ಹೊಸದಿಲ್ಲಿ, ಫೆ. 27: ಭಾರತದ ಒಟ್ಟಾರೆ ದೇಶೀಯ ಉತ್ಪನ್ನ (GDP) ಬೆಳವಣಿಗೆಯ ಲೆಕ್ಕಾಚಾರದಲ್ಲಿ ಹೊಸ ಪರಿಷ್ಕರಣೆಯಾಗಿದೆ. ಹೊಸ ಸೀರಿಸ್‌ನಲ್ಲಿ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಜಿಡಿಪಿ ಬೆಳವಣಿಗೆ ತುಸು ಇಳಿಕೆಯಾಗಿದ್ದರೂ, ನಿರೀಕ್ಷೆಗೂ ಮೀರಿದ ಶೇ. 7.8 ಬೆಳವಣಿಗೆ ದಾಖಲಿಸಿರುವುದು ಗಮನಾರ್ಹ (India GDP Q3 Growth Data 2026). ಶೇಕಡಾ 7.4ರ ತ್ರೈಮಾಸಿಕ ಜಿಡಿಪಿಯನ್ನು ನಿರೀಕ್ಷಿಸಲಾಗಿತ್ತು. ಆದರೆ 7.8 ದಾಖಲಾಗಿದೆ.
ಸರ್ಕಾರ ಇಡೀ ವರ್ಷದ ಬೆಳವಣಿಗೆಯ ಅಂದಾಜನ್ನು ಏರಿಕೆಯತ್ತ ಪರಿಷ್ಕರಿಸಿದೆ. ಪ್ರಬಲ ದೇಶೀಯ ಬೇಡಿಕೆ ಮತ್ತು ಸೇವಾ ಕ್ಷೇತ್ರದ ವಿಸ್ತರಣೆಯಿಂದ ಜಿಡಿಪಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಉಂಟಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಭಾರತವು ಶೇಕಡಾ 7.3 ಜಿಡಿಪಿ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
ಜಿಡಿಪಿ ಬಗ್ಗೆ ಅನಂತ ನಾಗೇಶ್ವರನ್ ಮಾಹಿತಿ:
ಜಿಡಿಪಿ ಪರಿಷ್ಕರಣೆ ಏನು?
ಇದುವರೆಗೆ 2011-12 ಜಿಡಿಪಿ ಲೆಕ್ಕಾಚಾರಕ್ಕೆ ಬಳಸುವ ಮೂಲ ವರ್ಷವಾಗಿತ್ತು. ಆದರೆ ಇದೀಗ 2022-23ರನ್ನು ಪರಿಗಣಿಸಲಾಗಿದೆ. ಜಿಡಿಪಿ ಲೆಕ್ಕಾಚಾರದಲ್ಲಿ ಮೂಲ ವರ್ಷ ಎನ್ನುವುದು ಸಾಮಾನ್ಯವಾಗಿರಬೇಕು. ಆ ವರ್ಷದಲ್ಲಿ ಯಾವುದಾದರೂ ಅಸಹಜ ಬೆಳವಣಿಗೆ ಆಗಬಾರದು. 2020-21ರಲ್ಲಿ ಕೋವಿಡ್-19 ತೀವ್ರ ಪರಿಣಾಮಗಳು ಇದ್ದುದರಿಂದ 2022-23 ಅನ್ನು ಮೂಲವರ್ಷವಾಗಿ ಆಯ್ಕೆ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರಿಯಾಗೋದು ಹೇಗೆ? ಇಲ್ಲಿದೆ ಉಪಯುಕ್ತ ಟಿಪ್ಸ್
ಪರಿಷ್ಕೃತ ಲೆಕ್ಕದ ಪ್ರಕಾರ 2025-26ರ ಅಂದಾಜು ನಾಮಿನಲ್ ಜಿಡಿಪಿ ಮೌಲ್ಯ 345 ಲಕ್ಷ ಕೋಟಿ ರುಪಾಯಿಗಳಾಗಿದೆ. ಪರಿಷ್ಕೃತ ಲೆಕ್ಕಾಚಾರದಲ್ಲಿ 2024-25ರಲ್ಲಿ ದೇಶದ ನಿವ್ವಳ ರಾಷ್ಟ್ರೀಯ ಆದಾಯ 271 ಲಕ್ಷ ಕೋಟಿ ರುಪಾಯಿ ಆಗಿದೆ. 2023-24ಕ್ಕೆ ಹೋಲಿಸಿದರೆ ಶೇ. 10.2ರಷ್ಟು ಹೆಚ್ಚಳವಾಗಿದೆ. ಆಗ 246 ಲಕ್ಷ ಕೋಟಿ ರುಪಾಯಿ ಇತ್ತು.
ಈ ಹಿಂದೆ ಭಾರತದ ಆರ್ಥಿಕತೆಯ ಲೆಕ್ಕಾಚಾರಕ್ಕೆ ಕೆಲವು ಸವಾಲುಗಳಿದ್ದವು. ಮುಖ್ಯವಾಗಿ ಭಾರತದ ಆರ್ಥಿಕತೆಯ ಬಹುದೊಡ್ಡ ಪಾಲು ಅನೌಪಚಾರಿಕ ಮತ್ತು ಸಣ್ಣ ಪುಟ್ಟ ಬಿಸಿನೆಸ್ ಇತ್ತು. ಇದರಲ್ಲಿ ಗೆಸ್ ವರ್ಕ್ ಹೆಚ್ಚು ಇರುತ್ತಿತ್ತು. ಆದರೆ ಈಗ ಡೇಟಾ ಸೋರ್ಸ್ ಪ್ರಬಲವಾಗಿದೆ. ಆದ್ದರಿಂದ ಗೆಸ್ ವರ್ಕ್ ಕಡಿಮೆ. ವಾಸ್ತವ ಅಧಾರಿತ ಡೇಟಾಗಳು ಸಿಗುತ್ತಿವೆ. ಜಿಎಸ್‌ಟಿ ಡೇಟಾ, ಇ-ವಾಹನ್, ಕಂಪನಿಗಳ ವ್ಯವಹಾರಗಳ ಫೈಲಿಂಗ್, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಇರುವುದರಿಂದ ಹೆಚ್ಚು ವಾಸ್ತವಿಕ ಅಂಕಿ ಅಂಶಗಳು ಸಿಗುತ್ತಿವೆ.