ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಂಗಾರ ಮತ್ತು ಬೆಳ್ಳಿಯ ದರವನ್ನು ನಿಕಟವಾಗಿ ಗಮನಿಸುತ್ತಿದೆ. ಇದರ ದರಗಳಲ್ಲಿ ಉಂಟಾಗಿರುವ ತೀವ್ರ ಏರಿಕೆ ಬಗ್ಗೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಜತೆಗೆ ತನ್ನ (Gold, silver) ಹಣದುಬ್ಬರದ ಮುನ್ನೋಟದಲ್ಲಿ ಬಂಗಾರ ಮತ್ತು ಬೆಳ್ಳಿಯನ್ನು ನಿರ್ಣಾಯಕ ಭಾಗವಾಗಿ ಸೇರ್ಪಡೆಗೊಳಿಸಿದೆ. ಹಣದುಬ್ಬರ ಮುನ್ನೋಟದಲ್ಲಿ ಈಗ ಬಂಗಾರ-ಬೆಳ್ಳಿಯ ದರ ಕೂಡ ಹೆಚ್ಚು ಪ್ರಭಾವ ಬೀರುತ್ತಿದೆ. ಇತ್ತೀಚೆಗೆ ಉಭಯ ಲೋಹಗಳ ದರಗಳಲ್ಲಿ ತೀವ್ರ ಹೆಚ್ಚಳ ಆಗಿರುವುದು ಇದಕ್ಕೆ ಕಾರಣವಾಗಿದೆ. ಇದು ಇಡೀ ಹಣದುಬ್ಬರದ ಲೆಕ್ಕಾಚಾರದ ಸ್ವರೂಪವನ್ನೇ ಬದಲಾಯಿಸುತ್ತಿದೆ.
ಕಳೆದ ಡಿಸೆಂಬರ್‌ನಲ್ಲಿ ಆರ್‌ಬಿಐ ತನ್ನ ವರದಿಯಲ್ಲಿ ಬಂಗಾರದ ಬಗ್ಗೆ ಪ್ರಸ್ತಾಪಿಸಿತ್ತು. ಜಿಯೊ ಪೊಲಿಟಿಕಲ್ ಟೆನ್ಷನ್‌ಗಳ ಸಂದರ್ಭ ಬಂಗಾರವು ಸುರಕ್ಷಿತ ಹೂಡಿಕೆಯ ಸಾಧನವಾಗಿ ಪರಿಣಮಿಸಿದೆ. ಜಾಗತಿಕ ತಲ್ಲಣಗಳಿಗೆ ತೈಲ ದರಗಳು ಹೆಚ್ಚು ಸೂಕ್ಷ್ಮ ಸಂವೇದಿಗಳಾಗಿವೆ. ದೀರ್ಘಾವಧಿಯ ದೃಷ್ಟಿಯಿಂದ ಬಂಗಾರದ ದರ ಮೇಲ್ಮುಖವಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್ ಬಿಕ್ಕಟ್ಟಿನಂತಹ ವಿಪತ್ತುಗಳ ಸಂದರ್ಭ ಚಿನ್ನ ಹೂಡಿಕೆಗೆ ಸುರಕ್ಷಿತ ಸಾಧನವೆನ್ನಿಸಿದೆ ಎಂದು ಆರ್‌ಬಿಐ ವರದಿಯಲ್ಲಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಶುಕ್ರವಾರ, ರೆಪೊ ದರವನ್ನು 5.25% ರ ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಹೀಗಾಗಿ ರೆಪೊ ದರ ಅಧಾರಿತ ಗೃಹ ಸಾಲ ಬಡ್ಡಿ ದರಗಳು ಬದಲಾಗುವುದಿಲ್ಲ.
ಐಟಿಸಿ, ವಿಎಸ್‌ಟಿ ಇಂಡಸ್ಟ್ರೀಸ್, ಗಾಡ್‌ಫ್ರೆ ಫಿಲಿಪ್ಸ್ ಕಂಪನಿಯ ಷೇರುಗಳ ದರದಲ್ಲಿ 13% ತನಕ ಏರಿಕೆ ಉಂಟಾಯಿತು. ಈ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಸುತ್ತಿರುವುದು ಇದಕ್ಕೆ ಕಾರಣ. ಇತ್ತೀಚಿನ ತೆರಿಗೆ ಹೆಚ್ಚಳದ ಬೆನ್ನಲ್ಲೇ ಕಂಪನಿಗಳು ದರ ಏರಿಸಲು ಮುಂದಾಗಿವೆ. ಸಿಗರೇಟ್ ಪ್ಯಾಕೇಟ್ ಗಳ ದರದಲ್ಲಿ 15%-30% ತನಕ ದರ ಹೆಚ್ಚಳ ನಿರೀಕ್ಷಿಸಲಾಗಿದೆ.
ಬಡ್ಡಿ ದರಗಳು ಮತ್ತಷ್ಟು ಕಾಲಾವಧಿಗೆ ಕೆಳಮಟ್ಟದಲ್ಲಿ ಮುಂದುವರಿಯಲಿದೆ. ಠೇವಣಿಯ ಬಡ್ಡಿ ದರಗಳೂ ಇದಕ್ಕೆ ಹೊಂದಾಣಿಕೆಯಾಗಿ ಇರಲಿವೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಇವತ್ತು ಸೆನ್ಸೆಕ್ಸ್ 266 ಅಂಕ ಏರಿಕೆಯಾಗಿದ್ದು, 83,580 ಅಂಕಗಳಿಗೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ನಿಫ್ಟಿ 51 ಅಂಕ ಏರಿಕೆಯಾಗಿ 25,694 ಅಂಕಗಳಿಗೆ ಸ್ಥಿರವಾಯಿತು. ICICI Bank, ಕೋಟಕ್ ಬ್ಯಾಂಕ್, ITC, ಎಚ್‌ಯುಎಲ್ ಷೇರು ದರ ತಲಾ 3% ಏರಿಕೆ ಆಯಿತು.
ಬೆಳವಣಿಗೆಗೆ ಒತ್ತು ನೀಡಿರುವ ಕೇಂದ್ರ ಬಜೆಟ್, ಯುರೋಪ್ ಮತ್ತು ಅಮೆರಿಕ ಜತೆಗಿನ ಟ್ರೇಡ್ ಡೀಲ್‌ಗಳು ಸಕಾರಾತ್ಮಕ ಪ್ರಭಾವ ಬೀರಿತು. ಲೋಹ, ಐಟಿ, ಹೆಲ್ತ್ ಕೇರ್ ಷೇರುಗಳು ಒತ್ತಡದಲ್ಲಿತ್ತು. ಟಿಸಿಎಸ್, ಇನ್ಫೋಸಿಸ್, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಎಚ್‌ಸಿಎಲ್ ಟೆಕ್, ಮ್ಯಾಕ್ಸ್ ಹೆಲ್ತ್ ಕೇರ್ ಷೇರುಗಳ ದರ ಇಳಿಯಿತು. ಬೆಲ್ಳಿ-ಬಂಗಾರದ ಇಟಿಎಫ್ 10 ಪರ್ಸೆಂಟ್ ಇಳಿಯಿತು. ಡಾಲರ್ ಪ್ರಾಬಲ್ಯವೂ ಪ್ರಭಾವ ಬೀರಿತು. ಕಚ್ಚಾ ತೈಲ ದರ ಬ್ಯಾರೆಲ್‌ಗೆ 67 ಡಾಲರ್‌ಗೆ ತಗ್ಗಿತು.