ದೆಹಲಿ, ಮಾ. 3: ಬಂಗಾರ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಉಂಟಾಗಿದೆ (Gold-Silver Prices Rise). ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾದ ಅಂಕಿ ಅಂಶಗಳು ಇದನ್ನು ತಿಳಿಸುತ್ತಿವೆ. ಇರಾನ್ ಮತ್ತು ಅಮೆರಿಕ- ಇಸ್ರೇಲ್ ಪಡೆಗಳ ನಡುವೆ ಭೀಕರ ಯುದ್ಧ ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಹಾಗಾದರೆ ಈಗ ಚಿನ್ನ-ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದೇ ಅಥವಾ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕೆ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಬಂಗಾರದ ದರ ಪ್ರತಿ 10 ಗ್ರಾಮ್‌ಗೆ 1 ಲಕ್ಷದ 70 ಸಾವಿರ ರುಪಾಯಿಗಳ ಉನ್ನತ ಮಟ್ಟದಲ್ಲಿದೆ. ಬೆಳ್ಳಿಯ ದರ ಪ್ರತಿ ಕೆ.ಜಿ.ಗೆ 2 ಲಕ್ಷದ 95 ಸಾವಿರ ರುಪಾಯಿಯಷ್ಟಿದೆ.
2026 ಫೆಬ್ರವರಿ 17ರಿಂದ 10 ಗ್ರಾಮ್ ಬಂಗಾರದ ದರ ಹೆಚ್ಚಳ ಹೀಗಿದೆ ನೋಡಿ:
ಫೆಬ್ರವರಿ 17: 1,51,000/-
ಫೆಬ್ರವರಿ 24: 1,58,728/-
ಮಾರ್ಚ್ 2: 1,67,059/-
ಮಾರ್ಚ್ 3: 1,70,000
ವಿಡಿಯೊ ಇಲ್ಲಿದೆ:
ಮಾರುಕಟ್ಟೆ ತಜ್ಞರ ಪ್ರಕಾರ ಇರಾನ್ - ಇಸ್ರೇಲ್ ಯುದ್ಧ ಮುಂದುವರಿದರೆ ಬಂಗಾರ-ಬೆಳ್ಳಿಯ ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇಂಡಿಯಾ ಬುಲಿಯನ್ & ಜ್ಯುವೆಲರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಅಕ್ಷಾ ಕಾಂಬೋಜಿ ಅವರ ಪ್ರಕಾರ, ಅಮೆರಿಕ- ಇರಾನ್ ಯುದ್ಧದ ತೀವ್ರಗೊಂಡಿರುವುದರಿಂದ ಬಂಗಾರದ ದರ ಏರುಗತಿಯಲ್ಲಿದೆ. ಹೂಡಿಕೆಗೆ ಚಿನ್ನ ಸುರಕ್ಷಿತ ತಾಣವಾದ್ದರಿಂದ ಅದಕ್ಕೆ ಬೇಡಿಕೆ ಹೆಚ್ಚುತ್ತಿದೆ.
ಸಾಮಾನ್ಯವಾಗಿ ಚಿನ್ನವು ಹೂಡಿಕೆದಾರರಿಗೆ ಸುರಕ್ಷಿತ ಸಾಧನವಾಗಿದೆ. ಈ ಕಾರಣಕ್ಕಾಗಿ ವಿಪತ್ತುಗಳ ಸಂದರ್ಭ ಹೂಡಿಕೆದಾರರು ಚಿನ್ನದಲ್ಲಿ ಇನ್ವೆಸ್ಟ್ ಮಾಡುತ್ತಾರೆ. ಬೇಡಿಕೆ ಹೆಚ್ಚಳವಾದಾಗ ಸಹಜವಾಗಿ ಅದರ ದರವೂ ಏರುತ್ತದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಇದರಿಂದ ಹಣದುಬ್ಬರ ಕೂಡ ಹೆಚ್ಚುವ ಸಾಧ್ಯತೆ ಇದೆ. ಆದು ಕೂಡ ಚಿನ್ನದ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇರಾನ್- ಇಸ್ರೇಲ್ ಸಮರ: ಪೆಟ್ರೋಲ್ ಬೆಲೆ 200 ರುಪಾಯಿ ಆಗುತ್ತಾ?
ಚಿನ್ನ ಮತ್ತು ಬೆಳ್ಳಿಯಲ್ಲಿ ಯಾವಾಗ ಹೂಡಿಕೆ ಮಾಡಬೇಕು?
ಆನಂದ್ ರಾತಿ ಶೇರ್ಸ್ ಆ್ಯಂಡ್ ಸ್ಟಾಕ್ ಬ್ರೋಕರ್ಸ್‌ನ ಕಮಾಡಿಟೀಸ್ ಆ್ಯಂಡ್ ಕರೆನ್ಸೀಸ್‌ನ ಸಹಾಯಕ ಉಪಾಧ್ಯಕ್ಷ ಮನೀಶ್ ಶರ್ಮಾ ಹೀಗೆನ್ನುತ್ತಾರೆ- ನೀವು ದೀರ್ಘಾವಧಿಗೆ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ. ಏಕೆಂದರೆ 2025ರಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಉಂಟಾಗಿರುವ ಪ್ರಬಲ ಫಂಡಮೆಂಟಲ್ಸ್ 2026ರಲ್ಲೂ ಮುಂದುವರಿದಿದೆ. ಹೊಸತಾಗಿ ಹೂಡಿಕೆ ಮಾಡುವವರು ದರದಲ್ಲಿ 5-10 ಪರ್ಸೆಂಟ್ ಇಳಿಕೆ ಆದಾಗ ಹಂತಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ಶರ್ಮಾ.
ಎಂಎಂಟಿಸಿ-ಪಿಎಎಂಪಿಯ ಸಿಇಒ ಮತ್ತು ನಿರ್ದೇಶಕರಾದ ಸಮಿತ್ ಗುಹಾ ಅವರು, ಭಾರತದಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಸ್ವಲ್ಪ ಸ್ವಲ್ಪವೇ ಹಣವನ್ನು ಇದರಲ್ಲಿ ಇನ್ವೆಸ್ಟ್ ಮಾಡ್ತಾ ಹೋಗಿ ಎನ್ನುತ್ತಾರೆ ಅವರು.
ಬಂಗಾರ ಮತ್ತು ಬೆಳ್ಳಿಯ ರೇಶಿಯೊ ಗಮನಿಸಿ ಹೂಡಿಕೆ ಮಾಡಬಹುದು. ಗೋಲ್ಡ್ ಟು ಸಿಲ್ವರ್ ರೇಶಿಯೊ 80ಕ್ಕಿಂತ ಹೆಚ್ಚು ಇದ್ದಾಗ ಬೆಳ್ಳಿಯನ್ನು ಖರೀದಿಸಬಹುದು. ಗೋಲ್ಡ್ ಟು ಸಿಲ್ವರ್ ರೇಶಿಯೊ 50ಕ್ಕಿಂತ ಕಡಿಮೆ ಇದ್ದಾಗ ಬಂಗಾರವನ್ನು ಖರೀದಿಸಬಹುದು.
ಹೂಡಿಕೆಯ ದೃಷ್ಟಿಯಿಂದ ಗೋಲ್ಡ್, ಸಿಲ್ವರ್ ಇಟಿಎಫ್‌ಗಳು ಉತ್ತಮ ಆಯ್ಕೆಯಾಗಿದೆ. ಚಿನ್ನದ ನಾಣ್ಯ, ಗಟ್ಟಿ, ಆಭರಣ, ಬೆಳ್ಳಿಯ ಜ್ಯುವೆಲ್ಲರಿಗಳಲ್ಲಿಯೂ ಹೂಡಿಕೆ ಮಾಡಬಹುದು. ಆದರೆ ಜ್ಯುವೆಲ್ಲರಿಗಳಿಗೆ ಮೇಕಿಂಗ್ ಶುಲ್ಕ ಕೊಡಬೇಕಾಗುತ್ತದೆ.
ಹೀಗಿದ್ದರೂ, ಕೆಲವು ತಜ್ಞರ ಪ್ರಕಾರ ಜಿಯೊಪೊಲಿಟಿಕಲ್ ರಿಸ್ಕ್ ಗಳು ಮುಂದುವರಿದರೆ ಚಿನ್ನದ ದರ ಏರುಗತಿಯಲ್ಲಿ ಮುಂದುವರಿಯಲಿದೆ. ಕೋಟಕ್ ಮಹೀಂದ್ರಾ ಎಎಂಸಿಯ ಫಂಡ್ ಮ್ಯಾನೇಜರ್ ಸತೀಶ್ ದೊಂಡಪತಿ ಅವರ ಪ್ರಕಾರ, ಜಿಯೊ ಪೊಲಿಟಿಕಲ್ ರಿಸ್ಕ್ ಗಳು ಕಡಿಮೆಯಾದಾಗ, ಚಿನ್ನ-ಬೆಳ್ಳಿಯ ದರ 3-8 ಪರ್ಸೆಂಟ್ ತನಕ ಇಳಿಕೆಯಾಗುವ ನಿರೀಕ್ಷೆ ಇದೆ.
ಗೋಲ್ಡ್ ಇಟಿಎಫ್‌ಗಳ ಜನಪ್ರಿಯತೆ ಹೆಚ್ಚಳ
ಕಳೆದ ದಶಕದಿಂದೀಚೆಗೆ ಗೋಲ್ಡ್ ಇಟಿಎಫ್‌ಗಳು 16.65 ಪರ್ಸೆಂಟ್ ರಿಟರ್ನ್ ಕೊಟ್ಟಿವೆ. ಸಿಲ್ವರ್ ಇಟಿಎಫ್‌ಗಳು 59.24 ಪರ್ಸೆಂಟ್ ರಿಟರ್ನ್ ನೀಡಿವೆ.
ಈಗ ಬಂಗಾರದ ಜ್ಯುವೆಲ್ಲರಿ, ಗೋಲ್ಡ್ ಇಟಿಎಫ್ ಮೇಲೆ ಹೇಗೆ ಟ್ಯಾಕ್ಸ್ ಅನ್ವಯವಾಗುತ್ತದೆ ಎಂಬುದನ್ನು ತಿಳಿಯೋಣ. ಭೌತಿಕ ಬಂಗಾರ, ಜ್ಯುವೆಲ್ಲರಿಗಳನ್ನು 24 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಇಟ್ಟುಕೊಂಡು, ಬಳಿಕ ಮಾರಾಟ ಮಾಡಿದರೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ (LTCG) ಅನ್ವಯವಾಗುತ್ತದೆ. ಇದು 12.5 ಪರ್ಸೆಂಟ್ ಇರುತ್ತದೆ. 24 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮಾರಿದರೆ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಸ್ಲ್ಯಾಬ್ ರೇಟ್‌ನಲ್ಲಿ ಅನ್ವಯವಾಗುತ್ತದೆ.
ಸತತ ಎರಡನೇ ವರ್ಷವೂ ಇಪಿಎಫ್ ಬಡ್ಡಿದರ ಯಥಾಸ್ಥಿತಿ
ಗೋಲ್ಡ್ ಇಟಿಎಫ್‌ನಲ್ಲಿ 12 ತಿಂಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆಗೆ 12.5 ಪರ್ಸೆಂಟ್ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ವಯವಾಗುತ್ತದೆ.
ನೀವು ಗೋಲ್ಡ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರೆ, 24 ತಿಂಗಳಿನ ನಂತರ 12.5 ಪರ್ಸೆಂಟ್ LTCG ಅನ್ವಯವಾಗುತ್ತದೆ. 24 ತಿಂಗಳಿಗೂ ಮೊದಲೇ ಹೂಡಿಕೆ ಹಿಂತೆಗೆದುಕೊಂಡರೆ STCG ಅನ್ವಯವಾಗುತ್ತದೆ.