GST Notice: ಸಣ್ಣ ಪುಟ್ಟ ವ್ಯಾಪಾರಿಗಳಿಗೂ GST ನೋಟಿಸ್ ಬಂತಾ? ಹಾಗಾದ್ರೆ ಪರಿಹಾರ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯವರು ಬೇಕರಿ, ಕಾಂಡಿಮೆಂಟ್ಸ್, ಟೀ ಶಾಪ್ ನಡೆಸುತ್ತಿರುವವರಿಗೆ 30-40 ಲಕ್ಷದ ಲೆಕ್ಕದಲ್ಲಿ ಜಿಎಸ್‌ಟಿ ಕಟ್ಟಬೇಕು ಎಂದು ನೋಟಿಸ್ ಕಳಿಸುತ್ತಿರುವುದು ವಿವಾದ ಸೃಷ್ಟಿಸಿದೆ. ಹಾಗಾದರೆ ಇಂಥ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳು ಏನು ಮಾಡಬಹುದು?


ಕೇಶವಪ್ರಸಾದ.ಬಿ
ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯವರು ಬೇಕರಿ, ಕಾಂಡಿಮೆಂಟ್ಸ್, ಟೀ ಶಾಪ್ ನಡೆಸುತ್ತಿರುವವರಿಗೆ 30-40 ಲಕ್ಷದ ಲೆಕ್ಕದಲ್ಲಿ ಜಿಎಸ್‌ಟಿ (GST Notice) ಕಟ್ಟಬೇಕು ಎಂದು ನೋಟಿಸ್ ಕಳಿಸುತ್ತಿರುವುದು ವಿವಾದ ಸೃಷ್ಟಿಸಿದೆ. ಹಾಗಾದರೆ ಇಂಥ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳು ಏನು ಮಾಡಬಹುದು? ಪರ್ಯಾಯ ಮಾರ್ಗವೇನದರೂ ಜಿಎಸ್ ಟಿ ಕಾಯಿದೆಯಲ್ಲಿ ಇದೆಯೇ? ಎಂಬ ವಿವರಗಳು ಇಲ್ಲಿವೆ.
ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಾರ್ಷಿಕ 40 ಲಕ್ಷ ರುಪಾಯಿ ತನಕ ವಹಿವಾಟು ನಡೆಸುವವರಿಗೆ ಯಾವುದೇ ಜಿಎಸ್‌ಟಿ ಇರುವುದಿಲ್ಲ. ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. 40 ಲಕ್ಷ ರುಪಾಯಿ ದಾಟಿದ ಬಳಿಕ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ.
ಈಗಂತೂ ಜನ ಯುಪಿಐಗಳನ್ನು ಧಾರಾಳವಾಗಿ ಬಳಸುವುದರಿಂದ ಹಣಕಾಸು ವರ್ಗಾವಣೆಗಳ ವಿವರಗಳು ಸಿಗುತ್ತವೆ. ಇದನ್ನು ಅಧರಿಸಿ ವಾಣಿಜ್ಯ ತೆರಿಗೆ ಇಲಾಖೆಯು ವಹಿವಾಟನ್ನು ಅಂದಾಜಿಸುತ್ತದೆ ಹಾಗೂ 40 ಲಕ್ಷಕ್ಕೂ ಹೆಚ್ಚು ಹಣಕಾಸು ವರ್ಗಾವಣೆಗಳಾಗಿದ್ದರೆ ನೋಟಿಸ್ ಕಳಿಸುವುದು ಸ್ವಾಭಾವಿಕ. ಅದೇ ರೀತಿ ನೋಟಿಸ್ ಬಂದ ತಕ್ಷಣ ಗಾಬರಿ ಬೀಳುವ ಅವಶ್ಯಕತೆ ಇಲ್ಲ. ಹಣಕಾಸು ಟ್ರಾನ್ಸಕ್ಷನ್ ಬಗ್ಗೆ ವಿವರಗಳನ್ನು, ನಿಮ್ಮ ಸಮರ್ಥನೆಗಳನ್ನು ನೀಡಿದರಾಯಿತು.
ಇದು ಒಂದು ವಿಚಾರವಾದರೆ, ಮತ್ತೊಂದು ಮಹತ್ವದ ವಿಷಯ ಏನೆಂದರೆ, ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಈಗಾಲೇ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಎಂಬ ಯೋಜನೆ ಇದೆ.
ಏನಿದು ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್? ಇದರಿಂದ ಸಣ್ಣ ವ್ಯಾಪಾರಿಗಳಿಗೆ ಏನು ಲಾಭ?
ಈ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವಾರ್ಷಿಕ 1.50 ಕೋಟಿ ರುಪಾಯಿ ತನಕ ವಹಿವಾಟು ನಡೆಸುವ ವ್ಯಾಪಾರಿಗಳು ಒಟ್ಟು 1% ರಿಂದ 6% ಜಿಎಸ್‌ಟಿ ಪಾವತಿಸಿದರೆ ಸಾಕಾಗುತ್ತದೆ. ಉದಾಹರಣೆಗೆ ಸಣ್ಣ ವ್ಯಾಪಾರಿಯೊಬ್ಬ ವರ್ಷಕ್ಕೆ ಒಂದೂವರೆ ಕೋಟಿ ರುಪಾಯಿಗಳಷ್ಟು ವ್ಯಾಪಾರ ಮಾಡಿದರೂ, ಒಂದೂವರೆ ಲಕ್ಷ ರುಪಾಯಿ ಜಿಎಸ್‌ಟಿ ಕಟ್ಟಿದರೆ ಸಾಕಾಗುತ್ತದೆ. ಹೀಗಾಗಿ ಬಹುಪಾಲು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಇದು ಭಾರಿ ಅನುಕೂಲಕರವಾಗಲಿದೆ. ಮತ್ತು ಜಿಎಸ್ ಟಿಯೂ ಹಗುರವಾಗಲಿದೆ. ಆದರೆ ಅನೇಕ ಮಂದಿಗೆ ಜಿಎಸ್‌ಟಿ ಅಡಿಯಲ್ಲಿ ಇಂಥದ್ದೊಂದು ಅನುಕೂಲಕರ ಯೋಜನೆ ಇದೆ ಎಂಬುದರ ಅರಿವೇ ಇರರುವುದಿಲ್ಲ. ಹೀಗಾಗಿ 30-40 ಲಕ್ಷದ ತೆರಿಗೆ ಬೇಡಿಕೆಯ ನೋಟಿಸ್‌ಗೆ ಆತಂಕಿತರಾಗಿದ್ದಾರೆ.
ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್‌ನ ಹೈಲೈಟ್ಸ್
- ವಾರ್ಷಿಕ 1.50 ಕೋಟಿ ರುಪಾಯಿ ವಹಿವಾಟಿಗೆ 1% ಜಿಎಸ್‌ಟಿ
- ಸರಳ ಮತ್ತು ಸುಲಭ ಯೋಜನೆ
- ಇಲ್ಲಿ ಜಿಎಸ್‌ಟಿ ಫಿಕ್ಸೆಡ್ ರೇಟ್‌ನಲ್ಲಿ ಇರುತ್ತದೆ.
- ವಾರ್ಷಿಕ 1.50 ಕೋಟಿಯ ಒಳಗಿನ ವ್ಯವಹಾರಸ್ಥರಿಗೆ ಅನುಕೂಲಕರ.
- ಒಂದೂವರೆ ಕೋಟಿ ವ್ಯವಹಾರ ನಡೆಸಿದ್ರೂ, 1.50 ಲಕ್ಷ ರುಪಾಯಿ ಮಾತ್ರ ಜಿಎಸ್‌ಟಿ
- ಈಶಾನ್ಯ ರಾಜ್ಯಗಳು ಮತ್ತು ಹಿಮಾಚಲ ಪ್ರದೇಶದಲ್ಲಿದ ವ್ಯಾಪಾರಿಗಳಿಗೆ ವಾರ್ಷಿಕ 75 ಲಕ್ಷ ರುಪಾಯಿಗಳ ವಹಿವಾಟು ಮಿತಿ ತನಕ 1% ಜಿಎಸ್‌ಟಿ ಇರುತ್ತದೆ.7. ಹೀಗಿದ್ದರೂ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಇದರಲ್ಲಿ ಸಿಗುವುದಿಲ್ಲ.
- ಜಿಎಸ್ಟಿಯಿಂದ ಹೊರಗಿರುವ ಆಲ್ಕೊಹಾಲ್ ಅಥವಾ ಮದ್ಯ ಮಾರಾಟಕ್ಕೆ ಈ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಅನ್ವಯವಾಗಲ್ಲ.
- ಸೇವೆಗಳನ್ನು ಒದಗಿಸುವ ವ್ಯಾಪಾರಿಗಳಿಗೆ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವಹಿವಾಟು ಮಿತಿ ವಾರ್ಷಿಕ 50 ಲಕ್ಷ ರುಪಾಯಿಗಳಾಗಿದೆ.
ಈ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ಉತ್ಪಾದಕರು ಮತ್ತು ವ್ಯಾಪಾರಿಗಳಿಗೆ 1 % ಜಿಎಸ್‌ಟಿ ದರ ಇರುತ್ತದೆ. ಹಾಗೂ ಇದರಲ್ಲಿ 0.5% ಸಿಜಿಎಸ್‌ಟಿ ಮತ್ತು 0.5% ಎಸ್‌ಜಿಎಸ್‌ಟಿ ಆಗಿರುತ್ತದೆ. ಅಂದ್ರೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಮಾನವಾಗಿ ಹಂಚಿಕೆಯಾಗುತ್ತದೆ.
ಮದ್ಯಪಾನ ಸರಬರಾಜು ಮಾಡದಿರುವ ರೆಸ್ಟೊರೆಂಟ್ ನಡೆಸುತ್ತಿದ್ದರೆ ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ 5% ತೆರಿಗೆ ಇರುತ್ತದೆ.
ಇತರ ಸೇವೆಗಳಿಗೆ 6% ಟ್ಯಾಕ್ಸ್ ಇರುತ್ತದೆ.
ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್‌ನ ಅನುಕೂಲವೇನು?
- ವಾರ್ಷಿಕ ಒಂದೂವರೆ ಕೋಟಿ ರುಪಾಯಿ ಒಳಗಿನ ವಹಿವಾಟು ಮಾಡುಬಹುದಾದ ಸಣ್ಣ ವ್ಯಪಾರಿಗಳಿಗೆ ಉಪಯುಕ್ತ.
- - ಜಿಎಸ್‌ಟಿ ಪ್ರಕ್ರಿಯೆ ಸರಳ. ರಿಟರ್ನ್ಸ್, ರೆಕಾರ್ಡ್ ಬುಕ್ ನಿರ್ವಹಣೆ, ಇನ್‌ವಾಯ್ಸ್ ಅಗತ್ಯ ಇರುವುದಿಲ್ಲ.
- - ಜಿಎಸ್‌ಟಿ ಟ್ಯಾಕ್ಸ್ ಕೂಡ ಕಡಿಮೆಯಾಗುತ್ತದೆ.
- - ಕಡಿಮೆ ತೆರಿಗೆಯಾದ್ದರಿಂದ ಲಿಕ್ವಿಡಿಟಿ ಹೆಚ್ಚು.
- - ಸಾಮಾನ್ಯ ಜಿಎಸ್‌ಟಿಯಲ್ಲಿ 5% ರಿಂದ 28% ತನಕ ಜಿಎಸ್‌ಟಿ ಇರುತ್ತದೆ. ಆದರೆ ಕಂಪೊಸಿಶನ್ ಸ್ಕೀಮ್‌ನಲ್ಲಿ 1-6% ಮಾತ್ರ.
ಜಿಎಸ್‌ಟಿ ಕಂಪೊಸಿಶನ್ ಸ್ಕೀಮ್‌ನ ಅನಾನುಕೂಲವೇನು?
- - ಅಂತಾರಾಜ್ಯ ಬಿಸಿನೆಸ್ ನಡೆಸಲು ಸಾಧ್ಯವಾಗುವುದಿಲ್ಲ.
- - ರಾಜ್ಯದ ಒಳಗೆ ಮಾತ್ರ ಅನ್ವಯಯ.
- - ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗುವುದಿಲ್ಲ.
ಸಣ್ಣ ವ್ಯಾಪಾರಿಗಳಿಗೆ ಈ ಜಿಎಸ್ ಟಿ ಕಂಪೊಸಿಶನ್ ಸ್ಕೀಮ್ ಹೇಗೆ ಪ್ರಯೋಜನವಾಗುತ್ತದೆ ಎಂಬುದಕ್ಕೆ ಉದಾಹರಣೆ ನೋಡೋಣ.
ರಾಮ್ ಎನ್ನುವವರು ವಾಚುಗಳ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ ಎಂದು ಇಟ್ಟುಕೊಳ್ಳಿ. ಅವರ ವಹಿವಾಟು ವಾರ್ಷಿಕ 40 ಲಕ್ಷ ರುಪಾಯಿಗಿಂತ ಹೆಚ್ಚು ಹಾಗೂ ಒಂದೂವರೆ ಕೋಟಿ ರುಪಾಯಿ ಒಳಗಿದೆ. ಆಗ ಅವರಿಗೆ ಸಾಮಾನ್ಯ ಲೆಕ್ಕದಲ್ಲಿ 18% ಜಿಎಸ್‌ಟಿ ಇದ್ದರೆ, ಕಂಪೊಸಿಶನ್ ಸ್ಕೀಮ್ ಅಡಿಯಲ್ಲಿ ಕೇವಲ 1 % ಜಿಎಸ್‌ಟಿ ಪಾವತಿಸಿದರೆ ಸಾಕು.
ಈ ಸುದ್ದಿಯನ್ನೂ ಓದಿ: Stock Market: ಜಿಯೊ ಫೈನಾನ್ಷಿಯಲ್ ಸ್ಟಾಕ್ 1 ತಿಂಗಳಿನಲ್ಲಿ 18% ಹೈ ಜಂಪ್
ಕಂಪೊಸಿಶನ್ ಸ್ಕೀಮ್ ಪಡೆಯುವುದು ಹೇಗೆ?
ಜಿಎಸ್‌ಟಿ ಅಡಿ ನೋಂದಣಿಯಾಗಿರಬೇಕು. ಬಳಿಕ ಜಿಎಸ್‌ಟಿ CMP-02 file ಮಾಡಬೇಕು. ಜಿಎಸ್‌ಟಿ ವೆಬ್ ಪೋರ್ಟಲ್‌ನಲ್ಲಿ ಆನ್ ಲೈನ್ ಮೂಲಕ ಇದನ್ನು ಮಾಡಬೇಕು. ಪಾನ್ ಮಸಾಲಾ, ತಂಬಾಕು, ಮದ್ಯದ ಉತ್ಪನ್ನಗಳ ಮಾರಾಟದಲ್ಲಿ ಈ ಕಂಪೊಸಿಶನ್ ಸ್ಕೀಮ್ ಇರುವುದಿಲ್ಲ.
ಬೇಕರಿ ಉತ್ಪನ್ನಗಳಿಗೆ ಜಿಎಸ್‌ಟಿ ಎಷ್ಟು ಇರುತ್ತದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಜಿಎಸ್‌ಟಿ ಕಾಯಿದೆಯ ಪ್ರಕಾರ ಅನ್ ಬ್ರಾಂಡೆಡ್ ಫ್ರೆಶ್ ಬ್ರೆಡ್‌ಗೆ 5% ಜಿಎಸ್‌ಟಿ ಇದೆ.
ಪ್ಯಾಕೇಜ್ಡ್ ಬ್ರೆಡ್, ಕೇಕ್, ಬಿಸ್ಕತ್, ಬಹುತೇಕ ಬೇಕರಿ ಐಟಮ್‌ಗಳಿಗೆ 18% ಜಿಎಸ್‌ಟಿ ಇರುತ್ತದೆ.