ನವದೆಹಲಿ, ಜೂ. 1: ದೇಶದ ಪ್ರಮುಖ ನಗರಗಳಲ್ಲಿ ಜೂನ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಿದ್ದು, ದೇಶೀಯ ಅಡುಗೆ ಅನಿಲ ಬೆಲೆಗಳು (cooking gas prices) ಬದಲಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 46 ರುಪಾಯಿ ಏರಿಕೆಯಾಗಿ, 3,198 ರುಪಾಯಿಗೆ ತಲುಪಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 42 ರುಪಾಯಿ ಹೆಚ್ಚಿಸಲಾಗಿದ್ದು, 3,113.50 ರುಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ ದರ 53.50 ರುಪಾಯಿ ಏರಿಕೆಯಾಗಿ 3,255.50 ರುಪಾಯಿಗೆ ತಲುಪಿದೆ.
ತೈಲ ಮಾರುಕಟ್ಟೆ ಕಂಪನಿಗಳು 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (ಎಫ್‌ಟಿಎಲ್) ಸಿಲಿಂಡರ್‌ಗಳ ಬೆಲೆಯನ್ನು 11 ರುಪಾಯಿ ಹೆಚ್ಚಿಸಿವೆ. ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ನ ಚಿಲ್ಲರೆ ಬೆಲೆ ಈಗ 821.50 ರುಪಾಯಿ ಆಗಿದೆ. ಪರಿಷ್ಕೃತ ದರಗಳು ಜೂನ್ 1ರಿಂದ ಜಾರಿಗೆ ಬಂದಿವೆ.
ವರದಿಯ ಪ್ರಕಾರ, ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಗರಗಳಲ್ಲಿ ಪ್ರಮಾಣಿತ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಅಸ್ಥಿರತೆಯ ಬಗ್ಗೆ ಕಳವಳಗಳ ನಡುವೆಯೇ ಇಂಧನ ಭದ್ರತೆಯನ್ನು ಬಲಪಡಿಸಲು ಹಾಗೂ ಸಮರ್ಪಕ ಪ್ರಮಾಣದ ಸಂಗ್ರಹವನ್ನು ಕಾಯ್ದುಕೊಳ್ಳಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಕೆಲವೇ ದಿನಗಳ ಬಳಿಕ ಈ ಪರಿಷ್ಕರಣೆ ಮಾಡಲಾಗಿದೆ.
ಅತಿಯಾದ ಬಿಸಿಲಿನಿಂದ ಎಲ್‌ಪಿಜಿ ಸಿಲಿಂಡರ್ ಅಪಾಯಕಾರಿ: ನೀವು ತಿಳಿದಿರಲೇಬೇಕಾದ 5 ಸುರಕ್ಷತಾ ಕ್ರಮಗಳು
ಅಂತರ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ''ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳು ಕನಿಷ್ಠ 30 ದಿನಗಳ ಎಲ್‌ಪಿಜಿ ಮೀಸಲು ಕಾಯ್ದುಕೊಳ್ಳುವಂತೆ ಕೇಳಿಕೊಂಡಿದೆ'' ಎಂದು ಹೇಳಿದರು. ''ಪ್ರಸ್ತುತ ಇಂಧನ ಪೂರೈಕೆಯ ಕೊರತೆಯಿಲ್ಲ'' ಎಂದೂ ಅವರು ತಿಳಿಸಿದರು. ಪೂರೈಕೆಯಲ್ಲಿ ಆಗುವ ಅಡೆತಡೆಗಳಿಂದ ರಕ್ಷಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದರು.
ಅಂತಾರಾಷ್ಟ್ರೀಯ ಇಂಧನ ಬೆಲೆ ಮಾನದಂಡಗಳು, ಸಾಗಣೆ ವೆಚ್ಚಗಳು ಮತ್ತು ವಿದೇಶಿ ವಿನಿಮಯ ದರಗಳ ಏರಿಳಿತಗಳ ಆಧಾರದ ಮೇಲೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಪರಿಷ್ಕರಿಸುತ್ತವೆ.
ಜಾಗತಿಕ ಇಂಧನ ಬೆಲೆಗಳ ಏರಿಳಿತದ ನಡುವೆಯೇ ಕಳೆದ ಕೆಲವು ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ದರಗಳಲ್ಲಿ ನಡೆದ ಪರಿಷ್ಕರಣೆಗಳ ಸರಣಿಯ ಬಳಿಕ ಈ ಇತ್ತೀಚಿನ ಬೆಲೆ ಏರಿಕೆ ಜಾರಿಗೆ ಬಂದಿದೆ. ಗೃಹಬಳಕೆಯ ಎಲ್‌ಪಿಜಿ ದರಗಳು ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಪರಿಷ್ಕರಣೆಗೆ ಒಳಗಾದ ನಂತರ ಬಹುತೇಕ ಸ್ಥಿರವಾಗಿವೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರಸ್ತೆಬದಿ ಉಪಹಾರ ಗೃಹಗಳು ಹಾಗೂ ಇತರ ವ್ಯಾಪಾರಿಕ ಸಂಸ್ಥೆಗಳು ಬಳಸುತ್ತವೆ. ಸಬ್ಸಿಡಿ ಹೊಂದಿರುವ ಗೃಹಬಳಕೆಯ ಎಲ್‌ಪಿಜಿ ವರ್ಗದ ವ್ಯಾಪ್ತಿಗೆ ಬಾರದ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ.