Dharmasthala Sathya Yatre: ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾದ ನಿಖಿಲ್ ಕುಮಾರಸ್ವಾಮಿ
Nikhil Kumaraswamy: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ವಿರೋಧಿಸಿ ಹಾಸನದಿಂದ ಧರ್ಮಸ್ಥಳವರೆಗೆ ಶನಿವಾರ ʼಜೆಡಿಎಸ್ ಸತ್ಯಯಾತ್ರೆʼ ಹಮ್ಮಿಕೊಳ್ಳಲಾಗಿತ್ತು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸತ್ಯಯಾತ್ರೆಯಲ್ಲಿ ದಳ ಶಾಸಕರು, ವಿವಿಧ ನಾಯಕರು ಸೇರಿ ನೂರಾರು ಕಾರ್ಯಕರ್ತರು, ಭಕ್ತರು ಭಾಗಿಯಾಗಿದ್ದರು.

-

ಬೆಳ್ತಂಗಡಿ: ಧರ್ಮಸ್ಥಳ ಸತ್ಯಯಾತ್ರೆ (Dharmasthala Sathya Yatre) ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ದಳ ಪ್ರಮುಖ ನಾಯಕರು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ವಿರೋಧಿಸಿ ಹಾಸನದಿಂದ ಧರ್ಮಸ್ಥಳವರೆಗೆ ಶನಿವಾರ ʼಜೆಡಿಎಸ್ ಸತ್ಯಯಾತ್ರೆʼ ಹಮ್ಮಿಕೊಳ್ಳಲಾಗಿತ್ತು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಸತ್ಯಯಾತ್ರೆಯಲ್ಲಿ ದಳ ಶಾಸಕರು, ವಿವಿಧ ನಾಯಕರು ಸೇರಿ ನೂರಾರು ಕಾರ್ಯಕರ್ತರು, ಭಕ್ತರು ಭಾಗಿಯಾಗಿದ್ದರು. ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಪಡೆದ ನಂತರ ದಳ ನಾಯಕರು, ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ
ಇದಕ್ಕೂ ಮೊದಲು ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ದೇವರ ದರ್ಶನವನ್ನು ಪಡೆದಿದ್ದೇವೆ. ಹಾಲಿ ಮತ್ತು ಮಾಜಿ ಎಂಎಲ್‌ಎ, ಎಂಎಲ್‌ಸಿಗಳು ಸತ್ಯಯಾತ್ರೆಗೆ ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೂ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಿದ್ದೇನೆ. ಧರ್ಮ ಉಳಿಯಬೇಕು ಎಂದು ಯಾತ್ರೆ ಮಾಡಿದ್ದೇವೆ. ರಾಜಕೀಯಕ್ಕೆ ನಾವು ಯಾತ್ರೆ ಮಾಡಿಲ್ಲ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆಗುತ್ತಿದೆ. ಧರ್ಮಾಧಿಕಾರಿಗಳ ಮನಸ್ಸಿಗೆ ಬೇಸರ, ನೋವಾಗಿದ್ದರೂ ತೋರಿಸಿಕೊಟ್ಟಿಲ್ಲ. ಭಗವಂತ ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು.

ಎಚ್‌ಡಿಕೆ ಅವರು ಹೆಗ್ಗಡೆಯವರಿಗೆ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಷಡ್ಯಂತ್ರ ಪದ ಬಳಕೆ ಮಾಡಿದ್ದು ನಾವಲ್ಲ, ಡಿಸಿಎಂ ಅವರು ಪದ ಬಳಕೆ ಮಾಡಿದ್ದಾರೆ. ಎಸ್‌ಐಟಿ ತರಾತುರಿಯಲ್ಲಿ ರಚನೆ ಆಗಬಾರದಿತ್ತು ಎಂದು ಎಲ್ಲರೂ ಹೇಳ್ತಾರೆ. ಕ್ಷೇತ್ರದ ಗೌರವ ಕಳೆಯುವ ಕೆಲಸ ಸರ್ಕಾರ ಮಾಡುತ್ತಿದೆ. ಬುರುಡೆ ತಂದಾಗ ಅವನನ್ನು ತನಿಖೆ ಮಾಡಬೇಕಿತ್ತು. ಅದನ್ನು ಸರ್ಕಾರ ಮಾಡಿಲ್ಲ ಇದನ್ನು ನೋಡಿದರೆ ಇದ ಹಿಂದೆ ಒಬ್ಬರು ಇಬ್ಬರು ಅಲ್ಲ. ದೊಡ್ಡ ಸಂಸ್ಥೆಗಳೇ ಇವೆ. ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ವಿದೇಶದಿಂದ ಹಣ ಬಂದಿದೆ. ಕೇಂದ್ರದ ತನಿಖಾ ಸಂಸ್ಥೆ ಎನ್‌ಐಎ ಮೂಲಕ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | Girish Mattannavar: ಧರ್ಮಸ್ಥಳ ಸಾಮೂಹಿಕ ವಿವಾಹದ ಬಗ್ಗೆ ಅವಹೇಳನ; ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು, ಶಾಸಕರಾದ ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ದೇವದುರ್ಗ ಶಾಸಕರಾದ ಕರೇಯಮ್ಮ ನಾಯಕ್, ಶಾಸಕಿ ಶಾರದಾ ಪೂರ್ಯನಾಯ್ಕ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ , ಕೆ.ಆರ್. ಪೇಟೆ ಶಾಸಕ ಶ್ರೀ ಮಂಜುನಾಥ್, ಶಾಸಕ ನೇಮಿರಾಜ್ ನಾಯಕ್ ಸೇರಿ ನೂರಾರು ಮಂದಿ ಭಾಗಿಯಾಗಿದ್ದರು.