ಬಜಾಜ್ ಬ್ರೋಕಿಂಗ್ ತನ್ನ ಡಿಜಿಟಲ್ ವೇದಿಕೆಗಳಲ್ಲಿ ಕಮಾಡಿಟಿ ಟ್ರೇಡಿಂಗ್ (ಸರಕು ವಹಿವಾಟು) ಸೇವೆ ಪ್ರಾರಂಭಿಸಿದ್ದು, ಗ್ರಾಹಕರಿಗೆ ಲಭ್ಯವಿರುವ ಮಾರುಕಟ್ಟೆಗಳ ವ್ಯಾಪ್ತಿಯನ್ನು ವಿಸ್ತರಿಸಿದೆ. ಈ ಸೇವೆಯಡಿ ಅಮೂಲ್ಯ ಲೋಹಗಳು, ಇಂಧನ, ಮೂಲ ಲೋಹಗಳು ಹಾಗೂ ಆಯ್ದ ಕೃಷಿ ಉತ್ಪನ್ನಗಳ ವಹಿವಾಟಿಗೆ ಅವಕಾಶವಿದ್ದು, ಕೆಲವು ಸರಕುಗಳಲ್ಲಿ ಸ್ಟ್ಯಾಂಡರ್ಡ್ ಮತ್ತು ಮಿನಿ ಗಾತ್ರದ ಒಪ್ಪಂದಗಳು ಲಭ್ಯವಿವೆ.
ಗ್ರಾಹಕರು ಚಿನ್ನ, ಬೆಳ್ಳಿ, ಕಚ್ಚಾ ತೈಲ, ನೈಸರ್ಗಿಕ ಅನಿಲ, ತಾಮ್ರ, ಅಲ್ಯೂಮಿನಿಯಂ, ಸೀಸ ಮತ್ತು ಸತುವಿನಂತಹ ಸರಕುಗಳ ಜೊತೆಗೆ ಕಪಾಸ್ (ಹತ್ತಿ), ಏಲಕ್ಕಿ ಹಾಗೂ ಮೆಂಥಾ ಎಣ್ಣೆಯಂತಹ ಆಯ್ದ ಕೃಷಿ ಸರಕುಗಳಲ್ಲಿ ವಹಿವಾಟು ನಡೆಸಬಹುದು. ಕೆಲವು ಸರಕುಗಳಲ್ಲಿ ವಿವಿಧ ಗಾತ್ರದ ಒಪ್ಪಂದಗಳು ಲಭ್ಯವಿರುವುದರಿಂದ, ಗ್ರಾಹಕರು ತಮ್ಮ ವಹಿವಾಟಿನ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Share Market: ಸೆನ್ಸೆಕ್ಸ್ 510 ಅಂಕ ಜಿಗಿತ: ಸತತ 4ನೇ ದಿನ ಚೇತರಿಕೆ; ಐಟಿ ಸ್ಟಾಕ್ಸ್ ಜೋಶ್
ಈ ವೇದಿಕೆಯಲ್ಲಿ ಆಪ್ಷನ್ಸ್ ಚೈನ್ (ಆಯ್ಕೆ ಒಪ್ಪಂದಗಳ ವಿವರ) ಜೊತೆಗೆ 'ಗ್ರೀಕ್ಸ್' ಎಂಬ ವಿಶ್ಲೇಷಣಾ ಮಾನದಂಡಗಳೂ ಲಭ್ಯವಿವೆ. ಇವು ಆಧಾರವಾಗಿರುವ ಸರಕಿನ ಬೆಲೆ, ಮಾರುಕಟ್ಟೆಯ ಏರಿಳಿತ ಮತ್ತು ಒಪ್ಪಂದದ ಮುಕ್ತಾಯಕ್ಕೆ ಉಳಿದಿರುವ ಸಮಯದ ಬದಲಾವಣೆಗಳು ಆಯ್ಕೆ ಒಪ್ಪಂದದ ಮೌಲ್ಯದ ಮೇಲೆ ಬೀರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಅಲ್ಲದೆ, ಬಾಸ್ಕೆಟ್ ಆರ್ಡರ್ ಸೌಲಭ್ಯದ ಮೂಲಕ ಹಲವು ಖರೀದಿ ಅಥವಾ ಮಾರಾಟದ ಆದೇಶಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿ ಸಲ್ಲಿಸಬಹುದು. ಇದರಿಂದ ಬಹು ಆದೇಶಗಳನ್ನು ನಿರ್ವಹಿಸುವ ಪ್ರಕ್ರಿಯೆ ಸರಳವಾಗುತ್ತದೆ.
ಆದೇಶಗಳನ್ನು ಸಲ್ಲಿಸುವಾಗ, ಸಂಬಂಧಿತ ಒಪ್ಪಂದ ಮತ್ತು ಮಾರ್ಜಿನ್ ಅವಶ್ಯಕತೆಗಳಿಗೆ ಒಳಪಟ್ಟು, ಗ್ರಾಹಕರು ಇಂಟ್ರಾಡೇ ಮತ್ತು ಸಾಮಾನ್ಯ ವಹಿವಾಟಿನ ಆಯ್ಕೆಗಳನ್ನು ಬಳಸಬಹುದು. ನಿಗದಿಪಡಿಸಿದ ಬೆಲೆ ಅಥವಾ ಇತರ ಷರತ್ತುಗಳು ಪೂರೈಸಿದಾಗ ಆದೇಶವನ್ನು ಸಕ್ರಿಯಗೊಳಿಸುವ 'ಗುಡ್ ಟಿಲ್ ಟ್ರಿಗರ್ಡ್' (GTT) ಸೌಲಭ್ಯವೂ ಲಭ್ಯವಿದೆ. ಆದೇಶಗಳ ಕಾರ್ಯಗತಗೊಳಿಸುವಿಕೆಯು ಮಾರುಕಟ್ಟೆಯ ಲಭ್ಯತೆ ಮತ್ತು ಅನ್ವಯವಾಗುವ ಷರತ್ತುಗಳನ್ನು ಅವಲಂಬಿಸಿರುತ್ತದೆ. ಆಯ್ದ ಬೆಲೆ ಮಟ್ಟಗಳನ್ನು ತಲುಪಿದಾಗ ಸೂಚನೆಗಳನ್ನು ಪಡೆಯಲು 'ಪ್ರೈಸ್ ಅಲರ್ಟ್' (ಬೆಲೆ ಎಚ್ಚರಿಕೆ) ಸೌಲಭ್ಯವನ್ನೂ ಒದಗಿಸಲಾಗಿದೆ.
ನೈಜ ಸಮಯದ (ರಿಯಲ್-ಟೈಮ್) ಮಾರುಕಟ್ಟೆ ಮಾಹಿತಿ ಮತ್ತು ಚಾರ್ಟ್ಗಳ ನೆರವಿನಿಂದ ಗ್ರಾಹಕರು ಬೆಲೆಗಳ ಏರಿಳಿತವನ್ನು ಗಮನಿಸುತ್ತಾ, ಅದೇ ಪರದೆಯಿಂದ ವಹಿವಾಟಿನ ಆದೇಶ ಗಳನ್ನು ಸಲ್ಲಿಸಬಹುದು. ಅಲ್ಲದೆ, ಅನ್ವಯವಾಗುವ ಬ್ರೋಕರೇಜ್ ಮತ್ತು ಶಾಸನಬದ್ಧ ಶುಲ್ಕಗಳ ವಿವರಗಳನ್ನು ಮುಂಚಿತವಾಗಿಯೇ ಪ್ರದರ್ಶಿಸಲಾಗುತ್ತದೆ. ಇದರಿಂದ ವಹಿವಾಟಿಗೆ ಅನ್ವಯ ವಾಗುವ ವೆಚ್ಚಗಳ ಬಗ್ಗೆ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ.
ಬಜಾಜ್ ಬ್ರೋಕಿಂಗ್ನ ವಕ್ತಾರರು ಈ ಕುರಿತು ಮಾತನಾಡುತ್ತಾ, “ನಮ್ಮ ಕಮಾಡಿಟೀಸ್ ವಿಭಾಗದ ಆರಂಭದೊಂದಿಗೆ, ಬಜಾಜ್ ಬ್ರೋಕಿಂಗ್ ಮೂಲಕ ಗ್ರಾಹಕರು ಇನ್ನಷ್ಟು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದೇವೆ. ಇದರ ಜೊತೆಗೆ, ಆಪ್ಷನ್ಸ್ ಅನಾಲಿಸಿಸ್, ಆರ್ಡರ್ ಮಾಡುವುದು ಮತ್ತು ಬೆಲೆಗಳನ್ನು ಗಮನಿಸುವಂತಹ ಹಲವು ಉಪಯುಕ್ತ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಿದ್ದೇವೆ. ಗ್ರಾಹಕರು ಸುಲಭವಾಗಿ ವಹಿವಾಟು ನಡೆಸಲು ಮತ್ತು ವಹಿವಾಟಿನ ವೆಚ್ಚಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ನೆರವಾಗುವ ತಂತ್ರಜ್ಞಾನ ಆಧಾರಿತ ಟ್ರೇಡಿಂಗ್ ವೇದಿಕೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.”
ಈ ಹೊಸ ಸೇವೆಯ ಮೂಲಕ ಬಜಾಜ್ ಬ್ರೋಕಿಂಗ್ ತನ್ನ ಡಿಜಿಟಲ್ ವಹಿವಾಟು ಸೇವೆಗಳನ್ನು ಮತ್ತಷ್ಟು ವಿಸ್ತರಿಸಿದ್ದು, ವಿವಿಧ ಸರಕುಗಳ ಒಪ್ಪಂದಗಳು, ವಿಶ್ಲೇಷಣಾತ್ಮಕ ಪರಿಕರಗಳು ಹಾಗೂ ವಹಿವಾಟಿನ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ತಂದಿದೆ.