Free Trade Agreement: ಯುಕೆ- ಭಾರತದ ನಡುವೆ ಒಪ್ಪಂದ; ವಿಸ್ಕಿ, ಚಾಕೋಲೆಟ್, ಕಾರು ಮತ್ತಷ್ಟು ಚೀಪ್!
India-UK Free Trade Agreement:ಯುಕೆ ಮತ್ತು ಭಾರತದ ನಡುವಿನ ಬಹುನಿರೀಕ್ಷಿತ ಒಪ್ಪಂದಕ್ಕೆ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆಯ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಸಹಿ ಹಾಕಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.


ನವದೆಹಲಿ: ಐತಿಹಾಸಿಕ ಮುಕ್ತ-ವ್ಯಾಪಾರ ಒಪ್ಪಂದಕ್ಕೆ (India-UK Free Trade Agreement) ಭಾರತ ಮತ್ತು ಬ್ರಿಟನ್ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುರುವಾರ ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಇದನ್ನು ಅಂತಿಮಗೊಳಿಸಿದರು. ಇದರಿಂದ ಇನ್ನು ಮುಂದೆ ಯುಕೆಯ (United Kingdom) ವಿಸ್ಕಿ, ಚಾಕೊಲೇಟ್, ಕಾರುಗಳು ಸೇರಿದಂತೆ ಹಲವಾರು ವಸ್ತುಗಳು ಭಾರತೀಯರಿಗೆ ಅಗ್ಗವಾಗಲಿದೆ. ಅಲ್ಲದೆ ಜವಳಿ, ರತ್ನ,ಆಭರಣ, ಸಮುದ್ರಾಹಾರ, ಚರ್ಮದ ವಸ್ತುಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ಮಾರಾಟ ಮಾಡುವ ಭಾರತೀಯ ವ್ಯಾಪಾರಿಗಳಿಗೆ (Indian traders) ಯುಕೆ ಮಾರುಕಟ್ಟೆ ಪ್ರವೇಶ ಸುಲಭವಾಗಲಿದೆ.
ಯುಕೆ ಮತ್ತು ಭಾರತದ ನಡುವಿನ ಬಹುನಿರೀಕ್ಷಿತ ಒಪ್ಪಂದಕ್ಕೆ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಯುಕೆಯ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಜೋನಾಥನ್ ರೆನಾಲ್ಡ್ಸ್ ಸಹಿ ಹಾಕಿದ್ದಾರೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಲಂಡನ್ ಭೇಟಿಯ ಸಮಯದಲ್ಲಿ ಈ ಒಪ್ಪಂದವನ್ನು ಔಪಚಾರಿಕವಾಗಿ ಅಂತಿಮಗೊಳಿಸಲಾಯಿತು.
ಇದು ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದವಾಗಿದೆ. ಯುಕೆಗೆ ಇದು ಬ್ರೆಕ್ಸಿಟ್ ನಂತರದ ಮೊದಲ ಪ್ರಮುಖ ಒಪ್ಪಂದವಾಗಿದೆ. ಎರಡು ದೇಶಗಳ ಆರ್ಥಿಕ ಸಂಬಂಧದಲ್ಲಿ ಇಂದೊಂದು ಮೈಲುಗಲ್ಲು ಎನ್ನಲಾಗುತ್ತಿದೆ.
The talks with PM Keir Starmer were outstanding, particularly in the wake of the successful signing of the Comprehensive Economic and Trade Agreement. In addition to economic cooperation, this agreement sets the stage for boosting shared prosperity. @Keir_Starmer… pic.twitter.com/PQD1f2zu2M
— Narendra Modi (@narendramodi) July 24, 2025
ಯಾರಿಗೆ ಪ್ರಯೋಜನ ?
ಈ ಒಪ್ಪಂದದಿಂದಾಗಿ ಭಾರತದ ರೈತರು, ಮೀನುಗಾರರು, ಸಣ್ಣ ವ್ಯವಹಾರ, ವೃತ್ತಿಪರರು, ಪಾಲುದಾರರಿಗೆ ಪ್ರಯೋಜನ ಸಿಗಲಿದೆ. ಇದರಿಂದ ಮುಖ್ಯವಾಗಿ ಭಾರತದ ಜವಳಿ, ರತ್ನ, ಆಭರಣ, ಸಮುದ್ರಾಹಾರ, ಚರ್ಮದ ವಸ್ತುಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಭಾರತೀಯ ರಫ್ತುಗಳು ಇನ್ನು ಮುಂದೆ ಯಾವುದೇ ಸುಂಕವಿಲ್ಲದೆ ಯುಕೆ ಮಾರುಕಟ್ಟೆಯನ್ನು ಪ್ರವೇಶಿಸಬಹುದು.
ಭಾರತೀಯರಿಗೆ ಅಗ್ಗದ ಚಾಕೊಲೇಟ್, ಕಾರುಗಳು..
ಯುಕೆಯಿಂದ ಭಾರತಕ್ಕೆ ರಫ್ತಾಗುವ ವೈದ್ಯಕೀಯ ಸಾಧನಗಳು, ಏರೋಸ್ಪೇಸ್ ಬಿಡಿ ಭಾಗಗಳು, ಕಾರುಗಳು, ವಿಸ್ಕಿ, ಚಾಕೊಲೇಟ್‌ಗಳು ಮತ್ತು ಸೌಂದರ್ಯವರ್ಧಕಗಳು ಕಡಿಮೆ ಸುಂಕಗಳೊಂದಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿಸುವುದರಿಂದ ಇದರ ದರ ಭಾರತದಲ್ಲಿ ಸರಿಸುಮಾರು ಶೇ. 15ರಿಂದ ಶೇ. 3ಕ್ಕೆ ಇಳಿಯಲಿದೆ.
ಈ ಒಪ್ಪಂದದಿಂದಾಗಿ ಪ್ರಮುಖ ಭಾರತೀಯ ರಫ್ತುಗಳ ಮೇಲಿನ ಸುಂಕಗಳನ್ನು ತೆಗೆದುಹಾಕುವುದರಿಂದ ಉದ್ಯೋಗ ಸೃಷ್ಟಿಯಾಗುವುದು. ವೀಸಾ ನಿಯಮಗಳು, ಸಾಮಾಜಿಕ ಭದ್ರತಾ ವ್ಯವಸ್ಥೆ ಸೇರಿದಂತೆ ಭಾರತೀಯ ಸೇವಾ ವೃತ್ತಿಪರರಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಈ ಒಪ್ಪಂದವು ಕೇವಲ ವ್ಯಾಪಾರಕ್ಕಾಗಿ ಅಲ್ಲ. ಎರಡು ದೇಶಗಳ ಆರ್ಥಿಕತೆಗಳ ನಡುವೆ ಭವಿಷ್ಯದಲ್ಲೂ ಸಂಪೂರ್ಣ ಸಹಕಾರ ನೀಡುವ ಬಗ್ಗೆಯಾಗಿದೆ ಎನ್ನುತ್ತಾರೆ ಆರ್ಥಿಕ ತಜ್ಞರಾದ ಅಗ್ನೇಶ್ವರ್ ಸೇನ್.
ವ್ಯಾಪಾರ ಬೆಳವಣಿಗೆ ಹೇಗೆ?
ಈ ಒಪ್ಪಂದದಿಂದಾಗಿ ಯುಕೆಯಲ್ಲಿ ಭಾರತದ ಚರ್ಮ ಉದ್ಯಮ ಬೆಳೆಯಲಿದೆ. ಮುಂದಿನ ಎರಡು ವರ್ಷಗಳಲ್ಲಿ ಯುಕೆ ಮಾರುಕಟ್ಟೆಯ ಹೆಚ್ಚುವರಿ ಶೇ. 5ರಷ್ಟನ್ನು ಭಾರತೀಯ ವ್ಯಾಪಾರಿಗಳು ಪಡೆಯಲಿದ್ದಾರೆ. ಇನ್ನು ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ರಫ್ತುಗಳು 2030 ರ ವೇಳೆಗೆ ದ್ವಿಗುಣಗೊಳ್ಳಲಿದೆ. ರಾಸಾಯನಿಕ ರಫ್ತುಗಳು ಮುಂದಿನ ಹಣಕಾಸು ವರ್ಷದಲ್ಲಿ ಶೇ. 40 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಅಲ್ಲದೇ ಸಾಫ್ಟ್‌ವೇರ್ ಸೇವೆಗಳು ವಾರ್ಷಿಕವಾಗಿ ಶೇ. 20ರಷ್ಟು ಬೆಳೆಯುವ ನಿರೀಕ್ಷೆಯಿದೆ.
ಈ ಒಪ್ಪಂದದಿಂದ ಯುಕೆಯಾದ್ಯಂತ ಭಾರತೀಯರಿಗೆ ಎರಡು ವರ್ಷಗಳವರೆಗೆ ಕೆಲಸ ಮಾಡಲು 35 ವಲಯಗಳನ್ನು ತೆರೆಯಲಿದೆ. ಇದರಿಂದ ಸ್ವತಂತ್ರೋದ್ಯೋಗಿಗಳು, ಅಡುಗೆಯವರು, ಸಂಗೀತಗಾರರು, ಯೋಗ ಬೋಧಕರು ಮತ್ತು ಗುತ್ತಿಗೆ ಆಧಾರಿತ ಕೆಲಸಗಾರರಿಗೆ ಹೊಸ ಅವಕಾಶ ಸಿಗಲಿದೆ. ಪ್ರತಿ ವರ್ಷ 60,000 ಕ್ಕೂ ಹೆಚ್ಚು ಐಟಿ ವೃತ್ತಿಪರರಿಗೆ ಪ್ರಯೋಜನ ದೊರೆಯಲಿದೆ ಎನ್ನುತ್ತಾರೆ ಉದ್ಯೋಗ ಕ್ಷೇತ್ರಗಳ ತಜ್ಞರು.
ಭಾರತೀಯರಿಗೆ ಸಿಗಲಿದೆ ವಿನಾಯಿತಿ
ಈ ಒಪ್ಪಂದದನ್ವಯ ಭಾರತೀಯ ವೃತ್ತಿಪರರಿಗೆ ಮೂರು ವರ್ಷಗಳವರೆಗೆ ಯುಕೆ ಸಾಮಾಜಿಕ ಭದ್ರತಾ ಕೊಡುಗೆಗಳ ಪಾವತಿಯಲ್ಲಿ ವಿನಾಯಿತಿ ದೊರೆಯಲಿದೆ. ಇದರಿಂದ ಭಾರತೀಯ ಕಂಪೆನಿಗಳು ಮತ್ತು ಉದ್ಯೋಗಿಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರಾದ ಪುನೀತ್ ಗುಪ್ತಾ.
ಯುಕೆಗೆ ಏನು ಪ್ರಯೋಜನ ?
ಈ ಒಪ್ಪಂದದಿಂದ ಭಾರತದ ಸರಕುಗಳ ರಫ್ತು ಶೇ. 90ರಷ್ಟು ಅಗ್ಗವಾಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಇದರಲ್ಲಿ ಶೇ. 85ರಷ್ಟು ರಫ್ತ ಸಂಪೂರ್ಣವಾಗಿ ಸುಂಕ ಮುಕ್ತಗೊಳಿಸುತ್ತದೆ. ಬ್ರಿಟಿಷ್ ಕಂಪೆನಿಗಳು 2,000 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಭಾರತೀಯ ಸರ್ಕಾರಿ ಒಪ್ಪಂದಗಳಿಗೆ ಬಿಡ್ ಮಾಡಲು ಅವಕಾಶ ನೀಡಲಾಗುತ್ತದೆ. ಈ ಮೂಲಕ ವರ್ಷಕ್ಕೆ ಸುಮಾರು 40,000 ಟೆಂಡರ್‌ಗಳಿಗೆ ಬ್ರಿಟಿಷ್ ಕಂಪೆನಿಗಳು ಪ್ರವೇಶ ಪಡೆಯಬಹುದು. ಇದರಿಂದ ಯುಕೆಯಲ್ಲಿ 2,000 ಕ್ಕೂ ಹೆಚ್ಚು ಹೊಸ ಉದ್ಯೋಗ ಸೃಷ್ಟಿಯಾಗುವುದು ಮತ್ತು 2.2 ಬಿಲಿಯನ್ ವೇತನ ಹೆಚ್ಚಳ ಸಾಧ್ಯವಾಗುತ್ತದೆ ಎನ್ನುತ್ತಾರೆ ಯುಕೆ ಅಧಿಕಾರಿಗಳು.
ಇದನ್ನೂ ಓದಿ: PM Modi: ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಲಂಡನ್‌ನಲ್ಲಿ ಭವ್ಯ ಸ್ವಾಗತ
ಈ ಒಪ್ಪಂದದಡಿಯಲ್ಲಿ ಯುಕೆಯ ಕಂಪೆನಿಗಳು ಭಾರತೀಯ ಕಂಪೆನಿಗಳಿಗೆ ಸಮಾನವಾಗಿ ಹಣಕಾಸು ಲಾಭವನ್ನು ಪಡೆಯಲಿದೆ. ಇದರಿಂದ ಭಾರತೀಯ ಔಷಧಗಳ ಬೆಲೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಈ ಒಪ್ಪಂದ ಬ್ರಿಟನ್‌ಗೆ ದೊಡ್ಡ ಗೆಲುವು ಎಂದಿರುವ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಯುಕೆ ಆರ್ಥಿಕತೆಗೆ ಹೆಚ್ಚಿನ ಹೂಡಿಕೆಯನ್ನು ತರುತ್ತದೆ ಎಂದು ಹೇಳಿದ್ದಾರೆ.