ಕೇಶವ ಪ್ರಸಾದ್ ಬಿ.
ವಾಷಿಂಗ್ಟನ್: ವಿಶ್ವದ ಪ್ರಬಲ ಆರ್ಥಿಕ ಶಕ್ತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸುಂಕ ಸಮರದ ಮೊದಲ ಸುತ್ತಿನಲ್ಲಿ ಚೀನಾ ತತ್ತರಿಸಿದೆ. ಮತ್ತೊಂದು ಕಡೆ ಸುಂಕ ಸಮರದ ಮೊದಲ ವಾರವನ್ನು WEEK OF VICTORIES ಎಂದು ಅಮೆರಿಕದ ಅಧ್ಯಕ್ಷರ ಕಚೇರಿ ಶ್ವೇತಭವನವು ಘೋಷಿಸಿದೆ. ಸಿಕ್ಕಿರುವ ಗೆಲುವುಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ಅಮೆರಿಕಕ್ಕೆ ಪ್ರತಿ ಸುಂಕ ಹೇರಿದ್ದರೂ, ಒಟ್ಟಾರೆಯಾಗಿ ಅಮೆರಿಕದ ಎದುರು ಸಂಘರ್ಷವನ್ನು ಬೆಳೆಸಿದರೆ ಚೀನಾದ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವುದು ವಾಸ್ತವ. ಇದನ್ನು ಅರಿತುಕೊಂಡಿರುವ ಕ್ಸಿ ಜಿನ್‌ಪಿಂಗ್ (Xi Jinping) ಮತ್ತಷ್ಟು ಸಂಘರ್ಷಕ್ಕೆ ಹಿಂಜರಿಯುತ್ತಿದ್ದಾರೆ. ಏಕೆಂದರೆ ಈಗಾಗಲೇ ಉಂಟಾಗಿರುವ ಹಾನಿ ಅಪಾರವಾಗಿದೆ.
ಅಮೆರಿಕವು ಚೀನಾ ವಿರುದ್ಧ 145% ಸುಂಕವನ್ನು ಹೇರಿದ್ದರೆ, ಪ್ರತಿಯಾಗಿ ಚೀನಾವು ಅಮೆರಿಕದ ವಿರುದ್ಧ 125% ಸುಂಕವನ್ನು ಹೇರಿದೆ. ಇದೇ ರೀತಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕವನ್ನು ಏರಿಸಿದರೆ ಅತಿ ಹೆಚ್ಚು ನಷ್ಟ ಆಗುವುದು ಚೀನಾಕ್ಕೆ ಹೊರತು ಅಮೆರಿಕಕ್ಕೆ ಅಲ್ಲ. ಉಭಯ ದೇಶಗಳ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
2024ರಲ್ಲಿ ಚೀನಾ-ಅಮೆರಿಕ ರಫ್ತು-ಆಮದು
ಚೀನಾದಿಂದ ಅಮೆರಿಕಕ್ಕೆ ರಫ್ತು: 440 ಶತಕೋಟಿ ಡಾಲರ್
ಅಮೆರಿಕದಿಂದ ಚೀನಾಕ್ಕೆ ರಫ್ತು: 143 ಶತಕೋಟಿ ಡಾಲರ್
ಅಂಕಿ ಅಂಶಗಳ ಪ್ರಕಾರವೇ ಒಂದು ವೇಳೆ ಚೀನಾವು ಅಮೆರಿಕಕ್ಕೆ ರಫ್ತನ್ನು ಬಹುತೇಕ ಸ್ಥಗಿತಗೊಳಿಸಿದರೆ, ಅದಕ್ಕೇ ಬಹಳ ದೊಡ್ಡ ಮೌಲ್ಯದ ವ್ಯಾಪಾರ ನಷ್ಟವಾಗುತ್ತದೆ. ಅದನ್ನು ಭರಿಸುವುದು ಅಷ್ಟು ಸುಲಭದ ಮಾತಲ್ಲ. ಇದೇ ವೇಳೆ ಅಮೆರಿಕವು ಚೀನಾಕ್ಕೆ ರಫ್ತನ್ನು ಬಹುತೇಕ ಸ್ಥಗಿತಗೊಳಿಸಿದರೆ ಅದಕ್ಕಾಗುವ ನಷ್ಟ ಚೀನಾಕ್ಕಿಂತ ಕಡಿಮೆ.
ಕ್ಸಿ ಜಿನ್ ಪಿಂಗ್ ಮತ್ತು ಟ್ರಂಪ್ ಅವರ ಫೈಟ್ ಅನ್ನು ಗಮನಿಸಿ. ಚೀನಾದ ಪ್ರತಿ ಸುಂಕದ ಪ್ರಮಾಣವು ಅಮೆರಿಕದ್ದಕ್ಕಿಂತ ಕಡಿಮೆಯೇ ಇದೆ. ಅಂದರೆ ಜಿನ್‌ಪಿಂಗ್ ಗದ್ದಲ ಎಬ್ಬಿಸಿದ್ದರೂ, ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿರುವುದು ಸ್ಪಷ್ಟ. ಟಾರಿಫ್ ಮತ್ತಷ್ಟು ಹೆಚ್ಚುತ್ತಾ ಹೋಗುವುದು ಅವರಿಗೂ ಇಷ್ಟವಾದಂತಿಲ್ಲ. ಸದ್ಯಕ್ಕೆ ಟ್ರಂಪ್ ಅವರು ಟಾರಿಫ್‌ಗಳನ್ನು ಹೆಚ್ಚಿಸುತ್ತಾ ಚೀನಾದ ಮೇಲೆ ಒತ್ತಡ ಹೇರುತ್ತಿದ್ದಾರೆ. ಚೀನಾವನ್ನು ಮಾತ್ರ ದೂರವಿಟ್ಟು, ಉಳಿದೆಲ್ಲ ದೇಶಗಳಿಗೆ 90 ದಿನಗಳ ಗಡುವನ್ನೂ ಕೊಟ್ಟಿದ್ದಾರೆ. ಈ ಮೂಲಕ ಅವರ ಒತ್ತಡ, ಗುರಿ ಎಲ್ಲವೂ ಚೀನಾದ ಮೇಲೆ ಏಕಾಗ್ರವಾಗಿದೆ. ಜತೆಗೆ ಚೀನಾ ಅಂತಿಮವಾಗಿ ಅಮೆರಿಕದ ಜತೆಗೆ ಸಂಧಾನಕ್ಕೆ ಬಂದೇ ಬರುವುದು ಎಂಬ ವಿಶ್ವಾಸ ಕೂಡ ಅವರಲ್ಲಿದೆ.
ಈ ಸುದ್ದಿಯನ್ನೂ ಓದಿ: Reciprocal Tariff: ಅಮೆರಿಕ-ಚೀನಾ ಟ್ರಂಪ್ ಸುಂಕ ಸಮರದಲ್ಲಿ ಯಾರಿಗೆ ಗೆಲುವು?
ಚೀನಾ ವಿರುದ್ಧ ಟ್ರಂಪ್ ಸುಂಕ ಸಮರದ ಹಾದಿ
2024 ಫೆಬ್ರವರಿ: ಚುನಾವಣಾ ಪ್ರಚಾರದಲ್ಲಿ ತಾವು ಗೆದ್ದರೆ ಚೀನಾ ಆಮದು ಮೇಲೆ 60% ಟಾರಿಫ್ ಘೋಷಣೆ.
ಮೇ 2024:
ಚೀನಾದ ಎಲೆಕ್ಟ್ರಿಕ್ ವಾಹನಗಳು, ಸೋಲಾರ್ ಸೆಲ್, ಉಕ್ಕು, ಅಲ್ಯುಮಿನಿಯಂ ಮೇಲೆ ತೆರಿಗೆ ಏರಿಕೆ
ಫೆಬ್ರವರಿ 4, 2025: ಚೀನಾ ವಿರುದ್ಧ 10% ಟಾರಿಫ್ ಹೆಚ್ಚಳ
ಮಾರ್ಚ್ 4, 2025: ಹೆಚ್ಚುವರಿ 10% ಟಾರಿಫ್ ಹೇರಿಕೆ
ಏಪ್ರಿಲ್ 9, 2025: ಚೀನಾದಿಂದ ಆಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 104% ಟಾರಿಫ್ ಜಾರಿಯಾದ ದಿನ. ಇತರ ದೇಶಗಳಿಗೆ 90 ದಿನಗಳ ಕಾಲಾವಕಾಶ. ಅದೇ ದಿನ ಚೀನಾ ವಿರುದ್ಧದ ಟಾರಿಫ್ 125%ಕ್ಕೆ ಏರಿಕೆ.
ಏಪ್ರಿಲ್ 10: ಅಮೆರಿಕದ ವಸ್ತುಗಳ ಆಮದಿಗೆ ಚೀನಾದಿಂದ 84% ಪ್ರತಿ ಸುಂಕ ಹೇರಿಕೆ.
ಏಪ್ರಿಲ್ 11: ಚೀನಾ ವಿರುದ್ಧದ ಟಾರಿಫ್ ಅನ್ನು 145% ಗೆ ಏರಿಸಿದ ಟ್ರಂಪ್, ಪ್ರತಿಯಾಗಿ ಅಮೆರಿಕ ವಿರುದ್ಧದ ಟಾರಿಫ್ ಅನನು 125% ಗೆ ಏರಿಸಿದ ಚೀನಾ.
ಸುಂಕ ಸಮರದ ನಡುವೆಯೇ ಟ್ರಂಪ್ ಅವರು ಕ್ಸಿ ಜಿನ್‌ಪಿಂಗ್ ಅವರನ್ನು ಬುದ್ಧಿವಂತ, ಅವರ ದೇಶಕ್ಕೆ ಏನು ಬೇಕೋ ಅದನ್ನೇ ಮಾಡುತ್ತಿದ್ದಾರೆ, ಆತ ದೀರ್ಘ ಕಾಲದಿಂದಲೂ ನನ್ನ ಸ್ನೇಹಿತ.. ಅಂತೆಲ್ಲ ಹೇಳಿದ್ದಾರೆ. ಉಭಯ ದೇಶಗಳಿಗೂ ಸೂಕ್ತವಾಗುವಂಥ ಪರಿಹಾರ ಸೂತ್ರವೊಂದು ರೂಪುಗೊಳ್ಳಲಿದೆ ಎಂಬ ಆಶಯವನ್ನು ಟ್ರಂಪ್ ಹೇಳಿದ್ದಾರೆ.
ಒಟ್ಟಿನಲ್ಲಿ ಮಾತುಕತೆಗೆ ಯಾರು ಮೊದಲು ಬರುತ್ತಾರೆ ಎಂದು ಉಭಯ ಬಣಗಳೂ ಕಾಯುತ್ತಿವೆ. ಚೀನಾವೇ ಮೊದಲು ಬರಲಿ ಎಂದು ಟ್ರಂಪ್ ಕಾಯುತ್ತಿದ್ದರೆ, ಅಮೆರಿಕವೇ ಮುಂದೆ ಬರಲಿ ಎಂದು ಜಿನ್‌ಪಿಂಗ್ ಎದುರು ನೋಡುತ್ತಿದ್ದಾರೆ. ಸಿಎನ್‌ಎನ್ ವರದಿಯ ಪ್ರಕಾರ ಟ್ರಂಪ್ ಸರಕಾರದ ಅಧಿಕಾರಿಗಳು ಸುಮಾರು ಎರಡು ತಿಂಗಳಿನಿಂದ ಚೀನಾ ಸರಕಾರವನ್ನು ಸಂಪರ್ಕಿಸಿ, ಜಿನ್ ಪಿಂಗ್ ಅವರು ಟ್ರಂಪ್‌ಗೆ ಕರೆ ಮಾಡಿ ಮಾತುಕತೆ ನಡೆಸಲು ತಿಳಿಸಿದ್ದಾರೆ. ಆದರೆ ಇದುವರೆಗೆ ಜಿನ್‌ಪಿಂಗ್ ಫೋನ್ ಮೂಲಕ ಮಾತುಕತೆಗೆ ನಿರಾಕರಿಸಿದ್ದಾರೆ.
"ಚೀನಾದಲ್ಲಿ ಏನಾಗಲಿದೆ ಎಂಬುದನ್ನು ನಾವು ನೋಡಲಿದ್ದೇವೆ. ಅವರು ನಮ್ಮ ದೇಶದಿಂದ ಬಹಳ ಕಾಲದಿಂದಲೂ ತುಂಬ ಲಾಭ ಪಡೆದಿದ್ದಾರೆ. ಇನ್ನು ಮುಂದೆ ಅವರು ಅದಕ್ಕೆ ಬೆಲೆ ಕೊಡಬೇಕಾಗಿದೆʼʼ ಎಂದು ಟ್ರಂಪ್ ಹೇಳಿದ್ದಾರೆ.
ಈ ನಡುವೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೊದಲ ಬಾರಿಗೆ ಸುಂಕ ಸಮರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಇಂಥ ಟಾರಿಫ್ ವಾರ್‌ನಲ್ಲಿ ಯಾರಿಗೂ ಗೆಲುವು ಸಿಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಈ ರೀತಿ ತೆರಿಗೆಯನ್ನು ಹೆಚ್ಚಿಸುವ ದೇಶ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯಾಗಿ ಉಳಿಯಲಿದೆ ಹಾಗೂ ನಷ್ಟ ಅನುಭವಿಸಲಿದೆ. ಚೀನಾವು ಹಲವಾರು ದಶಕಗಳಿಂದಲೂ ತನ್ನ ಸ್ವಾವಲಂಬನೆ ಮತ್ತು ಕಠಿಣ ಪರಿಶ್ರಮದ ಮೂಲಕ ಬೆಳವಣಿಗೆಯನ್ನು ಸಾಧಿಸಿದೆ. ಬೇರೆಯವರ ಫೇವರ್ಸ್ ಮೇಲೆ ಚೀನಾ ಡಿಪೆಂಡ್ ಆಗಿಲ್ಲ. ಆದ್ದರಿಂದ ಯಾರ ದಬ್ಬಾಳಿಕೆಗೂ ಜಗ್ಗಲ್ಲ. ತನ್ನ ವ್ಯವಹಾರಗಳನ್ನು ಚೀನಾ ಅಚ್ಚುಕಟ್ಟಾಗಿ ನಿಭಾಯಿಸಲಿದೆ ಎಂದು ಜಿನ್‌ಪಿಂಗ್ ಹೇಳಿದ್ದಾರೆ.
ಚೀನಾ ಅಧ್ಯಕ್ಷರ ಕಾರ್ಯತಂತ್ರವೇನು?
- ಅಮೆರಿಕ ವಿರುದ್ಧ ಪ್ರತಿ ಸುಂಕವನ್ನು 125% ತನಕ ಹೇರಿದ್ದಾರೆ.
- ಅಮೆರಿಕದ ಪ್ರತಿ ಸುಂಕದ ವಿರುದ್ಧ ತನ್ನ ಜತೆ ಕೈಜೋಡಿಸಲು ಯುರೋಪ್‌ಗೆ ಮನವಿ.
- ಚೀನಾವು ಯುರೋಪ್, ಮೆಕ್ಸಿಕೊ ಜತೆ ಹೊಸ ವ್ಯಾಪಾರಾವಕಾಶಗಳಿಗೆ ಮಾತುಕತೆ ನಡೆಸುತ್ತಿದೆ. ಈ ಮೂಲಕ ಅಮೆರಿಕದ ಜತೆಗಿನ ವ್ಯಾಪಾರದಲ್ಲಿ ಉಂಟಾಗಲಿರುವ ನಷ್ಟ ಭರ್ತಿಗೆ ಪ್ಲಾನ್.
- ಜುಲೈನಲ್ಲಿ ಯುರೋಪ್-ಚೀನಾ ಶೃಂಗ ಸಭೆ.
- ವಿಯೆಟ್ನಾಂನಲ್ಲಿ ಉತ್ಪಾದನೆಗೆ ಚಿಂತನೆ.
- ಏಷ್ಯಾ ಪೆಸಿಫಿಕ್ ವಲಯದ ದೇಶಗಳ ಜತೆಗೆ ರೀಜಿನಲ್ ಕಾಂಪ್ರಹೆನ್ಸಿವ್ ಇಕನಾಮಿಕ್ ಪಾರ್ಟನರ್‌ಶಿಪ್.
ಚೀನಾ ಅಧ್ಯಕ್ಷರ ಮುಂದಿರುವ ಸವಾಲೇನು?
- ಅಮೆರಿಕದ ಜತೆಗಿನ ವ್ಯಾಪಾರ ನಷ್ಟ ಸಣ್ಣದಲ್ಲ.
- ಟ್ರಂಪ್ ಮೊದಲ ಅವಧಿಯಲ್ಲೇ ನಷ್ಟ ಆಗಿತ್ತು.
- ಇನ್ನೂ ಭರ್ತಿಯಾಗದ ನಷ್ಟ.
- ಟ್ರಂಪ್ ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸಮಯ ನೀಡಿದ್ದಾರೆ.
- ಕ್ಸಿ ಜಿನ್‌ಪಿಂಗ್ ಗೆ ಅಮೆರಿಕ ವಿರುದ್ಧ ಸಂಘರ್ಷ ಹೆಚ್ಚಿಸಲು ಅಸಹಾಯಕ ಪರಿಸ್ಥಿತಿ.
- ಯುರೋಪ್-ಚೀನಾ ಹೊಸ ಸಂಬಂಧಗಳಿಗೆ ಇತಿ-ಮಿತಿ ಇದೆ.
- ಯುರೋಪಿನಲ್ಲಿ ಚೀನಾ ಬಗ್ಗೆ ಇದೆ ನಕಾರಾತ್ಮಕ ಅಭಿಪ್ರಾಯ.
- ಉಕ್ರೇನ್ ವಿಷಯದಲ್ಲಿ ಚೀನಾ ರಷ್ಯಾದ ಪರ ಎಂಬ ರಾಜಕೀಯ ಅಡ್ಡಿ.
- ಅಮೆರಿಕದ ಜತೆ ರಾಜಿಯಾದ್ರೆ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕ
ಅಮೆರಿಕದ ಪ್ರತಿ ಸುಂಕದ ವಿಚಾರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಮೃದು ಧೋರಣೆ ತಾಳಿದ್ದರೆ ಆರ್ಥಿಕ ದೃಷ್ಟಿಯಿಂದ ಅನುಕೂಲವಾಗುತ್ತಿತ್ತು. ಆದರೆ ಅಷ್ಟೊಂದು ಮೃದು ಧೋರಣೆ ತಳೆದರೆ, ಜಿನ್ ಪಿಂಗ್ ಅವರು ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಆಕ್ಷೇಪ ಕಟ್ಟಿಕೊಳ್ಳಬೇಕಾಗುತ್ತದೆ.
ಹೀಗಾಗಿ ಟ್ರಂಪ್ ಅವರೇ ನಮ್ಮ ಜತೆಗೆ ಮೊದಲು ಮಾತನಾಡಲಿ, ಅಲ್ಲಿಯವರೆಗೆ ಉಂಟಾಗಲಿರುವ ನಷ್ಟವನ್ನು ತಡೆದುಕೊಳ್ಳೋಣ ಎಂಬ ಭಾವನೆ ಜಿನ್‌ಪಿಂಗ್ ಅವರಲ್ಲಿದೆ. ಆದರೆ ಟ್ರಂಪ್ ಸುತರಾಂ ಮೆತ್ತಗಾಗುತ್ತಿಲ್ಲ. ಬದಲಿಗೆ ಪ್ರತಿ ಸುಂಕವನ್ನು ಏರಿಸುತ್ತಾ ಚೀನಾದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಅಮೆರಿಕದ ಶ್ವೇತಭವನ ಪ್ರಕಟಿಸಿರುವ WEEK OF VICTORIES
- ಚೀನಾ ವಿರುದ್ಧ 145% ಸುಂಕ ಹೇರಿಕೆ.
- ಇಸ್ರೇಲ್ ಅಧ್ಯಕ್ಷ ನೇತನ್ಯಾಹು ಜತೆ ಮಾತುಕತೆ.
- ಅನಿಲ ಮತ್ತು ಇಂಧನ ದರ ಇಳಿಕೆಯಾಗಿದೆ.
- ಹಣದುಬ್ಬರ ಇಳಿಯುತ್ತಿದೆ.
- ಕಂಪನಿಗಳು ಬಿಲಿಯನ್‌ಗಟ್ಟಲೆ ಹೂಡುತ್ತಿವೆ.