ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಏನು ಇದರ ವಿಶೇಷತೆ?

ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ಆಯ್ದ ದೇಶಗಳಲ್ಲಿ ಈಗ ಭಾರತವು ಸೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಚಲಿಸುವ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಜಿಂದ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.

ಸಂಗ್ರಹ ಚಿತ್ರ

ಹರಿಯಾಣ: ಜಿಂದ್ ಮತ್ತು ಸೋನಿಪತ್ (Jind and Sonipat Train) ನಡುವೆ ಚಲಿಸುವ ದೇಶದ ಮೊದಲ, ವಿಶ್ವದ ಅತಿ ಉದ್ದ ಮತ್ತು ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲಿಗೆ (Indias First Hydrogen Train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಹರಿಯಾಣದ (Haryana) ಜಿಂದ್ ರೈಲು ನಿಲ್ದಾಣದಲ್ಲಿ (Jind railway station) ಚಾಲನೆ ನೀಡಿದರು. ಈ ಮೂಲಕ ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ವಿಶ್ವದ ಆಯ್ದ ಕೆಲವೇ ಕೆಲವು ದೇಶಗಳಲ್ಲಿ ಭಾರತವು ಸೇರಿಕೊಂಡಿದೆ. ಸ್ವಚ್ಛ ರೈಲು ಸಾರಿಗೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿರುವ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಭಾರತದಲ್ಲೇ ವಿನ್ಯಾಸಗೊಳಿಸಲಾಗಿದೆ.

ದೇಶದ ಮೊದಲ ಹೈಡ್ರೋಜನ್ ವಿಶ್ವದ ಅತಿ ಉದ್ದ ಮತ್ತು ಅತ್ಯಂತ ಶಕ್ತಿಶಾಲಿ ರೈಲು ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದು 10 ಬೋಗಿಗಳನ್ನು ಹೊಂದಿದ್ದು, ಏಕಕಾಲಕ್ಕೆ 2,600 ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತದೆ. 3,200 ಅಶ್ವಶಕ್ತಿಯ ಪ್ರೊಪಲ್ಷನ್ ವ್ಯವಸ್ಥೆಯನ್ನು ಇದು ಹೊಂದಿದೆ. ಪ್ರಸ್ತುತ ವಿಶ್ವಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಹೈಡ್ರೋಜನ್ ರೈಲುಗಳು ಕೇವಲ ಎರಡರಿಂದ ನಾಲ್ಕು ಬೋಗಿಗಳನ್ನು ಹೊಂದಿವೆ.

ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ಬಿಲ್‌ಗಳಿಗೆ ಸಿಗಲಿದೆ ಗ್ರೀನ್‌ ಸಿಗ್ನಲ್‌?

ಎಲ್ಲಿಂದ ಎಲ್ಲಿಗೆ ಮೊದಲ ಹೈಡ್ರೋಜನ್ ರೈಲು ಸಂಚಾರ?

ಹರಿಯಾಣದ ಉತ್ತರ ರೈಲ್ವೆಯ 89 ಕಿಲೋ ಮೀಟರ್ ಜಿಂದ್ -ಸೋನಿಪತ್ ವಿಭಾಗದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ಕಾರ್ಯನಿರ್ವಹಿಸಲಿದೆ. ಇದು ಜಿಂದ್ ಜಂಕ್ಷನ್, ಜಿಂದ್ ನಗರ, ಪಾಂಡು ಪಿಂಡಾರ ಜಂಕ್ಷನ್, ಲಲಿತ್ ಖೇರಾ ಹಾಲ್ಟ್, ಭಂಭೇವಾ, ಇಸಾಪುರ್ ಖೇರಿ ಹಾಲ್ಟ್, ಬುಟಾನಾ ಹಾಲ್ಟ್, ಖಂಡ್ರೈ ಹಾಲ್ಟ್, ರಬ್ರಾ ಹಾಲ್ಟ್, ಲಾತ್ ಹಾಲ್ಟ್, ಮೋಹನ, ಬರ್ವಾಸ್ನಿ ಹಾಲ್ಟ್, ಸೋನಿಪತ್ ನ್ಯೂ, ಸೋನಿಪತ್ ನಡುವೆ ಸಂಚರಿಸಲಿದೆ.

ಗಂಟೆಗೆ ಗರಿಷ್ಠ 75 ಕಿ.ಮೀ. ವೇಗದಲ್ಲಿಕಾರ್ಯನಿರ್ವಹಿಸುವ ಈ ರೈಲನ್ನು ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕ ಸೇವೆಗಳ ಸೂಕ್ತ ವ್ಯವಸ್ಥೆಯೊಂದಿಗೆ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಲು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಭಾರತೀಯ ರೈಲ್ವೆಯು ತಿಳಿಸಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಓವರ್ ಹೆಡ್ ತಂತಿ ಅಥವಾ ಡೀಸೆಲ್ ರೈಲುಗಳಿಂದ ವಿದ್ಯುತ್ ಪಡೆಯುವ ಸಾಂಪ್ರದಾಯಿಕ ವಿದ್ಯುತ್ ರೈಲುಗಳಿಗಿಂತ ಭಿನ್ನವಾಗಿ ಇದು ತನ್ನ ಪ್ರಯಾಣಕ್ಕೆ ಬೇಕಾಗುವ ವಿದ್ಯುತ್ ಅನ್ನು ತಾನೇ ಉತ್ಪಾದಿಸುತ್ತದೆ. ಇದಕ್ಕಾಗಿ ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬ್ರೇನ್ ಎಂಬ ಇಂಧನ ಕೋಶವನ್ನು ಬಳಸುತ್ತದೆ.

ಇಲ್ಲಿ ಸಿಲಿಂಡರ್‌ಗಳಲ್ಲಿ ಸಂಗ್ರಹವಾಗುವ ಹೈಡ್ರೋಜನ್ ಗಾಳಿ ಆಮ್ಲಜನಕದೊಂದಿಗೆ ಸೇರಿ ವಿದ್ಯುತ್ ಉತ್ಪಾದಿಸುತ್ತದೆ. ಇದರಿಂದ ರೈಲಿನ ಮೋಟಾರ್‌ಗಳಿಗೆ ಶಕ್ತಿ ಸಿಗುತ್ತದೆ. ಈ ರೈಲಿನಲ್ಲಿ ಯಾವುದೇ ಇಂಧನ ದಹನವಾಗುವ ಪ್ರಕ್ರಿಯೆ ಇರುವುದಿಲ್ಲ. ನೀರಿನ ಆವಿ ಮತ್ತು ಶಾಖ ಮಾತ್ರ ಹೊರಕ್ಕೆ ಬೀಳುತ್ತದೆ.

ಹೇಗಿದೆ?

ಹೈಡ್ರೋಜನ್ ರೈಲಿನ ಪ್ರತಿ ತುದಿಯಲ್ಲಿ ಒಂದರಂತೆ ಎರಡು ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳು, ಎಂಟು ಪ್ಯಾಸೆಂಜರ್ ಟ್ರೇಲರ್ ಕೋಚ್‌ಗಳನ್ನು ಒಳಗೊಂಡಿದೆ. ಪ್ರತಿ ಪವರ್ ಕಾರ್ 1,200 ಕಿಲೋ ವ್ಯಾಟ್‌ಗಳನ್ನು ಶಕ್ತಿಯನ್ನು ಉತ್ಪಾದಿಸುತ್ತದೆ. ಹೈಡ್ರೋಜನ್ ಇಂಧನ ಕೋಶಗಳು ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿಗಳು ಮತ್ತು ಹೆಚ್ಚಿನ ಒತ್ತಡದ ಹೈಡ್ರೋಜನ್ ಶೇಖರಣಾ ಸಿಲಿಂಡರ್‌ಗಳನ್ನು ಹೊಂದಿದೆ.

ಜಿಂದ್ ನಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ರೈಲ್ವೆ ಹೈಡ್ರೋಜನ್ ಮರುಪೂರಣ ಸೌಲಭ್ಯದಿಂದ ರೈಲಿಗೆ ಬೇಕಾದ ಹೈಡ್ರೋಜನ್ ಅನ್ನು ಪಡೆಯಲಾಗುತ್ತದೆ.

ಹೇಗಿದೆ ಸುರಕ್ಷತೆ?

ಈ ರೈಲಿನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಬಹು ಸುರಕ್ಷತಾ ಪದರವನ್ನು ಇದು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಹೈಡ್ರೋಜನ್ ಸೋರಿಕೆ, ಬೆಂಕಿ, ಶಾಖ, ಹೊಗೆ ಪತ್ತೆ ವ್ಯವಸ್ಥೆ, ನಿಯಮಿತ ಹೈಡ್ರೋಜನ್ ಸಂಗ್ರಹಕ್ಕೆ ನಿರಂತರ ವಾತಾಯನ ವ್ಯವಸ್ಥೆ, ಸ್ವಯಂಚಾಲಿತ ಹೈಡ್ರೋಜನ್ ಪ್ರತ್ಯೇಕತೆ ಮತ್ತು ಸ್ಥಗಿತಗೊಳಿಸುವ ವ್ಯವಸ್ಥೆಗಳನ್ನು ಇದು ಹೊಂದಿದೆ.

ಚಾಲಕರ ಕ್ಯಾಬ್‌ನಲ್ಲಿ ಇದರ ನೈಜ-ಸಮಯದ ಮೇಲ್ವಿಚಾರಣೆ ವ್ಯವಸ್ಥೆಗಳು ಕೂಡ ಇವೆ. ತುರ್ತು ಕಾರ್ಯಾಚರಣೆಗೆ ಜಿಂದ್ ಹೈಡ್ರೋಜನ್ ಸೌಲಭ್ಯವನ್ನು ಕೂಡ ಇದು ಒಳಗೊಂಡಿದೆ. ಅಪಾಯ ಎದುರಾದಾಗ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ, ವಾಟರ್ ಸ್ಪ್ರೇ ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆ, ಅಗ್ನಿಶಾಮಕ ಎಚ್ಚರಿಕೆ ವ್ಯವಸ್ಥೆಗಳು ಕೂಡ ಇದರಲ್ಲಿದೆ.

34 ಕೋಟಿ ಇಪಿಎಫ್ ಖಾತೆಗಳಿಗೆ ಬಡ್ಡಿ ಜಮೆ; ನಿಮ್ಮ ಅಕೌಂಟ್‌ಗೂ ಬಂತಾ? ಹೀಗೆ ಚೆಕ್‌ ಮಾಡಿ

ಕಾರ್ಯಾಚರಣೆಗೂ ಮೊದಲು ಈ ರೈಲನ್ನು ಜರ್ಮನಿಯ ತಂತ್ರಜ್ಞರ ತಂಡ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಅಂತಾರಾಷ್ಟ್ರೀಯ ಮಾನದಂಡ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಸೂಚಿಸಿರುವ ಸುರಕ್ಷತಾ ವ್ಯವಸ್ಥೆಯನ್ನು ಒಳಗೊಂಡಿರುವುದಾಗಿ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author