ನವದೆಹಲಿ: ವಿಶ್ವದಾದ್ಯಂತ ಶುಕ್ರವಾರ ಇಂಟರ್ ನೆಟ್ ( Internet service) ಸಮಸ್ಯೆ ಎದುರಾಗಿದ್ದು, ಇದರಿಂದ ಸಾಕಷ್ಟು ತೊಂದರೆಗಳು ಉಂಟಾಗಿದೆ ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ (social media) ದೂರಿದ್ದಾರೆ. ಕ್ಲೌಡ್‌ಫ್ಲೇರ್ (Cloudflare server down) ಸರ್ವರ್ ಸಮಸ್ಯೆಯಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ. ಅನೇಕ ಬಳಕೆದಾರರು ಸೇವಾ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರು ಕೇಳಿ ಬಂದ ಬಳಿಕ ಕ್ಲೌಡ್‌ಫ್ಲೇರ್ ಸರ್ವರ್ ಸಮಸ್ಯೆ ಸರಿಪಡಿಸುತ್ತಿರುವುದಾಗಿ ದೃಢಪಡಿಸಿದೆ. ಆದರೆ ಅಪರಾಹ್ನ ಮೂರು ಗಂಟೆಯವರೆಗೂ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳು ಕೇಳಿ ಬರುತ್ತಲೇ ಇತ್ತು.
ನಿತ್ಯದ ಕೆಲಸ ಆರಂಭವಾಗುವ ಹೊತ್ತಿಗೆ ಅಂದರೆ ಶುಕ್ರವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಕ್ಲೌಡ್‌ಫ್ಲೇರ್ ನಲ್ಲಿ ನೆಟ್‌ವರ್ಕ್ ತೊಂದರೆಗಳು ಕಾಣಿಸಿಕೊಂಡಿವೆ. ಇದರಿಂದ ಸರ್ವರ್ ಸಮಸ್ಯೆಯಾಗುತ್ತಿರುವುದಾಗಿ ಘೋಷಿಸಲಾಗಿದ್ದು, ತಕ್ಷಣವೇ ತೊಂದರೆಗಳನ್ನು ನಿವಾರಿಸುವುದಾಗಿ ಕಂಪೆನಿ ತಿಳಿಸಿದೆ.
ಪಾಕಿಸ್ತಾನ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಅಸಿಮ್ ಮುನೀರ್ ನೇಮಕ
ಯೋಜಿತ ನಿರ್ವಹಣಾ ಕಾರ್ಯ ನಡೆಸುತ್ತಿದ್ದಾಗ ನೆಟ್‌ವರ್ಕ್‌ನ ಕೆಲವು ಭಾಗಗಳಲ್ಲಿ ಸಮಸ್ಯೆಗಳು ತಲೆದೋರುತ್ತಿವೆ ಕ್ಲೌಡ್‌ಫ್ಲೇರ್ ದೃಢಪಡಿಸಿದ್ದು, ನಿರ್ವಹಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ಸುಮಾರು 9.12 ಕ್ಕೆ ಪ್ರತಿಕ್ರಿಯಿಸಿದ ಕ್ಲೌಡ್‌ಫ್ಲೇರ್. ಸಮಸ್ಯೆ ಪರಿಹಾರ ಮಾಡಲಾಗಿದೆ ಎಂದು ತಿಳಿಸಿತ್ತು. ಆದರೆ ಕೆಲವು ದೋಷಗಳಿವೆ. ಅದು ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವುಗಳ ವಿಶ್ಲೇಷಣೆ ನಡೆಸಿ ಪರಿಹಾರ ಕಾರ್ಯ ಮಾಡುವುದಾಗಿ ಹೇಳಿದ್ದು, ಸರಿಯಾದ ತಕ್ಷಣ ಮಾಹಿತಿ ನೀಡುವುದಾಗಿ ತಿಳಿಸಿದೆ.
ವೆಬ್‌ಸೈಟ್ ಭದ್ರತೆ ಮತ್ತು ವಿಷಯ ವಿತರಣೆಗಾಗಿ ಅನೇಕ ದೊಡ್ಡದೊಡ್ಡ ಕಂಪೆನಿಗಳು ಕ್ಲೌಡ್‌ಫ್ಲೇರ್ ಸೇವೆಗಳನ್ನು ಅವಲಂಬಿಸಿದೆ. ಹೀಗಾಗಿ ಬಳಕೆದಾರರು ಡೌನ್‌ಡೆಕ್ಟರ್‌ನಲ್ಲಿ ಸರ್ವರ್ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಲೇ ಇದ್ದರು.
ಡೌನ್‌ಡೆಕ್ಟರ್ ಮಾಹಿತಿ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ 1500 ಕ್ಕೂ ಹೆಚ್ಚು ಬಳಕೆದಾರರು ಈ ಬಗ್ಗೆ ದೂರು ನೀಡಿದ್ದರು. ಭಾರತದಲ್ಲಿ 2000 ಕ್ಕೂ ಹೆಚ್ಚು ಬಳಕೆದಾರರು ಔಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್‌ನಲ್ಲಿ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಇನ್ನು ಔಟೇಜ್ ಟ್ರ್ಯಾಕರ್ ಯುಎಸ್‌ನಲ್ಲಿ ಶೇ. 74ರಷ್ಟು ಬಳಕೆದಾರರು ಸರ್ವರ್ ಸಂಪರ್ಕದಲ್ಲಿ, ಶೇ. 19ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಮತ್ತು ಶೇ. 6ರಷ್ಟು ಬಳಕೆದಾರರು ಡಿಎನ್ ಎಸ್ ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಶೇ. 71ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ, ಶೇ. 22ರಷ್ಟು ಬಳಕೆದಾರರು ಸರ್ವರ್ ಸಂಪರ್ಕದಲ್ಲಿ ಮತ್ತು ಶೇ. 8ರಷ್ಟು ಬಳಕೆದಾರರು ಹೋಸ್ಟಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.
ಕ್ಲೌಡ್‌ಫ್ಲೇರ್ ತನ್ನ ಡ್ಯಾಶ್‌ಬೋರ್ಡ್ ಮತ್ತು ಸಂಬಂಧಿತ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್‌ಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದೆ.
ಕ್ಲೌಡ್‌ಫ್ಲೇರ್ ಸರ್ವರ್ ಸಮಸ್ಯೆಯಿಂದಾಗಿ ಭಾರತದ ಪ್ರಮುಖ ಷೇರು ಮಾರುಕಟ್ಟೆ ಟ್ರೇಡಿಂಗ್ ಆ್ಯಪ್‌ಗಳಾದ ಜೆರೋಧಾ, ಗ್ರೋ ಮತ್ತು ಏಂಜೆಲ್ ಒನ್ ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿದ್ದವು. ಸಮಸ್ಯೆ ಪರಿಹಾರವಾಗುವವರೆಗೆ ವಹಿವಾಟುಗಳನ್ನು ನಿರ್ವಹಿಸಲು ವಾಟ್ಸಾಪ್ ಬ್ಯಾಕಪ್ ಅನ್ನು ಬಳಸುವಂತೆ ಹಲವು ಕಂಪೆನಿಗಳು ಗ್ರಾಹಕರಿಗೆ ಸಲಹೆ ನೀಡಿತು.
ಭಾರತದಲ್ಲಿ ಷೇರುಪೇಟೆಯ ವಹಿವಾಟು ನಡೆಯುವ ಸಮಯದಲ್ಲೇ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅನೇಕ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗಲು ಸಾಧ್ಯವಾಗದೆ, ಷೇರುಗಳನ್ನು ಕೊಳ್ಳಲು ಅಥವಾ ಮಾರಾಟ ಮಾಡಲು ತೊಂದರೆ ಅನುಭವಿಸಿದರು. ಈ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vladimir Putin: ಟ್ರಂಪ್ ತಂಗಿದ ಹೋಟೆಲ್ ಸೂಟ್‌ನಲ್ಲಿ ಪುಟಿನ್ ವಿಶ್ರಾಂತಿ; ಇದರ ಬಾಡಿಗೆ ಎಷ್ಟು ಗೊತ್ತಾ?
ಇನ್ನು ಕ್ಲೌಡ್‌ಫ್ಲೇರ್ ಸರ್ವರ್ ಸಮಸ್ಯೆ ಟಿಕೆಟ್ ಬುಕ್ಕಿಂಗ್ ಆನ್ ಲೈನ್ ತಾಣಗಳು, ಲಿಂಕ್ಡ್‌ಇನ್, ಕ್ರಿಪ್ಟೋ ಎಕ್ಸ್‌ಚೇಂಜ್ ಕಾಯಿನ್‌ಬೇಸ್, ಸ್ಪೇಸ್‌ಎಕ್ಸ್ ಮತ್ತು ನೋಷನ್‌ನಂತಹ ಹಲವು ವೆಬ್‌ಸೈಟ್ ಸೇವೆಗಳ ಮೇಲೂ ಪರಿಣಾಮ ಬೀರಿವೆ.
ಈ ವರ್ಷದಲ್ಲಿ ಎರಡನೇ ಬಾರಿಗೆ ಕ್ಲೌಡ್‌ಫ್ಲೇರ್ ಅತಿದೊಡ್ಡ ಪ್ರಮಾಣದಲ್ಲಿ ಸಮಸ್ಯೆಯನ್ನು ಎದುರಿಸಿದೆ. ಕಳೆದ ನವೆಂಬರ್ 18ರಂದು ಕೂಡ ಇದೇ ರೀತಿಯ ಸಮಸ್ಯೆ ಉಂಟಾಗಿತ್ತು. ಆಗ ಚಾಟ್‌ಜಿಪಿಟಿ ಮತ್ತು ಎಕ್ಸ್ ನಂತಹ ಬೃಹತ್ ಸಾಮಾಜಿಕ ಮಾಧ್ಯಮಗಳ ಸೇವೆ ಸ್ಥಗಿತಗೊಂಡಿದ್ದವು.