ಬೆಂಗಳೂರು, ಫೆ. 24: ಖ್ಯಾತ ಹೂಡಿಕೆ ತಜ್ಞ ಮತ್ತು ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ ಅಶೋಕ್ ದೇವನಾಂಪ್ರಿಯ ಅವರ ಪ್ರಕಾರ, ಬಲಿಷ್ಠ ಅಡಿಪಾಯ ಹೊಂದಿರುವ ಕಂಪನಿಗಳು ತಾತ್ಕಾಲಿಕ ಕೆಟ್ಟ ಸುದ್ದಿಗಳು ಅಥವಾ ವಿವಾದಗಳಿಂದ ಸಂಪೂರ್ಣವಾಗಿ ಕುಸಿಯಲು ಸಾಧ್ಯವಿಲ್ಲ. ಕಾರ್ಪೋರೇಟ್ ವಲಯದಲ್ಲಿ ಕಂಪನಿಯ ಮೂಲಭೂತ ಮೌಲ್ಯಗಳು (Fundamentals) ಗಟ್ಟಿಯಾಗಿದ್ದರೆ ಎಂತಹ ಪರಿಸ್ಥಿತಿಯನ್ನೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಅವರು ವಿಶ್ವವಾಣಿ ಮನಿ ಹೆಲ್ತ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ಕೆಲವು ಪ್ರಮುಖ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.
2015ರಲ್ಲಿ ಉತ್ತರ ಪ್ರದೇಶದ ಎಫ್‌ಡಿಎ ಪರೀಕ್ಷೆಯಲ್ಲಿ ಮ್ಯಾಗಿಯಲ್ಲಿ ಸೀಸದ (Lead) ಅಂಶವಿದೆ ಎಂಬ ವರದಿ ಬಂದಾಗ, ಭಾರತದ ಮಾರುಕಟ್ಟೆಯಲ್ಲಿದ್ದ ಸುಮಾರು 4,000 ಕೋಟಿ ರುಪಾಯಿ ಮೌಲ್ಯದ ಮ್ಯಾಗಿಯನ್ನು ಹಿಂಪಡೆದು ನಾಶಪಡಿಸಲಾಯಿತು. ಈ ಸಂದರ್ಭದಲ್ಲಿ ಕಂಪನಿಯ ಷೇರುಗಳು 50% ಕುಸಿದಿದ್ದವು. ಆದರೆ ನ್ಯಾಯಾಲಯದ ಆದೇಶದಂತೆ ನಡೆದ ಮರುಪರೀಕ್ಷೆಯಲ್ಲಿ ಮ್ಯಾಗಿ ಸುರಕ್ಷಿತವೆಂದು ಸಾಬೀತಾಯಿತು. ಕಂಪನಿಯು ತನ್ನ ಗುಣಮಟ್ಟದ ಬಗ್ಗೆ ನೀಡಿದ ಸ್ಪಷ್ಟನೆ ಮತ್ತು ಜಾಹೀರಾತುಗಳಿಂದಾಗಿ ಮಾರಾಟವು ದುಪ್ಪಟ್ಟಾಯಿತು. ಇಂದು ನೆಸ್ಲೆ ಷೇರುಗಳು ಅಂದಿಗಿಂತ 10 ಪಟ್ಟು ಹೆಚ್ಚು ಬೆಲೆಗೆ ಏರಿವೆ.
ವಿಡಿಯೊ ಇಲ್ಲಿದೆ:
PVR ಮತ್ತು ಪಾಪ್‌ಕಾರ್ನ್ ಬೆಲೆ
ಸಿನಿಮಾ ಮಂದಿರಗಳಲ್ಲಿ ಪಾಪ್‌ಕಾರ್ನ್ ಬೆಲೆ ಹೆಚ್ಚಿದೆ ಎಂಬ ವಿವಾದ ಉಂಟಾದಾಗ PVR ಶೇರುಗಳು 20% ಕುಸಿದಿದ್ದವು. ಆದರೆ ಆಹಾರದ ಬೆಲೆ ನಿಗದಿಪಡಿಸುವ ಹಕ್ಕು ಮಂದಿರಗಳಿಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದಾಗ ಪರಿಸ್ಥಿತಿ ತಿಳಿಯಾಯಿತು. PVR ಆದಾಯದ ಶೇ. 30ರಷ್ಟು ಭಾಗ ಸಿನಿಮಾ ಟಿಕೆಟ್‌ಗಿಂತ ಹೆಚ್ಚಾಗಿ ಪಾಪ್‌ಕಾರ್ನ್ ಮತ್ತು ಇತರ ಆಹಾರಗಳಿಂದಲೇ ಬರುತ್ತದೆ ಎಂಬುದು ಗಮನಾರ್ಹ.
ಬಿಟ್ ಕಾಯಿನ್ ಮತ್ತು ಹೂಡಿಕೆದಾರರ ನಂಬಿಕೆ
ಅಂತೆಯೇ ಬಿಟ್‌ಕಾಯಿನ್ ಬೆಲೆ ಅರ್ಧದಷ್ಟು ಕುಸಿದಾಗ ಗಾಬರಿಗೊಂಡವರು ಮಾರಾಟ ಮಾಡಿದರು. ಆದರೆ ಅದರ ನಂಬಿಕೆ ಉಳ್ಳವರು ಮತ್ತು ಭವಿಷ್ಯದಲ್ಲಿ ಅದು ಇನ್ನೂ ಮೇಲಕ್ಕೆ ಹೋಗಬಹುದು ಎಂಬ ವಿಶ್ವಾಸ ಉಳ್ಳವರು ಇಂದಿಗೂ ಅದರ ಮೇಲಿನ ಹೂಡಿಕೆ ಮುಂದುವರಿಸಿದ್ದಾರೆ.
ಹೀಗಾಗಿ ಕೇವಲ ಸುದ್ದಿಯ ಆಧಾರದ ಮೇಲೆ ಹೂಡಿಕೆದಾರರು ನಿರ್ಧಾರ ತೆಗೆದುಕೊಳ್ಳಬಾರದು. ವ್ಯವಹಾರದ ಮೂಲಭೂತವಾದಗಳು (Business Fundamentals) ಬಲಿಷ್ಠವಾಗಿದ್ದರೆ, ಸಣ್ಣಪುಟ್ಟ ಬಿಕ್ಕಟ್ಟುಗಳು ದೀರ್ಘ ಕಾಲದ ಮೇಲೆ ಯಾವುದೇ ಪ್ರಭಾವ ಬೀರಲಾರವು ಎಂದು ಅಶೋಕ್ ದೇವನಾಂಪ್ರಿಯ ತಿಳಿಸಿದ್ದಾರೆ.