ಹೂವಪ್ಪ ಐ ಹೆಚ್ ಬೆಂಗಳೂರು
ವಿದೇಶಕ್ಕೆ ಮೊಟ್ಟೆ ರಫ್ತು ಕುಸಿತ
76 ಲಕ್ಷದ ಬದಲಿಗೆ 56 ಲಕ್ಷಕ್ಕೆ ರಫ್ತು ಇಳಿಕೆ
ಮೊಟ್ಟೆ ಉತ್ಪಾದನೆ ಶೇ.15ರಷ್ಟು ಏರಿಕೆ
ಕೋಳಿ ಮೊಟ್ಟೆ ಬೆಲೆಯ ತೀವ್ರ ಏರಿಕೆಯಿಂದ ಬೆಸೆತ್ತಿದ್ದ ಗ್ರಾಹಕರು ಇದೀಗ ಬೆಲೆ ಕುಸಿತದಿಂದ ಖುಷಿ ಪಡುವಂತಾಗಿದ್ದಾರೆ. ಮೊಟ್ಟೆ ಬೆಲೆ ಏರಿಕೆಯಾದ ಮೇಲೆ ಸಾಮಾನ್ಯವಾಗಿ ಹೆಚ್ಚೆಂದರೆ 20 ರಿಂದ 30 ಪೈಸೆಯಷ್ಟು ಇಳಿದರೆ ಹೆಚ್ಚು, ಆದರೆ ಈ ಸಲ ಹೆಚ್ಚೂ ಕಡಿಮೆ ಒಂದೂವರೆ ರು.ನಷ್ಟು ಇಳಿಕೆ ಯಾಗಿದೆ.
ವಿದೇಶಗಳಿಗೆ ದಿನಂಪ್ರತಿ ಅಂದಾಜು 76 ಲಕ್ಷ ರಫ್ತು ಆಗುತ್ತಿದ್ದ ಮೊಟ್ಟೆಯು 56 ಲಕ್ಷಕ್ಕೆ ಕುಸಿದಿದೆ, ಜತೆಗೆ ಶೇ.15ರಷ್ಟು ಉತ್ಪಾದನೆ ಹೆಚ್ಚಿದೆ, ಇದು ಮೊಟ್ಟೆ ಬೆಲೆ ಇಳಿಕೆಯಾಗಲು ಪ್ರಮುಖ ಕಾರಣ ವಾಗಿದೆ. ಹೆಚ್ಚು ಮೊಟ್ಟೆಯ ಉತ್ಪಾದನೆಗೆ ನಾಮಕ್ಕಲ್ ಹೆಸರುವಾಸಿಯಾಗಿದ್ದು, ಮೊಟ್ಟೆ ಕಣಜ ಎಂದು ಕರೆಯಲಾಗುತ್ತದೆ.
ಅಲ್ಲಿ 1600ಕ್ಕೂ ಹೆಚ್ಚು ಕೋಳಿ ಫಾರ್ಮ್‌ಗಳು ಇದ್ದು, ಪ್ರತಿದಿನ ಸುಮಾರು ಆರು ಕೋಟಿಗೂ ಹೆಚ್ಚು ಮೊಟ್ಟೆ ಉತ್ಪಾದನೆಯಾಗುತ್ತವೆ. ಅಲ್ಲಿನ ಮೊಟ್ಟೆಗಳನ್ನು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಇತರ ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುತ್ತದೆ, ಹಾಗೆಯೇ ಸರಕಾರಿ ಹಾಗೂ ಅನು ದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಊಟ ಯೋಜನೆಗೂ ಮೊಟ್ಟೆಗಳನ್ನು ಪೂರೈಸಲಾಗುತ್ತದೆ, ಅಲ್ಲದೆ ಮೊಟ್ಟೆಗಳನ್ನು ಮುಸ್ಕತ್, ದುಬೈ, ಕತಾರ್, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ʼಗಳಿಗೆ ರಫ್ತು ಮಾಡಲಾಗುತ್ತಿತ್ತು. ಬೇಡಿಕೆ ಮತ್ತು ಉತ್ಪಾದನೆಯನ್ನು ಆಧರಿಸಿ, ರಾಷ್ಟ್ರೀಯ ಮೊಟ್ಟೆ ಸಂಯೋಜನಾ ಸಮಿತಿ (ಎನ್‌ಇಸಿಸಿ), ನಾಮಕ್ಕಲ್ ವಲಯವು ಪ್ರತಿದಿನ ಮೊಟ್ಟೆಗಳ ಬೆಲೆಯನ್ನು ನಿಗದಿಪಡಿಸುತ್ತದೆ.
ಇದನ್ನೂ ಓದಿ: S N Bhat Column: ಕಳಂಕದಿಂದ ಕಿರೀಟಕ್ಕೆ: ಬದಲಾದ ಕಾಲದ ತೀರ್ಪು
ರಾಜ್ಯದಲ್ಲಿ ಮೊಟ್ಟೆ ಉತ್ಪಾದನೆ: ರಾಜ್ಯದಲ್ಲಿ ಪ್ರತಿ ನಿತ್ಯ ಅಂದಾಜು 2.50 ಕೋಟಿಯಷ್ಟು ಮೊಟ್ಟೆ ಬೇಡಿಕೆ ಇದ್ದು, ಹೆಚ್ಚೂ ಕಡಿಮೆ 4.20 ಕೋಟಿಯಷ್ಟು ಉತ್ಪಾದನೆಯಾಗುತ್ತದೆ. ನಮ್ಮ ರಾಜ್ಯಕ್ಕೆ ನಾಮಕಲ್ ಭಾಗದಿಂದ ಪ್ರತಿ ನಿತ್ಯ 60ರಿಂದ 70 ಲಕ್ಷ ಮೊಟ್ಟೆಗಳು ಬರುತ್ತಿವೆ, ಅಲ್ಲದೆ ಹೊಸಪೇಟೆ, ಹೈದರಾಬಾದ್‌ಗಳಿಂದಲೂ ಮೊಟ್ಟೆ ಸರಬರಾಜಾಗುತ್ತಿದೆ.
ಬೆಂಗಳೂರು ನಗರಕ್ಕೆ ದಿನಂಪ್ರತಿ 40 ಲಕ್ಷ ಮೊಟ್ಟೆಗಳು ಬರುತ್ತದೆ. ಮೈಸೂರು ಭಾಗದಲ್ಲಿ ಉತ್ಪಾದನೆ ಯಾಗುವ ಸ್ವಲ್ಪ ಪ್ರಮಾಣದ ಮೊಟ್ಟೆ ಕೇರಳಕ್ಕೂ ರವಾನೆಯಾಗುತ್ತದೆ ಎಂದು ಮೈಸೂರಿನ ಮೊಟ್ಟೆ ಉತ್ಪಾದಕರಾದ ಸುರೇಶ ಹೇಳಿದ್ದಾರೆ.
ಮೊಟ್ಟೆ ಬೆಲೆ ಹಾವು-ಏಣಿ ಆಟ: 2025ರ ನವೆಂಬರ್ ವರೆಗೆ ಮೊಟ್ಟೆಯೊಂದರ ಗರಿಷ್ಠ ಖರೀದಿ ಬೆಲೆ ರು. 5.80 ಆಗಿದ್ದು, ನಂತರ ಡಿಸೆಂಬರ್ 22ರಂದು ಬೆಲೆ 6.40ಕ್ಕೆ ಏರಿಕೆಯಾಗಿ, ಅದು 2026ರ ಜನವರಿ 3ರವರೆಗೆ ಮುಂದುವರಿದಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ರು.7.50ನಿಂದ 8 ರು. ವರೆಗೂ ತಲುಪಿತ್ತು. ಜನವರಿಯಿಂದ ಮೊಟ್ಟೆ ಬೆಲೆ ಇಳಿಯಲು ಆರಂಭವಾಗಿದ್ದು, ಜನವರಿ 19ರಂದು ಬೆಲೆಯನ್ನು 6.50ಕ್ಕೆ ಇಳಿಯಿತು.
ತಮಿಳುನಾಡು ಕೋಳಿ ಸಾಕಾಣಿಕೆ ರೈತ ಸಂಘದ ಅಧ್ಯಕ್ಷರು ಹಾಗೂ ನಾಮಕ್ಕಲ್ ವಲಯ ಎನ್‌ಇಸಿಸಿ ಅಧ್ಯಕ್ಷರಾದ ಕೆ.ಸಿಂಗರಾಜ್ ಅವರು, ಚಳಿಗಾಲದ ಹಿನ್ನೆಲೆಯಲ್ಲಿ ಉತ್ತರ ಭಾರತೀಯ ರಾಜ್ಯಗಳಲ್ಲಿ ಮೊಟ್ಟೆ ಬಳಕೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ, ಹಾಗೆಯೇ ತಮಿಳುನಾಡಿನಲ್ಲಿ ಮೊಟ್ಟೆಗಳು ಸಂಗ್ರಹವಾಗಿ ದಸ್ತಾನು ಉಳಿದುದರಿಂದ ಬೆಲೆ ಇಳಿಕೆಯಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.
ಒಂದು ಮೊಟ್ಟೆ ಉತ್ಪಾದನೆಗೆ ರು.4.50ಗಿಂತ ಹೆಚ್ಚು ವೆಚ್ಚವಾಗುತ್ತದೆ. ಒಂದು ಮೊಟ್ಟೆಗೆ 10ರಿಂದ 15 ಪೈಸೆಗೆ ಲಾಭ ಬರುತ್ತದೆ ಅಷ್ಟೇ, ತಮಿಳುನಾಡಿನ ನಾಮಕ್ಕಲ್‌ನಲ್ಲಿ ಹೆಚ್ಚು ಪೌಲ್ಟ್ರಿಪಾರಂಗಳು ಇವೆ. ಅವರಿಗೆ ಅಲ್ಲಿ ಸರಕಾರ ಎಲ್ಲಾ ತರಹದ ಮೂಲ ಸೌಕರ್ಯ ಮಾಡಿಕೊಟ್ಟಿದೆ, ಹೀಗಾಗಿ ಅವರಿಗೆ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ.
ನಾಮಕ್ಕಲ್‌ನಿಂದ ಲಾರಿಗಳಲ್ಲಿ ತುಂಬಿಕೊಂಡು ನೇರವಾಗಿ ಮೈಸೂರು, ಬೆಂಗಳೂರು ಸುತ್ತಮುತ್ತ ಕಡಿಮೆ ಬೆಲೆ ಮಾರಾಟ ಮಾಡಿ ಹೋಗುತ್ತಾರೆ, ಸಾಕಾಣಿಕೆದಾರರಿಗೆ ಇದರಿಂದ ನಷ್ಟವಾಗುತ್ತಿದೆ ಎನ್ನುತ್ತಾರೆ ಮಸೂರಿನ ಕೋಳಿ ಸಾಕಾಣಿಕೆದಾರಾದ ಸುರೇಶ.
ಡಿಸೆಂಬರ್-ಜನವರಿಯಲ್ಲಿ ಸಗಟು ದರದಲ್ಲಿ 100 ಮೊಟ್ಟೆಗೆ ರು.550-600 ಇದ್ದದ್ದು, ಇದೀಗ ರು.460ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ದರದಲ್ಲಿ ಕೂಡ 7.50ರಿಂದ 8ರು.ಇದ್ದದ್ದು, ಇದೀಗ 6.25 ರು.ನಿಂದ 6.50 ರು.ಗೆ ಕುಸಿದಿದೆ. ಯುಗಾದಿ ಹಬ್ಬಕ್ಕೆ ಸಗಟು ದರ 100ಕ್ಕೆ 5 ರು. ಮತ್ತು ಏಪ್ರಿಲ್‌ನಲ್ಲಿ 4.80 ರು.ಗೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕೋಳಿ ಆಹಾರಗಳ ಬೆಲೆ ದುಬಾರಿ
ಕೋಳಿಗಳ ಆಹಾರವಾದ ಜೋಳ, ಸೋಯಾ, ಕಡ್ಲೆಕಾಯಿ ಕೇಕ್, ಸೂರ್ಯಕಾಂತಿ ಹಿಂಡಿ, ಅಕ್ಕಿತೌಡು ಬೆಲೆ ಶೇ.30ರಷ್ಟು ದುಬಾರಿಯಾಗಿದೆ, ಜತೆಗೆ ಕೂಲಿ ಕಾರ್ಮಿಕರ ಕೊರತೆಯೂ ಎದುರಾಗಿದೆ. ವಿದ್ಯುತ್, ಇತರ ನಿರ್ವಹಣಾ ವೆಚ್ಚವೂ ದುಬಾರಿಯಾಗಿದೆ. ಇದರ ನಡುವೆ ಕೋಳಿ ಸಾಕಾಣಿಕೆದಾರರು ಉದ್ಯಮ ನಡೆಸುವುದು ಅನಿವಾರ್ಯವಾಗಿದೆ. ಹೀಗಿರುವಾಗ ಬೆಲೆ ಇಳಿಕೆ ಯಾದರೆ ಸಾಕಷ್ಟು ನಷ್ಟವಾಗಲಿದ್ದು, ಭಾರೀ ಹೊಡೆತ ಬೀಳಲಿದೆ ಎನ್ನುತ್ತಾರೆ ಕೋಳಿ ಸಾಕಣೆದಾರರು.
*
ಅಂತೂ ಮೊಟ್ಟೆ ಬೆಲೆ ಇಳಿಕೆಯಾಗಿರುವುದು ಬಹಳ ಖುಷಿಯ ವಿಚಾರ. ಒಂದು ಮೊಟ್ಟೆ ಬೆಲೆ ಕನಿಷ್ಠ 7.50 ರು.ಗೆ ಏರಿಕೆಯಾಗಿದ್ದಾಗ ನಮ್ಮಂತಹ ಕೂಲಿ ಕಾರ್ಮಿಕರು ಮೊಟ್ಟೆ ಸೇವನೆ ಮಾಡು ವುದು ಕನಸಿನ ಮಾತಾಗಿತ್ತು. ಈಗ ಒಂದು ಮೊಟ್ಟೆ 6.50 ರು.ಗೆ ಸಿಗುತ್ತಿರುವ ಕಾರಣ ನನಗಂತೂ ಖುಷಿಯಾಗಿದೆ.
-ಲಕ್ಷ್ಮೀ, ಗೃಹಿಣಿ, ಬೆಂಗಳೂರು.
ಚಳಿಗಾಲ ಮುಗಿದು ಇದೀಗ ಬೇಸಿಗೆ ಆರಂಭವಾಗುತ್ತಿದೆ. ದೇಹಕ್ಕೆ ಉಷ್ಣ ಎಂದು ಬೇಸಿಗೆ ಸಮಯ ದಲ್ಲಿ ಜನಸಾಮಾನ್ಯರು ಹೆಚ್ಚು ಮೊಟ್ಟೆ ಸೇವಿಸುವುದಿಲ್ಲ, ಜತೆಗೆ ಹಿಂದಿನಗಿಂತ ಮೊಟ್ಟೆ ಉತ್ಪಾದನೆ ತುಸು ಹೆಚ್ಚಿದೆ , ಈ ಹಿನ್ನೆಲೆಯಲ್ಲಿ ಮೊಟ್ಟೆ ಬೆಲೆ ಕುಸಿದಿದೆ.
-ವೆಂಕಟೇಶ್ವರಲು, ಅಧ್ಯಕ್ಷರು ಎನ್‌ಇಸಿಸಿ, ಬೆಂಗಳೂರು ವಲಯ