ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಚಿಲ್ಲರೆ ಸಾಲ ಮಾರುಕಟ್ಟೆ ₹142 ಲಕ್ಷ ಕೋಟಿಗೆ ಏರಿಕೆ: ಎಕ್ಸ್‌ಪೀರಿಯನ್

ವೈಯಕ್ತಿಕ ಸಾಲಗಳು (ಪರ್ಸನಲ್ ಲೋನ್) ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ನೀಡುವ ಸಾಲಗಳು ಮಾರುಕಟ್ಟೆಯ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ. ಹೊಸ ವೈಯಕ್ತಿಕ ಸಾಲಗಳ ಮೌಲ್ಯ ಶೇ. 32ರಷ್ಟು ಹೆಚ್ಚಳವಾಗಿ ₹3 ಲಕ್ಷ ಕೋಟಿಗೆ ತಲುಪಿದ್ದು, ಒಟ್ಟು ಬಾಕಿ ವೈಯಕ್ತಿಕ ಸಾಲಗಳ ಮೌಲ್ಯ ₹16.2 ಲಕ್ಷ ಕೋಟಿಯಾಗಿದೆ.

ಬೆಂಗಳೂರು: ಭಾರತದ ಚಿಲ್ಲರೆ ಸಾಲ (ರಿಟೇಲ್ ಕ್ರೆಡಿಟ್) ಮಾರುಕಟ್ಟೆಯು 2026ರ ಜೂನ್‌ನಲ್ಲಿ ವಾರ್ಷಿಕ ಆಧಾರದ ಮೇಲೆ ಶೇ. 18ರಷ್ಟು ಬೆಳವಣಿಗೆ ದಾಖಲಿಸಿದ್ದು, ಒಟ್ಟು ಬಾಕಿ ಸಾಲಗಳ ಮೌಲ್ಯ ₹142 ಲಕ್ಷ ಕೋಟಿಗೆ ತಲುಪಿದೆ. 2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1 FY27) ಹೊಸ ಸಾಲಗಳ ವಿತರಣೆಯು ₹20 ಲಕ್ಷ ಕೋಟಿಯಾಗಿದೆ ಎಂದು 'ಎಕ್ಸ್‌ಪೀರಿಯನ್' ಸಂಸ್ಥೆಯ ಇತ್ತೀಚಿನ ಉದ್ಯಮ ವಿಶ್ಲೇಷಣೆ ತಿಳಿಸಿದೆ.

ವೈಯಕ್ತಿಕ ಸಾಲಗಳು (ಪರ್ಸನಲ್ ಲೋನ್) ಮತ್ತು ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ನೀಡುವ ಸಾಲಗಳು ಮಾರುಕಟ್ಟೆಯ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ. ಹೊಸ ವೈಯಕ್ತಿಕ ಸಾಲಗಳ ಮೌಲ್ಯ ಶೇ. 32ರಷ್ಟು ಹೆಚ್ಚಳವಾಗಿ ₹3 ಲಕ್ಷ ಕೋಟಿಗೆ ತಲುಪಿದ್ದು, ಒಟ್ಟು ಬಾಕಿ ವೈಯಕ್ತಿಕ ಸಾಲಗಳ ಮೌಲ್ಯ ₹16.2 ಲಕ್ಷ ಕೋಟಿಯಾಗಿದೆ. ಟೆಲಿವಿಷನ್ ಮತ್ತು ರೆಫ್ರಿಜರೇಟರ್‌ ನಂತಹ ಗೃಹೋಪಯೋಗಿ ವಸ್ತುಗಳ ಖರೀದಿ ಸಾಲಗಳ ಒಟ್ಟು ಮೌಲ್ಯ ಶೇ. 37ರಷ್ಟು ಏರಿಕೆಯಾಗಿ ₹1.1 ಲಕ್ಷ ಕೋಟಿಗೆ ತಲುಪಿದೆ. ದ್ವಿಚಕ್ರ ವಾಹನ ಸಾಲಗಳ ಹೊಸ ವಿತರಣೆಯಲ್ಲಿಯೂ ಶೇ. 17ರಷ್ಟು ಬೆಳವಣಿಗೆ ಕಂಡುಬಂದಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಸಣ್ಣ ಮೊತ್ತದ ವೈಯಕ್ತಿಕ ಸಾಲಗಳ ವಿಭಾಗದಲ್ಲಿ ತಮ್ಮ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿವೆ.

ಇದನ್ನೂ ಓದಿ: Stock Market: ಇರಾನ್‌ ಯುದ್ಧ ಸಮಾಪ್ತಿ ಎಫೆಕ್ಟ್‌; ಸೆನ್ಸೆಕ್ಸ್‌ 736 ಅಂಕ ಜಿಗಿತ

ಸಾಲ ಮರುಪಾವತಿಯ ಗುಣಮಟ್ಟದಲ್ಲಿಯೂ ಸುಧಾರಣೆ ಕಂಡುಬಂದಿದೆ. 30 ದಿನಗಳಿಗಿಂತ ಹೆಚ್ಚು ಅವಧಿಗೆ ಬಾಕಿ ಉಳಿದಿರುವ (30+ DPD) ಚಿಲ್ಲರೆ ಸಾಲಗಳ ಪ್ರಮಾಣವು 2025ರ ಜೂನ್‌ ನಲ್ಲಿದ್ದ ಶೇ. 4.1ರಿಂದ 2026ರ ಜೂನ್‌ನಲ್ಲಿ ಶೇ. 3ಕ್ಕೆ ಇಳಿಕೆಯಾಗಿದೆ. ವೈಯಕ್ತಿಕ ಸಾಲಗಳ ಬಾಕಿ ಮರುಪಾವತಿ ಪ್ರಮಾಣವು ಶೇ. 2.3ರಷ್ಟಿದೆ. ಗ್ರಾಹಕ ಬಳಕೆಯ ವಸ್ತುಗಳ ಖರೀದಿ ಸಾಲಗಳ (ಕನ್ಸ್ಯೂಮರ್ ಡ್ಯೂರೆಬಲ್ ಲೋನ್) ಬಾಕಿ ಪ್ರಮಾಣವೂ ಶೇ. 1.9ರಿಂದ ಶೇ. 1.5ಕ್ಕೆ ಇಳಿದಿದೆ.

ಗೃಹ ಸಾಲಗಳ ಒಟ್ಟು ಬಾಕಿ ಮೌಲ್ಯ ಶೇ. 13ರಷ್ಟು ಹೆಚ್ಚಳವಾಗಿ ₹43.6 ಲಕ್ಷ ಕೋಟಿಗೆ ತಲುಪಿದೆ. ಸರಾಸರಿ ಗೃಹ ಸಾಲದ ಮೊತ್ತ ₹32.2 ಲಕ್ಷದಿಂದ ₹34.8 ಲಕ್ಷಕ್ಕೆ ಏರಿಕೆಯಾಗಿದೆ. ಕ್ರೆಡಿಟ್ ಕಾರ್ಡ್‌ಗಳ ಒಟ್ಟು ಬಾಕಿ ಮೊತ್ತ ₹3.15 ಲಕ್ಷ ಕೋಟಿಯಾಗಿದೆ.

ಎಕ್ಸ್‌ಪೀರಿಯನ್‌ನ ಉದ್ಯಮ ವಿಶ್ಲೇಷಣೆಯು ಸಾಲದಾತರಿಗೆ ಮಾರುಕಟ್ಟೆಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು, ಹೊಸ ಅವಕಾಶಗಳನ್ನು ಗುರುತಿಸಲು ಹಾಗೂ ಸಾಲದ ಗುಣಮಟ್ಟವನ್ನು ಕಾಪಾಡಿಕೊಂಡು ಸುಸ್ಥಿರ ಬೆಳವಣಿಗೆ ಸಾಧಿಸಲು ನೆರವಾಗುತ್ತದೆ.