ನವದೆಹಲಿ: ಕಳೆದ ಎರಡು ವಾರಗಳಲ್ಲಿ ಪೆಟ್ರೋಲ್ (Petrol prices) ಮತ್ತು ಡೀಸೆಲ್ ಬೆಲೆ (diesel prices) ಲೀಟರ್ ಗೆ 7 ರೂ. ಗಿಂತಲೂ ಹೆಚ್ಚಾಗಿದೆ. ಯುಎಸ್ ಮತ್ತು ಇರಾನ್ (US- Iran war) ನಡುವಿನ ಸಂಘರ್ಷ, ಹೊರ್ಮುಜ್ (Strait of Hormuz) ಜಲ ಮಾರ್ಗದಲ್ಲಿ ಅಡೆತಡೆಗಳು ಹೀಗೆಯೇ ಮುಂದುವರಿದರೆ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಇತ್ತೀಚಿನ ಎರಡು ವಾರಗಳಲ್ಲಿ ಒಟ್ಟು ನಾಲ್ಕು ಬಾರಿ ಇಂಧನಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಸಂಘರ್ಷ ಆರಂಭವಾಗಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ.
ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್; ಕೇವಲ 'ಪ್ರೋಟೀನ್ ಬಾರ್'ಗಾಗಿಯೇ 2 ಲಕ್ಷ ಖರ್ಚು ಮಾಡಿದ ಗ್ರಾಹಕ!
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳು (ಒಎಂಸಿ) ಸೋಮವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 2.71 ರೂ. ನಷ್ಟು ಹೆಚ್ಚಳ ಮಾಡಿದೆ. ಮೇ 15ರಿಂದ ಒಟ್ಟು ನಾಲ್ಕು ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಇದು ಕ್ರಮವಾಗಿ 7.35 ರೂ. ಮತ್ತು 7.53 ರೂ. ನಷ್ಟಾಗಿದೆ.
ಈ ತೈಲ ಬೆಲೆ ಏರಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.12 ರೂ. ಮತ್ತು ಡೀಸೆಲ್ ಗೆ 95.20 ರೂ. ತಲುಪಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 100 ರೂ. ನ ಗಡಿ ದಾಟಿದೆ.
ದೇಶದಲ್ಲಿ ಇಂಧನ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳು. ಭಾರತಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಆಮದಿಗೆ ಇದು ಪ್ರಮುಖ ಸಾಗಣೆ ಮಾರ್ಗವಾಗಿದೆ. ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗವು ಇರಾನ್ ಮತ್ತು ಒಮಾನ್ ನಡುವಿನ ಈ ಕಿರಿದಾದ ಜಲಮಾರ್ಗದ ಮೂಲಕವೇ ಹಾದು ಬರುತ್ತವೆ. ಯುಎಸ್ ಮತ್ತು ಇರಾನ್ ಸಂಘರ್ಷದ ಕಾರಣದಿಂದ ಇಲ್ಲಿ ಸರಕು ಸಾಗಣೆ ಆತಂಕಕಕಾರಿಯಾಗಿ ಪರಿಣಮಿಸಿದೆ.
ಪೂರೈಕೆಯಲ್ಲಿ ಉಂಟಾದ ಅಡೆತಡೆಗಳು ಬ್ರೆಂಟ್ ಕಚ್ಚಾ ತೈಲ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಿದ್ದು, ಇದರಿಂದಾಗಿ ಭಾರತೀಯ ಸರ್ಕಾರಿ ತೈಲ ಕಂಪನಿಗಳ ವೆಚ್ಚ ಹೆಚ್ಚಾಗಿದ್ದರಿಂದ ತೈಲ ಬೆಲೆ ಏರಿಕೆ ಮಾಡಲಾಗಿದೆ. ಭಾರತವು ತನ್ನ ಕಚ್ಚಾ ತೈಲದ ಅಗತ್ಯಗಳಲ್ಲಿ ಶೇ. 85ಕ್ಕಿಂತಲೂ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.
ಯುದ್ಧದ ಆರಂಭಿಕ ದಿನಗಳು ಮತ್ತು ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ತೈಲ ಬೆಲೆ ಏರಿಕೆ ಮಾಡಲಾಗಿಲ್ಲದಿದ್ದರೂ ಇದರ ನಷ್ಟವನ್ನು ಭರಿಸಲು ಇದೀಗ ತೈಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.
ಇಂಧನ ಬೆಲೆ ಹೆಚ್ಚಾಗುವ ಬಗ್ಗೆ ಸರ್ಕಾರ ಮೊದಲೇ ಸುಳಿವು ನೀಡಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಪೂರೈಕೆ ತೊಂದರೆಯ ನಡುವೆ ಬೆಲೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದರು. ಪ್ರಧಾನಿ ಮೋದಿ ಅವರು ಕಾರ್‌ಪೂಲಿಂಗ್, ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆ ಮತ್ತು ಅನಗತ್ಯ ವೆಚ್ಚವನ್ನು ತಪ್ಪಿಸಲು ಸಲಹೆಯನ್ನು ಕೂಡ ನೀಡಿದ್ದರು.
ಮಾರುಕಟ್ಟೆಯಲ್ಲಿ ಹಣ್ಣಿನ ರಾಜನಿಗಿಲ್ಲ ಬೆಲೆ
ಯುಎಸ್ ಮತ್ತು ಇರಾನ್ ಸಂಘರ್ಷದ ಪರಿಣಾಮ ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಎರಡು ರಾಷ್ಟ್ರಗಳು ಶಾಂತಿ ಮಾತುಕತೆಗಳಿಗೆ ಮುಂದಾಗಿವೆ. ಹೊರ್ಮುಜ್ ಜಲ ಮಾರ್ಗವನ್ನು ತೆರೆಯುವ ಕುರಿತಾಗಿ ಮಾತುಕತೆಗಳನ್ನು ಕೂಡ ನಡೆಸಲಾಗುತ್ತಿದೆ. ಆದರೆ ಇದು ಎಷ್ಟು ಸಮಯದವರೆಗೆ ಮುಂದುವರಿಯಬಹುದು ಎನ್ನುವ ನಿಖರ ಮಾಹಿತಿ ಇಲ್ಲ. ಹೀಗಾಗಿ ಉದ್ವಿಗ್ನತೆ ಕಡಿಮೆಯಾದರೂ ಕೂಡ ಅದರ ಪರಿಣಾಮ ಮುಂದುವರಿಯಲಿದೆ. ಇದರಿಂದ ತೈಲ ಬೆಲೆ ಏರಿಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.