2024-25ರಲ್ಲಿ ಬೆಂಬಲ ಬೆಲೆ ಕ್ವಿಂಟಲ್‌ಗೆ 4290 ರು.
2025-26 ರ ಬೆಲೆ 4886 ರುಪಾಯಿಗೆ ಏರಿಕೆ
ರಾಜ್ಯದಲ್ಲಿ ರಾಗಿ ಬೆಲೆಯು ಏರಿಕೆ ಕಂಡಿದೆ. ಇದಕ್ಕೆ ಕಾರಣ ಇಳುವರಿ ಕುಸಿತವಾಗಿರುವುದು. ಸದ್ಯ ಮಾರುಕಟ್ಟೆಯ ಕನಿಷ್ಠ ಬೆಂಬಲ ಬೆಲೆಯಿಂದಲೂ ದರ ಹೆಚ್ಚಿದೆ. ಸಿರಿಧಾನ್ಯಗಳಲ್ಲಿ ಒಂದಾಗಿರುವ ರಾಗಿಗೆ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಸರಕಾರ ರಾಗಿಯ ಕನಿಷ್ಠ ಬೆಂಬಲ ಬೆಲೆಯನ್ನು 2024-2025ರಲ್ಲಿ ಕ್ವಿಂಟಲ್‌ಗೆ 4290 ಇದ್ದದ್ದು 2025-26ನೇ ಸಾಲಿಗೆ ಪ್ರತಿ ಕ್ವಿಂಟಾಲ್ ರಾಗಿಯನ್ನು ಸರಕಾರ 4886 ರುಪಾಯಿಗಳಿಗೆ ಹೆಚ್ಚಿಸಿದೆ.
ಈ ಹಿನ್ನೆಲೆಯಲ್ಲಿ ಸಗಟು ಮಾರುಕಟ್ಟೆಯಲ್ಲಿ ರಾಗಿ ಬೆಲೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಉತ್ತೇಜನಗೊಂಡ ನೀರಾವರಿ ಭಾಗದ ರೈತರು ಕೂಡ ರಾಗಿ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
5 ಸಾವಿರ ರೂ. ದಾಟಿದ ರಾಗಿ ಬೆಲೆ: ಈ ನಡುವೆ ಸಗಟು ಮಾರುಕಟ್ಟೆಯಲ್ಲಿ ರಾಗಿಗೆ ತೀವ್ರ ಬೇಡಿಕೆ ಸೃಷ್ಟಿಯಾಗಿದೆ. ಕ್ವಿಂಟಾಲ್ ರಾಗಿಯ ಬೆಲೆ 5 ಸಾವಿರ ರು. ದಾಟಿದ್ದು, ಹೊಸ ರಾಗಿ ಹಾಗೂ ಕೆಂಪು ರಾಗಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ಸಗಟು ಮಾರುಕಟ್ಟೆಯಲ್ಲಿ ರಾಗಿ ಮಾರಲು ರೈತರು ಉತ್ಸುಕರಾಗಿದ್ದಾರೆ. ಗುಣಮಟ್ಟವಿಲ್ಲದಂತಹ ಕಪ್ಪು ರಾಗಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: Agriculture college: ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ಎಪಿಎಂಸಿ ಬೆಲೆಯಲ್ಲಿ ಸಗಟು ಶುದ್ಧಪಡಿಸಿದ್ದ ಉತ್ತಮ ರಾಗಿ ದರ ಕಳೆದ ವರ್ಷ ಕ್ವಿಂಟಲ್ʼಗೆ 4500 ರು., ಮಧ್ಯಮ ದರ್ಜೆ 4200 ರು. ಇತ್ತು. ಈ ವರ್ಷ ಇದರ ಬೆಲೆ 4800-5200 ಆಗಿದೆ. ಕಳೆದ ವರ್ಷ ಚಿಲ್ಲರೆ ದರ ಕೆಜಿಗೆ 48-50 ರು. ಇದ್ದ ಬೆಲೆ ಈಗ 56-58 ರು.ಗೆ ಮಾರಾಟವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.35ರಷ್ಟು ಬೆಲೆ ಏರಿಕೆ ಯಾಗಿದೆ ಎನ್ನಲಾಗುತ್ತಿದೆ.
ರಾಗಿ ಬೆಳೆ ಹಿಗ್ಗುತ್ತಿದೆ: ಹೌದು ರಾಗಿ ಬೆಳೆಯುವ ಪ್ರದೇಶ ಕೂಡ ಹೀಗ್ಗುತ್ತಿದೆ. ಜತೆಗೆ ಬೇಡಿಕೆ ಯೂ ಹೆಚ್ಚುತ್ತಿದೆ. 2019-20ರಲ್ಲಿ ರಾಜ್ಯದಲ್ಲಿ 6.74 ಲಕ್ಷ ಹೆಕ್ಟೇರ್ ಇದ್ದ ರಾಗಿ ಬೆಳೆ ಪ್ರದೇಶ, ಪ್ರಸ್ತುತ 8.50 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗು ತ್ತಿದ್ದಂತೆ ಗೋಧಿಯ ಜತೆಗೆ ರಾಗಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ.
ಮುದ್ದೆ, ಗಂಜಿ, ರೊಟ್ಟಿ ರೂಪದಲ್ಲಿ ರಾಗಿಯನ್ನು ಪೌಷ್ಟಿಕಭರಿತವಾಗಿರುವುದರಿಂದ ಬಳಸಲಾಗುತ್ತಿದೆ. ರಾಗಿಯನ್ನು ಮಕ್ಕಳಿಗೂ ಹೆಚ್ಚಾಗಿ ನೀಡಲಾಗುತ್ತಿದೆ. ಪಡಿತರದಲ್ಲಿ ರಾಗಿ ವಿತರಣೆ ಮಾಡುತ್ತಿರುವುದು ಸೇರಿ ಇಷ್ಟೆಲ್ಲ ಕಾರಣಕ್ಕೆ ರಾಗಿ ಬೆಳೆ ಹೆಚ್ಚಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗುತ್ತಿಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ರಾಜ್ಯದಲ್ಲಿ 2022ರಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಲವೆಡೆ ಬೆಳೆಗೆ ಹಾನಿ ಉಂಟಾಗಿತ್ತು. ಕಳೆದ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಬೆಳೆ ಕೈತಪ್ಪಿತ್ತು. ಹೀಗಾಗಿ ರಾಗಿ ಉತ್ಪಾದನೆ ಕುಂಠಿತಗೊಂಡಿತ್ತು. ಈ ವರ್ಷ ಕೂಡ ಸಕಾಲದಲ್ಲಿ ಮುಂಗಾರು ಮಳೆ ಬರಲಿಲ್ಲ. ಹೀಗಾಗಿ ರಾಗಿ ಬೆಳೆಯ ಮೇಲೆ ಪರಿಣಾಮ ಇಳುವರಿ ಕಡಿಮೆಯಾಗಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಹಾಸನ ಸೇರಿದಂತೆ ನಾನಾ ಜಿಗಳಲ್ಲಿ ರಾಗಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ರಾಗಿ ಬೆಳೆಯಲಾಗುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಸುಮಾರು 8.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸುಮಾರು 11.27 ಲಕ್ಷ ಟನ್‌ಗಳಷ್ಟು ರಾಗಿ ಬೆಳೆಯಲಾಗುತ್ತದೆ.
ರಾಗಿ ಬೆಳೆಯಲ್ಲಿ ಮುಂಚೂಣಿ ರಾಜ್ಯಗಳು: ಭಾರತದಲ್ಲಿ ರಾಗಿಗೆ ಅಗ್ರಸ್ಥಾನವಿದೆ. ವಾರ್ಷಿಕವಾಗಿ ಸುಮಾರು ಅಂದಾಜು 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದು 26 ರಿಂದ 28 ಲಕ್ಷ ಟನ್ ರಾಗಿ ಉತ್ಪಾದಿಸಲಾಗುತ್ತಿದೆ. ರಾಗಿ ಉತ್ಪಾದನೆಯ ಮುಕ್ಕಾಲು ಪಾಲು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸು ತ್ತಿವೆ. ಇನ್ನುಳಿದ ಕಾಲು ಭಾಗ ಬಿಹಾರ, ಉತ್ತರಪ್ರದೇಶ, ಒಡಿಶಾ, ಮಧ್ಯಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶಗಳು ಪೂರೈಸುತ್ತವೆ.
ಗುಣಮಟ್ಟದ ರಾಗಿ ಸಿಗುತ್ತಿಲ್ಲ
ಕಳೆದ ವರ್ಷ ಸಗಟು ದರ ಕೆ.ಜಿ. ರಾಗಿ 45 ರು.ನಂತೆ ಖರೀದಿ ಮಾಡಿದ್ದೆವು. ಈ ಬಾರಿ 52 ರೂ.ಗೆ ಏರಿಸಲಾಗಿದೆ ಕೆಜಿಗೆ 7-8 ರು. ಏರಿಕೆಯಾಗಿದೆ. ಚಿಲ್ಲರೆ ಬೆಲೆ ಏರಿಸುವುದು ಅನಿವಾರ್ಯ ಆಗಿದೆ ಎನ್ನುತ್ತಾರೆ ಚಿಲ್ಲರೆ ವ್ಯಾಪಾರಿಗಳು. ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 60 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಗುರಿ ಹೊಂದಲಾಗಿದ್ದು, ಈ ಬಾರಿ ರಾಗಿ ಪ್ರತಿ ಕ್ವಿಂಟಾಲ್ʼಗೆ 4886 ರು. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲು ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
![]()
ಗೋಧಿಯ ಜತೆಗೆ ರಾಗಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಮುದ್ದೆ, ಗಂಜಿ, ರೊಟ್ಟಿ ರೂಪದಲ್ಲಿ ರಾಗಿಯನ್ನು ಬಳಸಲಾಗುತ್ತಿದೆ. ಪೌಷ್ಟಿಕಭರಿತವಾಗಿರುವುದರಿಂದ ರಾಗಿಯನ್ನು ಮಕ್ಕಳಿಗೂ ಹೆಚ್ಚಾಗಿ ನೀಡಲಾಗುತ್ತಿದೆ.
-ರಘುನಾಥ್, ಬೆಂಗಳೂರು ಎಪಿಎಂಸಿ ರಾಜಾ ರಾಗಿ ಮಂಡಿ ಮಾಲೀಕ
![]()
ಕಳೆದ ಸಾಲಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಲವೆಡೆ ಬೆಳೆಗೆ ಹಾನಿ ಉಂಟಾಗಿತ್ತು. ಹೀಗಾಗಿ ರಾಗಿ ಉತ್ಪಾದನೆ ಕುಂಠಿತಗೊಂಡಿತ್ತು. ಈ ವರ್ಷ ಕೂಡ ಸಕಾಲ ದಲ್ಲಿ ಮುಂಗಾರು ಮಳೆ ಬರಲಿಲ್ಲ. ಹೀಗಾಗಿ ರಾಗಿ ಬೆಳೆ ಇಳುವರಿ ಕಡಿಮೆ ಇದ್ದರೂ ಬೆಂಬಲ ಬೆಲೆ ಹೆಚ್ಚಿದ್ದರಿಂದ ಉತ್ತಮ ಬೆಲೆ ಸಿಗುತ್ತಿರುವುದು ಖುಷಿಯಾಗಿದೆ.
-ಮರೀಗೌಡ ಮಂಡ್ಯ ತಾಲೂಕು ರೈತ
![]()
ಈಗಾಗಲೇ ಅಕ್ಕಿ, ಗೋಧಿ, ಅಡುಗೆ ಎಣ್ಣೆ ಬೇಳೆಕಾಳು ಬೆಲೆ ಏರಿಕೆ ಜತೆಗೆ ಮನೆ ಬಾಡಿಗೆ ಏರಿಕೆಯಾಗಿವೆ. ಇದೀಗ ರಾಗಿ ಬೆಲೆ ಏರಿಕೆಯಾಗಿದೆ. ಹೀಗೆ ಅಗತ್ಯವಸ್ತುಗಳ ಬೆಲೆ ಏರಿಕೆ ಯಾಗುತ್ತಿದ್ದರೆ ನಮ್ಮಂಥ ಬಡ, ಮಧ್ಯಮ ವರ್ಗದವರು ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಾಗಿದೆ.
-ಜಿ.ಸುಧಾ ಗ್ರಾಹಕಿ, ಬೆಂಗಳೂರು