ನವದೆಹಲಿ, ಮೇ 30: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು (India - US trade agreement) ಮುಂದಿನ ಕೆಲವು ವಾರಗಳಲ್ಲಿ ಅಂತಿಮಗೊಳ್ಳಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ (US Ambassador Sergio Gor), ನವದೆಹಲಿ ಮತ್ತು ವಾಷಿಂಗ್ಟನ್ (New Delhi and Washington) ನಡುವಿನ ಸಂಬಂಧವನ್ನು 21ನೇ ಶತಮಾನದ 'ಅತ್ಯುನ್ನತ ಪಾಲುದಾರಿಕೆ' ಎಂದು ಬಣ್ಣಿಸಿದ್ದಾರೆ. ತಂತ್ರಜ್ಞಾನ, ಕಾರ್ಯತಂತ್ರದ ನಂಬಿಕೆ ಮತ್ತು ಆರ್ಥಿಕ ಸಹಕಾರದಿಂದ ಈ ಸಂಬಂಧವು ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಐಐಟಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋರ್, ''ಉದಯೋನ್ಮುಖ ಅವಕಾಶಗಳನ್ನು, ವಿಶೇಷವಾಗಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಮುನ್ನಡೆಸಲು ಭಾರತ ಮತ್ತು ಅಮೆರಿಕಗಿಂತ ಉತ್ತಮವಾದ ಪಾಲುದಾರಿಕೆ ಮತ್ತೊಂದಿಲ್ಲ'' ಎಂದಿದ್ದಾರೆ. "ಅಮೆರಿಕವು ಭಾರತವನ್ನು ಮತ್ತು ನಿಮ್ಮ ಸರ್ಕಾರವನ್ನು ನಂಬುತ್ತದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮಿತಿಯಿಲ್ಲದ ಅವಕಾಶಗಳಿವೆ" ಎಂದು ಅವರು ತಿಳಿಸಿದ್ದಾರೆ.
ಅಂತರಕಾಲೀನ ವ್ಯಾಪಾರ ಒಪ್ಪಂದದ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರ ಬಿದ್ದಿದೆ. ಒಪ್ಪಂದದ ವಿವರಗಳನ್ನು ಅಂತಿಮಗೊಳಿಸಲು ಅಮೆರಿಕದ ತಂಡವೊಂದು ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಮಾರುಕಟ್ಟೆ ಪ್ರವೇಶ, ಆಮದು ಸುಂಕಗಳು ಮತ್ತು ಪರಸ್ಪರ ವ್ಯಾಪಾರ ಕ್ರಮಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಸುಂಕ ನೀತಿಗಳಿಂದಾಗಿ ಮಾತುಕತೆಗಳಲ್ಲಿ ಕೆಲವು ಅಡಚಣೆಗಳು ಎದುರಾಗಿದ್ದರೂ, ಎರಡೂ ದೇಶಗಳು ಒಪ್ಪಂದಕ್ಕೆ ಹತ್ತಿರವಾಗುತ್ತಿವೆ.
ಭಾರತಕ್ಕೆ ನುಸುಳಿದ ಬಗೆಯನ್ನು ಬಿಚ್ಚಿಟ್ಟ ಬಾಂಗ್ಲಾದೇಶಿಯರು
ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಭೇಟಿಯ ಸಂದರ್ಭದಲ್ಲಿ ಘೋಷಿಸಲಾಗಿದ್ದ 'ಟ್ರಸ್ಟ್' ಉಪಕ್ರಮವನ್ನು ಶ್ಲಾಘಿಸಿದ ಗೋರ್, ''ಇದು ಉಭಯ ದೇಶಗಳ ನಡುವಿನ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ'' ಎಂದಿದ್ದಾರೆ. ಈ ಚೌಕಟ್ಟು ಕೃತಕ ಬುದ್ಧಿಮತ್ತೆ (ಎಐ), ಸೆಮಿ ಕಂಡಕ್ಟರ್, ಫಾರ್ಮಾಸ್ಯುಟಿಕಲ್ಸ್ ಮತ್ತು ಬಾಹ್ಯಾಕಾಶ ಸಹಕಾರದಂತಹ ಕ್ಷೇತ್ರಗಳಲ್ಲಿ ಗೋಚರಿಸುತ್ತಿದೆ. ಅಮೆರಿಕ ತನ್ನ ಫಾರ್ಮಾ ಉತ್ಪನ್ನಗಳ ಶೇ. 40ರಷ್ಟನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಭಾರತೀಯ ಕಂಪನಿಗಳು ಅಮೆರಿಕದಲ್ಲಿ 20.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ.
ನಾಸಾ ಮತ್ತು ಇಸ್ರೋ ನಡುವಿನ ಸಹಕಾರವನ್ನು ಉಲ್ಲೇಖಿಸಿದ ಅವರು, ಚೀನಾದ ಪ್ರಭಾವಕ್ಕೆ ಭಾರತವು ಪ್ರಮುಖ ಪ್ರತಿರೋಧಕವಾಗಿದೆ ಎಂದಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರವು 20 ಬಿಲಿಯನ್ ಡಾಲರ್‌ನಿಂದ ಸುಮಾರು 220 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ನಾಗರಿಕ ಪರಮಾಣು ಕ್ಷೇತ್ರದಲ್ಲಿ ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆಗಾಗಿ ಭಾರತ ನಿಯಮಗಳನ್ನು ರೂಪಿಸುತ್ತಿರುವುದನ್ನು ಅವರು ಸ್ವಾಗತಿಸಿದ್ದಾರೆ. ಇತ್ತೀಚಿನ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಭಾರತ ಭೇಟಿಯು ಉನ್ನತ ಮಟ್ಟದ ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸುತ್ತದೆ ಎಂದು ಗೋರ್ ಹೇಳಿದ್ದಾರೆ.