ನವದೆಹಲಿ: ಸಾಕಷ್ಟು ಪ್ರಮಾಣದಲ್ಲಿ ದೇಶಿಯ ಇಂಧನ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ವಿಧಿಸಲಾದ ವಿಮಾನ ಇಂಧನ (aviation turbine fuel), ಪೆಟ್ರೋಲ್ (petrol price), ಡೀಸೆಲ್ (diesel price) ರಫ್ತು ತೆರಿಗೆಯನ್ನು (Export tax) ಇದೀಗ ಸುಮಾರು ಅರ್ಧದಷ್ಟು ಕಡಿತ ಮಾಡಲಾಗಿದೆ. ಜೂನ್ 1ರಿಂದ ಜಾರಿಯಾಗುವಂತೆ ಹದಿನೈದು ವಾರಗಳ ಕಾಲ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಲೀಟರ್ ಗೆ 1.5 ರೂ., ಡೀಸೆಲ್ ರಫ್ತಿನ ಮೇಲಿನ ತೆರಿಗೆಯಲ್ಲಿ ಲೀಟರ್‌ಗೆ 13.5 ರೂ., ವಿಮಾನ ಟರ್ಬೈನ್ ಇಂಧನದ ಮೇಲಿನ ತೆರಿಗೆಯಲ್ಲಿ ಲೀಟರ್‌ಗೆ 9.5 ರೂ. ಇಳಿಕೆ ಮಾಡಿರುವುದಾಗಿ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ವಿಮಾನ ಇಂಧನ, ಪೆಟ್ರೋಲ್, ಡೀಸೆಲ್ ರಫ್ತು ತೆರಿಗೆ ಕಡಿತ ಮಾಡಲಾಗಿದ್ದರೂ ದೇಶಿಯ ಬಳಕೆಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಸ್ತಿತ್ವದಲ್ಲಿರುವ ಸುಂಕ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ಸುಂಕ ದರ ಜೂನ್ 1ರಿಂದ ಹದಿನೈದು ವಾರಗಳ ಕಾಲ ಜಾರಿಯಾಗುವಂತೆ ಪೆಟ್ರೋಲ್ ಲೀಟರ್ ಗೆ 1.5 ರೂ., ಡೀಸೆಲ್ ಮೇಲಿನ ಸುಂಕವನ್ನು ಲೀಟರ್‌ಗೆ 13.5 ರೂ. ಮತ್ತು ವಾಯುಯಾನ ಟರ್ಬೈನ್ ಇಂಧನದ ಮೇಲಿನ ರಫ್ತು ಸುಂಕವನ್ನು ಲೀಟರ್‌ಗೆ 9.5 ರೂ.ಗೆ ಇಳಿಕೆ ಮಾಡಿರುವುದಾಗಿ ಸರ್ಕಾರ ಶನಿವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷಗಳ ಪರಿಣಾಮದಿಂದ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಹೆಚ್ಚಿದ ಅನಿಶ್ಚಿತತೆಯ ಕಾರಣಕ್ಕಾಗಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಮೇಲಿನ ತೆರಿಗೆಯನ್ನು ಒಳಗೊಂಡಿರುವ ರಫ್ತು ಸುಂಕಗಳನ್ನು ಮಾರ್ಚ್ 27ರಂದು ಪರಿಚಯಿಸಲಾಗಿತ್ತು. ಇದರ ಮುಖ್ಯ ಉದ್ದೇಶವೆಂದರೆ ಸಾಕಷ್ಟು ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಅಂತಾರಾಷ್ಟ್ರೀಯ ಬೆಲೆಗಳ ಆಧಾರದ ಮೇಲೆ ಸರ್ಕಾರ ಪ್ರತಿ ಎರಡು ವಾರಗಳಿಗೊಮ್ಮೆ ಇದನ್ನು ಪರಿಶೀಲನೆ ನಡೆಸಲಿದೆ.
ಮೊದಲ ಬಾರಿಗೆ ಮಾರ್ಚ್ 26ರಂದು ಡೀಸೆಲ್ ಮೇಲೆ ಲೀಟರ್‌ಗೆ 21.50 ರೂ., ವಿಮಾನ ಇಂಧನದ ಮೇಲೆ ಲೀಟರ್‌ಗೆ 29.5 ರೂ. ರಫ್ತು ಸುಂಕವನ್ನು ವಿಧಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದರ ಬಳಿಕ ಏಪ್ರಿಲ್ 11ರಂದು ಪರಿಶೀಲನೆ ನಡೆಸಿ ಸುಂಕಗಳನ್ನು ಕ್ರಮವಾಗಿ ಲೀಟರ್‌ಗೆ 55.5 ರೂ., 42 ರೂ. ಗೆ ಹೆಚ್ಚಿಸಲಾಗಿತ್ತು. ಏಪ್ರಿಲ್ 30ರಂದು ಇದನ್ನು ಲೀಟರ್ ಗೆ ಕ್ರಮವಾಗಿ 23 ರೂ. ಮತ್ತು 33 ರೂ. ಗೆ ಕಡಿತಗೊಳಿಸಲಾಯಿತು. ಮೇ 16ರಂದು ಮತ್ತೆ ಇದನ್ನು ಕ್ರಮವಾಗಿ 16.5 ರೂ ಮತ್ತು 16 ರೂ. ಇಳಿಕೆ ಮಾಡಲಾಗಿತ್ತು.
ಮತ್ತೆ ಇದೀಗ ಪರಿಷ್ಕೃತ ಸುಂಕ ರಚನೆಯ ಆಧಾರದಲ್ಲಿ ಪೆಟ್ರೋಲ್ ರಫ್ತುಗಳ ಮೇಲೆ ಪ್ರತಿ ಲೀಟರ್‌ಗೆ 1.5 ರೂ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ಡೀಸೆಲ್ ರಫ್ತುಗಳ ಮೇಲೆ ಪ್ರತಿ ಲೀಟರ್‌ಗೆ 13.5 ರೂ. ಮತ್ತು ವಿಮಾನ ಟರ್ಬೈನ್ ಇಂಧನ ರಫ್ತುಗಳ ಮೇಲೆ ಪ್ರತಿ ಲೀಟರ್‌ಗೆ 9.5 ರೂ.ಗಳಂತೆ ಸುಂಕ ವಿಧಿಸಲಾಗಿದೆ.
ʼʼಭಾರತ ನಮ್ಮ ನಂಬಿಕಸ್ಥ ಪಾಲುದಾರ, ಕೆಲವೇ ದಿನಗಳಲ್ಲಿ ವ್ಯಾಪಾರ ಒಪ್ಪಂದ ಅಂತಿಮʼʼ: ಅಮೆರಿಕ ರಾಯಭಾರಿ
ಮೇ 16ರಂದು ಘೋಷಿಸಲಾದ ಸುಂಕದಲ್ಲಿ ಇದೀಗ ಗಮನಾರ್ಹ ಪ್ರಮಾಣದಲ್ಲಿ ಕಡಿತವನ್ನು ಮಾಡಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್‌ನ ಅಬಕಾರಿ ಸುಂಕ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.