ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಡ್ಡಾಯ ಸುರಕ್ಷತಾ ನಿಯಮ ಗಾಳಿಗೆ ತೂರಿ ಸ್ಫೋಟಕ ಮಾರಾಟ: ಡಯಲ್4ಟ್ರೇಡ್‌ಗೆ 10 ಲಕ್ಷ ರೂಪಾಯಿ ದಂಡ

Dial4Trade: ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಾಲಿಸದೆ ತನ್ನ ಇ-ಕಾಮರ್ಸ್ ವೇದಿಕೆಯಲ್ಲಿ ಅಮೋನಿಯಂ ನೈಟ್ರೇಟ್ ಅನ್ನು ಪಟ್ಟಿ ಮಾಡಿ ಮಾರಾಟಕ್ಕೆ ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಡಯಲ್4ಟ್ರೇಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಸೂಕ್ತ ಪರವಾನಗಿ ಹಾಗೂ ಖರೀದಿದಾರರ ಅರ್ಹತೆ ಪರಿಶೀಲಿಸದೆ ಅಪಾಯಕಾರಿ ವಸ್ತುವಿನ ಮಾರಾಟಕ್ಕೆ ಅವಕಾಶ ನೀಡಿರುವುದನ್ನು ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಸೆ. 2: ಕಾನೂನುಬದ್ಧ ನಿಯಂತ್ರಕ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ತನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ (E-commerce platform) ಅತ್ಯಂತ ಅಪಾಯಕಾರಿ ಸ್ಫೋಟಕ ವಸ್ತುವಾದ ಅಮೋನಿಯಂ ನೈಟ್ರೇಟ್ (Ammonium nitrate) ಅನ್ನು ಆನ್‌ಲೈನ್‌ನಲ್ಲಿ ಪಟ್ಟಿ ಮಾಡಿ, ಪ್ರಚಾರ ಹಾಗೂ ಮಾರಾಟಕ್ಕೆ ಅವಕಾಶ ನೀಡಿದ್ದಕ್ಕಾಗಿ ಡಯಲ್4ಟ್ರೇಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ (Dial4Trade) ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ₹10 ಲಕ್ಷ ದಂಡ ವಿಧಿಸಿದೆ. ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತ ಅನುಪಮ್ ಮಿಶ್ರಾ ಅವರನ್ನೊಳಗೊಂಡ ಪೀಠವು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಈ ಕಟ್ಟುನಿಟ್ಟಿನ ಅಂತಿಮ ಆದೇಶವನ್ನು ಹೊರಡಿಸಿದೆ.

ಪ್ರಾಧಿಕಾರ ನಡೆಸಿದ ತಪಾಸಣೆಯ ವೇಳೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ಮಾನ್ಯ ಪರವಾನಗಿ ಪರಿಶೀಲಿಸದೆ ಹಾಗೂ ಖರೀದಿದಾರರ ಗುರುತು ಮತ್ತು ಅರ್ಹತೆಯನ್ನು ಖಚಿತಪಡಿಸಿಕೊಳ್ಳದೆ ಈ ಅಪಾಯಕಾರಿ ವಸ್ತುವನ್ನು ಮಾರಾಟಕ್ಕೆ ಲಭ್ಯವಾಗುವಂತೆ ಮಾಡಿರುವುದು ಪತ್ತೆಯಾಗಿದೆ. ಅಮೋನಿಯಂ ನೈಟ್ರೇಟ್ ನಿಯಮಗಳು 2012ರ ಅಡಿಯಲ್ಲಿ ವಹಿವಾಟುಗಳ ಪತ್ತೆಹಚ್ಚುವಿಕೆ ಪ್ರಕ್ರಿಯೆ ಮತ್ತು ಕಡ್ಡಾಯ ಎಚ್ಚರಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಇಷ್ಟೇ ಅಲ್ಲದೆ, ವಸ್ತುವಿನ ಪಟ್ಟಿಯಲ್ಲಿ ಸ್ಫೋಟಗಳನ್ನು ಆಕರ್ಷಕವಾಗಿ ಬಿಂಬಿಸುವ ಚಿತ್ರಗಳನ್ನು ಬಳಸಿ ಗ್ರಾಹಕರನ್ನು ದಿಕ್ಕುತಪ್ಪಿಸಲಾಗಿತ್ತು. ಸೂಕ್ತ ಪರವಾನಗಿ ನಿಯಮಗಳನ್ನು ತಿಳಿಸದೆ ಸಾಮಾನ್ಯ ದಿನಬಳಕೆ ಉತ್ಪನ್ನದಂತೆ ಮಾರಾಟ ಮಾಡುವುದು ದಾರಿತಪ್ಪಿಸುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ ಎಂದು ಸಿಸಿಪಿಎ ತರಾಟೆಗೆ ತೆಗೆದುಕೊಂಡಿದೆ.

ಕೊಳಕು ಶೌಚಾಲಯದ ಫೋಟೋ ಕಳುಹಿಸಿ 1,000 ರೂಪಾಯಿ ಪಡೆಯಿರಿ

ತಾನು ಕೇವಲ ಮಧ್ಯವರ್ತಿ (B2B ಪ್ಲಾಟ್‌ಫಾರ್ಮ್) ಆಗಿದ್ದು ಮೂರನೇ ವ್ಯಕ್ತಿಗಳ ಪಟ್ಟಿಗೆ ತಾನು ಹೊಣೆಯಲ್ಲ ಎಂಬ ಡಯಲ್4ಟ್ರೇಡ್‌ನ ವಾದವನ್ನು ಪ್ರಾಧಿಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ಅತ್ಯಂತ ಕನಿಷ್ಠ ಪ್ರಮಾಣದಲ್ಲೂ ಖರೀದಿಸಲು ಅವಕಾಶ ನೀಡಿದ್ದು ಹಾಗೂ ಮಾರಾಟಗಾರರನ್ನು ನಿರ್ಬಂಧಿಸುವ ತಾಂತ್ರಿಕ ನಿಯಂತ್ರಣ ಹೊಂದಿದ್ದರಿಂದ ವೇದಿಕೆಯು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಸ್ಫೋಟಕ ಕಾಯ್ದೆ, 1884ರ ಅಡಿಯಲ್ಲಿ ಬರುವ ಯಾವುದೇ ಸ್ಫೋಟಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕಂಪನಿಗೆ ಖಡಕ್ ಸೂಚನೆ ನೀಡಿದೆ.

ಅಪಾಯಕಾರಿ ರಾಸಾಯನಿಕಗಳು ಹಾಗೂ ಗನ್ ಪೌಡರ್, ಪಿಕ್ರಿಕ್ ಆಮ್ಲ ಮತ್ತು ಪಿಇಟಿಎನ್ ನಂತಹ ಸ್ಫೋಟಕಗಳ ಆನ್‌ಲೈನ್ ಮಾರಾಟದ ವಿರುದ್ಧ ಸಿಸಿಪಿಎ ದೇಶವ್ಯಾಪಿ ತಪಾಸಣೆ ಕೈಗೆತ್ತಿಕೊಂಡಿದೆ. ನಿಯಮ ಉಲ್ಲಂಘನೆಗಾಗಿ ಇಂಡಿಯಾ ಮಾರ್ಟ್, ಜಸ್ಟ್‌ಡಯಲ್, ಸಿಗ್ಮಾ-ಆಲ್ಡ್ರಿಚ್ ಇಂಡಿಯಾ, ಎಕ್ಸ್‌ಪೋರ್ಟರ್ಸ್ ಇಂಡಿಯಾ, ಇಬುಯ್‌ಕೆಮಿಕಲ್ಸ್, ಆಲ್ಫಾ ಕೆಮಿಕಾ ಹಾಗೂ ಟ್ರೇಡ್‌ಇಂಡಿಯಾ ಸೇರಿದಂತೆ ಪ್ರಮುಖ ಏಳು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧವೂ ಪ್ರಸ್ತುತ ಸೂಕ್ಷ್ಮ ಪರಿಶೀಲನೆ ಮುಂದುವರಿದಿದೆ. ಸಾರ್ವಜನಿಕರ ಜೀವ ರಕ್ಷಣೆ, ಭದ್ರತೆ ಮತ್ತು ಕಾನೂನು ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಇ-ಕಾಮರ್ಸ್ ಸಂಸ್ಥೆಗಳು ಸಂಪೂರ್ಣ ಬದ್ಧವಾಗಿರಬೇಕೆಂದು ಪ್ರಾಧಿಕಾರ ಗಂಭೀರ ಎಚ್ಚರಿಕೆ ನೀಡಿದೆ.