ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಘೋಷಿಸಿದ ಅಮೆರಿಕ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?

25% Tariff: ಭಾರತದ ಮೇಲೆ ಶೇ. 25ರಷ್ಟು ಸುಂಕ ಮತ್ತು ದಂಡವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿದೆ. ರಷ್ಯಾದಿಂದ ತೈಲ ಮತ್ತು ಮಿಲಿಟರಿ ಶಸ್ತ್ರಾಸ್ತ್ರ ಖರೀದಿಸುವ ಕಾರಣ ಭಾರತ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಘೋಷಿಸಿದ ಅಮೆರಿಕ

Ramesh B Ramesh B Jul 30, 2025 7:46 PM

ವಾಷಿಂಗ್ಟನ್‌: ಅಮೆರಿಕ ಭಾರತದ ಮೇಲೆ ಶೇ. 25ರಷ್ಟು ಸುಂಕ (25% Tariff) ವಿಧಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದನ್ನು ಘೋಷಿಸಿದ್ದಾರೆ. ಆ. 1ರಿಂದ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಜತೆಗೆ ರಷ್ಯಾದಿಂದ ತೈಲ ಮತ್ತು ಮಿಲಿಟರಿ ಶಸ್ತ್ರಾಸ್ತ್ರ ಖರೀದಿಸುವ ಕಾರಣ ಭಾರತ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಟ್ರುಥ್‌ ಸೋಶಿಯಲ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ಮಧ್ಯೆ ಸ್ನೇಹ ಸಂಬಂಧ ಇದೆಯಾದರೂ ಕಡಿಮೆ ವ್ಯವಹಾರ ಮಾಡಿವೆ ಎಂದು ಅವರು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Free Trade Agreement: ಯುಕೆ- ಭಾರತದ ನಡುವೆ ಒಪ್ಪಂದ; ವಿಸ್ಕಿ, ಚಾಕೋಲೆಟ್‌, ಕಾರು ಮತ್ತಷ್ಟು ಚೀಪ್‌!

ಟ್ರಂಪ್‌ ಹೇಳಿದ್ದೇನು?

"ನೆನಪಿಡಿ, ಭಾರತ ನಮ್ಮ ಸ್ನೇಹಿತನಾಗಿದ್ದರೂ ನಾವು ತುಲನಾತ್ಮಕವಾಗಿ ಕಡಿಮೆ ವ್ಯವಹಾರ ನಡೆಸಿದ್ದೇವೆ. ಯಾಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಿವೆ. ವಿಶ್ವದಲ್ಲೇ ಅತ್ಯಧಿಕವಾಗಿವೆ. ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆʼʼ ಎಂದು ಟ್ರಂಪ್‌ ಬರೆದುಕೊಂಡಿದ್ದಾರೆ.

ಮುಂದುವರಿದು, "ಅಲ್ಲದೆ, ಅವರು ಯಾವಾಗಲೂ ತಮ್ಮ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದಲೇ ಖರೀದಿಸಿದ್ದಾರೆ. ಚೀನಾದೊಂದಿಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಆದ್ದರಿಂದ ಭಾರತವು ಆ. 1ರಿಂದ ಶೇ. 25ರಷ್ಟು ಸುಂಕದೊಂದಿಗೆ ದಂಡವನ್ನೂ ಪಾವತಿಸಲಿದೆ. ಈ ವಿಷಯದ ಬಗ್ಗೆ ಗಮನ ಹರಿಸಿದ್ದಕ್ಕೆ ಧನ್ಯವಾದಗಳು" ಎಂದಿದ್ದಾರೆ.

ಅಮೆರಿಕ ಸೆನೆಟರ್ ಲಿಂಡ್ಸೆ ಗ್ರಹಾಂ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ಟ್ರಂಪ್‌ ಕಠಿಣ ಸುಂಕಗಳನ್ನು ವಿಧಿಸುತ್ತಾರೆ ಎಂದು ಎಚ್ಚರಿಸಿದ್ದರು. ಈ ದೇಶಗಳು ಸುಮಾರು ಶೇ. 80ರಷ್ಟು ಅಗ್ಗದ ರಷ್ಯಾದ ತೈಲವನ್ನು ಖರೀದಿಸುತ್ತವೆ ಎಂದು ಅವರು ಹೇಳಿದ್ದರು. ಇದು ವ್ಲಾಡಿಮಿರ್ ಪುಟಿನ್‌ (Vladimir Putin) ಯುದ್ಧವನ್ನುಮುಂದುವರಿಸುವಂತೆ ಮಾಡುತ್ತವೆ ಎಂದಿದ್ದರು. "ಟ್ರಂಪ್ ಆ ಎಲ್ಲ ದೇಶಗಳ ಮೇಲೆ ಶೇ. 100ರಷ್ಟು ಸುಂಕವನ್ನು ವಿಧಿಸಲಿದ್ದಾರೆ. ಪುಟಿನ್ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಶಿಕ್ಷಿಸುತ್ತಾರೆ" ಎಂದು ಅವರು ವಿವರಿಸಿದ್ದರು.

ಸೂಚನೆ ನೀಡಿದ್ದ ಟ್ರಂಪ್‌

ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ್ದ ಟ್ರಂಪ್‌ ಭಾರತವು ಶೇ. 20- 25ರಷ್ಟು ಸುಂಕ ದರಗಳನ್ನು ಎದುರಿಸಲಿದೆ ಎಂದ ಸೂಚನೆ ನೀಡಿದ್ದರು. ʼʼಭಾರತ ನಮ್ಮ ಸ್ನೇಹಿತ. ಅವರು ನನ್ನ ಕೋರಿಕೆಯ ಮೇರೆಗೆ ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು. ಆದರೆ ತೆರಿಗೆ ಸಂಬಂಧ ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿಲ್ಲ. ಭಾರತವು ಇತರ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆʼʼ ಎಂದು ಹೇಳಿದ್ದರು.

ನಕಾರಾತ್ಮಕ ಪರಿಣಾಮ

ಸುಂಕದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ.ಕೆ. ವಿಜಯಕುಮಾರ್, ʼʼಮಾರುಕಟ್ಟೆಯ ಮೇಲಿನ ಒತ್ತಡ ಭಾರತ ಮತ್ತು ಯುಎಸ್ ವ್ಯಾಪಾರ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆʼʼ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.