RBI: ಜನರ ಬಳಿ ಇನ್ನೂ ಇವೆ 6,577 ಕೋಟಿ ರೂ. ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳು
2016ರ ನ. 8ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ಅದಾದ ಬಳಿಕ 2,000 ರೂ. ಮುಖಬೆಲೆಯ ನೋಟುಗಳು ಚಲಾವಣೆಗ ಬಂದವು. ಇನ್ನು 2023ರಲ್ಲಿ ಮತ್ತೆ 2,000 ರೂ. ಮುಖಬೆಲೆಯ ನೋಟುಗಳನ್ನೂ ಸರ್ಕಾರ ಹಿಂಪಡೆದುಕೊಂಡಿತು. ಇದೀಗ ಅಮಾನ್ಯಗೊಂಡ 2,000 ನೋಟುಗಳ ಪೈಕಿ ಶೇ. 98.15ರಷ್ಟು ಮರಳಿದ್ದು, ಇನ್ನೂ ಜನರ ಬಳಿ 6,577 ಕೋಟಿ ರೂ. ಮೌಲ್ಯದ ನೋಟುಗಳಿವೆ.
ಹೊಸದಿಲ್ಲಿ: ಅಮಾನ್ಯಗೊಂಡ 2,000 ನೋಟುಗಳ ಪೈಕಿ ಶೇ. 98.15ರಷ್ಟು ಮರಳಿದ್ದು, ಇನ್ನೂ ಜನರ ಬಳಿ 6,577 ಕೋಟಿ ರೂ. ಮೌಲ್ಯದ ನೋಟುಗಳಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತಿಳಿಸಿದೆ. 2023ರ ಮೇ 19ರಂದು ಆರ್‌ಬಿಐ 2,000 ನೋಟುಗಳನ್ನು ರದ್ದುಪಡಿಸಿತ್ತು. ಆ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂ. ನೋಟುಗಳ ಒಟ್ಟು ಮೌಲ್ಯವು 3.56 ಲಕ್ಷ ಕೋಟಿ ರೂ.ಗಳಷ್ಟು. ಈ ಪೈಕಿ 6,577 ಕೋಟಿ ರೂ. ಇನ್ನೂ ಜನರ ಬಳಿ ಇದೆ. ʼʼ2025ರ ಜನವರಿ 31ರ ವೇಳೆಗೆ ಜನರ ಬಳಿ ಒಟ್ಟು 6,577 ಕೋಟಿ ರೂ. ಮೌಲ್ಯದ 2,000 ರೂ ಮುಖಬೆಲೆಯ ನೋಟುಗಳಿವೆʼʼ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
"2023ರ ಮೇ 19ರವೆಗೆ ಚಲಾವಣೆಯಲ್ಲಿದ್ದ 2,000 ರೂ. ನೋಟುಗಳ ಪೈಕಿ ಶೇ. 98.15ರಷ್ಟು ಹಿಂತಿರುಗಿವೆ" ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. 2023ರ ಅಕ್ಟೋಬರ್ 7ರವರೆಗೆ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ನೋಟುಗಳ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯ ಲಭ್ಯವಿತ್ತು. ಆದಾಗ್ಯೂ ಈ ಸೌಲಭ್ಯ ಈಗಲೂ ಬೆಂಗಳೂರು ಸೇರಿದಂತೆ ರಿಸರ್ವ್ ಬ್ಯಾಂಕ್‌ನ 19 ವಿತರಣಾ ಕಚೇರಿಗಳಲ್ಲಿ ಲಭ್ಯವಿದೆ.
ʼʼ2023ರ ಅಕ್ಟೋಬರ್ 9ರಿಂದ ಆರ್‌ಬಿಐ ವಿತರಣಾ ಕಚೇರಿಗಳು 2,000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ. 2,000 ರೂ. ನೋಟುಗಳು ಕಾನೂನುಬದ್ಧ ಚಲಾವಣೆಯಲ್ಲಿವೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹2000 मूल्यवर्ग के बैंकनोटों को वापस लेना – स्थिति
— ReserveBankOfIndia (@RBI) February 3, 2025
Withdrawal of ₹2000 Denomination Banknotes – Statushttps://t.co/MAfhupH9Mq
ಯಾವೆಲ್ಲ ಸ್ಥಳಗಳಲ್ಲಿ ವಿನಿಮಯ ಮಾಡಬಹುದು?
ನೋಟುಗಳನ್ನು ಬೆಂಗಳೂರು, ಅಹಮದಾಬಾದ್, ಬೇಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ಹೊಸದಿಲ್ಲಿ, ಪಾಟ್ನಾ ಮತ್ತು ತಿರುವನಂತಪುರಂನ 19 ಆರ್‌ಬಿಐ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು. 2016ರಲ್ಲಿ ಕೇಂದ್ರ ಸರ್ಕಾರ ಆಗ ಚಾಲ್ತಿಯಲ್ಲಿದ್ದ 1,000 ಮತ್ತು 500 ರೂ. ನೋಟುಗಳ ಅಮಾನ್ಯೀಕರಣ ಮಾಡಿದ ನಂತರ 2,000 ರೂ. ನೋಟುಗಳನ್ನು ಪರಿಚಯಿಸಿತ್ತು.
ಅಂದು ಏನಾಗಿತ್ತು?
2016ರ ನ. 8ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. ನವೆಂಬರ್ 8ರ ಮಧ್ಯರಾತ್ರಿಯಿಂದ 500 ರೂ. ಮತ್ತು 1,000 ರೂ. ನೋಟುಗಳು ಇತಿಹಾಸದ ಪುಟ ಸೇರಿದವು. ನಂತರ 2 ಸಾವಿರ ರೂ. ಮೌಲ್ಯದ ಹೊಸ ನೋಟುಗಳು ಮತ್ತು 500 ರೂ.ಯ ಹೊಸ ನೋಟುಗಳು ಚಲಾವಣೆಗೆ ಬಂದವು. ಸ್ವಲ್ಪ ಸಮಯದ ನಂತರ ಮಾದರಿಯ 100 ಮತ್ತು 200 ರೂ.ಯ ನೋಟುಗಳನ್ನೂ ಸರ್ಕಾರ ಪರಿಚಯಿಸಿತ್ತು.
ಈ ಸುದ್ದಿಯನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ‘ಆರ್ಗಾ’ ಜೊತೆ ಅಮೆಜಾನ್ ಇಂಡಿಯಾ ಒಪ್ಪಂದ
ಕಾರಣವೇನು?
ಆರ್ಥಿಕತೆಯಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರ ಮತ್ತು ಕಪ್ಪುಹಣದ ಚಲಾವಣೆ ತಗ್ಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಗ ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಇದಾದ ಬಳಿಕ 2023ರ ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಘೋಷಿಸಿದ್ದರು.