ನವದೆಹಲಿ: ಭವಿಷ್ಯ ನಿಧಿ ಖಾತೆ (Provident Fund ) ಹೊಂದಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಪಿಎಫ್ (PF) ನಿಧಿಗಳಿಗೆ ಶೀಘ್ರದಲ್ಲೇ ಪ್ರವೇಶ ಕಲ್ಪಿಸಲು ಇಪಿಎಫ್ಒ 3.0 (Employees Provident Fund Organisation) ಪರಿಚಯಿಸಲಾಗಿದೆ. ಇದರಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಸದಸ್ಯರು ತಮ್ಮ ಭವಿಷ್ಯ ನಿಧಿ ಖಾತೆಯಿಂದ ಅರ್ಹ ಮೊತ್ತವನ್ನು ನೇರವಾಗಿ ಯುಪಿಐ ಮೂಲಕ ಪಡೆಯಬಹುದು. ಇದಕ್ಕೆ ಸಂಬಂಧಿಸಿ ಯುಪಿಐ ಪಾವತಿ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಮೂಲಕ ಸದಸ್ಯರಿಗೆ ಸೇವೆ ಒದಗಿಸಲಾಗುವುದು ಎಂಬುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಐ ಮೂಲಕ ಭವಿಷ್ಯ ನಿಧಿ ಖಾತೆಯ ಹಣ ಪಾವತಿಯಿಂದ ಸುಮಾರು ಎಂಟು ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ. ಇದು ಅವರ ಭವಿಷ್ಯ ನಿಧಿಯ ಅರ್ಹ ಮೊತ್ತವನ್ನು ನೇರವಾಗಿ ಹಿಂಪಡೆಯಲು ಅನುಮತಿಸುತ್ತದೆ ಎಂದು ಹೇಳಿದರು.
ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ; ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಯುಪಿಐ ಮೂಲಕ ಭವಿಷ್ಯ ನಿಧಿ ಖಾತೆಯ ಹಣ ಮರಳಿ ಪಡೆಯುವ ಸೌಲಭ್ಯವವನ್ನು ಶೀಘ್ರದಲ್ಲೇ ಸದಸ್ಯರಿಗೆ ಒದಗಿಸಲಾಗುವುದು. ಇದಕ್ಕೆ ಸಂಬಂಧಿಸಿದ ಪರೀಕ್ಷಾ ಕಾರ್ಯಗಳು ಪೂರ್ಣಗೊಂಡಿವೆ. ಯುಪಿಐ ಮೂಲಕ ಹಿಂಪಡೆಯಲಾಗುವ ಮೊತ್ತವನ್ನು ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಅವರು ಹೇಳಿದರು.
ಇಪಿಎಫ್ಒ 3.0 ದಿಂದಾಗಿ ಭವಿಷ್ಯ ನಿಧಿ ಹಣ ಹಿಂಪಡೆಯುವ ಸಮಯ ವಾರಗಳಿಂದ ಸೆಕೆಂಡುಗಳಿಗೆ ಇಳಿಕೆಯಾಗಲಿದೆ. ಇದು ಹೆಚ್ಚಿನ ಸಮಯ ಉಳಿತಾಯ ಮಾಡುತ್ತದೆ. ಅನಗತ್ಯವಾದ ಹಸ್ತಚಾಲಿತ ಅನುಮೋದನೆಗಳನ್ನು ತೆಗೆದು ಹಾಕಿ ಸಂಪೂರ್ಣವಾಗಿ ಕಾಗದರಹಿತ ಮತ್ತು ಯಾವುದೇ ರೀತಿಯ ಗೊಂದಲವಿಲ್ಲದೆ ಕ್ಲೈಮ್ ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದರು.
ಹಸ್ತಚಾಲಿತ ಅನುಮೋದನೆ ವ್ಯವಸ್ಥೆಗೆ ಕನಿಷ್ಠ 7 ರಿಂದ 10 ದಿನಗಳು ಬೇಕಾಗುತ್ತದೆ. ಆದರೆ ಇನ್ನು ಮುಂದೆ 1 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತ ಭವಿಷ್ಯ ನಿಧಿ ಖಾತೆಯಿಂದ ಪಡೆಯುವುದಿದ್ದರೆ ಮಾತ್ರ ಹಸ್ತಚಾಲಿತ ಪರಿಶೀಲನೆ ಮಾಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಮೊತ್ತಗಳಿಗೆ ಯಾವುದೇ ದಾಖಲೆಗಳು ಇಲ್ಲದೆ ವೇಗವಾಗಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಹೇಗೆ ಕಾರ್ಯನಿರ್ವಹಿಸುತ್ತದೆ?
UMANG ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾದ ಸದಸ್ಯರು ತಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಂದ ನೇರವಾಗಿ ಎಷ್ಟು ಹಣವನ್ನು ವರ್ಗಾಯಿಸಬಹುದು ಎಂಬುದನ್ನು ಪರಿಶೀಲಿಸಿ ಬಳಿಕ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಳ್ಳಬಹುದು. ಯುಪಿಐ ಸಕ್ರಿಯಗೊಳಿಸಿರುವ ಎಟಿಎಂನಿಂದಲೂ ಹಣ ವರ್ಗಾವಣೆಯನ್ನು ಮಾಡಿಕೊಳ್ಳಬಹುದು.
ಏನು ವಿಶೇಷ ?
ಭವಿಷ್ಯ ನಿಧಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ಯುಪಿಐ ಪಿನ್ ಬಳಸಿ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳಿಗೆ ಅರ್ಹ ಹಣವನ್ನು ಬಹುತೇಕ ತಕ್ಷಣವೇ ವರ್ಗಾಯಿಸಬಹುದು. ಇದು ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ಶೀಘ್ರದಲ್ಲೇ ಹಣ ಪಡೆಯಲು ಅನುಕೂಲ ಮಾಡಿಕೊಡುತ್ತದೆ.
ಇದರಲ್ಲಿ ನಿವೃತ್ತಿ ಉಳಿತಾಯ ಮೊತ್ತವನ್ನು ಖಚಿತ ಪಡಿಸಿಕೊಳ್ಳಲು ಒಟ್ಟು ನಿಧಿಯ ಶೇಕಡಾ 25 ರಷ್ಟು ಮೊತ್ತ ಪಿಎಫ್ ಖಾತೆಯಲ್ಲಿಯೇ ಲಾಕ್ ಮಾಡಲಾಗಿರುತ್ತದೆ. ಬಾಕಿ ಮೊತ್ತದ ಶೇಕಡಾ 50 ರಿಂದ 75 ರಷ್ಟು ಅರ್ಹ ಭಾಗವನ್ನು ಮಾತ್ರ ಯುಪಿಐ ಅಥವಾ ಎಟಿಎಂ ಮೂಲಕ ಮರಳಿ ಪಡೆಯಬಹುದು. ಖಾತೆಯಲ್ಲಿ ಎಷ್ಟು ಹಣ ಉಳಿದಿದೆ ಎಂಬುದನ್ನು ಪರಿಶೀಲಿಸಬಹುದು.
ಪಿಎಫ್ ಸಂಬಂಧಿತ ಮಾಹಿತಿಗಳನ್ನು ವಾಟ್ಸಾಪ್ ಮೂಲಕವು ಪರಿಶೀಲಿಸಬಹುದು. ಇದಕ್ಕಾಗಿ ಸದಸ್ಯರು ಸಂದೇಶವನ್ನು ಕಳುಹಿಸಿದರೆ ಬ್ಯಾಲೆನ್ಸ್ ಮತ್ತು ಹಿಂಪಡೆಯುವಿಕೆ ಅರ್ಹತೆ ಮೊತ್ತದ ವಿವರವನ್ನು ಪಡೆಯಬಹುದು.
10 ಕಿ.ಮೀ. ಗೆ 700 ರೂ.; ಬೆಂಗಳೂರು ಕ್ಯಾಬ್ ಗಳಿಂದ ಹಗಲು ದರೋಡೆ ಎಂದ ಮಹಿಳೆ
ಷರತ್ತುಗಳು
ಇಪಿಎಫ್ಒ 3.0 ಸೌಲಭ್ಯವನ್ನು ಪಡೆಯಲು ಸದಸ್ಯರು ಸಕ್ರಿಯ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಹೊಂದಿರಬೇಕು. ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಯುಎಎನ್‌ಗೆ ಲಿಂಕ್ ಮಾಡಿರಬೇಕು. ಹೆಸರು ಮತ್ತು ಜನ್ಮ ದಿನಾಂಕದ ಪಿಎಫ್ ವಿವರಗಳು ಆಧಾರ್ ಕಾರ್ಡ್ ಗೆ ಹೊಂದಿಕೆಯಾಗಬೇಕು.