ಪಶ್ಚಿಮ ಬಂಗಾಳದಲ್ಲಿ ತಯಾರಾದ ಪ್ಯಾಕೇಜ್ಡ್ ಕುಡಿಯುವ ನೀರಿನ ‘ಬ್ಯಾಚ್ ಪಿಬಿ201’ ಕುರಿತು ಪ್ರಯೋಗಾಲಯದ ಪರೀಕ್ಷಾ ವರದಿಗಳಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆ ಯಲ್ಲಿ, ಈ ಬಗ್ಗೆ ಸಮಗ್ರ ಮರುಪರಿಶೀಲನೆ ನಡೆಸುವಂತೆ ಬಿಸ್ಲೆರಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್ಎಸ್ಎಸ್ಎಐ) ಮನವಿ ಮಾಡಿದೆ.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರದಲ್ಲಿರುವ ಬಿಸ್ಲೆರಿ ಘಟಕದಲ್ಲಿ ಈ ‘ಪಿಬಿ201’ ಬ್ಯಾಚ್ ನೀರನ್ನು ತಯಾರಿಸಲಾಗಿತ್ತು. ಸರ್ಕಾರಿ ಮಾದರಿ ಪರೀಕ್ಷೆಯ ವೇಳೆ, ಪ್ರಾಥಮಿಕ ಮತ್ತು ರೆಫರಲ್ (ಪರಿಶೀಲನಾ) ಪ್ರಯೋಗಾಲಯಗಳು ಈ ಮಾದರಿಯಲ್ಲಿ ‘ಕೋಲಿಫಾರ್ಮ್ ಬ್ಯಾಕ್ಟೀರಿಯಾ’ ಪತ್ತೆಯಾಗಿರುವುದಾಗಿ ವರದಿ ನೀಡಿದ್ದವು.
ಇದರ ಬೆನ್ನಲ್ಲೇ ಆಗಸ್ಟ್ 12, 2026ರಂದು ಎಫ್ಎಸ್ಎಸ್ಎಐ ಈ ಬ್ಯಾಚ್ನ ಮಾರಾಟವನ್ನು ನಿಷೇಧಿಸಿತ್ತು. ಪ್ರಾಧಿಕಾರದ ನಿರ್ದೇಶನದಂತೆ ಬಿಸ್ಲೆರಿ ಸಂಸ್ಥೆಯು ಆ ಬ್ಯಾಚ್ನ ನೀರಿನ ಬಾಟಲಿಗಳನ್ನು ಮಾರುಕಟ್ಟೆಯಿಂದ ಈಗಾಗಲೇ ವಾಪಸ್ ಪಡೆದಿತ್ತು.
ಸ್ವತಂತ್ರ ಪರೀಕ್ಷೆಗಳಲ್ಲಿ ವಿಭಿನ್ನ ಫಲಿತಾಂಶ
ಈ ನಡುವೆ ಬಿಸ್ಲೆರಿ ಸಂಸ್ಥೆಯು ಅದೇ ಬ್ಯಾಚ್ನ ಮಾದರಿಗಳನ್ನು ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯದಲ್ಲಿ ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಿತ್ತು. ಆ ಪರೀಕ್ಷೆಯಲ್ಲಿ, ನೀರಿನ ಮಾದರಿಯು ಕೋಲಿಫಾರ್ಮ್ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಮಾನದಂಡಗಳು ಸೇರಿದಂತೆ ಉಳಿದ ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿದೆ ಎಂದು ವರದಿ ಬಂದಿದೆ.
ಇದಷ್ಟೇ ಅಲ್ಲದೆ, ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಮತ್ತೊಂದು ಸ್ವತಂತ್ರ ಪ್ರಯೋಗಾಲಯ ದಲ್ಲೂ ಕಂಪನಿ ಇದೇ ಬ್ಯಾಚ್ನ ಮಾದರಿಗಳನ್ನು ಪರೀಕ್ಷಿಸಿದ್ದು, ಅಲ್ಲಿಯೂ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಮಾನದಂಡದ ಪ್ರಕಾರವೇ ಇರುವುದಾಗಿ ವರದಿಯಾಗಿದೆ.
ಬಿಸ್ಲೆರಿ ಬೇಡಿಕೆ ಏನು?
ಸರ್ಕಾರಿ ಪ್ರಯೋಗಾಲಯದ ವರದಿ ಮತ್ತು ಎರಡು ಸ್ವತಂತ್ರ ಪ್ರಯೋಗಾಲಯಗಳ ವರದಿಗಳ ನಡುವೆ ಇರುವ ಈ ವ್ಯತ್ಯಾಸವನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಬಿಸ್ಲೆರಿ ಹೇಳಿದೆ. ಪರೀಕ್ಷಾ ಫಲಿತಾಂಶದಲ್ಲಿ ವ್ಯತ್ಯಾಸ ಬರಲು ಕಾರಣವಾಗಿರಬಹುದಾದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ, ಪರೀಕ್ಷಾ ವಿಧಾನ, ಪ್ರಯೋಗಾಲಯದ ವರದಿಗಳು ಹಾಗೂ ಇತರ ಎಲ್ಲಾ ಅಂಶಗಳನ್ನು ಪರಿಶೀಲಿಸುವಂತೆ ಕಂಪನಿ ಎಫ್ಎಸ್ಎಸ್ಎಐಗೆ ಮನವಿ ಮಾಡಿದೆ.
ಇಡೀ ಉದ್ಯಮಕ್ಕೆ ಅನ್ವಯವಾಗುವ ಒಂದೇ ರೀತಿಯ ಮಾನದಂಡದ ಅಡಿಯಲ್ಲಿ ಈ ಪ್ರಕರಣ ವನ್ನು ಮೌಲ್ಯಮಾಪನ ಮಾಡಬೇಕು ಎಂದು ನಿರೀಕ್ಷಿಸುವುದಾಗಿ ತಿಳಿಸಿರುವ ಬಿಸ್ಲೆರಿ, ಸತ್ಯಾಂಶ ವನ್ನು ಹೊರತರಲು ಎಫ್ಎಸ್ಎಸ್ಎಐಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.
ಕುಡಿಯುವ ನೀರಿನ ಸುರಕ್ಷತೆಗೆ ತಮ್ಮ ಕಂಪನಿ ಮೊದಲ ಆದ್ಯತೆ ನೀಡುತ್ತದೆ ಎಂದು ತಿಳಿಸಿರುವ ಬಿಸ್ಲೆರಿ, ತನ್ನ 10 ಹಂತಗಳ ತಯಾರಿಕಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಹಾಗೂ ಬಿಸ್ಲೆರಿ ನೀರು ಕುಡಿಯಲು ಸುರಕ್ಷಿತವಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.