Reliance: ಡಿಸೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ 21,930 ಕೋಟಿ ರೂ. ಲಾಭ!
Reliance: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ಹಣಕಾಸಿನ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 12ರಷ್ಟು ಏರಿಕೆಯಾಗಿ, ದಾಖಲೆಯ 21,930 ಕೋಟಿ ರೂಪಾಯಿ ಏಕೀಕೃತ ನಿವ್ವಳ ಲಾಭವನ್ನು ಗಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಮುಂಬೈ, ಜ.16, 2025: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance) ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ಹಣಕಾಸಿನ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 12ರಷ್ಟು ಏರಿಕೆಯಾಗಿ, ದಾಖಲೆಯ 21,930 ಕೋಟಿ ರೂಪಾಯಿ ಏಕೀಕೃತ ನಿವ್ವಳ ಲಾಭವನ್ನು ಗಳಿಸಿದೆ. ಮುಖ್ಯವಾಗಿ ಡಿಜಿಟಲ್ ಸೇವೆಗಳು, ರೀಟೇಲ್ ಮತ್ತು ತೈಲದಿಂದ ರಾಸಾಯನಿಕ ತನಕ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಬಂದಿದೆ. ರಿಲಯನ್ಸ್ ಮೂರನೇ ತ್ರೈಮಾಸಿಕದ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 7.7 ರಷ್ಟು ಏರಿಕೆಯಾಗಿ, 2.67 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ.
ಡಿಜಿಟಲ್ ಸೇವೆಗಳ ವಿಭಾಗವು ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ ಶೇಕಡಾ 17ರಷ್ಟು ಮೇಲೇರಿ 16,440 ಕೋಟಿ ರೂಪಾಯಿ ಮುಟ್ಟಿದೆ. ಇದಕ್ಕೆ ಮುಖ್ಯವಾಗಿ ಕಾರಣ ಆಗಿರುವುದು ಹೆಚ್ಚಿನ ಎಆರ್‌ಪಿಯು (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ). ಇದು 203.3 ರೂಪಾಯಿ ಆಗಿದೆ. ತುಂಬ ಆಕ್ರಮಣಕಾರಿಯಾಗಿ 5ಜಿ ವಿಸ್ತರಣೆ ಮಾಡಲಾಗಿದೆ. ಇದೀಗ 17 ಕೋಟಿ ಮಂದಿ 5ಜಿ ಚಂದಾದಾರರು ಇದ್ದು, ಅವರು ಈಗ ಶೇಕಡಾ 40 ರಷ್ಟು ಕಂಪನಿಯ ನಿಸ್ತಂತು (ವೈರ್‌ಲೆಸ್) ದಟ್ಟಣೆಗೆ ಕೊಡುಗೆ ನೀಡುತ್ತಿದ್ದಾರೆ.
ʼನಿರಂತರವಾಗಿ ಆಗಿರುವಂಥ ಚಂದಾದಾರರ ಸೇರ್ಪಡೆ ಮತ್ತು ಗ್ರಾಹಕರು ತೊಡಗಿಸಿಕೊಳ್ಳುವಿಕೆ ಮಾಪನಗಳಲ್ಲಿನ ಸ್ಥಿರವಾದ ಸುಧಾರಣೆಯಿಂದ ಡಿಜಿಟಲ್ ಸೇವೆಗಳ ವ್ಯವಹಾರದಲ್ಲಿನ ಬಲವಾದ ಬೆಳವಣಿಗೆಗೆ ಕಾರಣವಾಗಿದೆ. 5ಜಿ ನೆಟ್‌ವರ್ಕ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿರುವ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಮೂಲಕ ಅನುಕೂಲಕರವಾದ ಚಂದಾದಾರರ ಮಿಶ್ರಣದಿಂದ ಬೆಂಬಲ ಸಿಕ್ಕಿದೆʼ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದರು.
ರೀಟೇಲ್ ವ್ಯವಹಾರದಲ್ಲಿ ಇಬಿಐಟಿಡಿಎ ಶೇಕಡಾ 9ರಷ್ಟು ಏರಿಕೆಯಾಗಿ, 6,840 ಕೋಟಿ ರೂಪಾಯಿ ತಲುಪಿದೆ. ಇದು ಸ್ಥಿರವಾದ ಗ್ರಾಹಕ ಬೇಡಿಕೆಯನ್ನು ಸೂಚಿಸುತ್ತದೆ.
ತೈಲದಿಂದ ರಾಸಾಯನಿಕ ತನಕ ವ್ಯವಹಾರದಲ್ಲಿ ಈ ತ್ರೈಮಾಸಿಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 6ರಷ್ಟು ಏರಿಕೆಯಾಗಿ, 1.49 ಲಕ್ಷ ಕೋಟಿ ರೂಪಾಯಿ ಮುಟ್ಟಿದೆ. ವರ್ಷದ ಹಿಂದೆ ಇದು 1.41 ಲಕ್ಷ ಕೋಟಿ ಇತ್ತು. ಇಬಿಐಟಿಡಿಎ ಈ ತ್ರೈಮಾಸಿಕದಲ್ಲಿ 14,402 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 14,065 ಕೋಟಿ ರೂಪಾಯಿ ಬಂದಿತ್ತು. ತೈಲ ಮತ್ತು ಅನಿಲ ವ್ಯವಹಾರದಲ್ಲಿ ಇಬಿಐಟಿಡಿಎ 5,565 ಕೋಟಿ ಇದ್ದು, ತೈಲ ಮತ್ತು ಅನಿಲ ಸೆಗ್ಮೆಂಟ್ ಆದಾಯವು 6,370 ಕೋಟಿ ರೂಪಾಯಿ ಬಂದಿದೆ.
ಜಿಯೋ ಪ್ಲಾಟ್ ಫಾರ್ಮ್ಸ್ ಲಾಭ 6861 ಕೋಟಿ ರೂಪಾಯಿ ಬಂದಿದ್ದು, ಅದು ಶೇ. 26ರಷ್ಟು ಏರಿಕೆ ಆಗಿದೆ. ದೂರಸಂಪರ್ಕ ಹಾಗೂ ಸ್ಟ್ರೀಮಿಂಗ್ ವ್ಯವಹಾರದ ಸೆಗ್ಮೆಂಟ್ ಕಾರ್ಯಾಚರಣೆಯಿಂದ ಬರುವ ಆದಾಯ ಶೇ. 19.4ರಷ್ಟು ಏರಿಕೆಯಾಗಿ, 33,074 ಕೋಟಿ ರೂಪಾಯಿ ಮುಟ್ಟಿದೆ. ಜಿಯೋ ಗ್ರಾಹಕರ ಸಂಖ್ಯೆಯು ಡಿಸೆಂಬರ್ 31ರ ಕೊನೆಗೆ ಶೇಕಡಾ 2.4ರಷ್ಟು ಏರಿಕೆಯಾಗಿ, 48.2 ಕೋಟಿ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಿಲಯನ್ಸ್ ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಮಾತನಾಡಿ, ʼಪ್ರತಿ ಭಾರತೀಯರಿಗೂ ವಿಶ್ವದ ಅತ್ಯುತ್ತಮ ಸಂವಹನ ತಂತ್ರಜ್ಞಾನಗಳನ್ನು ತರುವ ಮೂಲಕ ಜಿಯೋ ಡಿಜಿಟಲ್ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷ 5ಜಿ ಅಳವಡಿಕೆಯ ಶೀಘ್ರ ವಿಸ್ತರಣೆ ಮತ್ತು ಶ್ರೇಣಿ 1ರ ಪಟ್ಟಣಗಳ ಆಚೆ ಸ್ಥಿರ ಬ್ರಾಡ್‌ಬ್ಯಾಂಡ್ ಅನ್ನು ವಿಸ್ತರಿಸುವುದು ಡಿಜಿಟಲ್ ಇಂಡಿಯಾ ಮಿಷನ್ ಅನ್ನು ಮತ್ತಷ್ಟು ಬಲಪಡಿಸುತ್ತದೆ. ಬದಲಾವಣೆ ತರುವಂಥ ಸಂಪರ್ಕಿತ, ಇಂಟೆಲಿಜೆನ್ಸ್ ಭವಿಷ್ಯವನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಮೂಲಕ ಜಿಯೋ ತಂತ್ರಜ್ಞಾನ ನಾವೀನ್ಯತೆಯಲ್ಲಿ ಮುನ್ನಡೆಸುವುದನ್ನು ಮುಂದುವರಿಸುತ್ತದೆ. ಇದು ಮುಂದಿನ ಹಲವು ವರ್ಷಗಳಲ್ಲಿ ನಿರಂತರ ಮೌಲ್ಯ ಸೃಷ್ಟಿಗೆ ಕಾರಣವಾಗುತ್ತದೆʼ ಎಂದು ತಿಳಿಸಿದ್ದಾರೆ.
ರಿಲಯನ್ಸ್ ರೀಟೇಲ್ ನಿವ್ವಳ ಲಾಭ 3,458 ಕೋಟಿ ರೂಪಾಯಿ ಬಂದಿದೆ. ಅದು ಶೇಕಡಾ ಹತ್ತರಷ್ಟು ಏರಿಕೆ ಆಗಿದೆ. ಕಂಪನಿಯು 779 ಹೊಸ ಸ್ಟೋರ್‌ಗಳನ್ನು ತೆರೆಯಲಾಗಿದ್ದು,ಒಟ್ಟಾರೆ ಸಂಖ್ಯೆ 19,102 ಮುಟ್ಟಿದೆ.
ಈ ಸುದ್ದಿಯನ್ನೂ ಓದಿ | Monk the Young Movie: ವಿಭಿನ್ನ ಕಥಾಹಂದರವುಳ್ಳ ‘ಮಾಂಕ್ ದಿ ಯಂಗ್’ ಚಿತ್ರದ ‘ಮಾಯೆ’ ಹಾಡು ಕೇಳಿ!
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ʼಹಬ್ಬದ ಋತುವಿನಲ್ಲಿ ಎಲ್ಲ ಬಗೆಯ ಖರೀದಿಯನ್ನು ಗ್ರಾಹಕರು ಮಾಡಿರುವುದರಿಂದ ಈ ತ್ರೈಮಾಸಿಕದಲ್ಲಿ ರಿಲಯನ್ಸ್ ರೀಟೇಲ್ ಅತ್ಯುತ್ತಮ ಪ್ರದರ್ಶನ ನೀಡಿದೆ. ಜಿಯೋಮಾರ್ಟ್ ಮಿಲ್ಕ್ ಬ್ಯಾಸ್ಕೆಟ್ ಸಬ್ ಸ್ಕ್ರಿಪ್ಷನ್ ಸೇವೆಗಳ ಮೂಲಕ ಶೀಘ್ರವಾಗಿ ಡೆಲಿವರಿ ಸೇವೆ ನೀಡಿದೆʼ ಎಂದು ತಿಳಿಸಿದ್ದಾರೆ.