ಮುಂಬಯಿ: ಆನ್‌ಲೈನ್ ರಿಟೇಲ್ ಸ್ಟಾಕ್ ಬ್ರೋಕರೇಜ್ ಕಂಪನಿ ಜೆರೋಧಾ (Zerodha Company) ವಿರುದ್ಧ ಮುಂಬಯಿ ಮೂಲದ ಹೂಡಿಕೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ "ಜೆರೋಧಾ ಸ್ಕ್ಯಾಮ್ʼ ಎಂದು ಹಗರಣದ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಇಒ ನಿತಿನ್ ಕಾಮತ್ ಅವರೂ ಪ್ರತಿಕ್ರಿಯೆ ಮಾಡಿದ್ದಾರೆ.
ಹಾಗಾದರೆ ಆಗಿದ್ದೇನು?
ಡಾ. ಅನಿರುದ್ಧ ಮಲ್ಪಾನಿ ಎಂಬುವರು, ಜೆರೋಧಾ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ ನನ್ನ ಹಣವನ್ನು ಟ್ರೇಡಿಂಗ್ ಅಕೌಂಟ್‌ನಿಂದ ಹಿಂತೆಗೆದುಕೊಳ್ಳಲು ಕಂಪನಿ ಬಿಡುತ್ತಿಲ್ಲ. ದಿನದ ವಿತ್ ಡ್ರಾವಲ್ ಮಿತಿ 5 ಕೋಟಿ ರುಪಾಯಿಗಳು ಎನ್ನುತ್ತಿದ್ದಾರೆ. ಕಂಪನಿಯು ನನ್ನ ಹಣವನ್ನು ಉಚಿತವಾಗಿ ಬಳಸುತ್ತಿದೆ. ಇದೊಂದು ಅನ್ಯಾಯ, ಇದು ಹಗರಣ ಎಂದು ಡಾ. ಅನಿರುದ್ಧ ಮಲ್ಪಾನಿ ಅವರು ಜಾಲತಾಣದ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ತಮ್ಮ ಖಾತೆಯಲ್ಲಿ ಹಿಂಪಡೆಯಬಹುದಾದ 42.9 ಕೋಟಿ ರುಪಾಯಿ ಬ್ಯಾಲೆನ್ಸ್ ಇದೆ. ಆದರೆ ದಿನವೊಂದಕ್ಕೆ 5 ಕೋಟಿ ರುಪಾಯಿಗಿಂತ ಹೆಚ್ಚು ಹಣವನ್ನು ವಿತ್ ಡ್ರಾವಲ್ ಮಾಡಲು ಸಾಧ್ಯವಾಗುತ್ತಿಲ್ಲ. ಕೇಳಿದರೆ ದಿನಕ್ಕೆ 5 ಕೋಟಿ ರುಪಾಯಿ ವಿತ್ ಡ್ರಾವಲ್ ಮಿತಿ ಇದೆ ಎನ್ನುತ್ತಾರೆ. ಇದು ಅನ್ಯಾಯ ಎಂದು ಡಾ. ಅನಿರುದ್ಧ ಆರೋಪಿಸಿದ್ದರು.
ಈ ಪೋಸ್ಟ್ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತ್ತು. ಅನೇಕ ಮಂದಿ ಗಮನಿಸಿದ್ದರು. ಸಾಕಷ್ಟು ಚರ್ಚೆಗೆ ಈ ಪ್ರಸಂಗ ಕಾರಣವಾಗಿತ್ತು. ಡಾ. ಅನಿರುದ್ಧ್ ಮಲ್ಪಾನಿ ಅವರು ಐವಿಎಫ್ ಸ್ಪೆಷಲಿಸ್ಟ್ ಮತ್ತು ಏಂಜೆಲ್ ಇನ್ವೆಸ್ಟರ್ ಕೂಡ ಆಗಿದ್ದಾರೆ.
ಈ ಸುದ್ದಿಯನ್ನೂ ಓದಿ: WIPRO: ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ನಿವ್ವಳ ಆದಾಯ ಶೇ.2.5 ಹೆಚ್ಚಳ, ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಶೇ.1.2ರಷ್ಟು ಪ್ರಗತಿ
ಹೀಗಿದ್ದರೂ, ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಜೆರೋಧಾ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು, ಡಾಕ್ಟರ್ ಅನಿರುದ್ಧ ಅವರೇ, ನಿಮ್ಮ ಹಣ ಹಿಂತೆಗೆತ ಮನವಿಯನ್ನು ಪರಿಗಣಿಸಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಹಣಕಾಸು ಸಂಸ್ಥೆಗಳಲ್ಲೂ ಇರುವಂತೆ ನಮ್ಮಲ್ಲೂ ಹಣ ಹಿಂತೆಗೆತೆಕ್ಕೆ ಸಂಬಂಧಿಸಿ ನಿಯಮಗಳು ಮತ್ತು ಪ್ರಕ್ರಿಯೆಗಳು ಇವೆ. ನಮ್ಮಲ್ಲೂ ಕೆಲವು ಪರಿಶೀಲನೆಗಳು ನಡೆಯುತ್ತವೆ. ಆದ್ದರಿಂದ ದಿನಕ್ಕೆ ವಿತ್ ಡ್ರಾವಲ್ ಮಿತಿ 5 ಕೋಟಿ ರುಪಾಯಿಗೆ ನಿಗದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 5 ಕೋಟಿ ರುಪಾಯಿಗಿಂತ ಹೆಚ್ಚಿನ ಹಣದ ವಿತ್ ಡ್ರಾವಲ್‌ಗೆ ಮಾನ್ಯುಯಲ್ ವೆರಿಫಿಕೇಶನ್ ಅಗತ್ಯ ಇದೆ. ಸಂಭಾವ್ಯ ವಂಚನೆಗಳನ್ನು ತಡೆಯಲು ಈ ಪ್ರಕ್ರಿಯೆ ನಡೆಯುತ್ತದೆ ಎಂದು ನಿತಿನ್ ಕಾಮತ್ ವಿವರಿಸಿದ್ದಾರೆ.
ಹಣವನ್ನು ಹಿಂಪಡೆಯುವಾಗ ಕೆಲವೊಮ್ಮೆ ಏನಾದರೂ ಸಮಸ್ಯೆಗಳು, ಅಡಚಣೆಗಳು ಎದುರಾಗುವ ಸಂಭವ ಇರುತ್ತವೆ ಎಂಬುದನ್ನು ನೀವೂ ಕಲ್ಪಿಸಿಕೊಳ್ಳಬಹುದು. ಒಂದು ಸಲ ಹಣ ಹಿಂತೆಗೆತ ಆದ ಬಳಿಕ ರಿಕವರಿ ಮಾಡಿಕೊಳ್ಳಲು ಮಾರ್ಗ ಇರುವುದಿಲ್ಲ. ಆದ್ದರಿಂದ 5 ಕೋಟಿ ರುಪಾಯಿಗಳ ಮಿತಿ ಇದೆ. ಸಂಭವನೀಯ ವಂಚನೆಗಳು ನಡೆಯದಂತೆ ತಡೆಯಲು ಹಾಗೂ ಗ್ರಾಹಕರ ಹಿತದೃಷ್ಟಿಯಿಂದಲೇ ಈ ನಿಯಮಾವಳಿ ತರಲಾಗಿದೆ ಎಂದು ಕಾಮತ್ ಅವರು ವಿವರಿಸಿದ್ದಾರೆ. ಆನ್‌ಲೈನ್ ತಜ್ಞರ ಪ್ರಕಾರವೂ ಕೋಟ್ಯಂತರ ರುಪಾಯಿ ಮೊತ್ತದ ದೊಡ್ಡ ಹಣದ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಹೆಚ್ಚುವರಿ ತಪಾಸಣೆಗಳು ಮತ್ತು ಪ್ರಕ್ರಿಯೆಗಳು ಅಗತ್ಯ. ಇದರಿಂದ ಹೂಡಿಕೆದಾರರ ಹಣದ ಸುರಕ್ಷತೆಯನ್ನೂ ಕಾಪಾಡಬಹುದು.