ದೆಹಲಿ, ಫೆ. 1: 2026ರ ಬಜೆಟ್‌ನಲ್ಲಿ ಪರಿಚಯಿಸಲಾದ ಪ್ರಮುಖ ಸುಧಾರಣೆಗಳಲ್ಲಿ ಉತ್ತರ ಭಾರತದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಸ್ಥಾಪಿಸುವುದೂ ಸೇರಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸದ್ಯ ನಿಮ್ಹನ್ಸ್ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಉತ್ತರ ಭಾರತದಲ್ಲಿ ಮಾನಸಿಕ ಆರೋಗ್ಯ ಸಂಸ್ಥೆಗಳ ಕೊರತೆಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಮಂಡಿಸಲಾದ 2026ರ ಆರ್ಥಿಕ ಸಮೀಕ್ಷೆಯಲ್ಲಿ, ಮಾನಸಿಕ ಆರೋಗ್ಯವನ್ನು ಒಂದು ಪ್ರಮುಖ ಸಮಸ್ಯೆಯಾಗಿ ಗುರುತಿಸಲಾಗಿದ್ದು, ಇದು ಭಾರತದ ಸಾರ್ವಜನಿಕ ಆರೋಗ್ಯದ ಮೇಲೆ ನೇರ ಸವಾಲನ್ನು ಒಡ್ಡುತ್ತಿದೆ ಎಂದು ಉಲ್ಲೇಖಿಸಲಾಗಿತ್ತು.
15–24 ವರ್ಷ ವಯಸ್ಸಿನವರಲ್ಲಿ ಸಾಮಾಜಿಕ ಮಾಧ್ಯಮ ಬಳಕೆಯ ವ್ಯಸನದ ಹೆಚ್ಚುತ್ತಿರುವ ಬಗ್ಗೆ ಆರ್ಥಿಕ ಸಮೀಕ್ಷೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿತ್ತು. ಅಧ್ಯಯನಗಳನ್ನುಆಧಾರದಲ್ಲಿ ಆತಂಕ, ಖಿನ್ನತೆ ಮತ್ತು ಸೈಬರ್ ಬೆದರಿಕೆಗೆ ಸಂಬಂಧಿಸಿದ ಒತ್ತಡ ಹೆಚ್ಚುತ್ತಿರುವುದನ್ನು ಗಮನಿಸಲಾಗಿತ್ತು.
ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನದ ಬಗ್ಗೆಯೂ ಸಮೀಕ್ಷೆಯು ಒತ್ತಿ ಹೇಳಲಾಗಿತ್ತು. ಹೆಚ್ಚುತ್ತಿರುವ ಸ್ಕ್ರೀನ್ ಸಮಯವು ಶೈಕ್ಷಣಿಕ ಕಾರ್ಯಕ್ಷಮತೆ, ಉತ್ಪಾದಕತೆ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಸಾಮಾಜಿಕ ಸಂಪರ್ಕಗಳನ್ನು ಸಹ ನಾಶಪಡಿಸುತ್ತಿದೆ ಎಂದು ಅದು ಹೇಳಿತ್ತು.
ಬೆಂಗಳೂರು ಸೇರಿ 7 ಕಡೆ ಹೈಸ್ಪೀಡ್ ರೈಲು ಕಾರಿಡಾರ್ ಸ್ಥಾಪನೆ
ಏನಿದು ನಿಮ್ಹಾನ್ಸ್?
ನಿಮ್ಹಾನ್ಸ್ ಬೆಂಗಳೂರಿನಲ್ಲಿರುವ ವೈದ್ಯಕೀಯ ಸಂಸ್ಥೆ. ಸ್ಥಾಪನೆಯಾದಾಗಿನಿಂದ ನಿಮ್ಹಾನ್ಸ್ ಭಾರತದಲ್ಲಿ ಮಾನಸಿಕ ಆರೋಗ್ಯ ಶಿಕ್ಷಣ ಮತ್ತು ನರವಿಜ್ಞಾನ ಸಂಶೋಧನೆಯ ಅತ್ಯುನ್ನತ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿದೆ. 1847ರಲ್ಲಿ ಬೆಂಗಳೂರು ಹುಚ್ಚಾಸ್ಪತ್ರೆಯಾಗಿ ಪ್ರಾರಂಭವಾದ ಈ ಸಂಸ್ಥೆಯು 1925ರಲ್ಲಿ ಸರ್ಕಾರಿ ಮಾನಸಿಕ ಆಸ್ಪತ್ರೆ ಎಂದು ಮರುನಾಮಕರಣಗೊಂಡಿತು. 1974ರಲ್ಲಿ ಈ ಸಂಸ್ಥೆಯನ್ನು ನಿಮ್ಹಾನ್ಸ್ ಎಂದು ಹೆಸರಿಸಲಾಯಿತು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಗೆ ತರಲಾಯಿತಿ. ಇದೀಗ ಉತ್ತರ ಭಾರತದಲ್ಲಿಯೂ ನಿಮ್ಹಾನ್ಸ್ ಸ್ಥಾಪನೆಗೆ ಮುಂದಾಗಿರುವುದು ಮಾನಸಿಕ ಆರೋಗ್ಯ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.