ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಭಾರತದ ಅತ್ಯುತ್ತಮ ಸಮಗ್ರ ಬ್ಯಾಂಕ್ ಆಗುವ ಸಾಮರ್ಥ್ಯ ಐಡಿಬಿಐ ಬ್ಯಾಂಕ್‌ಗೆ ಇದೆ- ಫೇರ್‌ಫ್ಯಾಕ್ಸ್ ಸಿಒಒ

ಕೋಟ್ಯಧಿಪತಿ ಹೂಡಿಕೆದಾರ ಪ್ರೇಮ್ ವತ್ಸಾ ನೇತೃತ್ವದ ಫೇರ್‌ಫ್ಯಾಕ್ಸ್, ಪ್ರತಿ ಷೇರಿಗೆ ₹ 81ರಂತೆ ಬಿಡ್ ಸಲ್ಲಿಸಿದೆ. ಸರ್ಕಾರದ ಮಾನದಂಡದ ಮೌಲ್ಯವು ಪ್ರತಿ ಷೇರಿಗೆ ₹ 75.99 ಆಗಿತ್ತು. 2026ರ ಮಾರ್ಚ್ 31ರ ಅನ್ವಯ ಪ್ರತಿ ಷೇರಿನ ಮೌಲ್ಯ ₹51.85 ಇದ್ದಾಗ, ಫೇರ್‌ಫ್ಯಾಕ್ಸ್ ಪ್ರತಿ ಷೇರಿಗೆ ₹ 81 ರಂತೆ ಬಿಡ್ ಸಲ್ಲಿಸಿದೆ. ಅಂದರೆ ಬಂಡವಾಳದ ಮೌಲ್ಯಕ್ಕಿಂತ (ಬುಕ್‌ ವ್ಯಾಲ್ಯು) ಶೇಕಡ 56ರಷ್ಟು ಹೆಚ್ಚಿನ ಬೆಲೆಗೆ ಷೇರು ಖರೀದಿಸಲು ಮುಂದಾಗಿದೆ.

ಮುಂಬೈ: ಸರ್ಕಾರದ ಸ್ವತಂತ್ರ ಮೌಲ್ಯಮಾಪನ ಮಾನದಂಡಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಸಲ್ಲಿಸಿ, ₹ 52,878 ಕೋಟಿಗೆ ಐಡಿಬಿಐ ಬ್ಯಾಂಕ್‌ ಅನ್ನು ಕೆನಡಾದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸ್ವಾಧೀನಪಡಿಸಿಕೊಳ್ಳಲಿದೆ.

ಈ ಸ್ವಾಧೀನದ ಮೂಲಕ ಈ ಹೂಡಿಕೆ ಸಂಸ್ಥೆಯು ಐಡಿಬಿಐ ಬ್ಯಾಂಕ್‌ ಅನ್ನು ಬ್ಯಾಂಕಿಂಗ್, ವಿಮೆ, ಹೂಡಿಕೆ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣೆ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುವ ಬೃಹತ್ ಸಮಗ್ರ ಹಣಕಾಸು ಸಂಸ್ಥೆಯಾಗಿ ರೂಪಿಸುವ ಹಾದಿ ಸುಗಮವಾಗಲಿದೆ.

ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್, ₹ 52,878 ಕೋಟಿ ಮೊತ್ತಕ್ಕೆ ಐಡಿಬಿಐ ಬ್ಯಾಂಕ್‌ನ ಶೇ. 60.72ರಷ್ಟು ನಿಯಂತ್ರಣ ಪಾಲನ್ನು ಖರೀದಿಸಲು ಮುಂದಾಗಿದೆ.

ಕೋಟ್ಯಧಿಪತಿ ಹೂಡಿಕೆದಾರ ಪ್ರೇಮ್ ವತ್ಸಾ ನೇತೃತ್ವದ ಫೇರ್‌ಫ್ಯಾಕ್ಸ್, ಪ್ರತಿ ಷೇರಿಗೆ ₹ 81ರಂತೆ ಬಿಡ್ ಸಲ್ಲಿಸಿದೆ. ಸರ್ಕಾರದ ಮಾನದಂಡದ ಮೌಲ್ಯವು ಪ್ರತಿ ಷೇರಿಗೆ ₹ 75.99 ಆಗಿತ್ತು. 2026ರ ಮಾರ್ಚ್ 31ರ ಅನ್ವಯ ಪ್ರತಿ ಷೇರಿನ ಮೌಲ್ಯ ₹51.85 ಇದ್ದಾಗ, ಫೇರ್‌ಫ್ಯಾಕ್ಸ್ ಪ್ರತಿ ಷೇರಿಗೆ ₹ 81 ರಂತೆ ಬಿಡ್ ಸಲ್ಲಿಸಿದೆ. ಅಂದರೆ ಬಂಡವಾಳದ ಮೌಲ್ಯಕ್ಕಿಂತ (ಬುಕ್‌ ವ್ಯಾಲ್ಯು) ಶೇಕಡ 56ರಷ್ಟು ಹೆಚ್ಚಿನ ಬೆಲೆಗೆ ಷೇರು ಖರೀದಿಸಲು ಮುಂದಾಗಿದೆ.

ಇದನ್ನೂ ಓದಿ: IDBI Bank Recruitment 2026: ಐಡಿಬಿಐ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; 33 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಫೇರ್‌ಫ್ಯಾಕ್ಸ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಕ್ಲಾರ್ಕ್ ಅವರು ಮಾತನಾಡಿ, “ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಭಾರತದ ಅತ್ಯುತ್ತಮ ಸಮಗ್ರ ಬ್ಯಾಂಕ್ ಆಗುವ ಸಾಮರ್ಥ್ಯ ಐಡಿಬಿಐ ಬ್ಯಾಂಕ್‌ಗಿದೆ. ಇದರಿಂದ ಸಾಮಾನ್ಯ ಜನರ ಜೀವನದಲ್ಲೂ ಪರಿವರ್ತನೆ ತರಲು ಸಾಧ್ಯವಾಗಲಿದೆ” ಎಂದು ಹೇಳಿದ್ದಾರೆ.

ಈ ಸ್ವಾಧೀನದ ಬಳಿಕ ಫೇರ್‌ಫ್ಯಾಕ್ಸ್, ಐಡಿಬಿಐ ಬ್ಯಾಂಕ್‌ನ ನಿರ್ವಹಣೆಯ ಮೇಲೆ ನಿಯಂತ್ರಣ ಪಡೆಯಲಿದೆ. ಆದರೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಒಟ್ಟಾಗಿ ಶೇಕಡ 34ರಷ್ಟು ಪಾಲನ್ನು ಉಳಿಸಿಕೊಂಡು ಬ್ಯಾಂಕ್‌ನ ಮುಂದಿನ ಬೆಳವಣಿಗೆಯಲ್ಲಿ ಭಾಗಿಯಾಗಲಿವೆ.

ಐಡಿಬಿಐ ಬ್ಯಾಂಕ್‌ನ ಸ್ವಾಧೀನದ ಆಚೆಗೆ ಗೋ ಡಿಜಿಟ್ ಜನರಲ್ ಇನ್ಶುರನ್ಸ್, ಗೋ ಡಿಜಿಟ್ ಲೈಫ್ ಇನ್ಶುರನ್ಸ್ ಹಾಗೂ ಐಐಎಫ್‌ಎಲ್ ಕ್ಯಾಪಿಟಲ್‌ನಲ್ಲಿನ ಪಾಲನ್ನು ಐಡಿಬಿಐ ಬ್ಯಾಂಕ್‌ ಜೊತೆಗೆ ಸಂಯೋಜಿಸುವುದು ಫೇರ್‌ಫ್ಯಾಕ್ಸ್‌ನ ಯೋಜನೆಯಾಗಿದೆ. ಇದರಿಂದ ಬ್ಯಾಂಕಿಂಗ್, ವಿಮೆ, ಹೂಡಿಕೆ ಮತ್ತು ಸಂಪತ್ತು ನಿರ್ವಹಣೆ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ಸಾಧ್ಯವಾಗಲಿದೆ. ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳಂತಹ ದೊಡ್ಡ ಹಣಕಾಸು ಸಂಸ್ಥೆಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವೂ ಹೆಚ್ಚಲಿದೆ.

ಹಿಂದೊಮ್ಮೆ ಆರ್ಥಿಕ ಸಂಕಷ್ಟ ಎದುರಿಸಿದ್ದ ಐಡಿಬಿಐ ಬ್ಯಾಂಕ್, 2017ರ ಮೇನಿಂದ 2021ರ ಮಾರ್ಚ್‌ವರೆಗೆ ಆರ್‌ಬಿಐನ ತ್ವರಿತ ಸುಧಾರಣಾ ಕ್ರಮಗಳ ಚೌಕಟ್ಟಿನಲ್ಲಿತ್ತು. ಈ ಅವಧಿಯಲ್ಲಿ ಸರ್ಕಾರ ಮತ್ತು ಎಲ್‌ಐಸಿ ಹಲವು ಬಾರಿ ಬಂಡವಾಳ ನೆರವು ನೀಡಿದ್ದವು. ಇದೀಗ ಬ್ಯಾಂಕ್ ಲಾಭದ ಹಾದಿಗೆ ಮರಳಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು ₹9,000–10,000 ಕೋಟಿ ಲಾಭ ದಾಖಲಿಸಿದೆ.

ಫೇರ್‌ಫ್ಯಾಕ್ಸ್, ಭಾರತದಲ್ಲಿ 2001ರಿಂದ ಹೂಡಿಕೆ ಮಾಡುತ್ತಿದ್ದು, ಸಿಎಸ್‌ಬಿ ಬ್ಯಾಂಕ್ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಸಿಎಸ್‌ಬಿ ಬ್ಯಾಂಕ್‌ನಲ್ಲಿ ಬಂಡವಾಳ ಹೂಡಿಕೆ, ತಂತ್ರಜ್ಞಾನ ಮತ್ತು ಕಾರ್ಯವಿಧಾನಗಳ ಸುಧಾರಣೆ ಹಾಗೂ ಆಡಳಿತ ಮಂಡಳಿಯನ್ನು ಬಲಪಡಿಸುವ ಮೂಲಕ ಬ್ಯಾಂಕ್‌ನ ಪುನಶ್ಚೇತನಕ್ಕೆ ನೆರವಾಗಿರುವುದಾಗಿ ಸಂಸ್ಥೆ ಹೇಳಿದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಫೇರ್‌ಫ್ಯಾಕ್ಸ್‌ನ ಇತರ ವಹಿವಾಟುಗಳನ್ನು ಸಂಯೋಜಿಸುವ ಪ್ರಸ್ತಾವನೆಗೆ ನಿಯಂತ್ರಣ ಸಂಸ್ಥೆಗಳು, ಷೇರುದಾರರು ಮತ್ತು ಸಂಬಂಧಿತ ಪ್ರಾಧಿಕಾರಗಳ ಅನುಮೋದನೆಯ ಅಗತ್ಯವಿದೆ. ಈ ವಹಿವಾಟಿನ ಹಣಕಾಸು ವ್ಯವಸ್ಥೆ, ಆಸ್ತಿಗಳ ಮೌಲ್ಯಮಾಪನ ಮತ್ತು ಆಡಳಿತ ಕ್ರಮಗಳು ಪಾರದರ್ಶಕವಾಗಿರುವುದು ಪ್ರಮುಖ ಪರೀಕ್ಷೆಯಾಗಲಿದೆ. ಈ ಒಪ್ಪಂದವು ಐಡಿಬಿಐ ಬ್ಯಾಂಕ್‌ನ ವ್ಯವಹಾರ ಮಾದರಿ ಮತ್ತು ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ಸ್ಥಾನವನ್ನು ಬದಲಿಸುವ ಸಾಧ್ಯತೆಯಿದೆ.