Union Budget 2025-26: ನಿಮ್ಮ ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಿದ್ದರೂ ಬೀಳುತ್ತೆ ಟ್ಯಾಕ್ಸ್! ಏನಿದು ಲೆಕ್ಕಾಚಾರ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಬಹು ನಿರೀಕ್ಷೆಯಂತೆ ಅವರು ಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದಾರೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಆದರೆ ಆದಾಯ 12 ಲಕ್ಷ ರೂ.ಗಿಂತ 1 ರೂ. ಅಧಿಕವಾದರೂ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಈ ಬಗೆಗಿನ ವಿವರ ಇಲ್ಲಿದೆ.

ಟ್ಯಾಕ್ಸ್.

ಹೊಸದಿಲ್ಲಿ: ಬಹು ನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಯ ವ್ಯಯ ಪತ್ರವನ್ನು ಲೋಕಸಭೆಯಲ್ಲಿ ಶನಿವಾರ (ಫೆ. 1) ಮಂಡಿಸಿದ್ದಾರೆ. ಮಧ್ಯಮ ವರ್ಗದ ಜನರಿಗೆ, ವೇತನದಾರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 2025-26ರ ಸಾಲಿನಿಂದ ವರ್ಷಕ್ಕೆ 12 ಲಕ್ಷ ರೂ. ತನಕ ಆದಾಯ ಇರುವವರು ಆದಾಯ ತೆರಿಗೆಯನ್ನು ನೀಡಬೇಕಾಗಿಲ್ಲ. ಅವರ 12 ಲಕ್ಷ ರೂ. ಆದಾಯ ತೆರಿಗೆ ಮುಕ್ತ. ಆದರೆ 12 ಲಕ್ಷ ರೂ.ಗಿಂತ 1 ರೂ. ಅಧಿಕವಾದರೂ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹಾಗಾದರೆ ಏನಿದು ಲೆಕ್ಕಾಚಾರ? ಆದಾಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? ನಿಮ್ಮ ಪ್ರಶ್ನೆಗಳಿಗೆ, ಗೊಂದಲಗಳಿಗೆ ಇಲ್ಲಿದೆ ಉತ್ತರ.
ಬಜೆಟ್ ಘೋಷಣೆ ಪ್ರಕಾರ ಸರ್ಕಾರ 12 ಲಕ್ಷ ರೂ. ತನಕ ಆದಾಯ ಇರುವವರಿಗೆ ರಿಬೇಟ್ ನೀಡುತ್ತದೆ. ಅಂದರೆ ನಿಮ್ಮ ಆದಾಯವು 12 ಲಕ್ಷ ರೂ. ಒಳಗೆ ಇದ್ದರೆ ಅದಕ್ಕೆ ರಿಬೇಟ್ ಪ್ರಕಾರ ತೆರಿಗೆ ಇರುವುದಿಲ್ಲ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 87 ಎ ಅಡಿಯಲ್ಲಿ ಈ ರಿಬೇಟ್ ಸಿಗುತ್ತದೆ. ಆದರೆ 12 ಲಕ್ಷ ರೂ.ಗಿಂತ 1 ರೂ. ಹೆಚ್ಚು ಆದಾಯ ಇದ್ದರೂ ನಿಮಗೆ 4 ಲಕ್ಷ ರೂ.ಯಿಂದಲೇ ಟ್ಯಾಕ್ಸ್ ಲೆಕ್ಕಚಾರ ಅನ್ವಯವಾಗುತ್ತದೆ. ಟ್ಯಾಕ್ಸ್ ರಿಬೇಟ್ ಈ ಹಿಂದೆ 7 ಲಕ್ಷ ರೂ. ತನಕ ಇತ್ತು. ಈಗ 12 ಲಕ್ಷ ರೂ. ತನಕ ಏರಿಸಲಾಗಿದೆ.
ಯಾವ ಆದಾಯದವರಿಗೆ ಎಷ್ಟು ತೆರಿಗೆ ಉಳಿತಾಯ?
ನಿಮ್ಮ ವಾರ್ಷಿಕ ಆದಾಯ 8 ಲಕ್ಷ ರೂ. ಆಗಿದ್ದರೆ ಹೊಸ ಪದ್ಧತಿಯಲ್ಲಿ 31,200 ರೂ. ತೆರಿಗೆ ಉಳಿತಾಯವಾಗಲಿದೆ. 12 ಲಕ್ಷ ರೂ. ಆದಾಯವಿದ್ದರೆ 83,200 ರೂ. ತೆರಿಗೆ ಉಳಿತಾಯ ಸಿಗುತ್ತದೆ. 15 ಲಕ್ಷ ರೂ. ಆದಾಯ ಇದ್ದರೆ 36,400 ರೂ. ತೆರಿಗೆ ಉಳಿತಾಯವಾಗುತ್ತದೆ. 20 ಲಕ್ಷ ರೂ. ಆದಾಯ ಇದ್ದರೆ 93,600 ರೂ. ಟ್ಯಾಕ್ಸ್ ಉಳಿತಾಯವಾಗುತ್ತದೆ. 25 ಲಕ್ಷ ರೂ. ಆದಾಯ ಇದ್ದರೆ 1,14,400 ರೂ. ತೆರಿಗೆ ಉಳಿತಾಯವಾಗುತ್ತದೆ. 30 ಲಕ್ಷ ರೂ. ಅದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 35 ಲಕ್ಷ ರೂ. ಆದಾಯವಿದ್ದರೆ 1,14,400 ರೂ. ಉಳಿತಾಯವಾಗುತ್ತದೆ. 55 ಲಕ್ಷ ರೂ. ಆದಾಯವಿದ್ದರೆ 1,25,840 ರೂ. ತೆರಿಗೆ ಉಳಿತಾಯವಾಗುತ್ತದೆ.
ಈ ಸುದ್ದಿಯನ್ನೂ ಓದಿ: Kisan Credit Card Loan: ರೈತರಿಗೆ ಬಜೆಟ್‌ನಲ್ಲಿ ಗುಡ್‌ನ್ಯೂಸ್; ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಏರಿಕೆ: ಹೀಗೆ ಅಪ್ಲೈ ಮಾಡಿ
ಬಜೆಟ್‌ನಲ್ಲಿ ಬಾಡಿಗೆ ಕುರಿತ ಟಿಡಿಎಸ್ ಮಿತಿಯನ್ನು 2.40 ಲಕ್ಷ ರೂ.ಯಿಂದ 6 ಲಕ್ಷ ರೂ.ಗೆ ಏರಿಸಲಾಗಿದೆ. ವೃತ್ತಿಪರ ಶುಲ್ಕಗಳ ಮೇಲಿನ ಟಿಡಿಎಸ್ ಮಿತಿಯನ್ನು 30 ಸಾವಿರ ರೂ.ಯಿಂದ 50 ಸಾವಿರ ರೂ.ಗೆ ಏರಿಸಲಾಗಿದೆ. ಡಿವಿಡೆಂಡ್ ಮೇಲಿನ ಟಿಡಿಎಸ್ ಮಿತಿಯನ್ನು 5,000 ರೂ.ಯಿಂದ 10,000 ರೂ.ಗೆ ಏರಿಸಲಾಗಿದೆ.