ಕೇಶವಪ್ರಸಾದ.ಬಿ
ಮುಂಬೈ: ವೇಗವಾಗಿ ಬೆಳೆಯುತ್ತಿರುವ 5 PSU stocks ಬಗ್ಗೆ ತಿಳಿದುಕೊಳ್ಳೋಣ. 2026ರ ವಾಚ್ ಲಿಸ್ಟ್‌ಗೆ ಇವುಗಳನ್ನು (Stock Market) ಸೇರಿಸಿಕೊಳ್ಳಬಹುದು. ಈಕ್ವಿಟಿ ಮಾಸ್ಟರ್ ಈ ಪಟ್ಟಿಯನ್ನು ರಚಿಸಿದೆ. ಸಾರ್ವಜನಿಕ ವಲಯದ ಈ ಕಂಪನಿಗಳು ಕಳೆದ ಕೆಲವು ವರ್ಷಗಳಿಂದ, ಮುಖ್ಯವಾಗಿ 2023ರಿಂದೀಚೆಗೆ ಉತ್ತಮ ಪರ್ಫಾಮೆನ್ಸ್ ನೀಡುತ್ತಿವೆ. ರಕ್ಷಣೆ, ವಿದ್ಯುತ್, ರೈಲ್ವೆ ಮೊದಲಾದ ಸೆಕ್ಟರ್‌ಗಳಲ್ಲಿ ರಚನಾತ್ಮಕ ಸುಧಾರಣೆಯಾಗುತ್ತಿದೆ. ಸಾರ್ವಜನಿಕ ವಲಯದ ಕಂಪನಿಗಳ ಪ್ರದರ್ಶನವು ಬಿಎಸ್‌ಯು ಪಿಎಸ್‌ಯು ಇಂಡೆಕ್ಸ್‌ನಲ್ಲಿ ಪ್ರತಿಫಲನವಾಗುತ್ತಿದೆ. 2023ರ ಆಗಸ್ಟ್ 25ರಲ್ಲಿ 11,549 ಅಂಕ ಗಳಿಸಿದ್ದ ಬಿಎಸ್‌ಇ ಪಿಎಸ್‌ಯು ಇಂಡೆಕ್ಸ್, ಕಳೆದ ಎರಡು ವರ್ಷಗಳಲ್ಲಿ 64% ಗಳಿಸಿದೆ.
- ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನೀರ್ಸ್
Garden Reach Shipbuilders & Engineers
ಷೇರಿನ ಈಗಿ ದರ: 2,428/-
ರಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿರುವ ಹಾಗೂ ಯುದ್ಧ ನೌಕೆಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳಲ್ಲಿ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನೀರ್ಸ್ ಮುಂಚೂಣಿಯಲ್ಲಿದೆ. ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಫ್ರೈಗೇಟ್ಸ್, ಫ್ಲೀಟ್ ಟ್ಯಾಂಕರ್ಸ್, ಕೋರ್‌ವೆಟ್ಸ್ ಇವೆ. ಹಡಗುಗಳ ನಿರ್ಮಾಣ, ದುರಸ್ತಿ, ಎಂಜಿನ್ ಉತ್ಪಾದನೆ, ಎಂಜಿನಿಯರಿಂಗ್ ಚಟುವಟಿಕೆಗಳನ್ನು ನಡೆಸುತ್ತದೆ.
ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಕಳೆದ ಮೂರು ವರ್ಷಗಳಲ್ಲಿ 46.6% ಸರಾಸರಿಯಲ್ಲಿ ಸೇಲ್ಸ್ ಗ್ರೋತ್ ರೇಟ್ ದಾಖಲಿಸಿದೆ. ನಿವ್ವಳ ಲಾಭದ ಸಿಎಜಿಆರ್ 32.5% ಏರಿಕೆಯಾಗಿದೆ.
2025ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 1,309 ಕೋಟಿ ರುಪಾಯಿ ಆದಾಯ ಗಳಿಸಿದೆ. 120 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಂಪನಿಯ ಆರ್ಡರ್ ಬುಕ್ ಕೂಡ ಉತ್ತಮವಾಗಿದೆ.
ಐಆರ್‌ಇಡಿಎ
IREDA ( ಇಂಡಿಯನ್ ರಿನೆವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ)
ಷೇರಿನ ಈಗಿನ ದರ: 145/-
ಸಾರ್ವಜನಿಕ ವಲಯದ ಐಆರ್‌ಇಡಿಎ ನಾನ್-ಬ್ಯಾಂಕಿಂಗ್ ಫೈನಾನ್ಷಿಯಲ್ ಇನ್‌ಸ್ಟಿಟ್ಯೂಷನ್ ಆಗಿದ್ದು, 1987ರಲ್ಲಿ ಸ್ಥಾಪನೆಯಾಗಿದೆ. ನವೀಕರಿಸಬಹುದಾದ ಇಂಧನಗಳಿಗೆ ಸಂಬಂಧಿಸಿದ ಪ್ರಾಜೆಕ್ಟ್‌ಗಳಿಗೆ ಹಣಕಾಸು ನೆರವನ್ನು IREDA ನೀಡುತ್ತದೆ. ಗ್ರೀನ್ ಎನರ್ಜಿ ಟೆಕ್ನಾಲಜಿಗೆ ಸಂಬಂಧಿಸಿದ ಯೋಜನೆಗಳಿಗೂ ಹಣಕಾಸು ನೆರವು ಒದಗಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ 33% ಸಿಎಜಿಆರ್ ಲೆಕ್ಕದಲ್ಲಿ ಬಡ್ಡಿಯನ್ನು ಸಂಪಾದಿಸಿದೆ. IREDA ಎಮರ್ಜಿಂಗ್ ಸೆಕ್ಟರ್‌ಗಳಾದ ಗ್ರೀನ್ ಹೈಡ್ರೋಜನ್, ಇ-ಮೊಬಿಲಿಟಿ, ಎಥೆನಾಲ್ ಉತ್ಪಾದನಾ ಕ್ಷೇತ್ರಗಳಿಗೆ ಕೂಡ ಹಣಕಾಸು ನೆರವನ್ನು ವಿಸ್ತರಿಸಿದೆ. ಸೋಲಾರ್, ಪವನ ಶಕ್ತಿ, ಜಲ ವಿದ್ಯುತ್, ಬಯೊಮಾಸ್ ವಲಯದಲ್ಲಿ ಮುಂಚೂಣಿಯಲ್ಲಿದೆ.
ಕೆನರಾ ಬ್ಯಾಂಕ್
Canara Bank
ಷೇರಿನ ಈಗಿನ ದರ: 106/-
ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿದೆ. 2020ರಲ್ಲಿ ಸಿಂಡಿಕೇಟ್ ಬ್ಯಾಂಕ್ ಇದರ ಜತೆಗೆ ವಿಲೀನವಾಗಿತ್ತು. ಇದರೊಂದಿಗೆ ಭಾರತದ ನಾಲ್ಕನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿ ಹೊರಹೊಮ್ಮಿದೆ.
ಕೆನರಾ ಬ್ಯಾಂಕ್ ಲಂಡನ್, ದುಬೈ ಮತ್ತು ನ್ಯೂಯಾರ್ಕ್‌ನಲ್ಲಿ ಕಚೇರಿಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 4,752 ಕೋಟಿ ರುಪಾಯಿ ನಿವ್ವಳ ಲಾಭವನ್ನು ಗಳಿಸಿದೆ. 21% ಹೆಚ್ಚಳ ದಾಖಲಿಸಿತ್ತು. ಒಟ್ಟು ಅದಾಯವು 34,000 ಕೋಟಿ ರುಪಾಯಿಗಳಿಂದ 38,000 ಕೋಟಿ ರುಪಾಯಿಗೆ ಈ ತ್ರೈಮಾಸಿಕದಲ್ಲಿ ಏರಿತ್ತು. ಕೆನರಾ ಬ್ಯಾಂಕ್ 10,000 ಶಾಖೆಗಳನ್ನು ಒಳಗೊಂಡಿದೆ. ಅನುತ್ಪಾದಕ ಆಸ್ತಿಯ ಪ್ರಮಾಣ ಇಳಿಮುಖವಾಗಿದೆ.
ಮೂಲಸೌಕರ್ಯ, ಕೋರ್ ಇಂಡಸ್ಟ್ರೀಸ್, ಕೃಷಿ, ಎಂಎಸ್‌ಎಂಇ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಸಾಲ ವಿತರಿಸಿದೆ.
ಭಾರತ್ ಎಲೆಕ್ಟ್ರಾನಿಕ್ಸ್
Bharat Electronics
ಷೇರಿನ ಈಗಿನ ದರ: 367/-
ರಕ್ಷಣಾ ವಲಯದ ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ ಪ್ರಾಡಕ್ಟ್‌ಗಳನ್ನು ಉತ್ಪಾದಿಸುತ್ತದೆ. ಅವುಗಳನ್ನು ಮುಖ್ಯವಾಗಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೀಡುತ್ತದೆ.
ಬಿಇಎಲ್‌ನ ಪ್ರಾಡಕ್ಟ್ ಪೋರ್ಟ್‌ಫೋಲಿಯೊ ವೈವಿಧ್ಯಮಯವಾಗಿದೆ. ಅದರಲ್ಲಿ ರಾಡಾರ್‌ಗಳು, ಕ್ಷಿಪಣಿ ಸಿಸ್ಟಮ್‌ಗಳು, ಮಿಲಿಟರಿ ಕಮ್ಯುನಿಕೇಶನ್ಸ್, ಎಲೆಕ್ಟ್ರಾನಿಕ್ ವಾರ್‌ಫೇರ್‌ಗಳು ಇವೆ. ಕಳೆದ ಮೂರು ವರ್ಷಗಳಲ್ಲಿ 15% ಸಿಎಜಿಆರ್ ಲೆಕ್ಕದಲ್ಲಿ ಸೇಲ್ಸ್ ಗ್ರೋತ್ ಆಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬಿಇಎಲ್ 969 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಂಪನಿ ಯಾವುದೇ ಸಾಲವನ್ನು ಹೊಂದಿಲ್ಲ.
5.ಪಂಜಾಬ್ ನ್ಯಾಷನಲ್ ಬ್ಯಾಂಕ್
Punjab National Bank (PNB)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾರ್ವಜನಿಕ ವಲಯದ ಹಳೆಯ ಮತ್ತು ದೊಡ್ಡ ಬ್ಯಾಂಕ್‌ಗಳಲ್ಲೊಂದಾಗಿದೆ. ದೇಶಾದ್ಯಂತ 10,000 ಶಾಖೆಗಳ ಜಾಲವನ್ನು ಹೊಂದಿದೆ. ಸಾವಿರಾರು ಎಟಿಎಂಗಳನ್ನೂ ಒಳಗೊಂಡಿದೆ. ಬ್ರಿಟನ್, ಹಾಂಕಾಂಗ್, ದುಬೈ ಮೊದಲಾದ ಕಡೆ ಶಾಖೆಗಳನ್ನು ಹೊಂದಿದೆ.
ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬ್ಯಾಂಕ್ 1,675 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಅನುತ್ಪಾದಕ ಆಸ್ತಿಯ ಪ್ರಮಾಣವೂ ಕಡಿಮೆಯಾಗಿದೆ.