#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025: ಟ್ಯಾಕ್ಸ್‌ ಸ್ಲ್ಯಾಬ್‌ ಬದಲಾವಣೆ, 12 ಲಕ್ಷ ರೂ. ತನಕ ತೆರಿಗೆ ಇರುವುದಿಲ್ಲ ಏಕೆ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ಕೇಂದ್ರ ಬಜೆಟ್‌ ಅನ್ನು ಶನಿವಾರ ಮಂಡಿಸಿದ್ದಾರೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಅವರ 12 ಲಕ್ಷ ರೂ. ಆದಾಯ ತೆರಿಗೆ ಮುಕ್ತ. ಈ ಕುರಿತಾದ ವಿವರ ಇಲ್ಲಿದೆ.

ಟ್ಯಾಕ್ಸ್‌ ಸ್ಲ್ಯಾಬ್‌ ಬದಲಾವಣೆ, 12 ಲಕ್ಷ ರೂ. ತನಕ ತೆರಿಗೆ ಇರುವುದಿಲ್ಲ ಏಕೆ?

ಸಾಂದರ್ಭಿಕ ಚಿತ್ರ.

Profile Ramesh B Feb 1, 2025 7:49 PM

-ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ತಮ್ಮ 8ನೇ ಕೇಂದ್ರ ಬಜೆಟ್‌ ಅನ್ನು ಶನಿವಾರ (ಫೆ. 1) ಮಂಡಿಸಿದ್ದಾರೆ. ಮುಖ್ಯವಾಗಿ ಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಬಂಪರ್‌ ಗಿಫ್ಟ್‌ ನೀಡಿ ನಿರಾಳಗೊಳಿಸಿದ್ದಾರೆ. ಇದರಿಂದಾಗಿ 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಅವರ 12 ಲಕ್ಷ ರೂ. ಆದಾಯ ತೆರಿಗೆ ಮುಕ್ತ. ಇದು ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ, ವೃತ್ತಿಪರರಿಗೂ ಅನ್ವಯವಾಗುತ್ತದೆ. ಜತೆಗೆ ವೇತನದಾರರಿಗೆ 75,000 ರೂ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಕೂಡ ಇರುವುದರಿಂದ ಒಟ್ಟು 12 ಲಕ್ಷದ 75 ಸಾವಿರ ರುಪಾಯಿ ತನಕ ಅವರು ತೆರಿಗೆಯನ್ನುಪಾವತಿಸಬೇಕಾಗಿಲ್ಲ! ಆದರೆ ಇನ್ನೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳು ಇರಬಹುದು. ಅವೆಲ್ಲ ಗೊಂದಲಗಳಿಗೆ ಇಲ್ಲಿದೆ ವಿವರ.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ದರದ ಸ್ಲ್ಯಾಬ್‌ಗಳನ್ನೂ ಪರಿಷ್ಕರಿಸಲಾಗಿದೆ. ಹಾಗಾದರೆ ಯಾವ ಆದಾಯದವರಿಗೆ ಯಾವ ಸ್ಲ್ಯಾಬ್‌, ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದು ಬೆಸ್ಟ್‌ ? ಎಷ್ಟು ತೆರಿಗೆ ಉಳಿತಾಯವಾಗುತ್ತೆ ಎಂಬುತ್ಯಾದಿ ಪ್ರಶ್ನೆ ನಿಮ್ಮಲ್ಲಿರಬಹುದು. ವಿವರವಾಗಿ ಈಗ ನೋಡೋಣ.



2025-26ರ ಬಜೆಟ್‌ ಪ್ರಕಾರ ಆದಾಯ ತೆರಿಗೆಯ ಶ್ರೇಣಿ ಅಥವಾ ಸ್ಲ್ಯಾಬ್‌ ಈ ರೀತಿ ಇದೆ: ವಾರ್ಷಿಕ 4 ಲಕ್ಷ ರೂ. ತನಕ ಆದಾಯಕ್ಕೆ ಯಾವುದೇ ತೆರಿಗೆ ದರವಿಲ್ಲ. 4ರಿಂದ 8 ಲಕ್ಷ ರೂ. ಆದಾಯಕ್ಕೆ ಶೇಕಡಾ 5 ತೆರಿಗೆ ಇದೆ. 8 ಲಕ್ಷ ರೂ.ಯಿಂದ 12 ಲಕ್ಷ ರೂ. ಆದಾಯಕ್ಕೆ ಶೇಕಡಾ 10 ತೆರಿಗೆ ಇದೆ. 12 ಲಕ್ಷ ರೂ.ಯಿಂದ 16 ಲಕ್ಷ ರೂ.ಗೆ ಶೇಕಡಾ 15 ತೆರಿಗೆ ಇದೆ. 20 ಲಕ್ಷ ರೂ.ಯಿಂದ 24 ಲಕ್ಷ ರೂ.ಗೆ ಶೇಕಡಾ 25 ತೆರಿಗೆ ಇದೆ. 24 ಲಕ್ಷ ರೂ. ಮೇಲಿನ ಆದಾಯಕ್ಕೆ ಶೇಕಡಾ 30 ತೆರಿಗೆ ಇದೆ.

Tax

ಹಾಗಾದರೆ ಮೊದಲು ಹೇಗಿತ್ತು? ಎಷ್ಟು ಬದಲಾಗಿದೆ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ನೋಡಿ, ಈ ಹಿಂದೆ 3 ಲಕ್ಷ ರೂ. ತನಕ ತೆರಿಗೆ ದರ ಇದ್ದಿರಲಿಲ್ಲ. ಈಗ 4 ಲಕ್ಷ ರೂ. ತನಕ ಆದಾಯ ತೆರಿಗೆ ವಿನಾಯಿತಿ ಮಿತಿ ವಿಸ್ತರಣೆಯಾಗಿದೆ. ಈ ಹಿಂದೆ 3ರಿಂದ 7 ಲಕ್ಷ ರೂ. ವಾರ್ಷಿಕ ಅದಾಯಕ್ಕೆ ಶೇಕಡಾ 5 ತೆರಿಗೆ ಇತ್ತು. ಈಗ 4-8 ಲಕ್ಷ ರೂ.ಗೆ ವಿಸ್ತರಿಸಲಾಗಿದೆ. ಈ ಹಿಂದೆ 7-10 ಲಕ್ಷ ರೂ. ಆದಾಯಕ್ಕೆ ಶೇಕಡಾ 10 ತೆರಿಗೆ ಸ್ಲ್ಯಾಬ್‌ ಇತ್ತು. ಈಗ 8-12 ಲಕ್ಷ ರೂ.ಗೆ ಅನ್ವಯವಾಗುತ್ತದೆ. ಈ ಹಿಂದೆ 12-15 ಲಕ್ಷ ರೂ. ಅದಾಯಕ್ಕೆ ಶೇಕಡಾ 15 ತೆರಿಗೆ ಇತ್ತು. ಈಗ 12-16 ಲಕ್ಷ ರೂ.ಗೆ ಅನ್ವಯವಾಗುತ್ತದೆ. ಈ ಹಿಂದೆ 15 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಏಕಾಏಕಿ ಶೇಕಡಾ 30 ತೆರಿಗೆ ದರ ಇರುತ್ತಿತ್ತು. ಈಗ 16-20 ಲಕ್ಷ ರೂ. ಅದಾಯದವರಿಗೆ ಶೇಕಡಾ 20 ಮತ್ತು 20-24 ಲಕ್ಷ ರೂ. ಆದಾಯದವರಿಗೆ ಶೇಕಡಾ 25 ಮತ್ತು 24 ಲಕ್ಷ ರೂ.ಗಿಂತ ಹೆಚ್ಚು ಆದಾಯ ಇರುವವರಿಗೆ ಶೇಕಡಾ 30 ತೆರಿಗೆ ಎಂದು ಪರಿಷ್ಕರಿಸಲಾಗಿದೆ.

12 ಲಕ್ಷ ರೂ. ತನಕ ಟ್ಯಾಕ್ಸ್‌ ಫ್ರೀ ಆಗೋದು ಹೇಗೆ? ಏನಿದು ಟ್ಯಾಕ್ಸ್‌ ರಿಬೇಟ್?

ಬಜೆಟ್‌ ಘೋಷಣೆ ಪ್ರಕಾರ 12 ಲಕ್ಷ ರೂ. ತನಕ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಆದರೆ ವಾರ್ಷಿಕ 4 ಲಕ್ಷ ರೂ.ಗಿಂತ ಹೆಚ್ಚು ಅದಾಯ ಇದ್ದಾಗ ತೆರಿಗೆ ಅನ್ವಯವಾಗುವುದಿದ್ದರೆ, 12 ಲಕ್ಷ ರೂ. ತನಕ ತೆರಿಗೆ ಕಟ್ಟದಿರುವುದು ಹೇಗೆ? ಎಂಬ ಪ್ರಶ್ನೆ ಸಹಜ. ಆದರೆ ಸರ್ಕಾರ 12 ಲಕ್ಷ ರೂ. ತನಕ ಆದಾಯ ಇರುವವರಿಗೆ ರಿಬೇಟ್‌ ನೀಡುತ್ತದೆ. ಅಂದರೆ ನಿಮ್ಮ ಆದಾಯವು 12 ಲಕ್ಷ ರೂ. ಒಳಗೆ ಇದ್ದರೆ ಅದಕ್ಕೆ ರಿಬೇಟ್‌ ಪ್ರಕಾರ ತೆರಿಗೆ ಇರುವುದಿಲ್ಲ.‌ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 87 ಎ ಅಡಿಯಲ್ಲಿ ಈ ರಿಬೇಟ್‌ ಸಿಗುತ್ತದೆ. ಆದರೆ 12 ಲಕ್ಷ ರೂ.ಗಿಂತ 1 ರೂ. ಹೆಚ್ಚು ಆದಾಯ ಇದ್ದರೂ, ನಿಮಗೆ 4 ಲಕ್ಷ ರೂ.ಯಿಂದಲೇ ಟ್ಯಾಕ್ಸ್‌ ಲೆಕ್ಕಚಾರ ಅನ್ವಯವಾಗುತ್ತದೆ. ಟ್ಯಾಕ್ಸ್‌ ರಿಬೇಟ್‌ ಈ ಹಿಂದೆ 7 ಲಕ್ಷ ರೂ. ತನಕ ಇತ್ತು. ಈಗ 12 ಲಕ್ಷ ರೂ. ತನಕ ಏರಿಸಿರುವುದು ಗಮನಾರ್ಹ.

ಒಂದು ವೇಳೆ ನಿಮ್ಮ ವೇತನ 16 ಲಕ್ಷ ರೂ. ಇದ್ದರೆ ಟ್ಯಾಕ್ಸ್‌ ಲೆಕ್ಕಾಚಾರ ಹೇಗಿರುತ್ತದೆ? ಆಗ 4 ಲಕ್ಷ ರೂ. ತನಕ ತೆರಿಗೆ ಇರುವುದಿಲ್ಲ. 4-8 ಲಕ್ಷ ರೂ.ಗೆ ಶೇಕಡಾ 5 ಹಾಗೂ 8-12 ಲಕ್ಷ ರೂ.ಗೆ ಶೇಕಡಾ 10 ಮತ್ತು 12-16 ಲಕ್ಷ ರೂ.ಗೆ ಶೇಕಡಾ 15 ತೆರಿಗೆ ಇರುತ್ತದೆ. ಹೀಗಾಗಿ ಒಟ್ಟು 1,20,000 ರೂ. ತೆರಿಗೆ ಕಟ್ಟಬೇಕಾಗುತ್ತದೆ. ಹೀಗಿದ್ದರೂ ಈ ಹಿಂದೆ ನೀಡುತ್ತಿದ್ದ ಟ್ಯಾಕ್ಸ್‌ಗಿಂತ 50,000 ರೂ. ಕಡಿಮೆ.

ಹಳೆಯ ತೆರಿಗೆ ಪದ್ಧತಿ ಏನಾಗಲಿದೆ?

ಬಜೆಟ್‌ ಘೋಷಣೆಗಳು ಹೊಸ ತೆರಿಗೆ ಪದ್ಧತಿಗೆ ಅನ್ವಯವಾಗುತ್ತದೆ. ಹಳೆಯ ತೆರಿಗೆ ವ್ಯವಸ್ಥೆ ಎಂದಿನಂತೆ ಮುಂದುವರಿಯಲಿದೆ. ಬಜೆಟ್‌ ಘೋಷಣೆಗಳು 2025ರ ಏಪ್ರಿಲ್‌ 1ರ ಬಳಿಕ ಗಳಿಸುವ ಆದಾಯಗಳಿಗೆ ಅನ್ವಯವಾಗಲಿದೆ.

ಹಳೆಯ-ಹೊಸ ಟ್ಯಾಕ್ಸ್‌ ಪದ್ಧತಿಯಲ್ಲಿ ಯಾವುದು ಬೆಸ್ಟ್?‌

ಬಹುತೇಕ ಮಂದಿ ಹೊಸ ಟ್ಯಾಕ್ಸ್‌ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಿದ್ದರೂ ನಿಮ್ಮ ಫೈನಾನ್ಷಿಯಲ್‌ ಪ್ರೊಫೈಲ್‌ ಮತ್ತು ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ನೀವು ಎಷ್ಟು ವಿನಾಯಿತಿಯನ್ನು ಕ್ಲೇಮ್‌ ಮಾಡಿಕೊಳ್ಳಲು ಸಾಧ್ಯವಿದೆ ಎಂಬುದರ ಅಧಾರದಲ್ಲಿ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಆದಾಯ 12 ಲಕ್ಷ ರುಪಾಯಿಯ ಒಳಗೆ ಇದ್ದರೆ ಹೊಸ ಪದ್ಧತಿ ಉತ್ತಮ. ಆದರೆ ನಿಮ್ಮ ಆದಾಯ 15-16 ಲಕ್ಷ ರುಪಾಯಿ ಇದ್ದರೆ ಹಳೆಯ ಪದ್ಧತಿಯಲ್ಲಿ ಅನುಕೂಲವಾದೀತು.

ಈಗ ಹೊಸ ತೆರಿಗೆ ಪದ್ಧತಿಯಲ್ಲಿ ಯಾವ ಆದಾಯದವರಿಗೆ ಎಷ್ಟು ತೆರಿಗೆ ಉಳಿತಾಯ ಆಗಬಹುದು ಎಂಬುದನ್ನು ನೋಡೋಣ. ಚಾರ್ಟರ್ಡ್‌ ಅಕೌಂಟೆಂಟ್‌ ಕೆ.ಎಂ ದಿವಾಕರ್‌ ಅವರು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಉಪಯುಕ್ತ ವಿವರ ನೀಡಿದ್ದಾರೆ.

ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂ. ಆಗಿದ್ದರೆ ಹೊಸ ಪದ್ಧತಿಯಲ್ಲಿ 31,200 ರೂ. ತೆರಿಗೆ ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯವಿದ್ದರೆ 83,200 ರೂ. ತೆರಿಗೆ ಉಳಿತಾಯ ಸಿಗುತ್ತದೆ. 15 ಲಕ್ಷ ರೂ. ಆದಾಯ ಇದ್ದರೆ 36,400 ರೂ. ತೆರಿಗೆ ಉಳಿತಾಯವಾಗುತ್ತದೆ. 20 ಲಕ್ಷ ರೂ. ಆದಾಯ ಇದ್ದರೆ 93,600 ರೂ. ಟ್ಯಾಕ್ಸ್‌ ಉಳಿತಾಯವಾಗುತ್ತದೆ. 25 ಲಕ್ಷ ರೂ. ಆದಾಯ ಇದ್ದರೆ 1,14,400 ರೂ. ತೆರಿಗೆ ಉಳಿತಾಯವಾಗುತ್ತದೆ. 30 ಲಕ್ಷ ರೂ. ಅದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 35 ಲಕ್ಷ ರೂ. ಆದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 55 ಲಕ್ಷ ರೂ. ಆದಾಯವಿದ್ದರೆ 1,25,840 ರೂ. ತೆರಿಗೆ ಉಳಿತಾಯವಾಗುತ್ತದೆ.

ಈ ಸುದ್ದಿಯನ್ನೂ ಓದಿ: Agriculture Budget 2025: ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಬಂಪರ್‌ ಕೊಡುಗೆ ಘೋಷಿಸಿದ ಕೇಂದ್ರ

ಬಜೆಟ್‌ನಲ್ಲಿ ಬಾಡಿಗೆ ಕುರಿತ ಟಿಡಿಎಸ್‌ ಮಿತಿಯನ್ನು 2.40 ಲಕ್ಷ ರೂ.ಯಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ. ವೃತ್ತಿಪರ ಶುಲ್ಕಗಳ ಮೇಲಿನ ಟಿಡಿಎಸ್‌ ಮಿತಿಯನ್ನು 30 ಸಾವಿರ ರೂ.ಯಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. ಡಿವಿಡೆಂಡ್‌ ಮೇಲಿನ ಟಿಡಿಎಸ್‌ ಮಿತಿಯನ್ನು 5,000 ರೂ.ಯಿಂದ 10,000 ರೂ.ಗೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಕುರಿತ ಬಡ್ಡಿಯ ಮೇಲಿನ ಟಿಡಿಎಸ್‌ ಮಿತಿಯನ್ನು 50,000 ರೂ.ಯಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ವಿದೇಶ ಪ್ರವಾಸದ ಟಿಸಿಎಸ್‌ ಮಿತಿಯನ್ನು 7 ಲಕ್ಷ ರೂ.ಯಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ.

ಹಣದುಬ್ಬರ, ನಿರುದ್ಯೋಗ, ಆರ್ಥಿಕತೆಯ ಮಂದಗತಿಯ ಸಂದರ್ಭದಲ್ಲಿ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತೆರಿಗೆ ಭಾರವನ್ನು ಇಳಿಸುವ ಮೂಲಕ ನೆರವಾಗಿದೆ.