನಿಸ್ತಾನದ ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ (Alhaj Nooruddin), ಎರಡೂ ಕಡೆಯಲ್ಲಿ ಕಂಡು ಬಂದಿರುವ ವೀಸಾ ಮತ್ತು ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಎರಡೂ ದೇಶಗಳು ಈಗ ಹೆಮ್ಮೆಯೊಂದಿಗೆ ಕೆಲಸ ಮಾಡುತ್ತಿದ್ದು, ವ್ಯಾಪಾರವನ್ನು 1 ಬಿಲಿಯನ್ ಅಮೆರಿಕನ್ ಡಾಲರ್ ಏರಿಸಬೇಕೆಂಬ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
ʼʼವೀಸಾ ಮತ್ತು ನೇರ ವಿಮಾನ ಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಆ ಮೂಲಕ ವ್ಯಾಪಾರಿಗಳು ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಲಾಗಿದೆ. ಭೂ ಮಾರ್ಗಗಳು ಮತ್ತು ವಾಯು ಕಾರಿಡಾರ್‌ನೊಂದಿಗೆ ಚಬಹಾರ್ ಸಂಪರ್ಕದ ಕುರಿತು ಚರ್ಚೆಗಳು ಪ್ರಗತಿಯಲ್ಲಿವೆʼʼ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದ ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅವರ ಹೇಳಿಕೆ:
ಎರಡೂ ದೇಶಗಳು ವ್ಯಾಪಾರ ಕುರಿತಾದ ಮಾತುಕತೆಗೆ ಒಪ್ಪಿಕೊಂಡಿವೆ ಎಂದು ಅವರು ವಿವರಿಸಿದ್ದಾರೆ. "1 ತಿಂಗಳೊಳಗೆ ಇದನ್ನು ಜಾರಿಗೆ ತರಲು ಪ್ರಯತ್ನಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ತೆರಿಗೆ ಕಡಿತ
ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಪ್ರಯತ್ನದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಜಂಟಿ ವಾಣಿಜ್ಯ ಮಂಡಳಿಯನ್ನು ಸ್ಥಾಪಿಸಲಿದೆ. ವ್ಯವಹಾರವನ್ನು ವಿಸ್ತರಿಸಲು ತೆರಿಗೆಗಳನ್ನು ಪರಸ್ಪರ ಕಡಿಮೆ ಮಾಡಲಾಗುತ್ತದೆ. ಎರಡೂ ಕಡೆಯ ಉದ್ಯಮಗಳಿಗೆ ನೇರ ಪ್ರವೇಶವನ್ನು ನೀಡಲು ಪ್ರತಿ ವರ್ಷ ವ್ಯಾಪಾರ ಮೇಳಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅಫ್ಘಾನಿಸ್ತಾನದ ಆಹಾರ ಉತ್ಪನ್ನಗಳ ಮೇಲಿನ ಎಫ್‌ಎಸ್‌ಎಸ್‌ಎಐ (FSSAI) ಶುಲ್ಕವನ್ನು ಭಾರತ ಶೂನ್ಯಕ್ಕೆ ಇಳಿಸಲಿದೆ. ಇದರಿಂದ ಭಾರತಕ್ಕೆ ಕೃಷಿ ಮತ್ತು ಸಂಸ್ಕರಿಸಿದ ಸರಕುಗಳ ಪ್ರವೇಶ ಸುಗಮವಾಗಲಿದೆ.
ಭಾರತ-ಅಫ್ಘಾನಿಸ್ತಾನ ಸಂಬಂಧದಲ್ಲಿ ಐತಿಹಾಸಿಕ ಬೆಳವಣಿಗೆ: ತಾಲಿಬಾನ್ ವಿದೇಶಾಂಗ ಸಚಿವರಿಗೆ ದೆಹಲಿಯಿಂದ ಆಹ್ವಾನ
ವೈದ್ಯಕೀಯ ಉತ್ಪನ್ನಗಳಿಗೆ ಉತ್ತೇಜನ
ʼʼಭಾರತವು ವೈದ್ಯಕೀಯ ಚಿಕಿತ್ಸೆ ಬಯಸುವ ಅಫ್ಘಾನ್ ಪ್ರಜೆಗಳಿಗೆ ಹೆಚ್ಚಿನ ವೀಸಾಗಳನ್ನು ನೀಡಲಿದೆ. ಅಫ್ಘಾನಿಸ್ತಾನವು ಭಾರತದ ಪ್ರಮುಖ ಆಸ್ಪತ್ರೆ ಸರಪಳಿಗಳನ್ನು ದೇಶಕ್ಕೆ ಆಹ್ವಾನಿಸಿದೆ. ಭಾರತವು ತಂತ್ರಜ್ಞರು ಮತ್ತು ತಜ್ಞರನ್ನು ಕಳುಹಿಸಲು ಸಿದ್ಧವಾಗಿದೆʼʼ ಎಂದು ನೂರುದ್ದೀನ್ ತಿಳಿಸಿದ್ದಾರೆ.
ʼʼಹಣಕಾಸಿನ ವಿಚಾರದಲ್ಲಿ, ಬ್ಯಾಂಕಿಂಗ್ ವಲಯದಲ್ಲಿ ಕೆಲವು ಸಣ್ಣ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಎರಡೂ ದೇಶಗಳ ಬ್ಯಾಂಕ್‌ಗಳು ಸಂಪರ್ಕದಲ್ಲಿದ್ದು, ಪರಸ್ಪರ ಸಹಕಾರದ ಮೂಲಕ ಕಾರ್ಯ ನಿರ್ವಹಿಸಲಿವೆʼʼ ಎಂದಿದ್ದಾರೆ.
ಅಫ್ಘಾನಿಸ್ತಾನದಲ್ಲಿದೆ ಹಲವು ಅವಕಾಶ
ಅಫ್ಘಾನಿಸ್ತಾನವನ್ನು ಉದ್ಯಮಗಳಿಗೆ ಅವಕಾಶವಿರುವ ದೇಶ ಎಂದು ಕರೆದಿರುವ ನೂರುದ್ದೀನ್, ಭಾರತದ ಖಾಸಗಿ ಕಂಪನಿಗಳನ್ನು ಹೂಡಿಕೆಗಾಗಿ ಆಹ್ವಾನಿಸಿದ್ದಾರೆ. ವಿದೇಶಿ ಸಂಸ್ಥೆಗಳು ಈಗಾಗಲೇ ಅಫ್ಘಾನಿಸ್ತಾನದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಒತ್ತಿ ಹೇಳಿದ್ದಾರೆ. ʼʼಕಾಬೂಲ್ ಭಾರತೀಯ ಖಾಸಗಿ ವಲಯವನ್ನು ಸ್ವಾಗತಿಸುತ್ತದೆ ಮತ್ತು ಎರಡೂ ರಾಷ್ಟ್ರಗಳು ಆರ್ಥಿಕ ಸಂಬಂಧಗಳನ್ನು ಪುನರ್‌ನಿರ್ಮಿಸಲು ಮುಂದಾಗುತ್ತಿದ್ದಂತೆ ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ಅವಕಾಶದ ಬಾಗಿಲು ತೆರೆದುಕೊಳ್ಳುತ್ತಿದೆʼʼ ಎಂದು ಅವರು ನುಡಿದಿದ್ದಾರೆ.