ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂದುವರಿದ ಇಂಡಿಗೋ ಸಮಸ್ಯೆ: ತನಿಖೆಗೆ ಸರ್ಕಾರದಿಂದ ಸಮಿತಿ ರಚನೆ

ವಾರಾಂತ್ಯವಾಗುತ್ತಾ ಬಂದರೂ ಇಂಡಿಗೋ ಸಮಸ್ಯೆಗಳು ಪರಿಹಾರವಾದಂತೆ ಕಾಣುತ್ತಿಲ್ಲ. ಸುಮಾರು ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡು ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಇಂಡಿಗೋ ಕೂಡ ಹೋರಾಡುತ್ತಿದೆ. ಆದರೆ ಈ ಎಲ್ಲದರ ನಡುವೆ ಅಡೆತಡೆಗಳು ಹೆಚ್ಚಾಗುತ್ತಲೇ ಇವೆ. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಈಗ ಸರ್ಕಾರ ಮಧ್ಯ ಪ್ರವೇಶಿಸಿದೆ. ಪ್ರಕರಣದ ತನಿಖೆಗೆ ಸಮಿತಿಯನ್ನು ರಚಿಸಿದೆ.

(ಸಂಗ್ರಹ ಚಿತ್ರ)

ನವದೆಹಲಿ: ಕಳೆದ ಸೋಮವಾರ ಪ್ರಾರಂಭವಾದ ಇಂಡಿಗೋ (IndiGo) ವಿಮಾನಯಾನದಲ್ಲಿನ ತೊಂದರೆಗಳು ವಾರಂತ್ಯದವರೆಗೂ ಮುಂದುವರಿದಿದೆ. ಸುಮಾರು ಸಾವಿರಕ್ಕೂ ಹೆಚ್ಚು ವಿಮಾನಗಳು (Flight Cancel) ರದ್ದುಗೊಂಡಿದ್ದು ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಹುಡುಕಲು ಇಂಡಿಗೋ ಒದ್ದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ಮಧ್ಯ ಪ್ರವೇಶಿಸಿದೆ. ಇಂಡಿಗೋ ವಿಮಾನಗಳು ರದ್ಧತಿಗೆ ಎದುರಾಗಿರುವ ಅಡೆತಡೆಗಳ ನಿವಾರಣೆಗೆ ತನಿಖಾ ಸಮಿತಿಯನ್ನು (investigation committee) ಸ್ಥಾಪಿಸಿದೆ. ಅಲ್ಲದೇ ವಿಮಾನಯಾನ ಸಂಸ್ಥೆಯ ಜಾರಿಗೊಳಿಸಿರುವ ಹೊಸ ಮಾನದಂಡಗಳನ್ನು ಸಧ್ಯ ಸ್ಥಗಿತಗೊಳಿಸಲಾಗಿದೆ.

ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುವ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಶುಕ್ರವಾರ ಸಾವಿರಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇದರಿಂದ ವಾರಂತ್ಯದಲ್ಲೂ ಇಂಡಿಗೋ ಸಮಸ್ಯೆ ನಿವಾರಣೆಯಾಗುವ ಲಕ್ಷಣ ಕಂಡು ಬಂದಿಲ್ಲ. ದೇಶಾದ್ಯಂತ ಲಕ್ಷಾಂತರ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಇಂಡಿಗೋ ಕಾರ್ಯಾಚರಣೆಯ ಅತ್ಯಂತ ಕೆಟ್ಟ ದಿನವೆಂದು ಸಿಇಒ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.

ನಿಶ್ಚಿತಾರ್ಥದ ಉಂಗುರ ತೆಗೆದ ಸ್ಮೃತಿ ಮಂಧಾನ: ವಿವಾಹ ರದ್ದಾಯಿತೇ?

ನಾಲ್ಕನೇ ದಿನವೂ ಇಂಡಿಗೋ ಸಮಸ್ಯೆ ಬಗೆ ಹರಿಯದೇ ಇರುವ ಕಾರಣ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡಲು ಸಿದ್ಧತೆ ನಡೆಸಿತು. ಅದಕ್ಕಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ವಿಮಾನಯಾನ ಸಿಬ್ಬಂದಿ ಕರ್ತವ್ಯ ನಿರ್ವಹಣಾ ಅವಧಿ ನಿಯಂತ್ರಣ (ಎಫ್‌ಡಿಟಿಎಲ್) ಮಾನದಂಡಗಳನ್ನು ಸ್ಥಗಿತಗೊಳಿಸಿದೆ. ರದ್ದುಗೊಂಡಿರುವ ಎಲ್ಲಾ ವಿಮಾನಗಳನ್ನು ಮೊದಲಿನಂತೆ ಕಾರ್ಯಾರಂಭಿಸಲು ಸೂಚನೆಯನ್ನು ನೀಡಿತು.

ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು; ಪ್ರಯಾಣಿಕರು ನಿರಾಳ

ಶುಕ್ರವಾರ ನಡೆದ ಬೆಳವಣಿಗೆಗಳು

  1. ಸಾವಿರಕ್ಕೂ ಹೆಚ್ಚು ವಿಮಾನ ರದ್ದುಗೊಂಡಿತು.ಪೈಲಟ್‌ಗಳ ಕೊರತೆ ನಾಲ್ಕನೇ ದಿನವೂ ಮುಂದುವರಿದುದರಿಂದ ಇಂಡಿಗೋ ಶುಕ್ರವಾರ ಮಧ್ಯರಾತ್ರಿವರೆಗೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ದೇಶೀಯ ವಿಮಾನಗಳನ್ನು ರದ್ದುಗೊಳಿಸಿತ್ತು. ಈ ಸಮಸ್ಯೆ ಇನ್ನೂ ಹಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ.
  2. ವಿಮಾನಯಾನದಲ್ಲಿ ಮೊದಲ ಪ್ರಾಶಸ್ತ್ಯವನ್ನು ಮಕ್ಕಳು, ಹಿರಿಯ ನಾಗರಿಕರಿಗೆ ನೀಡುವಂತೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಶುಕ್ರವಾರ ತಿಳಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದರಿಂದ ದುರ್ಬಲ ಪ್ರಯಾಣಿಕರಿಗೆ ವಿಶೇಷ ಗಮನ ನೀಡಬೇಕು. ಹೆಚ್ಚು ಸಹಾಯದ ಅಗತ್ಯವಿರುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  3. ಜನರು ನಮ್ಮ ಪ್ರಮುಖ ಆದ್ಯತೆ ಎಂದಿರುವ ಸಚಿವರು, ತನಿಖಾ ಸಮಿತಿ ತನ್ನ ವರದಿ ಸಲ್ಲಿಸಿದ ಅನಂತರವೇ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತದೆ ಮತ್ತು ದಂಡವನ್ನು ನಿರ್ಧರಿಸಲಾಗುತ್ತದೆ. ವಿಚಾರಣೆಯ ಬಳಿಕವೇ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು.
  4. ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರು ತೊಂದರೆಗೀಡಾಗಿದ್ದರಿಂದ ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರ, ಇಂಡಿಗೋ ಕಾರ್ಯಾಚರಣೆಗಳಲ್ಲಿ ಏನು ತಪ್ಪಾಗಿದೆ ಎಂಬುದರ ತನಿಖೆ ನಡೆಸಿ., ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
  5. ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಸರ್ಕಾರವು 24×7 ವಾಯುಯಾನ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿತು.
  6. ಇಂಡಿಗೊ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಕಾರಣವನ್ನು ಪತ್ತೆ ಹಚ್ಚಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಾಲ್ವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ. ಇದರಲ್ಲಿ ಜಂಟಿ ಮಹಾನಿರ್ದೇಶಕ ಸಂಜಯ್ ಕೆ. ಬ್ರಹ್ಮಣೆ, ಉಪ ಮಹಾನಿರ್ದೇಶಕ ಅಮಿತ್ ಗುಪ್ತಾ, ಎಸ್‌ಎಫ್‌ಒಐ ಕ್ಯಾಪ್ಟನ್ ಕಪಿಲ್ ಮಾಂಗ್ಲಿಕ್ ಮತ್ತು ಎಫ್‌ಒಐ ಕ್ಯಾಪ್ಟನ್ ಲೋಕೇಶ್ ರಾಂಪಾಲ್ ಅವರನ್ನು ಒಳಗೊಂಡ ಸಮಿತಿಯು 15 ದಿನಗಳಲ್ಲಿ ಸಂಶೋಧನೆಗಳು ಮತ್ತು ಶಿಫಾರಸುಗಳನ್ನು ಸಲ್ಲಿಸಲಿದೆ.
  7. ಎದುರಾಗಿರುವ ಸಮಸ್ಯೆಗಳು ಡಿಸೆಂಬರ್ 15ರೊಳಗೆ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಾವು ತೀವ್ರ ಅಡೆತಡೆಗಳನ್ನು ಎದುರಿಸಿದ್ದೇವೆ. ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಇದೆ. ಆದರೆ ಇದರ ಪರಿಹಾರ ಕಾರ್ಯವು ಯುದ್ದೋಪಾದಿಯಲ್ಲಿ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
  8. ವಿಮಾನಯಾನ ಅವ್ಯವಸ್ಥೆಯ ನಡುವೆ ಪ್ರಯಾಣದ ತೊಂದರೆಗಳನ್ನು ನಿವಾರಿಸಲು ಭಾರತೀಯ ರೈಲ್ವೆಯು ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದೆ. ಮುಂದಿನ ಏಳು ದಿನಗಳವರೆಗೆ ಜಮ್ಮು-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ 12426ರಲ್ಲಿ 72 ಸೀಟುಗಳನ್ನು ಹೊಂದಿರುವ ಒಂದು 3 ನೇ ಎಸಿ ಕೋಚ್ ಅನ್ನು ಸೇರಿಸಿದೆ. ಪ್ರಯಾಣಿಕರ ಅನುಕೂಲ ಮತ್ತು ಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  9. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ವಿಮಾನ ಕರ್ತವ್ಯ ಸಮಯ ಮಿತಿಗಳು (ಎಫ್‌ಡಿಟಿಎಲ್) ಆದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಇದು ಇಂಡಿಗೋಗೆ ಮಾತ್ರ ಅನ್ವಯವಾಗಲಿದೆ. ಇಂಡಿಗೋ ಪೈಲಟ್‌ಗಳಿಗೆ ಆರು ರಾತ್ರಿ ಲ್ಯಾಂಡಿಂಗ್‌ಗಳವರೆಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದು, ಇದು ಪ್ರಸ್ತುತ ವಿಮಾನ ಕರ್ತವ್ಯ ಸಮಯ ಮಿತಿಗಳು ಮಾನದಂಡದಲ್ಲಿ ಬಹುದೊಡ್ಡ ಸಡಿಲಿಕೆಯಾಗಿದೆ. ಪ್ರತಿ ಪೈಲಟ್‌ಗೆ ರಾತ್ರಿ ಲ್ಯಾಂಡಿಂಗ್‌ಗಳನ್ನು ಎರಡು ಎಂದು ಮಿತಿಗೊಳಿಸಲಾಗಿದೆ. ಈ ಮೂಲಕ ಪೈಲಟ್‌ಗಳು ಸತತ ಎರಡು ರಾತ್ರಿ ಪಾಳಿಗಳನ್ನು ಕೈಗೊಳ್ಳುವುದನ್ನು ನಿಷೇಧಿಸುವ ನಿಯಮವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
  10. ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹಲವಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ತಾತ್ಕಾಲಿಕ ಪರಿಹಾರ ಕ್ರಮದೊಂದಿಗೆ ಈ ಬಿಕ್ಕಟ್ಟನ್ನು ಪರಿಹರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ವಿಮಾನ ರದ್ದುಗೊಂಡ ಬಳಿಕ ವಿವಾಹ, ಸಭೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಆನ್ ಲೈನ್ ಮೂಲಕ ನಡೆದಿದೆ.
  11. ಇಂಡಿಗೋದ ಹಲವಾರು ವಿಮಾನಗಳು ರದ್ದುಗೊಂಡಿದ್ದರಿಂದ ಪ್ರಮುಖ ದೇಶೀಯ ಮಾರ್ಗಗಳ ವಿಮಾನ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಲ್ಲಿ ನವದೆಹಲಿಯಿಂದ ಚೆನ್ನೈಗೆ ಏಕಮುಖ ಸಂಚಾರ ದರ 65,985 ರೂ.ಗಳಿಗೆ ಏರಿದರೆ, ಭಾರತದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ನವದೆಹಲಿಯಿಂದ ಮುಂಬೈ ಸಂಚಾರ ದರ 38,676 ರೂ.ಗಳಿಗೆ ಏರಿಕೆಯಾಗಿದೆ. ಇನ್ನು ದೆಹಲಿ-ಕೋಲ್ಕತ್ತಾ ಪ್ರಯಾಣ ದರ 38,699 ರೂ. ಗಳಿಗಿಂತ ಹೆಚ್ಚಾಗಿದೆ. ದರ ಹೆಚ್ಚಾದರೂ ಸೀಟು ಲಭ್ಯತೆ ಪ್ರಯಾಣಿಕರಿಗೆ ಖಚಿತವಾಗಿ ಸಿಗುತ್ತಿಲ್ಲ. ಹೀಗಾಗಿ ಈ ತೊಂದರೆ ಇನ್ನೊಂದು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.

ವಿದ್ಯಾ ಇರ್ವತ್ತೂರು

View all posts by this author