ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಣಿಜ್ಯ ಎಲ್‌ಪಿಜಿ ಅಭಾವ: ಪೂರೈಕೆ ಸರಿಪಡಿಸಲು ಕೇಂದ್ರ ಸರ್ಕಾರದಿಂದ ವಿಶೇಷ ಸಮಿತಿ ರಚನೆ

ಮಧ್ಯ ಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯಿಂದ ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಸರ್ಕಾರ ಮನೆ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡಿರುವುದರಿಂದ ಹೋಟೆಲ್‌ ಮತ್ತು ರೆಸ್ಟೋರೆಂಟ್ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಸಮಸ್ಯೆ ಪರಿಹರಿಸಲು ಪೆಟ್ರೋಲಿಯಂ ಸಚಿವಾಲಯ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಮಾ. 10: ದೇಶಾದ್ಯಂತ ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಹೋಟೆಲ್‌ ಮತ್ತು ರೆಸ್ಟೋರೆಂಟ್ ಉದ್ದಿಮೆಗಳು ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಪೆಟ್ರೋಲಿಯಂ ಸಚಿವಾಲಯವು (Petrolium Ministry) ತೈಲ ಮಾರುಕಟ್ಟೆ ಕಂಪನಿಗಳ (Oil Marketing Companies) ಮೂವರು ಕಾರ್ಯನಿರ್ವಾಹಕ ನಿರ್ದೇಶಕ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆಯಿಂದಾಗಿ ಭಾರತದ (India) ಇಂಧನ ಪೂರೈಕೆ ಮಾರ್ಗಗಳಿಗೆ ಅಡ್ಡಿಯಾಗಿದ್ದು, ಸರ್ಕಾರವು ಪ್ರಸ್ತುತ ಮನೆ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಇದರಿಂದಾಗಿ ವಾಣಿಜ್ಯ ಸಿಲಿಂಡರ್‌ಗಳನ್ನು ಅವಲಂಬಿಸಿರುವ ಹೋಟೆಲ್ ಉದ್ಯಮಕ್ಕೆ ಪೂರೈಕೆ ಕಡಿತಗೊಂಡಿದೆ ಎಂದು ಸಚಿವಾಲಯವು ಎಕ್ಸ್ (X) ಮೂಲಕ ಮಾಹಿತಿ ನೀಡಿದೆ.

ಭಾರತವು ವಾರ್ಷಿಕವಾಗಿ 31.3 ಮಿಲಿಯನ್ ಟನ್ ಎಲ್‌ಪಿಜಿ ಬಳಕೆ ಮಾಡುತ್ತಿದ್ದು, ಇದರಲ್ಲಿ ಶೇ. 87ರಷ್ಟು ಭಾಗ ಮನೆ ಬಳಕೆಗೆ ಉಪಯೋಗವಾಗುತ್ತಿದೆ. ಉಳಿದ ಭಾಗವನ್ನು ಹೋಟೆಲ್ ಮತ್ತು ಕೈಗಾರಿಕೆಗಳಿಗೆ ಬಳಸಲಾಗುತ್ತಿದೆ. ದೇಶದ ಒಟ್ಟು ಅಗತ್ಯದ ಶೇ. 62ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯ ನಂತರ, ಸೌದಿ ಅರೇಬಿಯಾದಂತಹ ದೇಶಗಳಿಂದ ಅನಿಲ ಪೂರೈಸುವ 'ಹೊರ್ಮುಜ್ ಜಲಸಂಧಿ' ಮಾರ್ಗವು ಬಂದ್ ಆಗಿದೆ. ಪರ್ಯಾಯ ಮೂಲಗಳ ಹುಡುಕಾಟ ನಡೆಯುತ್ತಿದೆಯಾದರೂ, ಸೀಮಿತ ದಾಸ್ತಾನು ಇರುವುದರಿಂದ ಸರ್ಕಾರವು ಮನೆ ಬಳಕೆಯ ಸಿಲಿಂಡರ್‌ಗಳಿಗೆ ಮೊದಲ ಆದ್ಯತೆ ನೀಡಿದೆ.

ಅಗತ್ಯ ಸರಕುಗಳ ಕಾಯ್ದೆ ಎಂದರೇನು? LPG ಸಿಲಿಂಡರ್‌ ಪೂರೈಕೆಗೆ ಹೇಗೆ ಸಹಕಾರಿ?

ಈಗಾಗಲೇ ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಅಡುಗೆ ಅನಿಲ ಸಿಗದೆ ಹೋಟೆಲ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಅನಿಲದ ಅಕ್ರಮ ದಾಸ್ತಾನು ಮತ್ತು ಕಾಳದಂಧೆಯನ್ನು ತಡೆಯಲು ಸರ್ಕಾರವು ಸಿಲಿಂಡರ್ ಬುಕಿಂಗ್ ಅವಧಿಯನ್ನು 21ರಿಂದ 25 ದಿನಗಳಿಗೆ ವಿಸ್ತರಿಸಿದೆ. ಆಮದು ಮಾಡಿಕೊಂಡ ಅನಿಲದಲ್ಲಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ಸೇವೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಶೀಘ್ರವೇ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸುಗಮವಾಗದಿದ್ದರೆ ಹೋಟೆಲ್‌ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಹೊಟೇಲ್ ಅಸೋಸಿಯೇಷನ್‌ಗಳು ಎಚ್ಚರಿಸಿವೆ. ಸಂಸ್ಕರಣಾಗಾರಗಳಿಗೆ ಪೆಟ್ರೋಕೆಮಿಕಲ್ ಉತ್ಪಾದನೆಯನ್ನು ಕಡಿತಗೊಳಿಸಿ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹೊಸ ಸಮಿತಿಯು ಉದ್ಯಮಗಳ ಮನವಿಗಳನ್ನು ಪರಿಶೀಲಿಸಿ ಶೀಘ್ರ ಪರಿಹಾರ ನೀಡುವ ನಿರೀಕ್ಷೆಯಿದೆ.