ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain: ಉತ್ತರಾಖಂಡದಲ್ಲಿ ನಿರಂತರ ಮಳೆಗೆ ಕೊಚ್ಚಿ ಹೋದ ಭಾರತ-ಚೀನಾ ನಡುವಿನ ಸಂಪರ್ಕ ಸೇತುವೆ

ಉತ್ತರಾಖಂಡದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ತಮಕ್ ಬಳಿಯ ಜ್ಯೋತಿರ್ಮಠ- ಮಲಾರಿ ಹೆದ್ದಾರಿಯಲ್ಲಿರುವ ಪ್ರಮುಖ ಸೇತುವೆ ಭಾನುವಾರ ಬೆಳಗಿನ ಮುಂಜಾನೆ 2 ಗಂಟೆಯ ಸುಮಾರಿಗೆ ಕೊಚ್ಚಿ ಹೋಗಿದೆ. ಅಲಕಾನಂದದ ಉಪನದಿಯಾದ ಧೌಲಿಗಂಗಾ ದಡದ ಬಳಿ ಈ ಘಟನೆ ಸಂಭವಿಸಿದೆ. ಇದರಿಂದ ಭಾರತ- ಚೀನಾ ನಡುವಿನ ಸಂಪರ್ಕ ಕಡಿತಗೊಂಡಿದೆ.

ಉತ್ತರಾಖಂಡದಲ್ಲಿ ಭಾರಿ ಮಳೆ: ಕೊಚ್ಚಿ ಹೋದ ಪ್ರಮುಖ ಸೇತುವೆ

-

ಡೆಹ್ರಾಡೂನ್‌: ನಿರಂತರ ಮಳೆಯು (Heavy Rain) ಉತ್ತರಾಖಂಡದಲ್ಲಿ (Uttarakhand) ಭಾರಿ ವಿನಾಶವನ್ನು ಉಂಟು ಮಾಡುತ್ತಿದೆ. ಇದೀಗ ಭಾರಿ ಮಳೆಯಿಂದಾಗಿ ಭಾರತ ಮತ್ತು ಚೀನಾ (India-China link bridge) ನಡುವಿನ ಸಂಪರ್ಕ ಕೊಂಡಿಯಾದ ಪ್ರಮುಖ ಸೇತುವೆಯೊಂದು ಕೊಚ್ಚಿ ಹೋಗಿದೆ. ಇದರ ಪರಿಣಾಮ ಹಲವು ಹೆದ್ದಾರಿಗಳು ಮುಚ್ಚಲ್ಪಟ್ಟಿವೆ. ಚಮೋಲಿ ಜಿಲ್ಲೆಯ (Chamoli district) ತಮಕ್ ಬಳಿಯ ಜ್ಯೋತಿರ್ಮಠ- ಮಲಾರಿ ಹೆದ್ದಾರಿಯಲ್ಲಿರುವ ಪ್ರಮುಖ ಸೇತುವೆ ಕೊಚ್ಚಿ ಹೋಗಿದ್ದು, ಇದು ಭಾರತ ಮತ್ತು ಚೀನಾವನ್ನು ನೇರವಾಗಿ ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದೆ. ಇದರಿಂದಾಗಿ ಹಲವಾರು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಂತಾಗಿದೆ.

ತಮಕ್ ಬಳಿಯ ಜ್ಯೋತಿರ್ಮಠ- ಮಲಾರಿ ಹೆದ್ದಾರಿಯಲ್ಲಿರುವ ಪ್ರಮುಖ ಸೇತುವೆ ಭಾನುವಾರ ಬೆಳಗಿನ ಮುಂಜಾನೆ 2 ಗಂಟೆಯ ಸುಮಾರಿಗೆ ತಮಕ್ ಹೊಳೆಯಲ್ಲಿನ ಉಬ್ಬರದಿಂದಾಗಿ ಕೊಚ್ಚಿ ಹೋಗಿದೆ. ಅಲಕಾನಂದದ ಉಪನದಿಯಾದ ಧೌಲಿಗಂಗಾ ದಡದ ಬಳಿ ಈ ಘಟನೆ ಸಂಭವಿಸಿದೆ.

ಯಾವುದೇ ರೀತಿಯ ಸಾವುನೋವಿನ ವರದಿಯಾಗದೇ ಇದ್ದರೂ ಇದರ ದುರಸ್ತಿಗೆ ಹೆಚ್ಚಿನ ಸಮಯ ತಗಲುವ ಸಾಧ್ಯತೆ ಇದೆ. ನೆರೆಯ ಬಿಆರ್‌ಒ ರಸ್ತೆಯ ಒಂದು ಭಾಗವೂ ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಭೂಕುಸಿತಗಳಿಂದಾಗಿ ಉತ್ತರಾಖಂಡದ ಹಲವಾರು ಪ್ರಮುಖ ಹೆದ್ದಾರಿಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಚಮೋಲಿ ಮತ್ತು ಜ್ಯೋತಿರ್ಮಠ ನಡುವಿನ ಭನಿರ್ಪಾನಿ ​​ಮತ್ತು ಪಾಗ್ಲಾನಾಲದಲ್ಲಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆ ಉಂಟಾಗಿದ್ದು, ಭಾರಿ ಯಂತ್ರೋಪಕರಣಗಳನ್ನು ಬಳಸಿಕೊಂಡು ತುರ್ತು ತೆರವು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ.

ಕೇದಾರನಾಥವನ್ನು ಚಮೋಲಿಗೆ ಸಂಪರ್ಕಿಸುವ ಕುಂಡ್- ಚಮೋಲಿ ರಾಷ್ಟ್ರೀಯ ಹೆದ್ದಾರಿಯ ಬೈರಾಗನ ಬಳಿ ಭೂಕುಸಿತದ ಅನಂತರ ರಸ್ತೆಯನ್ನು ಮುಚ್ಚಲಾಗಿದೆ.



ಯಮುನೋತ್ರಿ ಧಾಮಕ್ಕೆ ಹೋಗುವ ತೀರ್ಥಯಾತ್ರೆಯ ಮಾರ್ಗವೂ ಅಪಾಯದಲ್ಲಿದೆ. ಉತ್ತರಕಾಶಿಯಲ್ಲಿ, ಯಮುನಾ ನದಿಯ ಏರುತ್ತಿರುವ ನೀರು ಶ್ಯಾನಾ ಚಟ್ಟಿಯಲ್ಲಿರುವ ಸೇತುವೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ವಾಹನ ಸಂಚಾರ ಕಡಿತಗೊಂಡಿದೆ.

ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಯಲ್ಲಿ ಮಳೆಯಿಂದ ಅತೀ ಹೆಚ್ಚು ಹಾನಿಯಾಗಿದೆ. ದೇವಲ್‌ನ ಮೊಪಾಟಾ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಇಬ್ಬರು ನಾಪತ್ತೆಯಾಗಿದ್ದಾರೆ. ದನದ ಕೊಟ್ಟಿಗೆಯೊಂದು ನಾಶವಾಗಿದ್ದು, ಅದರಡಿಯಲ್ಲಿ 15- 20 ಪ್ರಾಣಿಗಳು ಹೂತು ಹೋಗಿವೆ ಎನ್ನಲಾಗಿದೆ.

ಇದನ್ನೂ ಓದಿ: Ganesh Chaturthi 2025: ಬಾಂಬೆ ಟೈಮ್ಸ್ ಗಣೇಶ ಮಹೋತ್ಸವಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಬಾಲಿವುಡ್‌ ಸೆಲೆಬ್ರಿಟಿಗಳು

ರುದ್ರಪ್ರಯಾಗದಲ್ಲಿ ಅಲಕಾನಂದ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಹಲವು ಮನೆಗಳು ಮುಳುಗಡೆಯಾಗಿವೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪಟ್ಟಣದ ಪವಿತ್ರ ಹನುಮಾನ್ ದೇವಾಲಯವು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ರಾಜ್ಯದಲ್ಲಿ ಈವರೆಗೆ ಮಳೆಯಿಂದಾಗಿ ಸುಮಾರು ಐದು ಮಂದಿ ಸಾವನ್ನಪ್ಪಿದ್ದು, 11 ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.