ಬೆಂಗಳೂರು: ಹಿರಿಯ ನಾಗರಿಕರಿಗೆ ( Post Office Senior Citizen Scheme) ತಿಂಗಳಿಗೆ ಕನಿಷ್ಠ 20,000 ರೂ. ಗಿಂತ ಹೆಚ್ಚಿನ ಆದಾಯ (regular monthly income) ನೀಡುವ ಯೋಜನೆಯೇ ಅಂಚೆ ಕಚೇರಿಯ (Post office) ಹಿರಿಯ ನಾಗರಿಕ ಯೋಜನೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಅತ್ಯಂತ ಜನಪ್ರಿಯ ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ಒಂದು ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದರಿಂದ ತಿಂಗಳಿಗೆ ಕನಿಷ್ಠ 20,000 ರೂ. ಆದಾಯ ಪಡೆಯಬಹುದಾಗಿದೆ. ಇದು ನಿವೃತ್ತಿಯ ಅನಂತರ ಆರ್ಥಿಕ ತೊಂದರೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಅಂಚೆ ಕಚೇರಿಯ ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಅಂಚೆ ಕಚೇರಿಯ ಹಿರಿಯ ನಾಗರಿಕ ಯೋಜನೆಯಲ್ಲಿ ಹೂಡಿಕೆ ಮಾಡುವ ಠೇವಣಿಗೆ ಸರ್ಕಾರ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ಇದರಲ್ಲಿ ಹೂಡಿಕೆದಾರರು ವಾರ್ಷಿಕವಾಗಿ ಶೇ. 8.2ರಷ್ಟು ಬಡ್ಡಿಯನ್ನು ಪಡೆಯಬಹುದು. ಇದು ನಿಯಮಿತ ಮಾಸಿಕ ಆದಾಯವನ್ನು ಖಚಿತಪಡಿಸುತ್ತದೆ.
ಅಂಚೆ ಕಚೇರಿಯ ಈ ಯೋಜನೆಯ ವಿಶೇಷವೆಂದರೆ ಇದು ಬ್ಯಾಂಕುಗಳು ನೀಡುವ ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಗ್ರಾಹಕರಿಗೆ ನೀಡುತ್ತದೆ. ಇದರಲ್ಲಿ ಮಾಡುವ ಹೂಡಿಕೆಗಳಿವೆ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂ. ವರೆಗೆ ಆದಾಯ ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ಯಾವುದೇ ಹಣಕಾಸಿನ ಚಿಂತೆ ಇಲ್ಲದೆ ವೃದ್ಧಾಪ್ಯವನ್ನು ಆರಾಮದಿಂದ ಕಳೆಯಬಹುದಾಗಿದೆ.
ಯಾರು ಹೂಡಿಕೆ ಮಾಡಬಹುದು?
ಈ ಯೋಜನೆಯಲ್ಲಿ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಯಾವುದೇ ವ್ಯಕ್ತಿ ಏಕ ಅಥವಾ ಜಂಟಿ ಖಾತೆಯನ್ನು ತೆರೆದು ಹೂಡಿಕೆ ಮಾಡಬಹುದಾಗಿದೆ. ನಾಗರಿಕ ವಲಯದ ಸರ್ಕಾರಿ ಹುದ್ದೆಗಳಿಂದ ವಿಆರ್‌ಎಸ್ ಪಡೆದ 55 ರಿಂದ 60 ವರ್ಷ ವಯಸ್ಸಿನ ಜನರು ಅಥವಾ ರಕ್ಷಣಾ ವಲಯಗಳಾದ ಸೇನೆ, ವಾಯುಪಡೆ, ನೌಕಾಪಡೆ ಮತ್ತು ಇತರ ಭದ್ರತಾ ಪಡೆಗಳಿಂದ ನಿವೃತ್ತರಾದ 50 ರಿಂದ 60 ವರ್ಷ ವಯಸ್ಸಿನವರು ಇದರಲ್ಲಿ ಖಾತೆಯನ್ನು ತೆರೆಯಬಹುದು.
ಗರಿಷ್ಠ ಲಾಭ ಪಡೆಯುವುದು ಹೇಗೆ?
ಈ ಯೋಜನೆಯಲ್ಲಿ ನಿಯಮಿತ ಮಾಸಿಕ ಆದಾಯವನ್ನು ಗಳಿಸಬಹುದು. ಇದರಲ್ಲಿ 30 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ಶೇ. 8.2ರಷ್ಟು ಬಡ್ಡಿದರದಲ್ಲಿ ವಾರ್ಷಿಕ 2.46 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಬಹುದು. ಇದು ಮಾಸಿಕವಾಗಿ 20,500 ರೂ. ಆದಾಯವನ್ನು ಖಚಿತ ಪಡಿಸುತ್ತದೆ. ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳಾಗಿವೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಲು ಕಾರಣವೇನು? ಡಿಮಾಂಡ್ vs ಸಪ್ಲೇ ಲೆಕ್ಕಾಚಾರ ಇಲ್ಲಿದೆ
ಅಂಚೆ ಕಚೇರಿಯ ಹಿರಿಯ ನಾಗರಿಕ ಯೋಜನೆ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಲು ಹತ್ತಿರದ ಯಾವುದೇ ಅಂಚೆ ಕಚೇರಿ ಶಾಖೆಗೆ ತೆರಳಬಹುದು. ಹೂಡಿಕೆದಾರರಿಗೆ ಖಾತೆಯನ್ನು ತೆರೆದ ಅನಂತರ ಯಾವುದೇ ಸಮಯದಲ್ಲಿ ಮುಚ್ಚುವ ಆಯ್ಕೆ ಕೂಡ ಇದೆ. ಆದರೆ ಇದಕ್ಕಾಗಿ ನಿಯಮಗಳಿವೆ. ಖಾತೆಯನ್ನು ತೆರೆದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮುಚ್ಚಿದರೆ ಹೂಡಿಕೆ ಮೊತ್ತದ ಮೇಲೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. 1 ವರ್ಷ ಪೂರ್ಣಗೊಂಡ ಅನಂತರ ಮುಚ್ಚಿದರೆ ಬಡ್ಡಿ ಮೊತ್ತದಿಂದ ಶೇ. 1.5ರಷ್ಟು, 2 ರಿಂದ 5 ವರ್ಷಗಳ ನಡುವೆ ಮುಚ್ಚಿದರೆ ಬಡ್ಡಿ ಮೊತ್ತದ ಶೇ. 1ರಷ್ಟನ್ನು ಕಡಿತಗೊಳಿಸಲಾಗುವುದು.