ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dividend Yield Shares: ಹೆಚ್ಚು ಡಿವಿಡೆಂಡ್‌ ಲಾಭ ನೀಡುವ ಷೇರುಗಳ ಲಿಸ್ಟ್!‌

Dividend Yield Shares: ಷೇರುದಾರರಿಗೆ ನೀಡುವ ಡಿವಿಡೆಂಡ್ ಮತ್ತೊಂದು ಆದಾಯದ ಮೂಲವನ್ನೇ ಸೃಷ್ಟಿಸಬಲ್ಲದು. ಇದಕ್ಕಾಗಿ ನೀವು ನಿಮ್ಮ ಷೇರುಗಳನ್ನು ಮಾರಾಟ ಮಾಡುವುದೂ ಬೇಡ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಕ್ರಿಸಿಲ್‌ ಸೇರಿದಂತೆ ಪ್ರಮುಖ ಷೇರುಗಳು ಕಳೆದ 2011ರಿಂದ ಇಲ್ಲಿಯವರೆಗೆ 64 ಸಲದ ತನಕ ಡಿವಿಡೆಂಡ್‌ ವಿತರಿಸಿವೆ.

ಹೆಚ್ಚು ಡಿವಿಡೆಂಡ್‌ ಲಾಭ ನೀಡುವ ಷೇರುಗಳ ಲಿಸ್ಟ್!‌

Keshava Prasad B Keshava Prasad B Mar 11, 2025 3:23 PM
  • ಕೇಶವ ಪ್ರಸಾದ್‌. ಬಿ

ಮುಂಬಯಿ: ಷೇರುಗಳಿಂದ ನಾವು ಪಡೆಯುವ ಪ್ರಯೋಜನಗಳಲ್ಲಿ ಷೇರು ದರ ಏರಿಕೆಯಾದಾಗ ಗಳಿಸುವ ಲಾಭ ಒಂದಾಗಿದ್ದರೆ, ಮತ್ತೊಂದು ಏನೆಂದರೆ, ಕಂಪನಿಗಳು ತಮ್ಮ ಷೇರುದಾರರಿಗೆ ನೀಡುವ ಡಿವಿಡೆಂಡ್(Dividend Yield Shares).‌ ಇದು ಷೇರುದಾರರಿಗೆ ಮತ್ತೊಂದು ಆದಾಯದ ಮೂಲವನ್ನೇ ಸೃಷ್ಟಿಸಬಲ್ಲುದು. ಇದಕ್ಕಾಗಿ ನೀವು ನಿಮ್ಮ ಷೇರುಗಳನ್ನು ಮಾರಾಟ ಮಾಡುವುದೂ ಬೇಡ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಕ್ರಿಸಿಲ್‌ ಸೇರಿದಂತೆ ಪ್ರಮುಖ ಷೇರುಗಳು ಕಳೆದ 2011ರಿಂದ ಇಲ್ಲಿಯವರೆಗೆ 64 ಸಲದ ತನಕ ಡಿವಿಡೆಂಡ್‌ ವಿತರಿಸಿವೆ. ಸ್ಟಾಕ್‌ ಎಡ್ಜ್‌ ಡೇಟಾದ ಪ್ರಕಾರ ಆ ಕಂಪನಿಗಳು ಯಾವುದು ಎಂಬುದನ್ನು ತಿಳಿಯೋಣ.

  • ಟಿಸಿಎಸ್‌ ಕಂಪನಿಯು ತನ್ನ ಷೇರು ಹೂಡಿಕೆದಾರರಿಗೆ 2011ರಿಂದ 64 ಸಲ ಡಿವಿಡೆಂಡ್‌ ನೀಡಿದೆ. ಇತ್ತೀಚೆಗೆ ಪ್ರತಿ ಷೇರಿಗೆ 76 ರುಪಾಯಿ ಡಿವಿಡೆಂಡ್‌ ನೀಡಿತ್ತು.
  • ಕ್ರಿಸಿಲ್‌ ಕಂಪನಿಯು 2011ರಿಂದ ಇಲ್ಲಿಯವರೆಗೆ 61 ಸಲ ಡಿವಿಡೆಂಡ್‌ ವಿತರಿಸಿದೆ. ಇತ್ತೀಚೆಗೆ 15 ರುಪಾಯಿ ಡಿವಿಡೆಂಡ್‌ ಕೊಟ್ಟಿತ್ತು.
  • ಎಚ್‌ಸಿಎಲ್‌ ಟೆಕ್ನಾಲಜೀಸ್‌ 2011ರಿಂದ ಇಲ್ಲಿಯವರೆಗೆ 60 ಸಲ ಡಿವಿಡೆಂಡ್‌ ವಿತರಿಸಿದೆ. ಇತ್ತೀಚೆಗೆ ಕಂಪನಿ ಪ್ರತಿ ಷೇರಿಗೆ 18 ರುಪಾಯಿ ಡಿವಿಡೆಂಡ್‌ ವಿತರಿಸಿತ್ತು.
  • ಪೇಜ್‌ ಇಂಡಸ್ಟ್ರೀಸ್‌ 2011ರಿಂದೀಚೆಗೆ 56 ಸಲ ಡಿವಿಡೆಂಡ್‌ ನೀಡಿದೆ. ಇತ್ತೀಚೆಗೆ ಪ್ರತಿ ಷೇರಿಗೆ 150 ರುಪಾಯಿ ಡಿವಿಡೆಂಡ್‌ ವಿತರಿಸಿತ್ತು.
  • ಮಣಪ್ಪುರಂ ಫೈನಾನ್ಸ್‌ 2011ರಿಂದ ಇಲ್ಲಿಯವರೆಗೆ 51 ಸಲ ಡಿವಿಡೆಂಡ್‌ ಕೊಟ್ಟಿದೆ. ಇತ್ತೀಚೆಗೆ ಪ್ರತಿ ಷೇರಿಗೆ 1 ರುಪಾಯಿ ಡಿವಿಡೆಂಡ್‌ ನೀಡಿತ್ತು.
  • ಸನ್‌ ಟಿವಿ ನೆಟ್‌ವರ್ಕ್‌ 2011ರಿಂದ ಇಲ್ಲಿಯವರೆಗೆ 50 ಸಲ ಡಿವಿಡೆಂಡ್‌ ವಿತರಿಸಿದೆ. ಇತ್ತೀಚೆಗೆ ಪ್ರತಿ ಷೇರಿಗೆ 2.50 ರುಪಾಯಿ ಡಿವಿಡೆಂಡ್‌ ನೀಡಿತ್ತು.
  • ನೆಸ್ಲೆ ಇಂಡಿಯಾ 2011ರಿಂದ ಇಲ್ಲಿಯವರೆಗೆ 48 ಸಲ ಡಿವಿಡೆಂಡ್‌ ನೀಡಿದೆ. ಇತ್ತೀಚೆಗೆ ಪ್ರತಿ ಷೇರಿಗೆ 14.25 ರುಪಾಯಿ ಡಿವಿಡೆಂಡ್‌ ಕೊಟ್ಟಿತ್ತು.
  • ಬಾಲಕೃಷ್ಣ ಇಂಡಸ್ಟ್ರೀಸ್ 2011ರಿಂದ ಇಲ್ಲಿಯವರೆಗೆ 42 ಸಲ ಡಿವಿಡೆಂಡ್‌ ಕೊಟ್ಟಿತ್ತು. ಇತ್ತೀಚೆಗೆ ಪ್ರತಿ ಷೇರಿಗೆ 4 ರುಪಾಯಿ ಡಿವಿಡೆಂಡ್‌ ಕೊಟ್ಟಿತ್ತು.‌
  • ಗೋದ್ರೇಜ್‌ ಕನ್‌ಸ್ಯೂಮರ್‌ ಪ್ರಾಡಕ್ಸ್ಟ್‌ 2011ರಿಂದ ಇಲ್ಲಿಯವರೆಗೆ 42 ಸಲ ಡಿವಿಡೆಂಡ್‌ ವಿತರಿಸಿದೆ. ಇತ್ತೀಚೆಗೆ ಪ್ರತಿ ಷೇರಿಗೆ 5 ರುಪಾಯಿ ಡಿವಿಡೆಂಡ್‌ ಕೊಟ್ಟಿತ್ತು.

ಈ ವಾರ ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ಡಿವಿಡೆಂಡ್‌ ವಿತರಿಸಲಿದ್ದು, ವಿವರ ಹೀಗಿದೆ. ಭಾರತ್‌ ಎಲೆಕ್ಟ್ರಾನಿಕ್ಸ್‌ ಕಂಪನಿಯು ತನ್ನ ಮಧ್ಯಂತರ ಡಿವಿಡೆಂಡ್‌ ಘೋಷಿಸಿದ್ದು, ಪ್ರತಿ ಷೇರಿಗೆ 1.5 ರುಪಾಯಿಗಳ ಡಿವಿಡೆಂಡ್‌ ನೀಡಲಿದೆ. ಮಾರ್ಚ್‌ 11 ರೆಕಾರ್ಡ್‌ ಡೇಟ್‌ ಆಗಿದೆ. ರೆಕಾರ್ಡ್‌ ಡೇಟ್‌ ಅಂದ್ರೆ ಏನು ಎಂದು ನೀವು ಕೇಳಬಹುದು. ರೆಕಾರ್ಡ್‌ ಡೇಟ್‌ ಎಂದರೆ ಆ ದಿನಾಂಕದ ಒಳಗೆ ಷೇರುಗಳನ್ನು ಖರೀದಿಸಿದ್ದವರಿಗೆ ಡಿವಿಡೆಂಡ್‌ ಪಡೆಯುವ ಅರ್ಹತೆ ಸಿಗುತ್ತದೆ. ಕಂಪನಿಯೊಂದು ಡಿವಿಡೆಂಡ್‌ ಅನ್ನು ಡಿಕ್ಲೇರ್‌ ಮಾಡಿದ ಬಳಿಕ ರೆಕಾರ್ಡ್‌ ಡೇಟ್‌ ಅನ್ನೂ ತಿಳಿಸುತ್ತದೆ.

  • ಜಿಆರ್‌ ಇನ್‌ಫ್ರಾಸ್ಟ್ರಕ್ಚರ್‌ ಕಳೆದ ವಾರ ಪ್ರತಿ ಷೇರಿಗೆ 12.50 ರುಪಾಯಿಗಳ ಡಿವಿಡೆಂಡ್‌ ಘೋಷಿಸಿತ್ತು. ಕಳೆದ ಎರಡು ವರ್ಷಗಳಲ್ಲಿ 17 ರುಪಾಯಿ ಮತ್ತು 14 ರುಪಾಯಿಗಳ ಡಿವಿಡೆಂಡ್‌ ಕೊಟ್ಟಿತ್ತು. ರೆಕಾರ್ಡ್‌ ಡೇಟ್‌ ಮಾರ್ಚ್‌ 13 ಆಗಿದೆ.
  • DIC India limited ಕಂಪನಿಯು ಪ್ರತಿ ಷೇರಿಗೆ 4 ರುಪಾಯಿಗಳ ಡಿವಿಡೆಂಡ್‌ ಅನ್ನು ಘೋಷಿಸಿದೆ. ಮಾರ್ಚ್‌ 18 ರೆಕಾರ್ಡ್‌ ಡೇಟ್‌ ಆಗಿದೆ.
  • ಸನ್‌ ಟಿವಿ ಸಂಸ್ಥೆಯು ಪ್ರತಿ ಷೇರಿಗೆ 2.5 ರುಪಾಯಿ ಡಿವಿಡೆಂಡ್‌ ಘೋಷಿಸಿದ್ದು, ಮಾರ್ಚ್‌ 13 ರೆಕಾರ್ಡ್‌ ಡೇಟ್‌ ಆಗಿದೆ.
  • ಹುಡ್ಕೊ ಕಂಪನಿಯ ಆಡಳಿತ ಮಂಡಳಿಯು ಮಾರ್ಚ್‌ 13ರಂದು ಸಭೆ ನಡೆಸಲಿದ್ದು, ಮಧ್ಯಂತರ ಡಿವಿಡೆಂಡ್‌ ಘೋಷಿಸುವ ನಿರೀಕ್ಷೆ ಇದೆ.

ಕಾರ್ಪೊರೇಟ್‌ ವಲಯದ ಉದ್ಯಮಿಗಳು, ಖ್ಯಾತ ಹೂಡಿಕೆದಾರರು ಷೇರುಗಳ ಡಿವಿಡೆಂಡ್‌ ಮೂಲಕವೇ ನೂರಾರು, ಸಾವಿರಾರು ಕೋಟಿ ರುಪಾಯಿಗಳ ಆದಾಯವನ್ನು ಪಡೆಯುತ್ತಾರೆ. ದಿವಂಗತ ರಾಕೇಶ್‌ ಜುಂಜುನ್‌ ವಾಲಾ ಅವರ ಪತ್ನಿ ರೇಖಾ ಜುಂಜುನ್‌ ವಾಲಾ ಅವರು 2024ರ ಜನವರಿ-ಮಾರ್ಚ್‌ ಅವಧಿಯಲ್ಲಿ 224 ಕೋಟಿ ರುಪಾಯಿಗಳ ಡಿವಿಡೆಂಡ್‌ ಅನ್ನು ಗಳಿಸಿದ್ದರು. ಅವರ ಪೋರ್ಟ್‌ ಫೋಲಿಯೊ ಮೌಲ್ಯ ಆಗ 37,831 ಕೋಟಿ ರುಪಾಯಿ ಇತ್ತು. ಅಮೆರಿಕದ ವಾರೆನ್‌ ಬಫೆಟ್‌ ಈ ವರ್ಷ 4.5 ಶತಕೋಟಿ ಡಾಲರ್‌ ಡಿವಿಡೆಂಡ್‌ ಪಡೆಯುವ ನಿರೀಕ್ಷೆ ಇದೆ.

ಹಾಗಾದರೆ, ಪ್ರತಿ ವರ್ಷ ತಪ್ಪದೆ ಡಿವಿಡೆಂಡ್‌ ಲಾಭವನ್ನು ನೀಡುವ ಷೇರುಗಳಲ್ಲಿ ಮಾತ್ರ ಹೂಡಿಕೆ ಮಾಡುವುದು ಒಳ್ಳೆಯದೇ ಎಂದು ನೀವು ಕೇಳಬಹುದು. ತಜ್ಞರು ಹೇಳೋದು ಏನೆಂದರೆ, ಡಿವಿಡೆಂಡ್‌ ನೀಡುವ ಷೇರುಗಳು ನಿಮಗೆ ಆದಾಯದ ಮತ್ತೊಂದು ಮೂಲವಾಗಬಹುದು. ನಗದು ಕೊರತೆ ಇದ್ದಾಗ ಸಹಕಾರಿಯಾಗಬಹುದು. ಹೀಗಿದ್ದರೂ, ಡಿವಿಡೆಂಡ್‌ ನೀಡದಿರುವ ಷೇರು ದರ ಹೆಚ್ಚಿನ ಬೆಳವಣಿಗೆ ದಾಖಲಿಸುವ ಸಾಧ್ಯತೆಯೂ ಇರುತ್ತದೆ. ಹೀಗಿದ್ದರೂ, ನಿಮಗೆ ರೆಗ್ಯುಲರ್‌ ಆಗಿ ಆದಾಯಕ್ಕೊಂದು ಮಾರ್ಗ ಬೇಕು ಎಂಬ ಬಯಕೆ ಇದ್ದರೆ, ಡಿವಿಡೆಂಡ್‌ ಸ್ಟಾಕ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ನಿಯಮಿತವಾಗಿ ಡಿವಿಡೆಂಡ್‌ ನೀಡುವ ಕಂಪನಿಗಳು ಆರ್ಥಿಕವಾಗಿ ಸದೃಢವಾಗಿರುತ್ತವೆ.

ಈ ಸುದ್ದಿಯನ್ನೂ ಓದಿ: Tata Motors: 2025ರ ಜನವರಿಯಿಂದ ತನ್ನ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸುತ್ತಿರುವುದಾಗಿ ಘೋಷಿಸಿದ ಟಾಟಾ ಮೋಟಾರ್ಸ್

ಹಾಗಾದ್ರೆ ಡಿವಿಡೆಂಡ್‌ ಸ್ಟಾಕ್ಸ್‌ ಎಂದರೇನು?

ಡಿವಿಡೆಂಡ್‌ ಸ್ಟಾಕ್ಸ್‌ ಎಂದರೆ ಕಂಪನಿಗಳು ತಮ್ಮ ಲಾಭವನ್ನು ನಿಯಮಿತವಾಗಿ ತಮ್ಮ ಷೇರುದಾರರಿಗೆ ನೀಡುವ ಪ್ರಕ್ರಿಯೆ. ಮೂರು ತಿಂಗಳೊಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಅಂಥ ಕಂಪನಿಗಳು ಡಿವಿಡೆಂಡ್‌ ನೀಡುತ್ತವೆ. ಇದು ಕಂಪನಿಯ ಆರ್ಥಿಕ ಆರೋಗ್ಯ ಚೆನ್ನಾಗಿದೆ ಎಂಬ ಸಂದೇಶವನ್ನೂ ರವಾನಿಸುತ್ತದೆ. ಪ್ಯಾಸಿವ್‌ ಇನ್‌ ಕಮ್‌ ಬೇಕು ಎಂದು ಬಯಸುವವರಿಗೆ ಇದೊಂದು ಆಕರ್ಷಕ ಮಾರ್ಗವಾಗಿದೆ. ನೀವು ಬ್ರೋಕರೇಜ್‌ ಅಕೌಂಟ್‌ಗಳು, ಮ್ಯೂಚುವಲ್‌ ಫಂಡ್‌ಗಳು, ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ ಅಥವಾ ಇಟಿಎಫ್‌ಗಳ ಮೂಲಕ ಡಿವಿಡೆಂಡ್‌ ಸ್ಟಾಕ್ಸ್‌ಗಳಲ್ಲಿ ಇನ್ವೆಸ್ಟ್‌ ಮಾಡಬಹುದು.

ಹಾಗಾದ್ರೆ ಡಿವಿಡೆಂಡ್‌ಗಳು ಷೇರುಗಳ ದರದ ಮೇಲೆ ಪ್ರಭಾವ ಬೀರುತ್ತದೆಯೇ? ತಜ್ಞರ ಪ್ರಕಾರ ಹೌದು. ನಿಯಮಿತವಾಗಿ ಡಿವಿಡೆಂಡ್‌ ವಿತರಿಸುವುದರಿಂದ ಹೆಚ್ಚು ಹೂಡಿಕೆದಾರರನ್ನು ಕಂಪನಿಗಳು ಆಕರ್ಷಿಸುತ್ತವೆ. ಇದರಿಂದ ಷೇರಿನ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಲಾಂಗ್‌ ಟರ್ಮ್‌ ಇನ್ವೆಸ್ಟರ್ಸ್‌ಗೆ ಡಿವಿಡೆಂಡ್‌ನಿಂದ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ.